ತೆಲಂಗಾಣ ಪೊಲೀಸರ ಕ್ರೌರ್ಯ: ನಿಗೂಢವಾಗಿ ಮೃತಪಟ್ಟ ಬಾಲಕಿಯ ತಂದೆಯನ್ನು ನೆಲಕ್ಕೆ ಕೆಡವಿ ತುಳಿದ ಪೊಲೀಸರು- ವೀಡಿಯೊ

0
882

ಸನ್ಮಾರ್ಗ ವಾರ್ತೆ

ಹೈದರಾಬಾದ್, ಫೆ. 27: ಹಾಸ್ಟೆಲ್ ಕೋಣೆಯಲ್ಲಿ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಹದಿನಾರು ವರ್ಷದ ಬಾಲಕಿಯ ತಂದೆಯ ಮೇಲೆ ತೆಲಂಗಾಣ ಪೊಲೀಸರು ಕ್ರೂರವಾಗಿ ವರ್ತಿಸಿದ್ದಾರೆ. ಮಂಗಳವಾರ ಪದನ್‍ಚೆರು ನಗರದ ಒಂದು ಹಾಸ್ಟೆಲ್ ಕೋಣೆಯಲ್ಲಿ ಬಾಲಕಿ ನೇಣು ಹಾಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕಾಲೇಜು ಅಧಿಕಾರಿಗಳಿಂದಾಗಿ ಪುತ್ರಿಯ ಸಾವು ನಡೆದಿದೆ ಎಂದು ತಂದೆ ತಾಯಿ ಆರೋಪಿಸಿ ದೂರು ನೀಡಿದ್ದರು. ಪೊಲೀಸರು ಕೇಸನ್ನೂ ದಾಖಲಿಸಿಕೊಂಡಿದ್ದರು. ಬಾಲಕಿಯ ಸಾವನ್ನು ಪ್ರತಿಭಟಿಸಿ ವಿದ್ಯಾರ್ಥಿ ಯೂನಿಯನ್ ಮತ್ತು ಇತರ ಸಂಘಟನೆಗಳು ಕಾಲೇಜಿನಲ್ಲಿ ಪ್ರತಿಭಟನೆ ನಡೆಸುತ್ತಿವೆ.

ಈ ನಡುವೆ ಮಗಳ ಮೃತದೇಹವವನ್ನು ಪೋಸ್ಟ್ ಮಾರ್ಟಂಗೆ ಕೊಂಡು ಹೋಗುವಾಗ ಕಾಲೇಜು ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಬೇಕೆಂದು ಆಗ್ರಹಿಸಿ ಬಾಲಕಿಯ ತಂದೆ ಪೊಲೀಸರನ್ನು ತಡೆಯಲು ಯತ್ನಿಸಿದರು. ಈ ವೇಳೆ ಪೊಲೀಸರು ತಂದೆಯನ್ನು ದೂಡಿಹಾಕಿ ತುಳಿಯುತ್ತಿರುವ ದೃಶ್ಯಗಳು ವೀಡಿಯೊದಲ್ಲಿದ್ದು ಸ್ಥಳೀಯ ಚ್ಯಾನೆಲ್‍ಗಳಲ್ಲಿ ಅದು ಪ್ರಸಾರವಾಗಿದೆ. ನಂತರ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಿಳಿದಿವೆ. ಘಟನೆಯಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.