✍️ ಅರಫಾ ಮಂಚಿ
ಮಾಧ್ಯಮಗಳು ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗುತ್ತದೆ ಎನ್ನುತ್ತಾ ಬಂದ ಎಪ್ಸ್ಟಿನ್ ಫೈಲು ಇಷ್ಟರಲ್ಲಿ ಬಹಿರಂಗವಾಗಿದ್ದೂ ಆಯಿತು. ಅದರಂತೆ ಜೆಫ್ರಿ ಎಪ್ಸ್ಟಿನ್ ದಾಖಲಿಸಿಟ್ಟ ಜಗತ್ತಿನ ಖ್ಯಾತನಾಮರ ರಂಗೀಲಾ ಆಟಗಳ ಬಗ್ಗೆ ಪ್ರಪಂಚವೇ ಅರಿವಂತೆಯೂ ಆಯಿತು. ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದ ಆ ತರದ ಕೋಲಾಹಲಗಳೇನೂ ನಡೆದಿಲ್ಲ. ಅದ್ಭುತವೂ ಸಂಭವಿಸಿಲ್ಲ. ನಾವು ಅವಮಾನಿತರಾಗಿದ್ದೇವೆ ಎಂದು ರಾಜೀನಾಮೆಗಳಾಗಿಲ್ಲ. ಸರಕಾರಗಳು ಬಿದ್ದಿಲ್ಲ. ಆದರೆ ಜಗತ್ತಿನ ದೊಡ್ಡ ಜನರ ಕಚ್ಚೆ ಹರಕುತನಗಳಿತ್ಯಾದಿಗಳನ್ನು ಸಾರ್ವಜನಿಕರು ತಿಳಿಯುವಂತಾಯಿತಾಗಿದೆ. ಅದೇನಿದ್ದರೂ ಎಪ್ಸ್ಟಿನ್ ಫೈಲು ಅಮೆರಿಕನ್ ಪ್ರಮುಖರ ಲೈಂಗಿಕ ಕರ್ಮ ಕಾಂಡವನ್ನು ಬಹಿರಂಗಪಡಿಸಿದೆ ಮತ್ತು ಅವರು ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡಿರುವುದು ಬಟಾ ಬಯಲಾಗಿದೆ.
ನಿಮಗೆ ಈಗಾಗಲೇ ಗೊತ್ತು. ಒಬ್ಬ ಲೈಂಗಿಕ ಒಫೆಂಡರ್ ಬರೆದಿಟ್ಟ ದಾಖಲೆಗಳಿವು. ಇದನ್ನೆಲ್ಲ ಈ ವರ್ಲ್ಡ್ ನಾಯಕರಿಗೆ ಆರೇಂಜ್ ಮಾಡಿ ಕೊಡ್ತಿದ್ದ ಜೆಫ್ರಿ ಎಪ್ಸ್ಟಿನ್ರೇ ಸ್ವತಃ ನ್ಯೂಯಾರ್ಕ್ ಟೈಮ್ಸ್ ಜೊತೆ ತಾನೊಬ್ಬ ಅಪರಾಧಿ ಎಂದು ಒಪ್ಪಿಕೊಂಡಿದ್ದರು. ಅವರ ಜೊತೆ ಜಗತ್ತಿನ ಖ್ಯಾತನಾಮರೆಲ್ಲ ಸಂಬಂಧ ಇರಿಸಿಕೊಂಡಿದ್ದರು. ಅವರ ಕ್ಲಬ್, ಅವರ ಪ್ರೈವೇಟ್ ಫ್ಲೈಟ್ ಇವುಗಳೆಲ್ಲ ಹುಡುಗಿಯರ ಜೊತೆ ಖ್ಯಾತ ನಾಮರು ಐಶಾರಾಮ ಅನುಭವಿಸುತ್ತಿದ್ದ ಅಪರಾಧ ಕೇಂದ್ರವಾಗಿತ್ತು.
