ನಾರಾಯಣ ಗುರು-ಗಾಂಧಿಜಿ ಸಂವಾದಕ್ಕೆ ನೂರು ವರ್ಷ

0
511

ಸನ್ಮಾರ್ಗ ವಾರ್ತೆ

ಡಿಸೆಂಬರ್‌ 3ರಂದು ಕೊಣಾಜೆಯಲ್ಲಿ ಹರ್ಷ
1924ರ ವೇಳೆಗೆ ಕೇರಳದಲ್ಲಿ ಹಿಂದೂ ಧರ್ಮದಲ್ಲಿನ ಅಸಮಾನತೆ, ಜಾತಿ ಆಧಾರಿತ ತಾರತಮ್ಯದಿಂದ ಬೇಸತ್ತ ತಳ ಸಮುದಾಯಗಳ ಜನರು ಮತಾಂತರ ಹೊಂದುತ್ತಿರುತ್ತಾರೆ. ಅದೇ ಹೊತ್ತಿನಲ್ಲಿ ನಾರಾಯಣ ಗುರುಗಳು ಸಮಾನತೆ, ಭ್ರಾತೃತ್ವ, ಧಾರ್ಮಿಕ ಸಹಿಷ್ಣುತೆ, ಸಾಮಾಜಿಕ ನ್ಯಾಯದ ತತ್ವಗಳ ಜೊತೆಯಲ್ಲೇ ವೈಜ್ಞಾನಿಕ ದೃಷ್ಟಿಕೋನದ ಮೂಲಕ ಸಮಾಜದಲ್ಲಿ ಸುಧಾರಣೆ ತರಲು ಪ್ರಬಲವಾದ ಪ್ರಯತ್ನ ನಡೆಸುತ್ತಿರುತ್ತಾರೆ.

1925ರ ಮಾರ್ಚ್‌ 9 ಮತ್ತು 10ರಂದು ವೈಕಂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕೇರಳದ ವೈಕಂನಲ್ಲಿ ವಾಸ್ತವ್ಯ ಹೂಡಿದ್ದ ಮಹಾತ್ಮ ಗಾಂಧೀಜಿಯನ್ನು ಭೇಟಿ ಮಾಡಿದ ಕೇರಳದ ಹಿಂದೂ ಮುಖಂಡರು, ನಾರಾಯಣ ಗುರುಗಳು ನಡೆಸುತ್ತಿರುವ ಸುಧಾರಣಾ ಚಳವಳಿ ಕುರಿತು ಗಾಂಧೀಜಿಯ ಗಮನ ಸೆಳೆಯುತ್ತಾರೆ. ತಕ್ಷಣವೇ ಶಿವಗಿರಿಗೆ ಹೊರಟ ಮಹಾತ್ಮ ಗಾಂಧೀಜಿ ಅಲ್ಲಿನ ವನಜಾಕ್ಷಿ ಮಂಟಪದಲ್ಲಿ ನಾರಾಯಣ ಗುರುಗಳನ್ನು ಭೇಟಿ ಮಾಡಿ, ದೀರ್ಘ ಸಂವಾದ ನಡೆಸಿದ್ದರು. ಸಹಸ್ರಾರು ಮಂದಿ ಜಮಾಯಿಸಿದ್ದರು. ಗಾಂಧೀಜಿ ಜೊತೆ ಚಕ್ರವರ್ತಿ ರಾಜಗೋಪಾಲಾಚಾರಿ, ದೇವದಾಸ್ ಗಾಂಧಿ, ಮಹದೇವ ದೇಸಾಯಿ ಮೊದಲಾದ ಮಹನೀಯರಿದ್ದರು. ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಕಾರ್ಯದರ್ಶಿ ಅಡ್ವೊಕೇಟ್ ಎನ್. ಕುಮಾರನ್ ಗಾಂಧೀಜಿ – ಗುರುಗಳ ನಡುವಿನ ಸಂವಾದಕ್ಕೆ ಭಾಷಾ ಸಂವಹನಕಾರರಾಗಿದ್ದರು.

ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸಮಾನತೆ, ತಾರತಮ್ಯದ ವಿರುದ್ಧದ ಹೋರಾಟ ಸೇರಿದಂತೆ ಹಲವು ವಿಷಯಗಳ ಕುರಿತು ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧೀಜಿ ನಡುವೆ ದೀರ್ಘ ವಿಚಾರ ವಿನಿಮಯ, ಸಂವಾದ ನಡೆಯಿತು. ಆ ದಿನ ಗಾಂಧೀಜಿ ಶಿವಗಿರಿಯಲ್ಲೇ ವಿಶ್ರಾಂತಿ ಪಡೆದರು.

