ರೈಹಾನ್ ವಿ.ಕೆ
ಕೆಲವರನ್ನು ನಾವು ನಮ್ಮ ಜೀವನದ ಪರಮ ಸಂತೋಷ ಅವರೇ ಆಗಿ ನಂಬಿರುತ್ತೇವೆ. ಅವರನ್ನು ಜೀವನದಿಂದ ಒಮ್ಮೆಯೂ ದೂರವಿಡಲು ಒಮ್ಮೆ ಕೂಡಾ ಬಯಸಿರುವುದಿಲ್ಲ.
ನನ್ನ ಜೀವನದ ಒಂದು ಅನುಭವ ನನ್ನ ನೆನಪಿಗೆ ಬರುತ್ತಿದೆ.
ಒಮ್ಮೆ ನಾನು ಮಕ್ಕಳ ಜೊತೆ ಮಾತುಕತೆಯಲ್ಲಿ ಮಗ್ನಳಾಗಿದ್ದೆ. ಸಮಯ ನೋಡಿದಾಗ ನಿರಂತರ ಎರಡು ಘಂಟೆಗಳ ಮಾತುಕತೆ. ಆವಾಗ ನನ್ನ ಮನಸ್ಸಿನಲ್ಲಿ ಬಂದ ಯೋಚನೆ ಏನೆಂದರೆ ಪತಿಯನ್ನು ಬಿಟ್ಟು ನಾನು ನಿರಂತರ ಎರಡು ಘಂಟೆಗಳ ಸಮಯ ಮಕ್ಕಳ ಜೊತೆ ಕಳೆದೆ.ಪತಿ ಮನೆಯಲ್ಲಿದ್ದು ಮಕ್ಕಳ ಜೊತೆ ಹರಟೆ ಹೊಡೆಯುವಾಗ ಪತಿಗೆ ಯಾಕೋ ಮಕ್ಕಳು ದೊಡ್ಡವರಾದ ನನ್ನನ್ನು ಕಡೆಗಣಿಸಿದ ಹಾಗೆ ಭಾಸವಾಯಿತೋ…ಏನೋ ಮಿಸ್ ಮಾಡಿದಂತೆ, ಏನೋ ಕಳೆದು ಕೊಂಡಂತೆ.
ಕೆಲವೊಂದು ಸಂಬಂಧಗಳು ಹಾಗೇನೇ ಅವರೊಂದಿಗೆ ಕಳೆಯುವ ಪ್ರತಿಯೊಂದು ನಿಮಿಷಕ್ಕೂ ಮೌಲ್ಯ ಇರುತ್ತದೆ. ಆದ್ದರಿಂದಲೇ ಕೆಲವೊಮ್ಮೆ ಅವರು ಸಿಕ್ಕದಾಗ ಸಮಯವನ್ನು ನೋಡುತ್ತೇವೆ. ಇಷ್ಟು ಸಮಯ ಮಿಸ್ ಮಾಡ್ತಿದ್ದೇನೆ ಎಂದನಿಸುತ್ತೆ. ಇದು ನನ್ನ ಅನುಭವ.ಅಷ್ಟೂ ನಾವು ಅನ್ಯೋನ್ಯರಾಗಿ ಬಿಟ್ಟಿರುತ್ತೇವೆ ಮತ್ತು ಬದುಕಿನ ಎಲ್ಲಾ ಸಂತೋಷವನ್ನು ಅವರೊಂದಿಗೆ ಬಂಧಿಸಿಟ್ಟಿರುತ್ತೇವೆ.
ಅವರಿಲ್ಲದ ಜೀವನದ ಬಗ್ಗೆ ಆಲೋಚಿಸಿಯೇ ಇಲ್ಲ ಎಂಬಷ್ಟರ ಮಟ್ಟಿಗೆ!
ಅನಿರೀಕ್ಷಿತವಾಗಿ ಇಂತವರು ನಮ್ಮನ್ನು ಅಗಲಿದಾಗ ಅಥವಾ ವಿಧಿಯು ಹಠಾತ್ತನೆ ಬಂದೆರೆಗಿದಾಗ ನಾವು ನಿಯಂತ್ರಣ ಕಳೆದು ಕೊಳ್ಳುತ್ತೇವೆ. ಇದು ಮನುಷ್ಯನ ನೇಚರ್ (ಫಿತ್ರತ್) ಪುಟ್ಟ ಮಕ್ಕಳಂತೆ ಅಳುತ್ತೇವೆ, ಬಿಕ್ಕಳಿಸುತ್ತೇವೆ ಮತ್ತು ಅವರು ಮರಳಿ ಬರಲೆಂದು ಆಶಿಸುತ್ತೇವೆ. ಅವರು ಮರಳುವುದು ಖಂಡಿತಾ ಅಸಾಧ್ಯ. ಆದ್ದರಿಂದ ಇಂತಹ ಅನುಭವಗಳು ನಮಗೆ ಕೆಲವೊಂದು ಪಾಠಗಳನ್ನು ಕಲಿಸಿ ಕೊಡುತ್ತದೆ.