ಈಗ ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆರಿಫೈ ಮಾಡಲು ಸಾಧ್ಯವಿಲ್ಲದ ರೀತಿಯಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂಬುದು ಎಪ್ಸ್ಟಿನ್ ಫೈಲಿನಲ್ಲಿದೆ ಎಂಬ ವಿಚಾರ ತೇಲಿ ಬರುತ್ತಿದೆ. ಈ ಮನುಷ್ಯ ಇದಕ್ಕಿಂತ ಮುಂಚೆಯೂ ಇಂತಹ ಎಷ್ಟೋ ಆರೋಪಕ್ಕೆ ತುತ್ತಾಗಿದ್ದಾರೆ ಎಂಬ ವಿಚಾರವೂ ನಿಮಗೆ ಗೊತ್ತಿರುವುದೇ ಆಗಿದೆ. ಆದರೆ ಎಪ್ಸ್ಟೀನ್ ಪೈಲುಗಳಲ್ಲಿ ಅಮೆರಿಕದ ಅಧ್ಯಕ್ಷರಿಂದಾಗಿರುವ ಅತ್ಯಾಚಾರ ವೆರಿಫೈ ಮಾಡಲು ಅಸಾಧ್ಯ ಎಂಬ ಆರೋಪ ಎಂಬಂತೆ ಯಾಕೆ ದಾಖಲಾಗಿದೆ.
ಯುವತಿಯೊಬ್ಬಳು ಟ್ರಂಪ್ ಮತ್ತು ಎಪ್ಸ್ಟಿನ್ ಸೇರಿ ತನ್ನನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದೂ ನಡೆದಿದೆ. ಹಾಗಿದ್ದರೆ ಫೈಲುಗಳನ್ನು ಯಾರೋ ಉಜ್ಜಿದ್ದಾರಾ? ಮೊದಲು ಈ ಫೈಲು ಎಫ್ಬಿಐ(ಅಮೆರಿಕದ ತನಿಖಾ ಸಂಸ್ಥೆ)ಗೆ ಸಲ್ಲಿಸಲ್ಪಟ್ಟಿತ್ತು. ಕಿತಾಪತಿ ಎಲ್ಲೋ ಆಗಿದೆ. ಎಲ್ಲಿ ಅಂತ ಸ್ಪಷ್ಟಪಡಿಸಲು ಸಾಧ್ಯವಿಲ್ಲ. ಆರೋಪಿಗಳು ಅಧಿಕಾರದ ಕುರ್ಚಿಯಲ್ಲಿ ಕೂತಿದ್ದರೆ ಅವರ ಅಪರಾಧ ಉಜ್ಜಲ್ಪಡುವುದು ಸಾಮಾನ್ಯ ಸಂಗತಿ. ಆದರೂ ಮಹಿಳೆಯ ಆರೋಪ ನಿಜ ಎಂದು ಓರ್ವ ಲಿಮೊಸಿನ್ ಚಾಲಕನ ಸಾಕ್ಷ್ಯ ಕೂಡ ಇದೆ. ಈಗೇನಾಡ್ತೀರಿ. ಎಪ್ಸ್ಟಿನ್ ಮತ್ತು ಟ್ರಂಪ್ ಯುವತಿಯನ್ನು ಬಲಾತ್ಕಾರಿಸಿದ ಕುರಿತಂತೆ ಅವರಿಬ್ಬರು ಪರಸ್ಪರ ಚರ್ಚಿಸುತ್ತಿರುವುದನ್ನು ಅವನು ಕೇಳಿಸಿಕೊಂಡಿದ್ದಾನೆ. ಅಮೆರಿಕದ ಜಸ್ಟಿಸ್ ಡಿಪಾರ್ಟ್ಮೆಂಟ್ ಇವೆಲ್ಲ ಸುಳ್ಳು, ಅಂತಹದ್ದು ನಡೆದೇ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಅತ್ಯಾಚಾರವೋ ಅದಕ್ಕಿರುವ ಸಾಕ್ಷ್ಯವೋ ಸುಳ್ಳು ಅಂತಾದರೆ ಎಫ್ಬಿಐ ಸಾಕ್ಷ್ಯವನ್ನು ಮರು ಪರಿಶೀಲನೆಗೆ ಒಳಪಡಿಸಿದ ಬಗ್ಗೆ ಮಾಹಿತಿ ನೀಡದಿರುವುದು ಯಾಕೆ ಎಂಬ ಪ್ರಶ್ನೆ ಯಾರಲ್ಲೂ ಉದ್ಭವಿಸುತ್ತದೆ. ಅದಕ್ಕೂ ಮೊದಲು ನೀವು ಎಪ್ಸ್ಟಿನ್ ಫೈಲನ್ನು ಬಹಿರಂಗಪಡಿಸದಂತೆ ಟ್ರಂಪ್ ತಡೆಹಿಡಿದಿಟ್ಟಿದ್ದು ಯಾಕೆ? ಎಂಬ ಪ್ರಶ್ನೆ ಕೇಳಬೇಕು. ಅಮೆರಿಕದ ಎರಡೂ ಸದನಗಳಲ್ಲಿ ಕಾನೂನು ಪಾಸು ಮಾಡಿದ ನಂತರ ಟ್ರಂಪ್ ಅನಿವಾರ್ಯವಾಗಿ ಜಸ್ಟಿಸ್ ಡಿಪಾರ್ಟ್ಮೆಂಟ್ ಫೈಲನ್ನು ಹೊರ ಬಿಡುವಂತೆ ಕಡತಕ್ಕೆ ಸಹಿ ಹಾಕಿದ್ದು. ಅವರಿಗೆ ಅದರಿಂದ ಹಾನಿಯಾಗುವುದಿಲ್ಲ ಎಂದು ಖಾತರಿ ಬರುವತನಕ ತಡೆದಿಟ್ರಾ? ಉಜ್ಜಿದ್ದು ಪೂರ್ಣವಾದ ಮೇಲೆ ಹೊರಗೆ ಬಿಟ್ರಾ? ಅಷ್ಟೂ ಕಾಲ ತನ್ನ ಮಾನ ಹರಾಜಾಗುತ್ತದೆ ಎಂಬ ಖಾತರಿಯಿದ್ದುದರಿಂದ ಫೈಲನ್ನು ತಡೆದಿಟ್ಟಿದ್ದಾರೆ ಎಂದು ಸಾಕ್ಷ್ಯ ರಹಿತವಾಗಿ ಮೇಲ್ನೋಟಕ್ಕೆ ನಿಮಗೂ ಸ್ಪಷ್ಟವಾದೀತು.
ಫೈಲು ಹೊರ ಬಂದ ಹಿನ್ನಲೆ ಏನು?:
ಜೆಫ್ರಿ ಎಪ್ಸ್ಟಿನ್ ಲೈಂಗಿಕ ಕಳ್ಳಸಾಗಾಣೆ ಆರೋಪದಲ್ಲಿ ವಿಚಾರಣೆಗಾಗಿ ಕಾಯುತ್ತಿದ್ದ ಸಂದರ್ಭ ಅದು. ಜೈಲಿನಲ್ಲಿದ್ದಾಗ ಆಗಸ್ಟ್ 2019 ರಲ್ಲಿ ನ್ಯೂಯಾರ್ಕಿನ ಜೈಲಿನ ಕೋಣೆಯಲ್ಲಿ ಸತ್ತ ಸ್ಥಿತಿಯಲ್ಲಿ ಅವರು ಪತ್ತೆಯಾಗುತ್ತಾರೆ. ಸಾವು ಒಂಥರ ನಿಗೂಢವಾಗಿತ್ತು. ಅವರದು ಸಹಜ ಸಾವಲ್ಲ ಕೊಲೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ. ಬಹುದೊಡ್ಡ ಮಟ್ಟದ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿ ಸ್ಥಾನದಲ್ಲಿ ಈ ಜೆಫ್ರಿ ಎಫ್ಸ್ಟಿನ್ ಇದ್ರು. ತಾನೊಬ್ಬ ಜೈಲಲ್ಲಿ, ಮೃಷ್ಠಾನ್ನ ಉಂಡವರೆಲ್ಲ ಹೊರಗೆ ಅಧಿಕಾರದ ಕುರ್ಚಿಯಲ್ಲಿ. ಇದನ್ನು ಸ್ಕೂಲ್ ಅಧ್ಯಾಪಕನಾಗಿ ನಂತರ ಫೈನಾನ್ಸರ್ ಆಗಿ ಬದಲಾಗಿದ್ದ ಒಬ್ಬ ವ್ಯಕ್ತಿ ಸುಮ್ಮನಿರುತ್ತಾರಾ? ಅವರು ಖ್ಯಾತನಾಮರಿಗೆ ಸಂಬಂಧಿಸಿದ ದಾಖಲೆ ತನ್ನ ಬಳಿ ಇಟ್ಟು ಕೊಂಡಿದ್ದರು.
