ಪ್ರಧಾನಿಯ ಉತ್ತರವನ್ನು ಬಯಸುತ್ತಿರುವ 2015ರ ದುಃಖ

0
397

ಸನ್ಮಾರ್ಗ ಸಂಪಾದಕೀಯ

ಪ್ರಭುತ್ವದ ಕಣ್ಣಿಗೆ ಧರ್ಮದ್ವೇಷದ ಪೊರೆ ಆವರಿಸಿದಾಗ ಹೇಗೆ ಕ್ರೌರ್ಯವೂ ಸಮ್ಮತಾರ್ಹವಾಗುತ್ತದೆ ಎಂಬುದಕ್ಕೆ ಅಖ್ಲಾಕ್ ಪ್ರಕರಣ ಒಂದೊಳ್ಳೆಯ ನಿದರ್ಶನ.

2015 ಸೆಪ್ಟೆಂಬರ್ 23ರಂದು ರಾತ್ರಿ 10 ಗಂಟೆಯ ಸುಮಾರಿಗೆ ಉತ್ತರ ಪ್ರದೇಶದ ಬಿಶಾಡ ಗ್ರಾಮದ ದಾದ್ರಿಯಲ್ಲಿ 52 ವರ್ಷದ ಮುಹಮ್ಮದ್ ಅಖ್ಲಾಕ್ ಸೈಫಿ ಎಂಬವರನ್ನು ಗುಂಪು ಥಳಿಸಿ ಹತ್ಯೆ ಮಾಡಿತ್ತು. ಅವರ 22 ವರ್ಷದ ಮಗ ದಾನಿಶ್‌ನನ್ನು ಗಂಭೀರ ಗಾಯಗೊಳಿಸಿತ್ತು. ಗೋಹತ್ಯೆ ನಡೆಸಿ ಮಾಂಸ ಮಾಡಿದ್ದಾರೆ ಎಂಬುದು ಆರೋಪ. ದುಷ್ಕರ್ಮಿಗಳ ಗುಂಪಿನಲ್ಲಿ ಸ್ಥಳೀಯ ಬಿಜೆಪಿ ನಾಯಕ ಸಂಜಯ್ ರಾಣಾನ ಮಗ ವಿಶಾಲ್ ಸಿಂಗ್ ರಾಣಾ ಕೂಡಾ ಇದ್ದ. ಒಟ್ಟು 18 ಮಂದಿಯನ್ನು ಪೊಲೀಸರು ಬಂಧಿಸಿದರು. ಆಗ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದರು.

ಇದಾಗಿ 10 ವರ್ಷಗಳು ಕಳೆದ ಈ ಸಮಯದಲ್ಲಿ ಪ್ರಕರಣ ಸಂಪೂರ್ಣ ತಿರುವನ್ನು ಪಡೆದುಕೊಂಡಿದೆ. ಭಾರತದ ಮೊಟ್ಟಮೊದಲ ಮತ್ತು ಬಹು ಕುಪ್ರಸಿದ್ಧಿಯನ್ನು ಪಡೆದ ಈ ಪ್ರಕರಣವನ್ನು ಹಿಂಪಡೆಯುವುದಾಗಿ ಇದೀಗ ಉತ್ತರ ಪ್ರದೇಶ ಸರಕಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಮೂಲಕ ಎಲ್ಲ ಆರೋಪಿಗಳನ್ನೂ ಕಾನೂನಿನ ಕುಣಿಕೆಯಿಂದ ಬಿಡುಗಡೆಗೊಳಿಸುವುದು ಸರಕಾರದ ಉದ್ದೇಶವಾಗಿದೆ. ಸಮಾಜದ ಸೌಹಾರ್ದವನ್ನು ಕಾಪಾಡುವುದೇ ಈ ಕ್ರಮಕ್ಕೆ ಆಧಾರ ಎಂದು ಸರಕಾರ ಸಮರ್ಥಿಸಿಕೊಂಡಿದೆ. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವುದು ಯೋಗಿ ಆದಿತ್ಯನಾಥ್.

70 ವರ್ಷಗಳಿಂದ ಅಖ್ಲಾಕ್ ಕುಟುಂಬ ದಾದ್ರಿಯಲ್ಲಿ ವಾಸಿಸುತ್ತಾ ಇತ್ತು. ಅಖ್ಲಾಕ್ ಅವರ ಮಗ ಮುಹಮ್ಮದ್ ಸರ್ತಾಜ್ ಎಂಬವರು ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಅಖ್ಲಾಕ್ ಅವರಲ್ಲದೇ ತಾಯಿ 82 ವರ್ಷದ ಅಸ್‌ಘರಿ ಬೇಗಮ್, ಪತ್ನಿ ಇಕ್ರಾಮ್, ಮಗಳು ಸಾಜಿದಾ, ಮಗ ದಾನಿಶ್ ಮತ್ತು ಅಖ್ಲಾಕ್ ಅವರ ತಮ್ಮ 42 ವರ್ಷದ ಜಾನ್ ಮುಹಮ್ಮದ್ ಸೈಫಿ ಇದ್ದರು. ರಾತ್ರಿಯ ಊಟ ಮುಗಿಸಿ ಅಖ್ಲಾಕ್ ಮತ್ತು ಮಗ ದಾನಿಶ್ ಮಲಗಿದ್ದರು. ಆಗ ಸ್ಥಳೀಯರನ್ನೊಳಗೊಂಡ ಗುಂಪು ಇವರ ಮನೆಯ ಒಳನುಗ್ಗಿತು. ಎಲ್ಲರನ್ನೂ ಮನೆಯಿಂದ ಹೊರಗೆ ಳೆದು ಥಳಿಸತೊಡಗಿತು. ಅದು ಈದುಲ್ ಅಝ್ಹಾದ ಸಮಯ. ಊರಿನಲ್ಲಿ ಕಾಣೆಯಾದ ಕರುವನ್ನು ಕೊಯ್ದು ಮಾಂಸ ಮಾಡಿದ್ದೀರಿ ಎಂದು ಗುಂಪು ಆರೋಪಿಸಿತು. ಅಖ್ಲಾಕ್ ಸ್ಥಳದಲ್ಲಿ ಮೃತರಾದರು. ದಾನಿಶ್ ಗಂಭೀರ ಗಾಯಗೊಂಡು ನಾಲ್ಕು ದಿನ ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆದು ನಂತರ ಅವರನ್ನು ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಯಿತು.

ಈ ಕ್ರೌರ್ಯಕ್ಕೆ ಪ್ರಚೋದನೆ ನೀಡಿದ್ದೇ ಮಂದಿರದ ಲೌಡ್ ಸ್ಪೀಕರ್‌ನಲ್ಲಿ ಮಾಡಲಾದ ಘೋಷಣೆ. ಅಖ್ಲಾಕ್ ಕುಟುಂಬ ಕರುವನ್ನು ಹತ್ಯೆ ಮಾಡಿದೆ ಮತ್ತು ಹಬ್ಬದ ಹಿನ್ನೆಲೆಯಲ್ಲಿ ಮಾಂಸ ಮಾಡಿ ಸೇವಿಸಿದೆ ಎಂದು ಇಬ್ಬರು ಯುವಕರು ಮಂದಿರದ ಲೌಡ್ ಸ್ಪೀಕರ್ ಬಳಸಿ ಘೋಷಿಸಿದರು. ಅಖ್ಲಾಕ್ ಹತ್ಯೆಯ ಬಳಿಕ ಪೊಲೀಸರು ಮಂದಿರದ ಅರ್ಚಕ ಮತ್ತು ಆತನ ಸಹಾಯಕನನ್ನು ಬಂಧಿಸಿದರು. ಆದರೆ, ಈ ಕೃತ್ಯದಲ್ಲಿ ನಾವು ಭಾಗಿಯಾಗಿಲ್ಲ ಎಂದವರು ಹೇಳಿದರು. ಯುವಕರ ಒಂದು ಗುಂಪು ನಮ್ಮ ಮೇಲೆ ಒತ್ತಡ ಹೇರಿದುದರ ಪರಿಣಾಮ ನಾವು ಮಂದಿರದ ಮೈಕ್‌ನಿಂದ ಘೋಷಿಸಬೇಕಾಯಿತು ಎಂದೂ ತಪ್ಪೊಪ್ಪಿಕೊಂಡರು. ಆದರೆ ಅಖ್ಲಾಕ್ ಹೆಸರನ್ನು ನಾವು ಎತ್ತಿಲ್ಲ ಮತ್ತು ಗೋವನ್ನು ಹತ್ಯೆ ಮಾಡಲಾಗಿರುವುದರಿಂದ ಎಲ್ಲರೂ ಮಂದಿರದ ಬಳಿ ಸೇರಬೇಕು ಎಂದಷ್ಟೇ ಘೋಷಿಸಿರುವುದಾಗಿ ಹೇಳಿದರು. ಅಕ್ಟೋಬರ್‌ನಲ್ಲಿ ಅಖ್ಲಾಕ್ ಕುಟುಂಬ ಊರನ್ನೇ ತ್ಯಜಿಸಿ ದೆಹಲಿಯಲ್ಲಿರುವ ಭಾರತೀಯ ವಾಯುದಳದ ವಲಯಕ್ಕೆ ಸ್ಥಳಾಂತರಗೊಂಡಿತು.

