ಶರೀಫ್ ಸಾಬ್‌ರನ್ನು ಭೇಟಿಯಾದ ಕ್ಷಣ

0
377

✍️ ಮುಹಮ್ಮದ್ ಅಬ್ದುಲ್ಲಾ ಜಾವೀದ್

ಕೆ.ಎಂ. ಶರೀಫ್ ಸಾಹಬ್: ಕಾಲಘಟ್ಟದ ಪ್ರಕಾಶಮಾನ ಮಾದರಿ
ಭಾಗ- 03

  1. ದಕ್ಷಿಣ ಕನ್ನಡದಲ್ಲಿ ಸಂದೇಶ ಪ್ರಚಾರದ ಕಾರ್ಯಯೋಜನೆ:

ಇತರ ಪ್ರದೇಶಗಳಿಗೆ ಹೋಲಿಸಿದರೆ ಕರಾವಳಿ ಪ್ರದೇಶದಲ್ಲಿ ಕೋಮುದ್ವೇಷ ಮತ್ತು ಸಮುದಾಯಗಳ ನಡುವೆ ಅಂತರವು ಬಹಳ ಅಧಿಕವಿದೆ. ದೇಶದ ಸ್ವಾತಂತ್ರ್ಯಕ್ಕಿಂತ ಮುಂಚಿನಿಂದಲೇ ಈ ಪ್ರದೇಶಗಳಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಕ್ರಿಯಾಶೀಲವಾಗಿದ್ದವು. ಅವುಗಳ ನಿರಂತರ ಪ್ರಯತ್ನಗಳಿಂದಾಗಿ ಈಗ ಅನೇಕ ಸಮುದಾಯಗಳ ನಡುವೆ ಆಳ ಕಂದರಗಳು ಉಂಟಾಗಿವೆ. ಈ ವಾತಾವರಣವನ್ನು ಸ್ಪರ್ಶಿಸದೆ, ಅಭಿಸಂಬೋಧಿಸದೆ ಇಸ್ಲಾಮೀ ಆಂದೋಲನದ ಉದ್ದೇಶವನ್ನು ಗಳಿಸಲಾಗದು ಮತ್ತು ಆಂದೋಲನ ಬಾಂಧವರಲ್ಲಿ ಸಂದೇಶ ಪ್ರಚಾರದ ಪ್ರಜ್ಞೆ ಬೆಳೆಯಲಾರದು ಎಂಬುದು ವ್ಯಕ್ತ.

ಶರೀಫ್ ಸಾಹಬ್‌ರವರಿಗೆ ದೇಶಬಾಂಧವ ಗಣ್ಯರೊಂದಿಗೆ ಗಾಢ ಸಂಬಂಧವಿತ್ತು. ಅವರು ನಗರದ ವಿವಿಧ ಸಂಸ್ಥೆಗಳ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಕಾರಣದೇ ಶಬಾಂಧವರೊಂದಿಗೆ ಅವರ ವ್ಯಾಪಕ ಸಂಪರ್ಕವೇರ್ಪಟ್ಟಿತ್ತು. ಅವರೊಂದಿಗೆ ವ್ಯವಹರಿಸುವಾಗ ಅವರ ಚಿಂತನೆಗಳನ್ನು ಮತ್ತು ಭಾವನೆಗಳನ್ನು ಹತ್ತಿರದಿಂದ ಅರಿಯುವ, ಅರ್ಥೈಸುವ ಅವಕಾಶ ಅವರಿಗೆ ಲಭಿಸುತ್ತಿತ್ತು. ಹಾಗಾಗಿ ಈ ದ್ವೇಷ, ವೈರದ ವಾತಾವರಣವನ್ನು ಹೇಗೆ ತಿಳಿಯಾಗಿಸಬಹುದು ಎಂದು ಪ್ರಶ್ನಿಸಲಾದಾಗ, ಅವರ ಬಾಯಿಯಿಂದ ತಕ್ಷಣವೇ ಹಾಮೀಮ್ ಅಸ್ಸಜ್ದ ಅಧ್ಯಾಯದ ಈ ವಚನ ಹೊರಟಿತು,

“ಒಳಿತು ಮತ್ತು ಕೆಡುಕು ಸರಿಸಮಾನವಲ್ಲ. ನೀವು ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ದೂರೀಕರಿಸಿರಿ. ನಿಮ್ಮೊಂದಿಗೆ ಹಗೆತನ ಕಟ್ಟಿಕೊಂಡವನು ನಿಮ್ಮ ಆಪ್ತಮಿತ್ರನಾಗಿ ಬಿಡುವುದನ್ನು ನೀವು ಕಾಣುವಿರಿ.” (ಹಾಮೀಮ್ ಅಸ್ಸಜ್ದ: 34)

