ದೇಶದ್ರೋಹದ ಹಣೆಪಟ್ಟಿ: ಸಾಂವಿಧಾನಿಕ ರಾಷ್ಟ್ರೀಯತೆ ಮತ್ತು ಭಿನ್ನಾಭಿಪ್ರಾಯದ ಹಕ್ಕು

0
233

✍️ ಯಾಸೀನ್‌ ಕೋಡಿಬೇಂಗ್ರೆ
ವಕೀಲರು, ಉಡುಪಿ

ಭಾರತದ ಪ್ರಜಾಪ್ರಭುತ್ವದಲ್ಲಿ ‘ದೇಶದ್ರೋಹ’, ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಮತ್ತು ‘ರಾಷ್ಟ್ರೀಯತೆ’ ಕುರಿತ ಚರ್ಚೆಯು ಶಾಸಕಾಂಗ, ನ್ಯಾಯಾಂಗ ಹಾಗೂ ಸಾಮಾಜಿಕ ರಂಗಗಳಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ವಿಷಯವಾಗಿದೆ. ಇದರ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ಅರಿಯದೆ ಹೋದಲ್ಲಿ ನಾಗರಿಕರು ತಮಗರಿವಿಲ್ಲದೆ ತಮ್ಮವರನ್ನೇ ಅನುಮಾನದ ದೃಷ್ಟಿಯಿಂದ ನೋಡುವಂತಹ ಸನ್ನಿವೇಶ ಸೃಷ್ಟಿಯಾಗುತ್ತದೆ.

ಬ್ರಿಟಿಷ್ ಆಡಳಿತಾವಧಿಯಲ್ಲಿ (1870 ರಲ್ಲಿ ಜಾರಿಗೆ ತರಲಾದ) ಸೆಕ್ಷನ್ 124A, ಕಾನೂನಿನ ಮೂಲಕ ಸ್ಥಾಪಿತವಾದ ಸರ್ಕಾರದ ವಿರುದ್ಧ ದ್ವೇಷ, ಅಸಮಾಧಾನ ಅಥವಾ ತಿರಸ್ಕಾರ ಹುಟ್ಟುಹಾಕುವ ಮಾತು, ಬರಹ ಹಾಗೂ ಸಂಕೇತಗಳನ್ನು ಅಪರಾಧವೆಂದು ಪರಿಗಣಿಸುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರ ಧ್ವನಿಯನ್ನು ಅಡಗಿಸಲು ಬಳಸಲಾಗುತ್ತಿದ್ದ ಈ ಕಾನೂನು, ಸ್ವತಂತ್ರ ಭಾರತದಲ್ಲೂ ಮುಂದುವರಿದು ಹಲವು ದಶಕಗಳ ಕಾಲ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಂತರ ಸರ್ವೋಚ್ಚ ನ್ಯಾಯಾಲಯವು ಸುದೀರ್ಘ ವಿಚಾರಣೆಯ ನಂತರ S.G. ವೊಂಬತ್‌ಕೆರೆ ವಿರುದ್ಧ ಯೂನಿಯನ್ ಆಫ್ ಇಂಡಿಯಾ (2022) ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 2022 ರಲ್ಲಿ ಸುಪ್ರೀಂ ಕೋರ್ಟ್ IPC 124A ಸೆಕ್ಷನ್‌ನ ಅನಿಯಂತ್ರಿತ ಬಳಕೆಗೆ ಮಧ್ಯಂತರ ತಡೆ (Abeyance) ನೀಡಿ ಆದೇಶ ಹೊರಡಿಸಿತು. ಈ ಐತಿಹಾಸಿಕ ಆದೇಶದ ನಂತರ ಈ 124A ಅಡಿಯಲ್ಲಿ ಹಳೆಯ ಪ್ರಕರಣಗಳ ವಿಚಾರಣೆ ಹಾಗೂ ಹೊಸ ಎಫ್‌ಐಆರ್ ದಾಖಲಿಸುವುದಕ್ಕೆ ತಡೆ ಒಡ್ಡಲಾಯಿತು. ಆದರೆ ಸರಕಾರಗಳು ಯಾವಾಗಲೂ ಜನರ ಧ್ವನಿಯನ್ನು ಕಠಿಣ ಕಾನೂನುಗಳ ಮೂಲಕ ನಿಗ್ರಹಿಸಲು ಅಡ್ಡ ಮಾರ್ಗದತ್ತ ಸಾಗುವುದು ಸಹಜ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ (BNS) ಯಾಗಿ ಬದಲಿಸಿದಂತಹ ಸಂದರ್ಭದಲ್ಲಿ ಸೆಕ್ಷನ್ 152 ಅಡಿಯಲ್ಲಿ ‘Sedition’ (ರಾಜದ್ರೋಹ) ಎಂಬ ಪದವನ್ನು ಕೈಬಿಟ್ಟು ಸೆಕ್ಷನ್ 152 ಅಡಿಯಲ್ಲಿ “ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವ ಕೃತ್ಯಗಳು” ಎಂಬ ಶೀರ್ಷಿಕೆಯಲ್ಲಿ ಹೊಸ ನಿಯಮವನ್ನು ರೂಪಿಸಲಾಯಿತು. ವಾಸ್ತವದಲ್ಲಿ ದೇಶದ್ರೋಹ ಎಂಬ ಪದವೊಂದನ್ನು ಬಿಟ್ಟರೆ ಈ ಮುಂಚೆ ಇದ್ದ ಎಲ್ಲ ಸಂಕಲ್ಪಗಳು ಈ ಕಾನೂನಿನಲ್ಲಿ ಹಾಗೆಯೇ ಉಳಿದಿರುವುದು ವಾಸ್ತವ.