ಈ ಘಟನೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಪ್ರತಿಧ್ವನಿಸಿತು. ಅಖ್ಲಾಕ್ ಮನೆಯ ಫ್ರಿಜ್‌ನಲ್ಲಿಟ್ಟಿದ್ದ ಮಾಂಸವನ್ನು ಪರಿಶೀಲನೆಗೆ ಕಳುಹಿಸಿಕೊಟ್ಟಿರುವ ಬಗ್ಗೆಯೂ ತೀವ್ರ ಪರ-ವಿರುದ್ಧ ಅಭಿಪ್ರಾಯಗಳು ವ್ಯಕ್ತವಾದುವು. ಈ ನಡುವೆ ಅಖ್ಲಾಕ್ ಹತ್ಯೆಯೂ ಸೇರಿದಂತೆ ಕಲ್ಬುರ್ಗಿ, ದಾಬೋಲ್ಕರ್, ಪನ್ಸಾರೆ ಹತ್ಯೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಖ್ಯಾತ ಸಾಹಿತಿ ನಯನತಾರಾ ಸೆಹ್ಗಾಲ್ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸಿದರು. ಅಲ್ಲದೇ, ರಾಷ್ಟçಪತಿ ಪ್ರಣವ್ ಮುಖರ್ಜಿಯವರೂ ಹೇಳಿಕೆ ನೀಡಿದರು. ವೈವಿಧ್ಯತೆ, ಸಹಿಷ್ಣುತೆ ಮತ್ತು ಬಹುತ್ವವೇ ಭಾರತವಾಗಿದೆ ಮತ್ತು ಇದುವೇ ಭಾರತವನ್ನು ಶತಮಾನಗಳಿಂದ ಒಟ್ಟುಗೂಡಿಸಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರೂ ದಾದ್ರಿ ಘಟನೆಗೆ ದುಃಖ ವ್ಯಕ್ತಪಡಿಸಿದರು. ಹಿಂದೂ ಮತ್ತು ಮುಸ್ಲಿಮರು ಹೋರಾಡಬೇಕಿರುವುದು ಬಡತನದ ವಿರುದ್ಧವೇ ಹೊರತು ಪರಸ್ಪರರ ವಿರುದ್ಧ ಅಲ್ಲ ಎಂದು ಅಕ್ಟೋಬರ್ 8ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಘೋಷಿಸಿದರು. ಇದಾಗಿ ಎರಡು ವರ್ಷಗಳ ಬಳಿಕ 2019ರಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಇದೇ ಅಖ್ಲಾಕ್‌ರನ್ನು ಹತ್ಯೆ ಮಾಡಲಾದ ಬಿಶಾಡ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದರು. ಈ ಸಭೆಯ ಮುಂದಿನ ಸಾಲಿನಲ್ಲಿ ಇದೇ ಅಖ್ಲಾಕ್ ಹತ್ಯೆಯ ನಾಲ್ವರು ಆರೋಪಿಗಳೂ ಕುಳಿತಿದ್ದರು. ಅವರಲ್ಲಿ ಬಿಜೆಪಿ ಮುಖಂಡನ ಮಗನಾದ ಮುಖ್ಯ ಆರೋಪಿ ವಿಶಾಲ್ ಸಿಂಗ್ ರಾಣಾ ಕೂಡಾ ಇದ್ದ. ಆತ ಯೋಗಿ ಮಾತಿಗೆ ಶಿಳ್ಳೆ ಮತ್ತು ಚಪ್ಪಾಳೆಯನ್ನು ತಟ್ಟುತ್ತಾ ಸಕ್ರಿಯವಾಗಿದ್ದುದನ್ನು ಎನ್‌ಡಿಟಿವಿ ಸಹಿತ ಎಲ್ಲ ಮಾಧ್ಯಮಗಳೂ ಸುದ್ದಿ ಪ್ರಕಟಿಸಿದುವು.