ಅಮೆರಿಕದ ಜನಪ್ರತಿನಿಧಿ ಸಭೆಗಳಲ್ಲಿ ಡೆಮಕ್ರಾಟ್ ಪಾರ್ಟಿ ಫೈಲು ಸಾರ್ವಜನಿಕ ಗೊಳಿಸಿ ಎಂದು ಬೊಬ್ಬಿಟಿತು. ಫೈಲು ಹೊರಗೆ ಬರಬೇಕಾದರೆ ಅಧ್ಯಕ್ಷರ ಸಹಿ ಬೇಕಿತ್ತು. ಟ್ರಂಪ್ ಸಹಿ ಹಾಕಲ್ಲ. ಆದುದರಿಂದ ಅಮೆರಿಕದ ಕಾಂಗ್ರೆಸ್ಸಿನಲ್ಲಿ ಮಸೂದೆ ನಿರ್ಮಾಣಗೊಳ್ಳುವವರೆಗೂ ಡೆಮಕ್ರಾಟ್ ಪಾರ್ಟಿ ಹೋರಾಟ ನಡೆಸಿತು. ಅಂತಿಮವಾಗಿ ಡಿಸೆಂಬರ್ 3 ರಂದು ಡೆಮಕ್ರಾಟರು ಜೆಫ್ರಿ ಎಪ್ಸ್ಟಿನರ ವರ್ಜಿನ್ ದ್ವೀಪಗಳ ಮನೆಯ ಅಕ್ರಮಗಳ ಚಿತ್ರವನ್ನು ಹೌಸಿನಲ್ಲಿಯೇ ಬಿಡುಗಡೆ ಮಾಡಿದರು. ಅದರಲ್ಲಿ ಹಲವು ಮಲಗುವ ಕೋಣೆಗಳಿದ್ದವು. ರಹಸ್ಯ ಕೋಣೆಗಳು ಕೂಡ ಇದ್ದವು. ಟ್ರಂಪ್ ಬೆಚ್ಚಿಬಿದ್ದ ಕ್ಷಣ ಅದು. ದಾಖಲೆ ಸ್ಪಷ್ಟವೋ ಅಸ್ಪಷ್ಟವೋ ಅಥವಾ ಉಜ್ಜಿಯೋ ಟ್ರಂಪ್ ದಾಖಲೆಗಳನ್ನು ಸಾರ್ವಜನಿಕ ಗೊಳಿಸುವುದು ಈಗ ಅನಿವಾರ್ಯವಾಗಿತ್ತು.
