ತಮಿಳುನಾಡು ಬಿಜೆಪಿಯಲ್ಲಿ ವಿವಾದ ಎಬ್ಬಿಸಿದ ಪಾರ್ಟಿ ಫಂಡ್ ಹಗರಣ: ಮಾಜಿ‌ ರಾಷ್ಟ್ರೀಯ ಕಾರ್ಯದರ್ಶಿಯಿಂದ ಕೋಟ್ಯಂತರ ರೂ.‌ ಹಣ ಗುಳುಂ…!

0
477

ಸನ್ಮಾರ್ಗ ವಾರ್ತೆ

ಚೆನ್ನೈ: ಕೇರಳದ ನಂತರ ಈಗ ತಮಿಳುನಾಡಿನಲ್ಲಿಯೂ ಹಣ ದುರುಪಯೋಗ ಆರೋಪವು ಬಿಜೆಪಿಯೊಳಗೆ ವಿವಾದದ ಬಿರುಗಾಳಿ ಎಬ್ಬಿಸಿದೆ. ಬಿಜೆಪಿಯ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಹಿರಿಯ ನಾಯಕ ಎಚ್. ರಾಜಾ ಕೇಂದ್ರ -ರಾಜ್ಯ ಸಮಿತಿಗಳ ಮೂಲಕ ಬಂದ ಕೋಟ್ಯಂತರ ಹಣವನ್ನು ಕಬಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಕಾರಕ್ಕುಡಿ ಎಂಬಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ರಾಜಾರವರು ಹೊಸ ಮನೆ ಕಟ್ಟಿಸಿದ್ದು ವಿವಾದಕ್ಕೆ ಪುಷ್ಠಿ‌ ನೀಡಿದ್ದು, ಹೊಸ ಮನೆ ನಿರ್ಮಾಣ ಕಾರ್ಯಕ್ಕೆ ಪಕ್ಷದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ರಾಜಾ ರವರಿಗೆ ಈ ಹಿಂದೆ ಬಿಜೆಪಿ ಕೇರಳ ಘಟಕದ ಹೊಣೆಗಾರಿಕೆ ನೀಡಲಾಗಿತ್ತು.

2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡು 20 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿತ್ತು. ಇದರಲ್ಲಿ ಕೋಯಮತ್ತೂರ್ ಸೌತ್‍ನಲ್ಲಿ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ ವಾನಂದಿ ಶ್ರೀನಿವಾಸನ್ ಸಹಿತ ನಾಲ್ವರು ಗೆದ್ದಿದ್ದರು. ರಾಜ್ಯದ ಅಧ್ಯಕ್ಷ ಎಲ್ .ಮುರುಗನ್ ಮುಂತಾದವರು ಸೋಲುಂಡಿದ್ದರು.

ಕಾರಕ್ಕುಡಿಯಲ್ಲಿ ಚುನಾವಣೆಗೆ ನಿಂತಿದ್ದ ರಾಜಾರವರು ಗೆಲ್ಲುವ ಸಾಧ್ಯತೆ ಇದ್ದರೂ ಕೂಡ ಚುನಾವಣಾ ಚಟುವಟಿಕೆಗಳನ್ನು ಸರಿಯಾಗಿ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ ಬೇಸತ್ತು ಶಿವಗಂಗದ ಬಿಜೆಪಿ ಅಧ್ಯಕ್ಷ ಸೆಲ್ವರಾಜ್ ಎಂಬವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ನಂತರ ಹಲವಾರು ಪದಾಧಿಕಾರಿಗಳು ಅವರನ್ನು ಅನುಸರಿಸಿ ರಾಜೀನಾಮೆ ನೀಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಗಂಗಾ ಕ್ಷೇತ್ರದಲ್ಲಿ ರಾಜ ಸೋತಿದ್ದರು. ಕೇಂದ್ರ ಸಮಿತಿಯಿಂದ ಸಿಕ್ಕಿದ ನಾಲ್ಕು ಕೋಟಿ ರೂಪಾಯಿ ಫಂಡ್ ಎಲ್ಲವನ್ನು ರಾಜಾ ಕಬಳಿಸಿ ಹಾಕಿದ್ದಾರೆ. ಅದನ್ನು ಮನೆ ಕಟ್ಟಲು ಬಳಸುತ್ತಿದ್ದಾರೆ ಎಂದು ಪದಾಧಿಕಾರಿಗಳು ಆರೋಪಿಸುತ್ತಿದ್ದಾರೆ.