BNS ಸೆಕ್ಷನ್ 152 ರ ಅಡಿಯಲ್ಲಿ 7 ವರ್ಷದಿಂದ ಜೀವಾವಧಿ ಶಿಕ್ಷೆಯವರೆಗೆ ದಂಡ ಸಹಿತ ಶಿಕ್ಷೆ ವಿಧಿಸಲು ಅವಕಾಶವಿದೆ. ಇದರ ಕುರಿತು ಈಗಾಗಲೇ ನಾಗರಿಕ ಸಮಾಜ ದೊಡ್ಡ ಮಟ್ಟದಲ್ಲಿ ದನಿಯೆತ್ತಿದೆ. ಆದರೆ ನಿರಂಕುಶ ಪ್ರಭುತ್ವ ತನ್ನ ಕಿವುಡುತನದ ಕಾರಣಕ್ಕೆ ಇನ್ನೂ ಕೂಡ ಈ ಕಾನೂನನ್ನು ಹೊಸ ಮುಖದೊಂದಿಗೆ ಹೇರುತ್ತಿದೆ. ‘ದೇಶದ್ರೋಹ’ ಪದವನ್ನು ತೆಗೆದುಹಾಕಿ ಬ್ರಿಟಿಷರು ಭಾರತೀಯರ ವಿರುದ್ಧ ಬಳಸುತ್ತಿದ್ದ ಕಾನೂನನ್ನು ತೊಡೆದು ಹಾಕಿದ್ದೇವೆ ಎನ್ನಲು ಖಂಡಿತ ಸಾಧ್ಯವಿಲ್ಲ. ಇದೀಗ ಬಿ.ಎನ್.ಎಸ್ ಪ್ರಸ್ತುತ ಪಡಿಸುವ ಸೆಕ್ಷನ್ 152 ರ ‘ಸಾರ್ವಭೌಮತ್ವ ಮತ್ತು ಅಖಂಡತೆ’ಯ ವ್ಯಾಖ್ಯಾನವು ವಿಶಾಲವಾಗಿದ್ದು, ದುರ್ಬಳಕೆಯ ಸಾಧ್ಯತೆಗಳನ್ನು ಸಂಪೂರ್ಣವಾಗಿ ತಡೆಯಲು ಸ್ಪಷ್ಟ ಮಾರ್ಗದರ್ಶಿ ಸೂತ್ರಗಳ ಅಗತ್ಯ ಖಂಡಿತವಿದೆ.