ಯಾಕೆಂದರೆ ಕಾನೂನು ಅದು. ಇದೆಲ್ಲ ಔಪಚಾರಿಕಗೊಂಡು ಅಂತಿಮವಾಗಿ ಡಿಸೆಂಬರ್ 19ಕ್ಕೆ ಈ ಫೈಲುಗಳನ್ನು ಸಾರ್ವಜನಿಕ ಗೊಳಿಸಬೇಕು ಎಂಬ ಆದೇಶ ಅಧ್ಯಕ್ಷ ಟ್ರಂಪ್ರಿಂದ ಬಂತು. ಕಡತಕ್ಕೆ ಸಹಿ ಹಾಕಿದರು. ಈ ರೀತಿ ಒಂದು ದೊಡ್ಡ ಹೋರಾಟದ ಅಂತಿಮ ಫಲಿತಾಂಶವೆಂಬಂತೆ ಫೈಲು ಹೊರಬಂತು. ಜಗತ್ತಿನ ಹಲವು ನಾಯಕರು ಫೈಲಿನ ಕೊಳೆತ ಬಟಾಟೆಯಂತೆ ನಾತ ಬಂದಿದ್ದಾರೆ. ಡೆಮಾಕ್ರಾಟರ ಮಾಜಿ ಅಧ್ಯಕ್ಷ ಕ್ಲಿಂಟನ್ ಹುಡುಗಿಯರ ಜೊತೆಗಿದ್ದ ಫೋಟೊ ಹೊರಬಂದಿತ್ತು. ಡೆಮಕ್ರಾಟರಿಗೆ ಇದು ಮುಜಗರದ ಸಮಾಚಾರವಾಯಿತು. ಹೀಗೆ ಫೋಟೊ ಹೊರ ಬಂದ ನಂತರ ಡೆಮಾಕ್ರಾಟರು ಬಾಯಿ ಮುಚ್ಚಿ ಕೂರಬೇಕಿತ್ತು. ಕೂತರು. ಕೆಲವು ಭಾರತೀಯರ ಹೆಸರುಗಳು ಮತ್ತು ಇಮೈಲು ವಿವರಗಳು ಈ ಫೈಲಿನಲ್ಲಿ ಬಹಿರಂಗವಾಗಿದೆ. ಭಾರತೀಯರು ಕಡಿಮೆ ಇಲ್ಲ. ಭಾರತೀಯರು ಮಾತ್ರ ಅಲ್ಲ ಜಗತ್ತಿನ ಹತ್ತು ಹಲವು ಖ್ಯಾತ ನಾಮರ ಹೆಸರಿವೆಯಂತೆ.
30 ದಿನಗಳಲ್ಲಿ ಬಿಡುಗಡೆ ಮಾಡಿ:
ಅಮೆರಿಕದ ಸಂಸತ್ತು ಪಾಸು ಮಾಡಿದ ಕಾನೂನು ಏನು ಹೇಳಿತ್ತೆಂದರೆ 30 ದಿನಗಳಲ್ಲಿ ಫೈಲ್ಗಳನ್ನು ಬಿಡುಗಡೆ ಮಾಡಬೇಕು. ಅದು ಕೂಡ ಹೇಗೆ ವಿವರಗಳನ್ನು ಹುಡುಕಲು ಸಾಧ್ಯವಾಗುವಂತೆ ಮತ್ತು ಡೌನ್ಲೋಡ್ ಮಾಡಲು ಆಗುವಂತೆ ಸಾರ್ವಜನಿಕಗೊಳಿಸಬೇಕು. ಆದರೆ ಬಿಡುಗಡೆಗೊಂಡ ಇದೇ ಫೈಲಿನಲ್ಲಿ ಸಾವಿರ ಪುಟಗಳು ಡಿಲೀಟ್ ಆಗಿಯೇ ಹೊರ ಬಂದಿತ್ತು. ಈಗ ನಿಮಗೆ ಉಜ್ಜಿದ್ದು ಖಾತರಿ ಆಗಿರಬಹುದಾದ್ದೇ. ಅಧಿಕಾರ ಇದ್ದಷ್ಟು ದಿನ ಅಲ್ಲಿ ಕೂತ ಜನರು ನ್ಯಾಯಾಲಯಕ್ಕೆ ಸ್ವಾಧೀನ ಇಲ್ಲದಿದ್ದರೆ ಯಾವ ಫೈಲಿನ ಯಾವ ವಿವರವನ್ನೂ ಉಜ್ಜಿಸಬಹುದು.