ನಾವು ಸಂದೇಶ ಪ್ರಚಾರಕ ಸಮುದಾಯವಾಗಿದ್ದೇವೆ ಅವರು ಮುಂದುವರಿಸಿದರು: ದ್ವೇಷಕ್ಕೆ ಉತ್ತರವಾಗಿ ಪ್ರೀತಿಯನ್ನು ನೀಡುವುದು ಪ್ರವಾದಿ ಚರ್ಯೆಯಾಗಿದೆ. ಸಂದೇಶ ಪ್ರಚಾರಕನು ತನ್ನ ಮೇಲೆ ಕಲ್ಲೆಸೆದವರಿಗೂ ಪ್ರಾರ್ಥಿಸುತ್ತಾನೆಂದು ತಾಯಿಫ್‌ನ ಘಟನೆ ತಿಳಿಸುತ್ತದೆ. ಸಮುದಾಯದ ಮಂದಿ ವಿಶೇಷತಃ ಯುವಜನರು ಸಚ್ಚಾರಿತ್ರ್ಯದ ಮಾದರಿಗಳಾಗಬೇಕಾದುದು ಕರಾವಳಿ ಪ್ರದೇಶದ ಕೋಮುವಾದ ಮತ್ತು ವರ್ಗೀಯ ಸಂಘರ್ಷಕ್ಕೆ ಸರಿಯಾದ ಉತ್ತರವಾಗಿದೆ. ಉದ್ರಿಕ್ತತೆ ಮತ್ತು ಅಸಹನೆಯ ಪ್ರಕಟನೆಯು ಕೇವಲ ವಾತಾವರಣವನ್ನು ಹದಗೆಡಿಸುವುದಷ್ಟೇ ಅಲ್ಲ, ಬದಲಾಗಿ ಇಸ್ಲಾಮ್ ಮತ್ತು ಮುಸ್ಲಿಮರ ಕುರಿತಾಗಿ ಇನ್ನಷ್ಟು ತಪ್ಪುಕಲ್ಪನೆಗಳು ಬೆಳೆಯಲು ಕಾರಣವಾಗುತ್ತದೆ; ಹಾಗೂ ಅದು ಕೋಮುವಾದಿ ಶಕ್ತಿಗಳ ಪ್ರಯತ್ನವನ್ನು ಯಶಸ್ವಿಗೊಳಿಸಬಹುದು.

ತರುವಾಯ ಅವರು ಸಹನೆ, ದೃಢತೆಯೊಂದಿಗೆ ದೇವಮಾರ್ಗದಲ್ಲಿ ಪರಿಶ್ರಮ ಪಡುವವರಿಗೆ ನೀಡಲಾದ ಸುವಾರ್ತೆಯನ್ನು ಪಠಿಸಿದರು,
“ನಮ್ಮ ಪ್ರಭು ಅಲ್ಲಾಹನು ಎಂದು ಹೇಳಿ ಆ ಬಳಿಕ ಅದರಲ್ಲೇ ಸ್ಥಿರವಾಗಿ ನಿಂತು ಬಿಟ್ಟವರ ಮೇಲೆ ಖಂಡಿತವಾಗಿಯೂ ದೇವಚರರು ಇಳಿಯು ತ್ತಾರೆ ಮತ್ತು, ‘ಹೆದರ ಬೇಡಿರಿ, ದುಃಖಿಸಬೇಡಿರಿ ನಿಮಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಸುವಾರ್ತೆಯಿಂದ ಸಂತಸಗೊಳ್ಳಿರಿ’ ಎಂದು ಹೇಳುತ್ತಾರೆ.” (ಹಾಮೀಮ್ ಅಸ್ಸಜ್ದ: 30)