UAPA ಎಂಬ ಸಂವಿಧಾನ ಮೂಲ ಆಶಯಕ್ಕೆ ಧಕ್ಕೆ ತರುವ ಕಾನೂನುಗಳನ್ನು ಈ ದೇಶದಲ್ಲಿ ದೇಶದ್ರೋಹದ ಕಾನೂನುಗಳಿಗೆ ಪರ್ಯಾಯವಾಗಿ ಬಳಸಿ ಅಮಾಯಕರನ್ನು, ಸಾಮಾಜಿಕ ಕಾರ್ಯಕರ್ತರನ್ನು, ವಿದ್ಯಾರ್ಥಿಗಳನ್ನು ರಾಜಕೀಯ ಕೈದಿಗಳನ್ನಾಗಿಸಿ ಹತ್ತಾರು ವರ್ಷಗಳು ಜೈಲಿಗಟ್ಟಿ ಸತಾಯಿಸಲಾಗುತ್ತದೆ. UAPA (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ನಂತಹ ಕಠಿಣ ಕಾಯ್ದೆಗಳ ಸಂಯೋಜನೆಯಿಂದಾಗಿ ಉಮರ್ ಖಾಲಿದ್, ಶರ್ಜಿಲ್ ಇಮಾಮ್ ಅವರಂತಹ ವ್ಯಕ್ತಿಗಳು ದೀರ್ಘಕಾಲದ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ಸಿದ್ದೀಕ್ ಕಪ್ಪನ್, ಕನ್ಹಯ್ಯಾ ಕುಮಾರ್ ಹಾಗೂ ದಿಶಾ ರವಿ ಅವರ ಪ್ರಕರಣಗಳು ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಠಿಣ ಕಾನೂನುಗಳ ನಡುವಿನ ಸಂಘರ್ಷಕ್ಕೆ ಸ್ಪಷ್ಟ ಉದಾಹರಣೆಗಳಾಗಿವೆ.

ಸಂವಿಧಾನದ ವಿಧಿ 19(1)(a) ಪ್ರತಿಯೊಬ್ಬ ಪ್ರಜೆಗೂ ‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ಮೂಲಭೂತ ಹಕ್ಕಾಗಿ ನೀಡಿದೆ. ಆದರೆ ಇದು ಅನಿಯಂತ್ರಿತವಲ್ಲ; ವಿಧಿ 19(2) ರ ಅಡಿಯಲ್ಲಿ ರಾಷ್ಟ್ರದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸಾರ್ವಭೌಮತ್ವದ ಹಿತದೃಷ್ಟಿಯಿಂದ “ಸಮಂಜಸ ನಿರ್ಬಂಧಗಳನ್ನು” (Reasonable Restrictions) ಹೇರಲು ಸರ್ಕಾರಕ್ಕೆ ಅಧಿಕಾರವಿದೆ. ಆದರೆ ಆ ಅಧಿಕಾರವನ್ನು ಸರಕಾರವು ನಿಜವಾಗಿಯೂ ಕಾನೂನಿನ ಮೂಲ ಉದ್ದೇಶದಂತೆ ಬಳಸದೆ ಪ್ರಭುತ್ವವನ್ನು ಪ್ರಶ್ನಿಸುವ, ಟೀಕಿಸುವ ಜನರ ವಿರುದ್ಧ ಬಳಸುತ್ತದೆ. ನಂತರ ಅವರನ್ನು “ದೇಶದ್ರೋಹಿ”ಗಳು, ಉಗ್ರರು ಅಥವಾ ಭಯೋತ್ಪಾದಕರಂತೆ ಬಿಂಬಿಸಲಾಗುತ್ತದೆ.