ಇವೆಲ್ಲ ಇರುವಾಗಲೇ ಇದರ ನಡುವೆಯೇ ಸಂತ್ರಸ್ತ ಮಹಿಳೆಯೊಬ್ಬರು ಮುಂದೆ ಬಂದು ಜಸ್ಟಿಸ್ ಡಿಪಾರ್ಟ್ಮೆಂಟ್ ತನ್ನ ಹೆಸರು ಸಾರ್ವಜನಿಕ ಗೊಳಿಸಿ ಮಾನಗೆಡಿಸಿದೆ ಎಂದು ಕೇಸು ಹಾಕಿದರು. ತಮ್ಮಿಬ್ಬರ ಒಂದು ಅತ್ಯಾಚಾರದ ವಿಚಾರವನ್ನು ಪರಸ್ಪರ ಡೊನಾಲ್ಟ್ ಟ್ರಂಪ್ ಮತ್ತು ಎಪ್ಸ್ಟಿನ್ ಅತ್ಯಾಚಾರದ ಕುರಿತು ಚರ್ಚಿಸಿದ್ದನ್ನು ತಾನು ಕೇಳಿಸಿದ್ದೆ ಎಂಬ ಸಾಕ್ಷ್ಯವನ್ನು ಲಿಮೊಸಿನ್ ಚಾಲಕ ನೀಡುತ್ತಾನೆ. ಅತ್ಯಾಚಾರದ ವಿಚಾರ ನಿರಾಕರಿಸಿದ ಅಮೆರಿಕದ ಜಸ್ಟಿಸ್ ಡಿಪಾರ್ಟ್ಮೆಂಟಿಗೆ ಬರೋಬ್ಬರಿ ಮುಖಭಂಗ ಇದು. ಸಂಸತ್ತಿನ ಕಾನೂನಿನಂತೆ ಜಸ್ಟಿಸ್ ಡಿಪಾರ್ಟ್ಮೆಂಟ್ ಎಪ್ಸ್ಟೀನ್ ಫೈಲಿನ 30,000 ದಾಖಲೆಗಳನ್ನು ಈಗ ಹೊರ ಬಿಟ್ಟಿದೆ. ನೋಡಿ. 2019ರಲ್ಲಿ ಜೆಫ್ರಿ ಎಪ್ಸ್ಟಿನ್ ನಿಧನರಾದದ್ದು. ಆದರೆ ಫೈಲು ಎಫ್ಬಿಐಗೆ ಸಲ್ಲಿಕೆಯಾಗಿದ್ದು ಯಾವಾಗ? 2020ರ ದೊಡ್ಡ ಚುನಾವಣೆ ನಡೆಯುವುದಕ್ಕಿಂತ ಸ್ವಲ್ಪ ಸಮಯ ಮುಂಚೆ. ಇಷ್ಟು ಟೈಮ್ ಒಂದು ಫೈಲು ಸಲ್ಲಿಕೆಗೆ ಬೇಕಾ? ಈ ಪ್ರಶ್ನೆ ಸಾರ್ವಜನಿಕವಾಗಿ ಎತ್ತಲಾಗುತ್ತದೆ. ಒಂದು ಫೈಲು ಇಲ್ಲಿಂದ ಅಲ್ಲಿಗೆ ಹೋಗಲು ಒಂದು ವರ್ಷ ಯಾಕೆ?
ನ್ಯಾಯ ಕೇಳಿ ಕೋರ್ಟಿನ ಮೊರೆ ಹೋದ ಸಂತ್ರಸ್ತೆ ಹಲವು ಸಲ ತನ್ನ ಹೆಸರು ಎಪ್ಸ್ಟಿನ್ ದಾಖಲೆಗಳಲ್ಲಿ ಪ್ರಸ್ತಾವವಾಗಿದ್ದನ್ನು ಸೂಚಿಸಿ ಅಪಮಾನ ಆಗಿದೆ ಅಂತಿದ್ದಾರೆ. ಇದೇ ಆರೋಪವನ್ನು ಆಕೆ ಸಿಎನ್ಎನ್ಗೆ ನೀಡಿದ ಸಂದರ್ಶನದಲ್ಲಿ ಎತ್ತಿದ್ದಾರೆ. ಅಂದರೆ ಫೈಲು ಬಹಿರಂಗಗೊಳಿಸಿ ಅಮೆರಿಕದ ಜಸ್ಟಿಸ್ ಡಿಪಾರ್ಟ್ಮೆಂಟ್ ತನ್ನ ಮಾನ ಹರಾಜಿಗಿಟ್ಟಿತು. ನ್ಯಾಯಬೇಕು ಎಂಬುದು ಅವರ ಅಹವಾಲು ಆಗಿದೆ.