ಶ್ರೀ ನಾರಾಯಣ ಗುರುಗಳು ಮತ್ತು ಮಹಾತ್ಮ ಗಾಂಧೀಜಿ ಮಧ್ಯೆ ನಡೆದ ಐತಿಹಾಸಿಕ ಸಂವಾದಕ್ಕೆ ಈಗ 100 ವರ್ಷ. ಗುರು- ಗಾಂಧಿ ಸಂವಾದದ ಶತಮಾನೋತ್ಸವ ಆಚರಣೆಯ ವರ್ಷದಲ್ಲಿ ನಾವು ಇದ್ದೇವೆ.

ಎಲ್ಲ ಧರ್ಮದವರೂ ಸೌಹಾರ್ದದಿಂದ ಬದುಕಬೇಕು. ಇದಕ್ಕಾಗಿ ಧಾರ್ಮಿಕ ಸಹಿಷ್ಣುತೆ ಅಗತ್ಯ ಎಂಬುದು ನಾರಾಯಣ ಗುರುಗಳ ಪ್ರತಿಪಾದನೆಯ ಬಹುಮುಖ್ಯ ಅಂಶ. ಈ ಕಾರಣಕ್ಕಾಗಿಯೇ ಅವರು ತಮ್ಮ ಶಿಷ್ಯರ ನೆರವಿನಿಂದ ಆಲುವಾ ಅದ್ವೈತಾಶ್ರಮದಲ್ಲಿ 1924ರ ಮಾರ್ಚ್‌ 4 ಮತ್ತು 5ರಂದು ಸರ್ವ ಮತ ಸಮ್ಮೇಳನ ಆಯೋಜಿಸಿದ್ದರು. 1924 ರ ಮಾರ್ಚ್ 4,5 ಮಂಗಳವಾರ ಮತ್ತು ಬುಧವಾರ ಮಹಾ ಶಿವರಾತ್ರಿ ದಿನಗಳಲ್ಲಿ ನಾರಾಯಣ ಗುರುಗಳು ಶಿಷ್ಯರ ನೆರವಿನಿಂದ ಆಲುವಾ ಅದ್ವೈತಾ ಶ್ರಮದಲ್ಲಿ ಸರ್ವಮತ ಸಮ್ಮೇಳನ ಏರ್ಪಡಿಸಿದರು. ಇದು ಏಷ್ಯಾದ ಪ್ರಪ್ರಥಮ ಹಾಗೂ ವಿಶ್ವದ ಎರಡನೆಯ ಸರ್ವಮತ ಸಮ್ಮೇಳನವಾಗಿತ್ತು. ಈ ಸರ್ವಮತ ಸಮ್ಮೇಳನದ ಸಭಾಂಗಣ ದ್ವಾರದಲ್ಲಿ “ಈ ಧರ್ಮಸಮ್ಮೇಳನ ವಾದಿಸಲಿಕ್ಕಲ್ಲ, ವಾದಿಸಿ ಜಯಿಸಲಿಕ್ಕೂ ಅಲ್ಲ,, ತಿಳಿಯಲು ಮತ್ತು ತಿಳಿಸಲು” ಎಂದು ಗುರುಗಳು ಬರೆಯಿಸಿದ್ದರು. ಇಂತಹದ್ದೊಂದು ಐತಿಹಾಸಿಕ ಸರ್ವ ಮತ ಸಮ್ಮೇಳನ ನಡೆದು 100 ವರ್ಷ ಕಳೆದಿದೆ.

1855ರಲ್ಲಿ ಜನಿಸಿದ ಶ್ರೀ ನಾರಾಯಣ ಗುರುಗಳು 1928ರ ಸೆಪ್ಟೆಂಬರ್‌ 20ರಂದು ಶಿವೈಕ್ಯರಾದರು. ನಾರಾಯಣ ಗುರುಗಳ ಮಹಾ ಸಮಾಧಿಯ ಶತಮಾನೋತ್ಸವವೂ ಸಮೀಪಿಸುತ್ತಿದೆ. ಸರ್ವ ಧರ್ಮಗಳ ಮಧ್ಯೆ ಸಮಭಾವ, ಸಮಾನತೆ, ಸೌಹಾರ್ದ, ಭ್ರಾತೃತ್ವ ಗಟ್ಟಿಗೊಳಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವ ಸಂದಿಗ್ಧ ಕಾಲವಿದು. ಈ ಸಂದರ್ಭದಲ್ಲಿ ವರ್ಕಳದ ಶಿವಗಿರಿ ಮಠ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಹಭಾಗಿತ್ವದಲ್ಲಿ 2025ರ ಡಿಸೆಂಬರ್‌ 3ರಂದು ಮಂಗಳೂರಿನ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿ ಕ್ಯಾಂಪಸ್‌ ಆವರಣದಲ್ಲಿ “ಬ್ರಹ್ಮ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದದ ಶತಮಾನೋತ್ಸವ”, ಗುರುವಿನ ಮಹಾ ಸಮಾಧಿ ಶತಾಬ್ಧಿ ಮತ್ತು ಸರ್ವಮತ ಸಮ್ಮೇಳನ ಶತಮಾನೋತ್ಸವ ಆಯೋಜಿಸಲಾಗಿದೆ. ನಾರಾಯಣ ಗುರುಗಳು ಸಾರಿದ ಜೀವನ ಮೌಲ್ಯಗಳನ್ನು ಮತ್ತೊಮ್ಮೆ ನೆನಪಿಸಿ, ಜನಮಾನಸಕ್ಕೆ ತಲುಪಿಸುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಸರ್ವ ಧರ್ಮಗಳು ಮತ್ತು ಸರ್ವ ಸಮುದಾಯಗಳ ಜನರನ್ನೂ ಒಳಗೊಳ್ಳುವ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಯವರು ಆಶೀರ್ವಚನ ನೀಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭ ಉದ್ಘಾಟಿಸಲಿದ್ದು, ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌ ಅಧ್ಯಕ್ಷತೆ ವಹಿಸುವರು. ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿರುವ ಕೆ.ಸಿ. ವೇಣುಗೋಪಾಲ್‌ ಅವರು ಶ್ರೀ ನಾರಾಯಣ ಗುರು ಮತ್ತು ಗಾಂಧಿ ಸಮಾಗಮ ಸಂದೇಶದ ಪ್ರಧಾನ ಭಾಷಣ ಮಾಡುವರು. ಶಿವಗಿರಿ ಮಠದ ಕಾರ್ಯದರ್ಶಿ ಸ್ವಾಮೀಜಿ ಶುಭಾಂಗಾನಂದ ಪರಿನಿರ್ವಾಣ ಸಂದೇಶ ಭಾಷಣ ನೀಡುವರು.