ವಾಸ್ತವದಲ್ಲಿ ಕೇದಾರ್ ನಾಥ್ ಸಿಂಗ್ ವಿರುದ್ಧ ಬಿಹಾರ ಸರ್ಕಾರ (1962) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಪಂಚಪೀಠವು, “ಸರ್ಕಾರದ ಕ್ರಮಗಳನ್ನು ಎಷ್ಟೇ ತೀವ್ರವಾಗಿ ಟೀಕಿಸಿದರೂ ಅಥವಾ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರೂ, ಆ ಕ್ರಿಯೆಯು ನೇರವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡದಿದ್ದರೆ ಅಥವಾ ಸಾರ್ವಜನಿಕ ಅಶಾಂತಿಗೆ ಕಾರಣವಾಗದಿದ್ದರೆ ಅದನ್ನು ದೇಶದ್ರೋಹ ಎನ್ನಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದೆ. ಮುಂದುವರಿದು 1995 ರಲ್ಲಿ ವಿಚಾರಣೆಗೈದ ಬಲವಂತ್ ಸಿಂಗ್ ವಿರುದ್ಧ ಪಂಜಾಬ್ ಸರ್ಕಾರ ಪ್ರಕರಣದಲ್ಲಿ ಯಾವುದೇ ಹಿಂಸಾಚಾರ ಅಥವಾ ಸಾರ್ವಜನಿಕ ಅಶಾಂತಿ ಉಂಟಾಗದ ಸಂದರ್ಭದಲ್ಲಿ, ಕೇವಲ ಭಾವೋದ್ರೇಕದ ಘೋಷಣೆಗಳನ್ನು ಕೂಗಿದಾಕ್ಷಣ ದೇಶದ್ರೋಹದ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು. 2015 ರಲ್ಲಿ ಶ್ರೇಯಾ ಸಿಂಘಾಲ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಚರ್ಚೆ(Discussion), ಪರವಾಗಿ ವಾದಿಸುವುದು(Advocacy) ಮತ್ತು ಹಿಂಸೆಗೆ ಪ್ರಚೋದನೆ ನೀಡುವುದು(Incitement) – ಇವುಗಳ ನಡುವಿನ ವ್ಯತ್ಯಾಸವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಕೇವಲ ಅಭಿಪ್ರಾಯ ವ್ಯಕ್ತಪಡಿಸುವುದು ಅಥವಾ ವಾದಿಸುವುದು ಅಪರಾಧವಲ್ಲ; ಅದು ಹಿಂಸಾಚಾರದ ಹಂತಕ್ಕೆ ತಲುಪಿದಾಗ ಮಾತ್ರ ಕಾನೂನು ಕ್ರಮ ಸಾಧ್ಯ ಎಂದು ನೀಡಿದ ಲ್ಯಾಂಡ್‌ಮಾರ್ಕ್ ಆದೇಶಗಳ ಹೊರತಾಗಿಯೂ ಸರಕಾರದ ತಾರತಮ್ಯ ಸಹಿತ ನೀತಿ ನಿರೂಪಣೆಗಳನ್ನು ವಿರೋಧಿಸಿದ ಕಾರಣಕ್ಕೆ ಈ ಕಠಿಣ ಕಾನೂನುಗಳಡಿಯಲ್ಲಿ “ದೇಶದ್ರೋಹ”ದ ಹಣೆಪಟ್ಟಿ ಕಟ್ಟಿ ಜೈಲಿಗಟ್ಟುವುದು ಸರಕಾರಗಳ ಸಾಮಾನ್ಯ ಅಸ್ತ್ರವಾಗಿ ಕಂಡುಬರುತ್ತಿದೆ.

