ರಾಜಸ್ಥಾನ ಮುಸ್ಲಿಂ ಯುವಕರ ಹತ್ಯೆ ಪ್ರಕರಣ: ಮನೆಗೆ ಭೇಟಿಗೆ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ನಿಯೋಗ

0
151

ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲು ಆಗ್ರಹ

ಸನ್ಮಾರ್ಗ ವಾರ್ತೆ

ಗೋಸಾಗಾಟದ ಆರೋಪದಲ್ಲಿ ಹತ್ಯೆಗೈಯಲ್ಪಟ್ಟ ರಾಜಸ್ಥಾನದ ಇಬ್ಬರು ಮುಸ್ಲಿಂ ಯುವಕರ ಕುಟುಂಬವನ್ನು ಜಮಾಅತೆ ಇಸ್ಲಾಮಿ ಹಿಂದ್‌ನ ನಿಯೋಗ ಭೇಟಿಯಾಗಿದೆ ಮತ್ತು ನ್ಯಾಯ ಲಭಿಸುವವರೆಗೆ ಹೋರಾಡುವುದಾಗಿ ಘೋಷಿಸಿದೆ. ಅಲ್ಲದೆ ರಾಜಸ್ಥಾನ ಸರ್ಕಾರ ಈ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಜಮಾಅತ್ ಆಗ್ರಹಿಸಿದೆ.

ಜಮಾಅತ್‌ನ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಸಲೀಂ ಇಂಜಿನೀಯರ್ ಅವರ ನೇತೃತ್ವದಲ್ಲಿ ಭೇಟಿ ನೀಡಿದ ನಿಯೋಗವು ರಾಜಸ್ಥಾನ ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಫೆಬ್ರವರಿ 15ರಂದು ರಾಜಸ್ಥಾನದ ಜುನೈದ್ ಮತ್ತು ನಸೀರ್ ಎಂಬವರನ್ನು ಹರಿಯಾಣದ ಬಿವಾನಿಯಲ್ಲಿ ಹತ್ಯೆಗಯ್ಯಲಾಗಿತ್ತು. ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಹಚ್ಚಿ ಅವರನ್ನು ಸಜೀವ ದಹನಗೊಳಿಸಲಾಗಿತ್ತು. ಬಜರಂಗದಳ ಕಾರ್ಯಕರ್ತರಾದ ರಿಂಕು ಸೈನಿ, ಲೋಕೇಶ್ ಸಿಂಗ್, ಶ್ರೀಕಾಂತ್ ಎಂಬ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇವರ ಹಿಂಸೆಯಿಂದ ಜರ್ಜರಿತರಾದ ಯುವಕರನ್ನು ಪೊಲೀಸ್ ಠಾಣೆಗೆ ಕರೆತರಲಾಗಿತ್ತು ಮತ್ತು ಅವರನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರು ಮುಂದಾಗಲಿಲ್ಲ ಎಂದು ಬಂಧಿತರಲ್ಲಿ ಒಬ್ಬನಾದ ರಿಂಕು ಸಿಂಗ್ ತಪ್ಪೊಪ್ಪಿಗೆ ನೀಡಿದ್ದಾನೆ. ಆನಂತರ ಈ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ ಮತ್ತು ಬಳಿಕ ಪೆಟ್ರೋಲ್ ಸುರಿಸಿ ಅವರನ್ನು ಸುಟ್ಟು ಹಾಕಲಾಗಿದೆ ಎಂದು ಕೂಡ ಆತ ಹೇಳಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ವಿಳಂಬ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ನಿಯೋಗದಲ್ಲಿ ಜಮಾಅತೆ ಇಸ್ಲಾಮಿ ರಾಷ್ಟ್ರೀಯ ಸಲಹಾ ಸಮಿತಿ ಸದಸ್ಯ ಡಾಕ್ಟರ್ ಎಸ್ ಕ್ಯೂಆರ್ ಇಲ್ಯಾಸ್ , ಮೇವಾತ್ ಜಿಲ್ಲಾಧ್ಯಕ್ಷ ಉಬೈದುರ್ರಹ್ಮಾನ್, ಪಬ್ಲಿಕ್ ರಿಲೇಶನ್ ಅಸಿಸ್ಟೆಂಟ್ ಸೆಕ್ರೆಟರಿ ಲಯೀಕ್ ಅಹಮದ್ ಖಾನ್, ಸೈಯದ್ ಖಾಲಿಕ್ ಮುಂತಾದವರು ಇದ್ದರು. ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಎಪಿಸಿಆರ್ ಜೊತೆ ಜಮಾಅತೆ ಇಸ್ಲಾಮಿ ಹಿಂದ್ ಕೈಜೋಡಿಸಿದೆ ಎಂದು ಕೂಡ ನಿಯೋಗ ತಿಳಿಸಿದೆ.