ಶಿವಗಿರಿ ಮಠದ ಶ್ರೀಮದ್‌ ಶಾರದಾನಂದ, ಸ್ವಾಮಿ ರಿತಾಂಭರಾನಂದ, ಸ್ವಾಮಿ ಆಸಂಗಾನಂದ ಗಿರಿ, ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾನಂದಜಿ ಮಹಾರಾಜ ಉಪಸ್ಥಿತಿ ಇರಲಿದೆ.

ಇವರಲ್ಲದೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು, ಸಮುದಾಯಗಳ ಮುಖಂಡರು, ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರು ಕೂಡ ಅತಿಥಿಗಳಾಗಿ ಭಾಗವಹಿಸುವರು.

ಸರ್ವಮತ ಸಮ್ಮೇಳನ
ಇದೇ ದಿನ ಮಧ್ಯಾಹ್ನ 2ರಿಂದ 4ರವರೆಗೆ ಸರ್ವಮತ ಸಮ್ಮೇಳನ ನಡೆಯಲಿದೆ. ಖ್ಯಾತ ಸಂಸ್ಕೃತಿ ಚಿಂತಕ ಗಣೇಶ ದೇವಿ ಸಮ್ಮೇಳನ ಉದ್ಘಾಟಿಸುವರು. ವಿಧಾನ ಪರಿಷತ್‌ ಸದಸ್ಯರು ಮತ್ತು ಕಾರ್ಯಕ್ರಮದ ಕೇಂದ್ರ ಸಮಿತಿ ಅಧ್ಯಕ್ಷರೂ ಆಗಿರುವ ಬಿ.ಕೆ. ಹರಿಪ್ರಸಾದ್‌ ಅಧ್ಯಕ್ಷತೆ ವಹಿಸುವರು. ಶಿವಗಿರಿ ಮಠದ ಸ್ವಾಮಿ ರಿತಾಂಭರಾನಂದ ಅವರು ಸರ್ವಮತ ಸಂದೇಶ ಭಾಷಣ ನೀಡುವರು.
ಶಿಹಾಬ್‌ ತಂಞಳ್‌ ಪಾಣಕ್ಕಾಡ್‌ ಮುನಾವರ್‌ ಅಲಿ, ಮಂಗಳೂರು ಧರ್ಮ ಪ್ರಾಂತ್ಯದ ವಂದನೀಯ ಬಿಷಪ್‌ ಡಾ. ಪೀಟರ್‌ ಪಾಲ್‌ ಸಲ್ಡಾನ, ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಂದನೀಯ ಬಿಷಪ್‌ ಜೇಮ್ಸ್‌ ಪಟ್ಟೆರಿಲ್‌, ಬ್ರಹ್ಮಕುಮಾರಿ ವೀಣಾ ಬೆಹನ್‌ಜಿ ಸರ್ವಮತ ಸಮ್ಮೇಳನದಲ್ಲಿ ಅತಿಥಿಗಳಾಗಿ ಭಾಗವಹಿಸುವರು.

ಬಿ.ಕೆ. ಹರಿಪ್ರಸಾದ್‌, ಕಾರ್ಯಕ್ರಮ ಆಯೋಜನೆಯ ಕೇಂದ್ರ ಸಮಿತಿ ಅಧ್ಯಕ್ಷರು