ಇಂದು ದೇಶದ್ರೋಹದ ಹಣೆಪಟ್ಟಿ ಕಟ್ಟಿಕೊಂಡು ಅನೇಕ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. UAPA ಯಂತಹ ಕಠಿಣ ಕಾನೂನುಗಳಡಿಯಲ್ಲಿ ಪಾರದರ್ಶಕ ವಿಚಾರಣೆಯನ್ನು ಎದುರಿಸಲಾಗದೆ ಜೈಲಿನಲ್ಲಿರುವವರ ಸಂಖ್ಯೆ ದೊಡ್ಡದಿದೆ. ಅವರು ಮಾಡಿದ ತಪ್ಪು ಏನು ಎಂದು ಸರಕಾರಗಳು ನಿರೂಪಿಸದೆ ತಾವು ನಿರಪರಾಧಿಗಳೆಂದು ಬಂಧನಕ್ಕೊಳಗಾದ ಆರೋಪಿಗಳೇ ನಿರೂಪಿಸಬೇಕಾದ ಅತ್ಯಂತ ಅಸಂವಿಧಾನಿಕ ವ್ಯವಸ್ಥೆ ಜಾರಿಯಲ್ಲಿದೆ.

ವಾಸ್ತವದಲ್ಲಿ ಸಂವಿಧಾನ, ಭೌಗೋಳಿಕ ಗಡಿ, ಭೂಪ್ರದೇಶ ಮತ್ತು ವಿಶಾಲ ಪ್ರಜಾಸಮುದಾಯವನ್ನು ಒಳಗೊಂಡ ಶಾಶ್ವತ ವ್ಯವಸ್ಥೆಯನ್ನು ದೇಶ ಎನ್ನಲಾಗುತ್ತದೆ. ಸರ್ಕಾರವು ಪ್ರಜಾಪ್ರಭುತ್ವದ ಚುನಾವಣೆಗಳ ಮೂಲಕ ನಿರ್ದಿಷ್ಟ ಅವಧಿಗೆ ಆಡಳಿತ ನಡೆಸಲು ಜನರ ಆಶಯದಿಂದ ಬಂದ ತಾತ್ಕಾಲಿಕ ವ್ಯವಸ್ಥೆ. ಆಡಳಿತಾರೂಢ ಸರ್ಕಾರದ ನೀತಿ, ನಿರ್ಧಾರ ಮತ್ತು ಆಡಳಿತ ವೈಫಲ್ಯಗಳನ್ನು ಪ್ರಶ್ನಿಸುವುದು ಅಥವಾ ಖಂಡಿಸುವುದು ಪ್ರಜಾಪ್ರಭುತ್ವದ ಜೀವನಾಡಿ. ಇದನ್ನು ‘ದೇಶವಿರೋಧಿ’ ಅಥವಾ ‘ದೇಶದ್ರೋಹ’ ಎಂದು ಬಿಂಬಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು.