ಈ ಮಹಿಳೆಯು ಆ ಚ್ಯಾನೆಲ್ನಲ್ಲಿ 2009ರಲ್ಲಿ ಎಪ್ಸ್ಟಿನ್ರ ಅಕ್ರಮಕ್ಕೆ ತಾನು ತುತ್ತಾಗಿರುವುದನ್ನು ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ಆ ವರ್ಷವೇ ಮಹಿಳೆ ಎಫ್ಬಿಐಗೆ ದೂರು ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಎಪ್ಸ್ಟಿನ್ರನ್ನು ಕೋರ್ಟು ಶಿಕ್ಷೆಗೆ ಗುರಿಪಡಿಸಿತ್ತು. 13 ತಿಂಗಳು ಮಾತ್ರ ಎಪ್ಸ್ಟಿನ್ ಜೈಲಲ್ಲಿದ್ದದ್ದು.
ಆದರೆ ಈಗಲೂ ಅಮೆರಿಕದ ಜಸ್ಟಿಸ್ ಡಿಪಾರ್ಟ್ಮೆಂಟ್ ಟ್ರಂಪ್ ಅತ್ಯಾಚಾರದ ಆರೋಪವನ್ನು ನಿರಾಧಾರ ಎನ್ನುತ್ತಿದೆ. ಜಸ್ಟಿಸ್ ಡಿಪಾರ್ಟ್ಮೆಂಟ್ ಹೇಳಿದೆಯೆಂದು ಅಮೆರಿಕನ್ನರು ಅಷ್ಟಕ್ಕೆ ಒಪ್ಪಿಕೊಳ್ಳುವವರಲ್ಲ. ಹಾಗೆ ಒಪ್ಪಿಕೊಳ್ಳುವಷ್ಟು ಟ್ರಂಪ್ ಸಾಚಾರೂ ಅಲ್ಲ. ಹೀಗಾಗಿ ಈಗ ಅಂತಾರಾಷ್ಟ್ರೀಯ ರಾಜಕೀಯದ ವಿಶ್ಲೇಷಕರು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಫೈಲು ಮತ್ತು ಈ ಮಹಿಳೆಯ ಆರೋಪ ಟ್ರಂಪ್ ಅಧಿಕಾರಕ್ಕೆ ಕುತ್ತಾಗ ಬಹುದು ಎಂದು ಹೇಳುತ್ತಿದ್ದಾರೆ. ಅವರು ಕೆಲವು ಪ್ರಶ್ನೆಗಳಲ್ಲಿ ಜಸ್ಟಿಸ್ ಡಿಪಾರ್ಟ್ಮೆಂಟ್ ಟ್ರಂಪ್ ಅತ್ಯಾಚಾರ ಮಾಡಿದ್ದು ಸುಳ್ಳು ಎನ್ನುವುದಕ್ಕೆ ಆಧಾರ ಏನು? ಎಪ್ಸ್ಟಿನ್ ದಾಖಲೆಗಳಲ್ಲಿ ಇರುವಾಗ ಹಾಗೆ ಹೇಗೆ ಹೇಳುತ್ತಾರೆ? ಎಪ್ಸ್ಟಿನ್ ಫೈಲಿನಲ್ಲಿ ಆ ಮಹಿಳೆಯ ಹೆಸರು ಅಷ್ಟೂ ಬಾರಿ ಉಲ್ಲೇಖಿಸಲ್ಪಟ್ಟದ್ದಕ್ಕೆ ಕಾರಣ ಏನು? ಎಫ್ಬಿಐ ಯಾಕೆ ಲಿಮೊಸಿನ್ ಚಾಲಕ ಸಾಕ್ಷ್ಯವನ್ನು ಮರು ಪರಿಶೀಲಿಸಿದ ಕುರಿತು ವಿವರ ನೀಡಿಲ್ಲ? ಈ ಫೈಲುಗಳು