ಅದೇನೆಂದರೆ ತಮ್ಮ ಜೀವನದ ಸಂತಸದ ಕೀಲಿಕೈಯನ್ನು ನಾವು ಯಾವತ್ತೂ ಯಾರೊಬ್ಬರಿಗೂ ಅಥವಾ ಹೊಸ ತಲೆಮಾರುಗಳಿಗೆ (ನಿವ್ ಜೆನ್ರೇಷನ್’ಗೆ) ಅರ್ಥವಾಗುವಂತೆ ಯಾವೊಂದು ವಸ್ತುವಿಗೂ (ಫ್ರೆಂಡ್ಸ್, ಮೊಬೈಲ್, ಡ್ರಗ್ಸ್) ಒಪ್ಪಿಸಬಾರದು.
ವಿಧಿಯನ್ನು ಒಪ್ಪಿಕೊಳ್ಳುವಂತ ಮಾನಸಿಕ ಸಿದ್ಧತೆ ನಮ್ಮಲ್ಲಿರಬೇಕು. ಅನ್ಯಥಾ, ಆತ ಅಥವಾ ಅದು ಕಳಕೊಂಡಾಗ ಮಾನಸಿಕ ಸ್ಥಿಮಿತವನ್ನು ಕಳೆದು ಕೊಳ್ಳುಬೇಕಾಗುತ್ತೆ. ನಂತರ ನಮ್ಮದೆಲ್ಲವೂ ಕೈ ಜಾರಿ ಕಸಿಯಲ್ಪಟ್ಟಂತೆ ಭಾಸವಾಗುತ್ತದೆ. ಕೆಲವೊಮ್ಮೆ ಇಂತಹವರು ಜೀವನದಲ್ಲಿ ಜಿಗುಪ್ಸೆ ಗೊಳಗಾಗಿ ಆತ್ಮಹತ್ಯೆ ಮಾಡುವುದಕ್ಕೂ ಮುಂದಾಗುತ್ತಾರೆ.
ನನ್ನ ಇನ್ನೊಂದು ಅನುಭವ ನನಗೆ ನೆನಪಾಗುತ್ತದೆ. ನನ್ನ ಪತಿಯನ್ನು ತದ್ಫೀನ್’ಗಾಗಿ ಎತ್ತಿಕೊಳ್ಳಲು ಜನರು ಮುಂದಾದಾಗ ಪತಿಯ ಕಿವಿಯಲ್ಲಿ ಒಂದು ಮಾತು ಹೇಳಿದ್ದೆ. “ಜಾನ್.. ಸಮಾಧಿಯೊಳಗೆ ಖಂಡಿತಾ ನೀವು ಒಬ್ಬಂಟಿಯಲ್ಲ. ನಿಮ್ ಜೊತೆ ನನ್ನ ಆತ್ಮೀಯತೆ, ದುಆ ಖಂಡಿತಾ ಇದೆ” ಎಂದು. ಇಷ್ಟು ಹೇಳಿದಾಗ ನನಗೆ. ನಿರಾಳತೆಯ ಅನುಭವವಾಗಿ ಜನಾಝವನ್ನೂ ಬಿಟ್ಟು ಕೊಟ್ಟಿದ್ದೆ.
ಆ ಸಂದರ್ಭದಲ್ಲಿ ನಾನು ನನ್ನ ಬಗ್ಗೆ ಒಮ್ಮೆ ಕೂಡಾ ಯೋಚಿಸಿರಲಿಲ್ಲ. ಹೀಗೆ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವಂತಹ ಮಾನಸಿಕ ಸ್ಥಿಮಿತಥೆಗೆ ಪೂರ್ವ ತಯಾರಿ ಮಾಡಿರಬೇಕು.