ಆದರೆ ಈ ರೀತಿಯಲ್ಲಿ ಬಂಧಿತರಾಗಿರುವವರ ಪಟ್ಟಿಯೇ ದೊಡ್ಡದಿದೆ. ವರವರ ರಾವ್: ತೆಲುಗು ಕವಿ ಮತ್ತು ಸಾಮಾಜಿಕ ಕಾರ್ಯಕರ್ತ, ಸುಧಾ ಭಾರದ್ವಾಜ್ ಮತ್ತು ಆನಂದ್ ತೇಲ್ತುಂಬ್ಡೆ: ಮಾನವ ಹಕ್ಕುಗಳ ವಕೀಲರು ಮತ್ತು ಚಿಂತಕರು (ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ), ಸ್ಟಾನ್ ಸ್ವಾಮಿ: ಬುಡಕಟ್ಟು ಹಕ್ಕುಗಳಿಗಾಗಿ ಹೋರಾಡಿದ ಜೆಸ್ಯೂಟ್ ಪಾದ್ರಿ. ಇವರು ಜೈಲಿನಲ್ಲಿದ್ದಾಗಲೇ ಅನಾರೋಗ್ಯದಿಂದ ನಿಧನರಾದರು, ರೋನಾ ವಿಲ್ಸನ್ ಮತ್ತು ಸುರೇಂದ್ರ ಗಾಡ್ಲಿಂಗ್: ದಲಿತ ಹಾಗೂ ಮಾನವ ಹಕ್ಕು ಹೋರಾಟಗಾರರು, ಉಮರ್ ಖಾಲಿದ್: ಮಾಜಿ ವಿದ್ಯಾರ್ಥಿ ನಾಯಕ, 2020 ರಿಂದ ಯುಎಪಿಎ ಕಾಯ್ದೆಯಡಿ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದಾರೆ. ಶರ್ಜೀಲ್ ಇಮಾಮ್: ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದತಿಯ ಸಂದರ್ಭದಲ್ಲಿ ಮೆಹಬೂಬಾ ಮುಫ್ತಿ, ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಅಥವಾ ಜೈಲಿನಲ್ಲಿ ಇರಿಸಲಾಗಿತ್ತು. ವಾಸ್ತವದಲ್ಲಿ ಇವರು ರಾಷ್ಟ್ರದ ವಿರುದ್ಧ ಮಾಡಿದ ಅಪರಾಧವೇನು? ಇವರ ಮೇಲಿನ ಆರೋಪಗಳನ್ನು ಸರ್ಕಾರ ವಿಳಂಬಿಸಲು ಕಾರಣವೇನು? ಇವರನ್ನು ಯಾವ ಕಾರಣಕ್ಕೆ ಬಂಧಿಸಿ ಜೈಲಿನಲ್ಲಿ ಸುದೀರ್ಘ ಕಾಲ ಬಂಧಿಸಿಡಲಾಗುತ್ತದೆ? ಇಂತಹ ಹಲವು ಪ್ರಶ್ನೆಗಳು ಸರಕಾರವನ್ನು ಬೊಟ್ಟು ಮಾಡುತ್ತಿದೆ.

ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೆ ಸಾಮಾನ್ಯ ಭಾರತೀಯರನ್ನು ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಪ್ರಯತ್ನ ಮುಂದುವರಿದಿದೆ. ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತಂದು ಒಂದಿಷ್ಟು ಜನರನ್ನು “ದೇಶದ್ರೋಹ”ದ ವ್ಯಾಖ್ಯಾನದಡಿಯಲ್ಲಿ ತರುವ ಪ್ರಯತ್ನ ಮುಂದುವರಿಸಿದಂತೆ ಕಾಣುತ್ತಿದೆ. ಅದಕ್ಕಾಗಿ ವಂದೇ ಮಾತರಂ ಗೀತೆಯನ್ನು ಹೊಸ ಟೂಲ್ ಆಗಿ ಬಳಸುವ ಪ್ರಯತ್ನ ಸಾಗಿದೆ. ವಂದೇ ಮಾತರಂ ಹಾಡದ ಭಾರತೀಯರನ್ನು ಇಂದು ಅನುಮಾನದ ದೃಷ್ಟಿಯಿಂದ ನೋಡುವಂತಹ “ದ್ವೇಷ”ದ ವಾತಾವರಣ ಸೃಷ್ಟಿಸಲಾಗುತ್ತಿದೆ. ಆದರೆ 1986 ರ ಬಿಜೋಯ್ ಇಮ್ಯಾನ್ಯುವಲ್ ವಿರುದ್ಧ ಕೇರಳ ಸರ್ಕಾರ (1986) ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ, ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ವಿದ್ಯಾರ್ಥಿಗಳ ಪರವಾಗಿ ತೀರ್ಪು ನೀಡಿತು. “ಗೀತೆಗೆ ಸೂಕ್ತ ಗೌರವ ನೀಡಿ ಎದ್ದು ನಿಲ್ಲುವುದು ಕಡ್ಡಾಯವೇ ಹೊರತು, ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ಹಾಡಲೇಬೇಕೆಂದು ಬಲವಂತಪಡಿಸುವುದು ವಿಧಿ 19(1)(a) (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು ವಿಧಿ 25 (ಧಾರ್ಮಿಕ ಸ್ವಾತಂತ್ರ್ಯ) ಕ್ಕೆ ಭಂಗ ತರುತ್ತದೆ” ಎಂದು ಕೋರ್ಟ್ ಸ್ಪಷ್ಟಪಡಿಸಿತು.

