ಕೇಂದ್ರ ಬಿಜೆಪಿ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ: ಎನ್‌ಐಎ ದಾಳಿಯ ಬಳಿಕ ಪ್ರತಿಕ್ರಿಯಿಸಿದ ಎಸ್‌ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ

0
192

ಸನ್ಮಾರ್ಗ ವಾರ್ತೆ

ಬಂಟ್ವಾಳ: ಕೇಂದ್ರದ ಬಿಜೆಪಿ ಸರಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಬಿಜೆಪಿ ಈ ವ್ಯವಸ್ಥೆಯನ್ನು ನಿಲ್ಲಿಸಬೇಕು ಎಂದು ಎನ್‌ಐಎ ವಿಚಾರಣೆಯ ಬಳಿಕ ಎಸ್‌ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಪ್ರತಿಕ್ರಿಯಿಸಿದ್ದಾರೆ. ಸುಮಾರು 10 ಗಂಟೆಗಳ ಕಾಲ ಎನ್‌ಐಎ ತಂಡದ ತೀವ್ರ ವಿಚಾರಣೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಕಳೆದ ಜುಲೈ ತಿಂಗಳಿನಲ್ಲಿ ಬಿಹಾರದಲ್ಲಿ ನಡೆದ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನ್ನನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಹೇಳಿದರು.

“ಈ ಎನ್‌ಐಎ ತನಿಖೆ ಪಾರದರ್ಶಕವಾಗಿರಲಿ. ಯಾಕೆಂದರೆ, ಬಿಜೆಪಿ ಕೇಂದ್ರಾಡಳಿತದ ಸಂದರ್ಭದಲ್ಲಿ ನಡೆದ ತನಿಖಾ ಸಂಸ್ಥೆಗಳ ದಾಳಿಗಳೆಲ್ಲವೂ ರಾಜಕೀಯ ಪ್ರೇರಿತವಾಗಿವೆ. ಅಲ್ಲದೇ, ತನಿಖಾ ಸಂಸ್ಥೆಗಳೂ ಕೂಡ ರಾಜ್ಯ ಹಾಗೂ ಕೇಂದ್ರ ಸರಕಾರದ ಆಣತಿಯಂತೆ ಅವುಗಳಿಗೆ ಪೂರಕವಾದಂತಹ ಕೆಲಸಗಳನ್ನು ಮಾಡುತ್ತಿರುವುದನ್ನು ಹಲವಾರು ಪ್ರಕರಣಗಳಲ್ಲಿ ಕಂಡಿದ್ದೇವೆ. ಈ ಪ್ರಕರಣ ಆ ರೀತಿಯಲ್ಲಿ ಆಗದೇ ತನಿಖೆ ಪಾರದರ್ಶಕವಾಗಿ ನಡೆಯಲಿ” ಎಂದು ಅವರು ಆಶಿಸಿದರು.

ಈ ರೀತಿಯಾಗಿ ದಾಳಿ ನಡೆಸಿ, ಸಂಘಟನೆ ಹಾಗೂ ಕಾರ್ಯಕರ್ತರನ್ನು ವಿಚಲಿತರನ್ನಾಗಿ ಮಾಡುವ ತಂತ್ರವಿದು ಎಂದು ಅವರು ಆರೋಪಿಸಿದರು. ಪಕ್ಷವು ನನ್ನನ್ನು ಬಿಹಾರದ ಉಸ್ತುವಾರಿಯನ್ನಾಗಿ ನಿಯೋಜಿಸಿದ್ದು, ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕ್ರಮ ಸಲುವಾಗಿ ಬಿಹಾರಕ್ಕೆ ಹೋಗಿ ಬರುತ್ತಿದ್ದೆ‌. ಈ ಬಗ್ಗೆಯೂ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಅವರು ಹೇಳಿದರು.

ಬೆಳಂಬೆಳಗ್ಗೆ ಆಗಮಿಸಿದ ಎನ್‌ಐಎ ತಂಡ ವಿಚಾರಣೆ ನಡೆಸಿದೆ. ಕೆಲವೊಂದು ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದ್ದು, ಎನ್‌ಐಎ ತಂಡದ ವಿಚಾರಣೆ ಹಾಗೂ ತನಿಖೆಗೆ ಸಂಪೂರ್ಣ ಸಹಕಾರವನ್ನು ನೀಡಿದ್ದೇವೆ ಎಂದರು.

ದಾಖಲೆ ಹಾಗೂ ಫೋನ್‌ ಏನಾದರೂ ವಶಕ್ಕೆ ಪಡೆದಿದ್ದಾರೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತನ್ನ ಮತ್ತು ಪತ್ನಿಯ ಮೊಬೈಲ್ ಮತ್ತು ಕೆಲ ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾಗಿ ಉತ್ತರಿಸಿದರು.