‘ಬಿಶಾಡದಲ್ಲಿ ಏನು ನಡೆದಿದೆಯೋ ಅದನ್ನು ಯಾರು ಮರೆತಿದ್ದಾರೆ? ಅದು ಎಲ್ಲರಿಗೂ ಗೊತ್ತು. ನಾನು ಅಧಿಕಾರಕ್ಕೆ ಬಂದ ಎರಡೇ ವರ್ಷಗಳಲ್ಲಿ ಎಲ್ಲ ಕಾನೂನುಬಾಹಿರ ಕಸಾಯಿಖಾನೆಗಳನ್ನು ಬಂದ್ ಮಾಡಿಸಿದ್ದಾನೆ..’ ಎಂದು ಈ ಸಭೆಯಲ್ಲಿ ಆದಿತ್ಯನಾಥ್ ಘೋಷಿಸಿದರು. ಆದರೆ, ಸೇನಾ ಯೋಧನ ತಂದೆಯನ್ನು ಹತ್ಯೆ ಮಾಡಿದ್ದನ್ನು ಖಂಡಿಸುವುದಾಗಲಿ, ಸಭೆಯಲ್ಲಿ ಉಪಸ್ಥಿತರಿದ್ದ ಆರೋಪಿಗಳಿಂದ ಆಂತರ ಕಾಯ್ದುಕೊಳ್ಳುವುದನ್ನಾಗಲಿ ಅವರು ಮಾಡಲೇ ಇಲ್ಲ. ಇದೀಗ,

ಈ ಪ್ರಕರಣವನ್ನೇ ಹಿಂಪಡೆಯಲು ಯೋಗಿ ಸರಕಾರ ನಿರ್ಧರಿಸಿದೆ. ಸಮಾಜದಲ್ಲಿ ಸೌಹಾರ್ದವನ್ನು ನೆಲೆಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅದು ಹೇಳಿದೆ. ಅಷ್ಟಕ್ಕೂ, ಅನ್ಯಾಯದ ಅಡಿಪಾಯದಲ್ಲಿ ಕಟ್ಟಲಾಗುವ ಸೌಹಾರ್ದವಾದರೂ ಎಂಥದ್ದು? ಒಂದುಕಡೆ, ದೇಶವೇ ಬೆಚ್ಚಿಬೀಳುವ ರೀತಿಯಲ್ಲಿ ಕ್ರೌರ್ಯ ಎಸಗಲಾಗಿದೆ. ತಾಯಿ, ಪತ್ನಿ, ಮಕ್ಕಳ ಕಣ್ಣೆದುರೇ ಅಖ್ಲಾಕ್‌ರನ್ನು ಥಳಿಸಿ ಥಳಿಸಿ ಹತ್ಯೆ ಮಾಡಲಾಗಿದೆ. ಅವರ ಮಗನ ಮೇಲೆ ಭೀಕರ ದೌರ್ಜನ್ಯ ಎಸಗಲಾಗಿದೆ. ಈ ಎಲ್ಲಕ್ಕೂ ಮಂದಿರದ ಲೌಡ್ ಸ್ಪೀಕರ್ ಮೂಲಕ ಪ್ರಚೋದನೆ ನೀಡಲಾಗಿದೆ. ಇಂಥ ಕೃತ್ಯದಲ್ಲಿ ಭಾಗಿಯಾದ ಕ್ರೂರಿಗಳನ್ನು ಸರಕಾರವೇ ಮುಂದೆ ನಿಂತು ದೋಷಮುಕ್ತಗೊಳಿಸುವುದರಿಂದ ಸೌಹಾರ್ದ ನೆಲೆಗೊಳ್ಳುವುದು ಹೇಗೆ? ಸೌಹಾರ್ದವೆಂದರೆ,