ಯಾವಾಗ ಯಾವ ಹೊತ್ತು ನಾವು ಇಷ್ಟಪಡುವ, ನಾವು ನಮ್ಮದು ಎಂದು ಭಾವಿಸುವ (ನಮ್ಮದಲ್ಲದ) ಸೊತ್ತು ಸಂಪತ್ತು, ಸಂತಾನ, ಒಟ್ಟಿನಲ್ಲಿ ನಮ್ಮ ಸಂತೋಷ ನಮ್ಮಿಂದ ಕಸಿಯಲ್ಪಡುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಒಂದು ಕಾಲ ಇತ್ತು ನಾವೆಲ್ಲ ಚಿಕ್ಕವರಿದ್ದಾಗ ನಿರಾಳವಾಗಿದ್ದೆವು. ಆದರೆ ಈಗ ಹಾಗಿಲ್ಲ ಹಠಾತ್ತನೆ ಬರುವ ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗ, ರಸ್ತೆ ಅಪಘಾತ.. ಹೀಗಾಗಿ ಒಂದು ಭಯದ ವಾತಾವರಣ.
ನನ್ನ ಪತಿಯ ಅನಿರೀಕ್ಷಿತ ಮರಣದ ಸಂದರ್ಭದಲ್ಲಿ ನನ್ನ ಮಗ ನನ್ನನ್ನು ಸಾಂತ್ವನ ಪಡಿಸುತ್ತಾ ಒಂದು ಮಾತು ಹೇಳಿದ್ದ “ಅಮ್ಮ, ನಮ್ಮಪ್ಪ ನಮಗಿಂತ ಹೆಚ್ಚು ಅರ್ಹರು ಅಪ್ಪನನ್ನು ಸೃಷ್ಟಿಸಿದ ಅಲ್ಲಾಹನಿಗೆ. ಖಂಡಿತ ಹೌದು.ನಾವು ಮರಣ ವಾರ್ತೆಯನ್ನು ಕೇಳುವಾಗ ಪಠಿಸುವ ಇನ್ನಾಲಿಲ್ಲಾಹ್ ಎಂಬುದರ ನಿಜವಾದ ಅರ್ಥ ಕೂಡಾ ಅದನ್ನೇ ಸೂಚಿಸುತ್ತದೆ. ನನಗೆ ತುಂಬಾ ಸಮಾಧಾನ ಕೊಟ್ಟಂತಹ ಮಾತು. ನಿಜವಾಗಿಯೂ ಇದು ಸರಿ ಎನಿಸಿತ್ತು. ಆ ಮಾತು ಹೇಳಿದ ಮಗನ ಬಗ್ಗೆಯೂ ಹೆಮ್ಮೆ ಅನಿಸಿತ್ತು ಎಷ್ಟೊಂದು ಪ್ರಬುದ್ಧತೆಯ ಮಾತು. ನನಗೆ ತುಂಬಾ ಸಮಾಧಾನ ಕೊಟ್ಟಂತಹ ಮಾತು. ಏನೇ ಇರಲಿ ಪತಿಯೊಂದಿಗೆ ಕೊನೆಯದಾಗಿ ಹೇಳಿದ ಮಾತು ಈ ಸಂದರ್ಭ ನನ್ನನ್ನು ನೆನಪಿಸುತ್ತದೆ. ಆ ಮಾತನ್ನು ನನ್ನ ಕೊನೆಯ ಉಸಿರಿರುವ ತನಕ ಪಾಲಿಸಲು ಅಲ್ಲಾಹನು ನನಗೆ ಸಹಾಯ ಮಾಡಲಿ ಮತ್ತು ಅನುಗ್ರಹಿಸಲಿ.
ಓ ಕರುಣಾಮಯಿಯಾದ ಪ್ರಭು! ನನ್ನ ಪತಿಯ ಮೇಲೆ ಕರುಣೆ ತೋರು. ನಮ್ಮನ್ನು ಆಗಲಿದ ನಮ್ಮ ಎಲ್ಲಾ ಆಪ್ತರ ಮೇಲೂ ದೇವನು ಕರುಣೆ ತೋರಲಿ. ಜೀವಂತವಾಗಿರುವ ನಮ್ಮ ಮೇಲೂ. ಆಮೀನ್. ಏನೇ ಇರಲಿ ವಿಧಿಯನ್ನು ಹಳಿಯದೆ ಬದುಕಿನಲ್ಲಿ ಬರುವ ಎಲ್ಲಾ ಕಷ್ಟ ನಷ್ಟಗಳನ್ನೂ ದುಃಖ-ದುಮ್ಮಾನವನ್ನೂ ಧೈರ್ಯದಿಂದ ಎದುರಿಸುವಂತಹ ಮನೋಸ್ಥೈರ್ಯ ನಮ್ಮಲ್ಲಿರಲಿ.