ಆದ್ದರಿಂದ ವಂದೇ ಮಾತರಂ ಹಾಡದಿರುವುದು ದೇಶದ್ರೋಹವಾಗುವುದಿಲ್ಲ; ಗೌರವಿಸುವುದು ಪ್ರಜೆಯ ಆಯ್ಕೆಯಾಗಿದ್ದು ಅದನ್ನು ಬಲವಂತದ ‘ದೇಶಭಕ್ತಿಯ ಪರೀಕ್ಷೆ’ಯಾಗಿ ಬಳಸುವುದು ಕಾನೂನುಬಾಹಿರ. ಆದರೆ ಸಂವಿಧಾನವನ್ನೇ ಒಪ್ಪದ ಸಿದ್ಧಾಂತಿಗಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ?

ಭಾರತೀಯ ಸಂವಿಧಾನವು ‘ಸಾಂವಿಧಾನಿಕ ರಾಷ್ಟ್ರೀಯತೆ’ (Constitutional Nationalism) ಯನ್ನು ಎತ್ತಿಹಿಡಿಯುತ್ತದೆ. ಧರ್ಮವು ವ್ಯಕ್ತಿಯ ವೈಯಕ್ತಿಕ ನಂಬಿಕೆ ಮತ್ತು ಆರಾಧನೆಗೆ ಸಂಬಂಧಿಸಿದ್ದಾದರೆ, ರಾಷ್ಟ್ರೀಯತೆಯು ಸಾಂವಿಧಾನಿಕ ಮೌಲ್ಯಗಳು, ಕಾನೂನಿನ ಆಡಳಿತ ಮತ್ತು ದೇಶದ ಸಾರ್ವಭೌಮತ್ವಕ್ಕೆ ನೀಡುವ ಗೌರವವಾಗಿದೆ. ಜಾತ್ಯತೀತ ತತ್ವದ ಮೇಲೆ ನಿಂತಿರುವ ಭಾರತದಲ್ಲಿ, ಧಾರ್ಮಿಕ ನಿಷ್ಠೆ ಮತ್ತು ದೇಶಪ್ರೇಮ ಪರಸ್ಪರ ವಿರೋಧಿಯಲ್ಲ. ಅದು ಪರಸ್ಪರ ಪೂರಕವಾಗಿದೆ. ಆದರೆ ಇಂದು ದೇಶ ಮತ್ತು ಧರ್ಮವನ್ನು ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸಿ ದೇಶ ಮೊದಲೋ; ಧರ್ಮ ಮೊದಲೋ ಎಂಬ ಪ್ರಶ್ನೆಗಳನ್ನು ಸೃಷ್ಟಿಸಿ ಒಂದು ವರ್ಗದ ವಿರುದ್ಧ ಪ್ರಯೋಗಿಸಲಾಗುತ್ತಿದೆ. ಸೋಶಿಯಲ್ ಮೀಡಿಯಾ ಅಲ್ಗಾರಿದಮ್‌ಗಳು ಮತ್ತು ಟಿವಿ ಚರ್ಚೆಗಳು ಸೃಷ್ಟಿಸುವ ‘ನಾವು ಮತ್ತು ಅವರು’ (Us vs Them) ಧೋರಣೆಯು ಭಾವನಾತ್ಮಕ ವಿಷಯಗಳಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತದೆ.