ಸಾರ್ವ ಜನಿಕಗೊಳಿಸದಂತೆ ಟ್ರಂಪ್ ಕಡತಕ್ಕೆ ಸಹಿ ಹಾಕದ್ದು ಯಾಕೆ? ಜೈಲಿನಲ್ಲಿ ನಡೆದಿದ್ದ ಎಪ್ಸ್ಟಿನ್ರ ಸಾವು ಯಾಕೆ ಸರಿಯಾಗಿ ತನಿಖೆಯಾಗಿಲ್ಲ? ಫೈಲು ಹೊರಬರಲು ಕಾನೂನು ಮಾಡುವ ಸ್ಥಿತಿಯನ್ನು ಟ್ರಂಪ್ ಯಾಕೆ ಹುಟ್ಟು ಹಾಕಿದರು?
ಉತ್ತರ ಸಿಗಲೇಬೇಕಾದ ಪ್ರಶ್ನೆಗಳು ಇವು.
ಒಳಗಿನ ಸತ್ಯ ಸರಿಯಾಗಿ ನೇರವಾಗಿ ತನಿಖೆಗೊಳಪಟ್ಟರೆ ಆರೋಪ ಸಾಬೀತಾದರೆ ಟ್ರಂಪ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ. ಇದು ಅಮೆರಿಕದ್ದೇ ನಿಯಮ ಎಂಬ ಅಭಿಪ್ರಾಯ ವಿಶ್ಲೇಷಕರದ್ದೇ ಆಗಿದೆ. ಹೌದು. ಮಾಧ್ಯಮಗಳು ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳು ಜಗತ್ತೇ ಅಲ್ಲೋಲ ಕಲ್ಲೋಲವಾಗುವುದಕ್ಕೆ ಡಿಸೆಂಬರ್ 19ನ್ನು ಗಡುವಾಗಿ ತೀರ್ಮಾ ನಿಸಿದ್ದವು. ಹಾಗೆ ಆಗ್ಲೇ ಇಲ್ಲ. ಅಂದರೆ ಎಪ್ಸ್ಟೀನ್ ಫೈಲು ಬಹಿರಂಗವಾದ್ದರಿಂದ ಕಲ್ಲು ಕೂಡ ಅತ್ತಿತ್ತ ಸರಿದಿಲ್ಲ ಎಂಬುದು ಈವರೆಗಿನ ಸತ್ಯವೇ. ಆದರೂ ನಿಮಗೂ ಗೊತ್ತು.
ಎಪ್ಸ್ಟಿನ್ ಫೈಲುಗಳಲ್ಲಿ ಹಲವು ಖ್ಯಾತ ನಾಮರ ಹೆಸರು ಇವೆ. ಅಪ್ರಾಪ್ತ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದರು ಎಂಬುದು ಇದರ ಒಳಮರ್ಮ. ಲಿಸ್ಟ್ ಎಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಕ್ಲಿಂಟನ್, ಮೈಕಲ್ ಜಾಕ್ಸನ್, ಬಿಲ್ಗೇಟ್ಸ್, ಭಾರತೀಯರ ಸಹಿತ ವಿವಿಧ ದೇಶಗಳ ಗಣ್ಯರ ಹೆಸರುಗಳು ಇವೆ. ಇವರೆಲ್ಲ ಮೋಜು ಹಣಕ್ಕಾಗಿ ಚಿಕ್ಕ ಮಕ್ಕಳನ್ನು ಬಿಡುವುದಿಲ್ಲ, ಅಂದರೆ!