ಎರಡು ಸಮುದಾಯಗಳ ನಡುವೆ ಏರ್ಪಡುವ ಸದ್‌ಭಾವ. ಇಲ್ಲಿ ಒಂದು ಸಮುದಾಯದ ಮೇಲೆ ಅನ್ಯಾಯವಾಗಿದೆ. ಅನ್ಯಾಯ ಮಾಡಿದವರು ಆಡಳಿತ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಹೀಗಿರು ವಾಗ ಅದೇ ಪಕ್ಷ ಇವರನ್ನೆಲ್ಲ ದೋಷಮುಕ್ತಗೊಳಿಸಿದರೆ ಅದು ಸಾರುವ ಸಂದೇಶ ಏನು? ಸೌಹಾರ್ದವೋ ನ್ಯಾಯ ಪಕ್ಷಪಾತವೋ? ಒಂದುವೇಳೆ, ಸಂತ್ರಸ್ತ ಕುಟುಂಬ ಹಿಂದೂ ಆಗಿರುತ್ತಿದ್ದರೆ ಮತ್ತು ಆರೋಪಿಗಳು ಮುಸ್ಲಿಮ್ ಆಗಿರುತ್ತಿದ್ದರೆ ಯೋಗಿ ಸರಕಾರದಿಂದ ಇಂಥದ್ದೊಂದು ಸೌಹಾರ್ದದ ನಡೆ ಸಾಧ್ಯವಿತ್ತೇ? ಜೈಲಲ್ಲಿರಬೇಕಾದ ಪರಮ ಕ್ರೂರಿಗಳನ್ನು ಸೌಹಾರ್ದದ ರಾಯಭಾರಿಗಳಂತೆ ಒಂದು ಸರಕಾರವೇ ಬಿಂಬಿಸುವುದೆಂದರೆ, ಅದಕ್ಕೆ ಏನರ್ಥ? ಯಾಕೆ ಪ್ರಧಾನಿ ನರೇಂದ್ರ ಮೋದಿಯವರು ಈ ವಿಷಯದಲ್ಲಿ ಈವರೆಗೂ ಮಾತಾಡಿಲ್ಲ? 2019ರಲ್ಲಿ ದುಃಖ ವ್ಯಕ್ತಪಡಿಸಿದವರಿಗೆ ಈಗಿನ ಬೆಳವಣಿಗೆಯಿಂದ ಯಾವ ದುಃಖವೂ ಆಗಿಲ್ಲವೇ?

ಸೌಹಾರ್ದ ಏಕಮುಖಿಯಲ್ಲ. ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಸಹಕಾರ ಹಾಗೂ ವಿಶ್ವಾಸದಿಂದ ಬದುಕಬೇಕೆಂದರೆ ದುಷ್ಕರ್ಮಿಗಳ ಧರ್ಮ ನೋಡದೇ ಮತ್ತು ಪಕ್ಷ ನೋಡದೇ ಶಿಕ್ಷಿಸುವ ವಿಧಾನ ಜಾರಿಗೆ ಬರಬೇಕು. ದಾದ್ರಿ ಪ್ರಕರಣದಲ್ಲಿ ಈ ಮೂಲತತ್ವಕ್ಕೇ ಎಳ್ಳು ನೀರು ಬಿಡಲಾಗಿದೆ. ಕ್ರೂರಿಗಳ ಪರ ನಿಲ್ಲುವುದನ್ನೇ ಸೌಹಾರ್ದದ ಕ್ರಮ ಎಂದು ಹೇಳಲಾಗಿದೆ. ಇದು ಸಂತ್ರಸ್ತ ಕುಟುಂಬ ಮತ್ತು ನ್ಯಾಯ ಅಪೇಕ್ಷಿತರನ್ನು ಇನ್ನಷ್ಟು ಸಂತ್ರಸ್ತ ಭಾವಕ್ಕೆ ದೂಡಬಹುದೇ ಹೊರತು ಸೌಹಾರ್ದಭಾವ ಚಿಗುರಿಸಲು ಶಕ್ತವಾಗಲಾರದು. ದುರಂತ ಏನೆಂದರೆ, ಪ್ರಧಾನಿಯ ಮೌನ. ಅಖ್ಲಾಕ್ ಹತ್ಯೆಗೆ ಸಾರ್ವಜನಿಕ ವೇದಿಕೆಯಿಂದಲೇ ದುಃಖ ವ್ಯಕ್ತಪಡಿಸಿದವರು, ಆರೋಪಿಗಳನ್ನು ದೋಷಮುಕ್ತಗೊಳಿಸುವ ಯೋಗಿ ನಡೆಗೆ ಮೌನ ವಹಿಸಿರುವುದು ಖಂಡನೀಯ.