ಲಿಟ್ಮಸ್ ಟೆಸ್ಟ್ ಕಲ್ಚರ್ ವಾದದಂತೆ ನಿರ್ದಿಷ್ಟ ಸಂಕೇತಗಳನ್ನು (ವಂದೇ ಮಾತರಂ, ಘೋಷಣೆಗಳು) ದೇಶಪ್ರೇಮದ ಸಾಬೀತಿಗೆ ಮಾನದಂಡವಾಗಿ ಬಳಸುವುದು ಮತ್ತು ಭಿನ್ನಾಭಿಪ್ರಾಯ ಹೊಂದಿದವರನ್ನು ‘ದೇಶದ್ರೋಹಿ’ ಎಂದು ಬಿಂಬಿಸುವುದು ರಾಜಕೀಯ ಧ್ರುವೀಕರಣದ ತಂತ್ರವಾಗಿದೆ. ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ, ಶಿಕ್ಷಣ ಮತ್ತು ಮೂಲಸೌಕರ್ಯಗಳಂತಹ ನೈಜ ಆಡಳಿತಾತ್ಮಕ ವಿಷಯಗಳ ಕುರಿತ ಪ್ರಶ್ನೆಗಳನ್ನು ತಪ್ಪಿಸಲು, ಭಾವನಾತ್ಮಕ ಮತ್ತು ಧಾರ್ಮಿಕ ರಾಷ್ಟ್ರೀಯತೆಯ ಚರ್ಚೆಗಳನ್ನು ಪ್ರಚೋದಿಸಲಾಗುತ್ತದೆ. ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಕಾಯ್ದುಕೊಳ್ಳಲು ಕಠಿಣ ಕಾನೂನುಗಳ ಉಪಸ್ಥಿತಿ ಅಗತ್ಯ. ಆದರೆ, ಆ ಕಾನೂನುಗಳು ರಾಜಕೀಯ ಶಸ್ತ್ರಗಳಾಗಿ ಮಾರ್ಪಟ್ಟು ನಾಗರಿಕರ ಮೂಲಭೂತ ಹಕ್ಕುಗಳನ್ನು ಚಿವುಟಬಾರದು.

ಪ್ರಜಾಸತ್ತೆಯ ನೈಜ ಶಕ್ತಿ ಇರುವುದು ಸಹಮತದಲ್ಲಷ್ಟೇ ಅಲ್ಲ, ಗೌರವಯುತ ಭಿನ್ನಾಭಿಪ್ರಾಯದಲ್ಲೂ ಇದೆ. ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವ ಧ್ವನಿಯನ್ನು ಸಮ್ಮತಿಸುವುದು ಹಾಗೂ ಸಾಂವಿಧಾನಿಕ ಚೌಕಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವುದು ಭಾರತದ ಪ್ರಜಾಸತ್ತಾತ್ಮಕತೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ರಾಜಕೀಯ ನರೇಟಿವ್‌ಗಳನ್ನು ಬದಿಗೊತ್ತಿ, ಪ್ರತಿಯೊಂದು ವಿಷಯವನ್ನು ಸಾಂವಿಧಾನಿಕ ಮತ್ತು ಕಾನೂನಾತ್ಮಕ ದೃಷ್ಟಿಕೋನದಿಂದ ವಿಶ್ಲೇಷಿಸಿದಾಗ ಮಾತ್ರ ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ. ಅದಕ್ಕಾಗಿ ನಾಗರಿಕರು ಪ್ರತಿಯೊಂದನ್ನು ಕಪ್ಪು-ಬಿಳಿಯಂತೆ ಸರಳವಾಗಿ ವ್ಯಾಖ್ಯಾನಿಸದೆ ಪ್ರೌಡಿಮೆಯೊಂದಿಗೆ ಅರಿತು ಪ್ರತಿಕ್ರಿಯಿಸುವುದು ಕಾಲದ ಅನಿವಾರ್ಯತೆಯಾಗಿದೆ!

Reference: LIVE LAW, SUPREME COURT LANDMARK JUDGEMENTS, UAPA ACT, INDIAN CONSTITUTION