ವೈದ್ಯರಿಲ್ಲ, ಕಸ ತುಂಬಿದ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಓಡಾಟ: ತೇಜಸ್ವಿ ಯಾದವ್ ಮಿಂಚಿನ ಭೇಟಿಗೆ ಬೆಚ್ಚಿಬಿದ್ದ ಆಸ್ಪತ್ರೆಗಳು

0
186

ಸನ್ಮಾರ್ಗ ವಾರ್ತೆ

ಪಾಟ್ನಾ: ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ತೇಜಸ್ವಿ ಯಾದವ್‌ರವರು ಬಿಹಾರದ ರಾಜಧಾನಿ ಪಾಟ್ನಾದ ವೈದ್ಯಕೀಯ ಕಾಲೇಜು ಸೇರಿದಂತೆ ಆಸ್ಪತ್ರೆಗಳಿಗೆ ಮಿಂಚಿನ ಭೇಟಿ ನೀಡಿದ್ದು, ಆಸ್ಪತ್ರೆಗಳ ಆಡಳಿತ ಮಂಡಳಿ ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

ಇದೇ ವೇಳೆ, ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಓಡಾಟ, ಕಸದ ರಾಶಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳು ರಜೆಯಲ್ಲಿರುವಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಅವರು ಅವಲೋಕನ ನಡೆಸಿದರು.

ಮಂಗಳವಾರ ಮತ್ತು ಬುಧವಾರ ರಾತ್ರಿ, ತೇಜಸ್ವಿ ಯಾದವ್ ಗುರುತನ್ನು ಮರೆಮಾಚಲು ಕ್ಯಾಪ್ ಹಾಗೂ ಮಾಸ್ಕ್ ಧರಿಸಿದ್ದರು. ಬಿಹಾರದ ಅತಿದೊಡ್ಡ ವೈದ್ಯಕೀಯ ಕಾಲೇಜು, ಪಾಟ್ನಾ ವೈದ್ಯಕೀಯ ಕಾಲೇಜು ಸೇರಿದಂತೆ ಮೂರು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು.

ಅವರು ಪಾಟ್ನಾ ವೈದ್ಯಕೀಯ ಕಾಲೇಜು ಒಪಿ, ಜನರಲ್ ವಾರ್ಡ್ ಮತ್ತು ಐಸಿಯು ವಿಕ್ಷೀಸಿದರು. ಆಸ್ಪತ್ರೆಯೊಳಗೆ ಕಸದ ರಾಶಿ ಬಿದ್ದಿರುವುದನ್ನು ಕಂಡು ಆಸ್ಪತ್ರೆಯ ಅಧೀಕ್ಷಕರನ್ನು ಕರೆಸಿ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.

ಜನರನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, ಆಸ್ಪತ್ರೆಗಳ ಪರಿಸ್ಥಿತಿ ತೀರ ದಯನೀಯವಾಗಿದ್ದು, ಸ್ಥಿತಿಗತಿಯನ್ನು ಬಯಲಿಗೆಳೆದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.