ಶರೀಫ್ ಸಾಹೇಬರು ಬಹಳ ಆತ್ಮವಿಶ್ವಾಸದಿಂದ ಹೇಳಿದರು: ಇಸ್ಲಾಮೀ ಶಿಕ್ಷಣದಲ್ಲಿ ಕಲ್ಲನ್ನೂ ಮೇಣದಂತೆ ಕರಗಿಸುವ ಪ್ರಭಾವವಿದೆ. ಕರಾವಳಿ ಪ್ರದೇಶದಲ್ಲಿ ಕೋಮುವಾದದ ಬೇರು ಬಹಳ ಗಟ್ಟಿಯಾಗಿ ತಳವೂರಿದೆಯಾದರೂ ಸತ್ಯಸಂದೇಶದ ಪ್ರಚಾರಕರ ಪ್ರಯತ್ನಗಳ ಮುಂದೆ ಅದು ಏನೇನೂ ಅಲ್ಲ. ಫಿಫಾ ವರ್ಲ್ಡ್ ಕಪ್‌ನ ಉದಾಹರಣೆಯನ್ನು ನೀಡುತ್ತಾ ಅವರೆಂದರು: ಒಂದು ವೇಳೆ ಉತ್ತಮ ಚಾರಿತ್ರ್ಯದೊಂದಿಗೆ ಸದ್ವರ್ತನೆ ಮತ್ತು ಇಸ್ಲಾಮೀ ಶಿಕ್ಷಣವನ್ನು ಉಲ್ಲೇಖಿಸಿದರೆ, ಕಟ್ಟರ್ ವಿರೋಧಿಯೂ ಆಲಿಸಲು ಮುಂದಾಗುತ್ತಾನೆ. ವಿರೋಧಿಯು ಯಾವ ಪ್ರಕಾರದವನೇ ಆಗಿರಲಿ, ಅವನ ಸ್ಥಾನಮಾನ ಅದಕ್ಕೆ ಅಡ್ಡಿಯಾಗಲಾರದು.

ಹಾಗಾಗಿ ಕತರ್ ನಂತಹ ಸಣ್ಣ ದೇಶದ ಎದುರು ಜಗತ್ತಿನ ದೊಡ್ಡ ದೊಡ್ಡ ಭೌತಿಕ ಮತ್ತು ನಾಸ್ತಿಕ ಶಕ್ತಿಗಳೂ ವಿಫಲವಾಗಿ ಹೋದುವು. ಫಿಫಾ ವರ್ಲ್ಡ್ ಕಪ್‌ನ ಇತಿಹಾಸದಲ್ಲಿ ಅದಕ್ಕೆ ಮುಂಚೆ ಅಷ್ಟು ಸಭ್ಯ ಮತ್ತು ಸುಸಂಸ್ಕೃತ ರೀತಿಯಲ್ಲಿ ವರ್ಲ್ಡ್ ಕಪ್ ಕ್ರೀಢೆ ಆಯೋಜಿಸಲಾಗಿರಲಿಲ್ಲ. ಅಲ್ಲಿ ಆಟವು ಕೇವಲ ಆಟಕ್ಕೆ ಸೀಮಿತವಾಗಿತ್ತೇ ಹೊರತು ಶರಾಬು, ಜೂಜು ಮತ್ತು ಅಶ್ಲೀಲತೆಯ ನಗ್ನ ನರ್ತನಕ್ಕೆ ಅವಕಾಶವಿರಲಿಲ್ಲ.

ಕೋಮುವಾದ ಮತ್ತು ದ್ವೇಷವನ್ನು ಅಭಿಸಂಬೋಧಿಸುವ ಸತ್ಯಸಂದೇಶವಾಹಕರಿಗಾಗಿ ಶರೀಫ್ ಸಾಹಬರು ಈ ಕೆಳಗಿನ ಕುರ್‌ಆನ್ ವಚನ ಉಲ್ಲೇಖಿಸುತ್ತಾ ಹೇಳಿದರು: ಈ ವಚನಗಳ ಸರಿಯಾದ ಅರಿವು, ಪ್ರಜ್ಞೆ ಗಳಿಸಲು ಮತ್ತು ಅವುಗಳನ್ನು ಪ್ರಸಕ್ತ ಪರಿಸ್ಥಿತಿಯಲ್ಲಿ ಉಲ್ಲೇಖಿಸುವ ಹೊಸ ಹೊಸ ವಿಧಾನಗಳ ಕುರಿತು ಚಿಂತಿಸ ಬೇಕಾಗಿದೆ.

“ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತೀ ಹೆಚ್ಚು ಗೌರವಕ್ಕೆ ಪಾತ್ರನು.” (ಅಲ್ ಹುಜುರಾತ್: 13)

“ನಾವು ಆದಮರ ಸಂತತಿಗೆ ಶ್ರೇಷ್ಠತೆಯನ್ನು ಪ್ರದಾನ ಮಾಡಿದುದೂ ಅವರಿಗೆ ನೆಲ, ಜಲಗಳಲ್ಲಿ ಯಾನಗಳನ್ನು ದಯಪಾಲಿಸಿದುದೂ ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರ ನೀಡಿದುದೂ ನಮ್ಮ ಅನೇಕ ಸೃಷ್ಟಿಗಳ ಮೇಲೆ ಉತ್ಕೃಷ್ಟತೆ ಕೊಡ ಮಾಡಿದುದೂ ನಮ್ಮ ಅನುಗ್ರಹವಾಗಿದೆ.”
(ಬನೀ ಇಸ್ರಾಈಲ್: 70)

  1. ಸಮುದಾಯದ ಪ್ರಗತಿಗಾಗಿ ಶರೀಫ್ ಸಾಹಬ್‌ರ ವಿಶೇಷ ಫಾರ್ಮುಲಾ

ಶರೀಫ್ ಸಾಹಬ್‌ರವರ ಜೀವನದ ಇನ್ನೊಂದು ಮಗ್ಗುಲು ಸಮುದಾಯದ ಒಗ್ಗಟ್ಟು ಮತ್ತು ಅದರ ಉನ್ನತಿಯ ಆಗ್ರಹಕ್ಕೆ ಸಂಬಂಧಿಸಿದೆ. ಅವರು ತಮ್ಮ ಪ್ರಭಾವಲಯದಲ್ಲಿರುವ ಸಂಸ್ಥೆಗಳನ್ನು ಸ್ಥಿರಗೊಳಿಸಿದರು, ಮಂಗಳೂರು ಮತ್ತು ಪರಿಸರದ ಪ್ರದೇ ಶಗಳಲ್ಲಿರುವ ಸಾಮುದಾಯಿಕ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಿದರು. ಪ್ರಸಕ್ತ ಪರಿಸ್ಥಿತಿಗಳಲ್ಲಿ ಮುಸ್ಲಿಮ್ ಸಮುದಾಯವು ಎಲ್ಲ ರಂಗಗಳಲ್ಲಿಯೂ ಒಂದು ಮಾರ್ಗದರ್ಶಕನೆಂಬ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು. ಹೀಗೆ ಸಾಮುದಾಯಿಕ ಸಂಸ್ಥೆ ಗಳು ಮತ್ತು ಸಂಘಟನೆಗಳ ಪ್ರಯತ್ನಗಳಿಂದ ಮುಂಬರುವ ಪರಿಸ್ಥಿತಿಯನ್ನೇ ಬದಲಿಸುವಂತಹ ಪೀಳಿಗೆಯು ಸಿದ್ಧವಾಗಬೇಕು. ಅದು ವೈರ-ದ್ವೇಷದ ವಾತಾವರಣವನ್ನು ಕೊನೆಗೊಳಿಸಿ ಪ್ರೀತಿ, ಸೌಹಾರ್ದ ಮತ್ತು ದೇವಮಾರ್ಗದಲ್ಲಿ ನಿಸ್ವಾರ್ಥ ಸೇವೆಗೈಯುವ ಪೀಳಿಗೆಯಾಗಿರಬೇಕು. ಈ ನಿಟ್ಟಿನಲ್ಲಿ ಶರೀಫ್ ಸಾಹಬ್‌ರವರೊಡನೆ ಸಮುದಾಯದ ನಿರ್ಮಾಣಾತ್ಮಕ ಪಾತ್ರಕ್ಕಾಗಿ ಯಾವ ಕಾರ್ಯ ಯೋಜನೆಯನ್ನು ಅನುಸರಿಸಬೇಕಾಗಬಹುದು ಎಂದು ಕೇಳಲಾಯಿತು.

ಉತ್ತರವಾಗಿ ಅವರು ಅಲ್ ಅಅï‌ಲಾ ಅಧ್ಯಾಯದ ಈ ವಚನವನ್ನು ಪ್ರಸ್ತಾಪಿಸಿದರು,

“ಪಾವಿತ್ರ್ಯವನ್ನು ಕೈಕೊಂಡವನು ಯಶಸ್ವಿಯಾಗಿ ಬಿಟ್ಟನು. ತನ್ನ ಪ್ರಭುವಿನ ನಾಮವನ್ನು ಸ್ಮರಿಸಿದವನು ಮತ್ತು ನಮಾಝ್ ಮಾಡಿದವನು.”
(ಅಲ್ ಅಅï‌ಲಾ: 14-15)

(ಮುಂದುವರಿಯುವುದು)