ಪ್ರವಾದಿ(ಸ): ಪೂರ್ವಗ್ರಹಗಳು ಮತ್ತು ವಾಸ್ತವ

0
213

ಸನ್ಮಾರ್ಗ ಸಂಪಾದಕೀಯ

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಒಡೆಯಲಾದ ಮಸೀದಿಯು ಇಸ್ಲಾಮೋಫೋಬಿಯಾದ ಸುತ್ತಲಿನ ಚರ್ಚೆಯನ್ನು ಮತ್ತೆ ಜೀವಂತಗೊಳಿಸಿದೆ. ಇದೇ ಉತ್ತರ ಪ್ರದೇಶದಲ್ಲಿ ಐ ಲವ್ ಮುಹಮ್ಮದ್ ಎಂದು ಹೇಳುವುದನ್ನೂ ಅಪರಾಧವಾಗಿ ಪರಿಗಣಿಸಲಾಗಿದೆ. ಅದೇ ಹೆಸರಲ್ಲಿ ಅನೇಕರ ಮೇಲೆ ಪ್ರಕರಣ ದಾಖಲಾಗಿದೆ. ಅಂದಹಾಗೆ, ಇಸ್ಲಾಮ್‌ನ ಬಗ್ಗೆ, ಅದರ ಐಡೆಂಟಿಟಿಗಳ ಬಗ್ಗೆ ಮತ್ತು ಅದರ ಪ್ರವಾದಿಯ ಬಗ್ಗೆ ಇಷ್ಟೊಂದು ಪ್ರಮಾಣದಲ್ಲಿ ದ್ವೇಷ ಯಾಕಿದೆ? ಇದು ಪೂರ್ವಗ್ರಹವೋ ಅಥವಾ ಉದ್ದೇಶಪೂರ್ವಕ ಬೆನ್ನತ್ತುವಿಕೆಯೋ?

ಭಾರತೀಯ ಹಿಂದೂಗಳೆಲ್ಲರೂ ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಪೂರ್ವಗ್ರಹವನ್ನು ಹೊಂದಿದ್ದಾರೆ ಎಂದು ಹೇಳುವುದು ಅವಾಸ್ತವ. ಹಾಗಂತ, ಪೂರ್ವಗ್ರಹ ಇಲ್ಲವೇ ಇಲ್ಲ ಎಂದು ಹೇಳುವುದೂ ಅಷ್ಟೇ ಅವಾಸ್ತವ. ನಿಜವಾಗಿ ಪ್ರವಾದಿಯ(ಸ) ಬಗ್ಗೆ ಈ ದೇಶದಲ್ಲಿ ಪೂರ್ವಗ್ರಹಗಳಿವೆ. ಈ ಪೂರ್ವಗ್ರಹಗಳಿಗೆ ಮುಸ್ಲಿಮರ ಬದುಕು ಒಂದು ಕಾರಣವಾದರೆ, ಪ್ರಧಾನ ಕಾರಣವಾಗಿ ರಾಜಕೀಯ ಮತ್ತು ಇನ್ನಿತರ ಸಂಗತಿಗಳಿವೆ. ಸದ್ಯದ ಅಗತ್ಯ ಏನೆಂದರೆ, ಈ ಪೂರ್ವಗ್ರಹಗಳ ಮೂಲ ಎಲ್ಲಿದೆ, ಅದು ಹೇಗೆ ರೂಪುಗೊಂಡಿದೆ ಮತ್ತು ವಾಸ್ತವಕ್ಕೂ ಈ ಪೂರ್ವಗ್ರಹಗಳಿಗೂ ಯಾವ ಹೋಲಿಕೆ ಇದೆ ಎಂಬುದನ್ನು ಪರಿಶೀಲಿಸಬೇಕು. ನಿಜವಾಗಿ,

ಓರ್ವ ವ್ಯಕ್ತಿಯ ಬಗ್ಗೆ ಷರಾ ಬರೆಯುವುದಕ್ಕೆ, ಅವರ ಬದುಕಿನ ಯಾವುದಾದರೊಂದು ಘಟನೆಯನ್ನು ಆಧರಿಸಿದರೆ ಮಾತ್ರ ಸಾಲುವುದಿಲ್ಲ ಅಥವಾ ಯಾವುದಾದರೊಂದು ಮೂಲವನ್ನು ಮಾತ್ರ ಆಶ್ರಯಿಸಿದರೂ ಸಾಲುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಂದ ಪೋಸ್ಟನ್ನು ಓದಿಕೊಂಡೋ ಅಥವಾ ರಾಜಕೀಯ ನೇತಾರನ ಭಾಷಣಗಳನ್ನು ಆಲಿಸಿಕೊಂಡೋ ಪ್ರವಾದಿಯನ್ನಾಗಲಿ ಇನ್ನಾರೇ ನಾಯಕರನ್ನಾಗಲಿ ನಿಷ್ಕರ್ಷಿಸುವುದು ನ್ಯಾಯವಲ್ಲ. ಇಸ್ಲಾಮ್ ಪ್ರವಾದಿಯನ್ನು ಅಲ್ಲಾಹನ ಅಂತಿಮ ಪ್ರವಾದಿ ಎಂದು ಪರಿಚಯಿಸುತ್ತದೆ. ಮಾತ್ರವಲ್ಲ, ಸಕಲ ಮಾನವ ಕುಲಕ್ಕೆ ಮಾದರಿ ಎಂದೂ ಹೇಳುತ್ತದೆ. ಹೀಗಿರುವಾಗ, ಇವರ ಬಗ್ಗೆ ನಿಷ್ಕರ್ಷೆ ಮಾಡುವುದಕ್ಕಿಂತ ಮೊದಲು 7ನೇ ಶತಮಾನದಲ್ಲಿ ಅವರು ನಡೆಸಿದ ಜೀವನ ಕ್ರಮವನ್ನು ಸಮಗ್ರವಾಗಿ ಅಧ್ಯಯನ ನಡೆಸಬೇಕಾಗುತ್ತದೆ. ಹೀಗಿರುವಾಗ ಅವರ ಬದುಕನ್ನು ಕೇವಲ 7ನೇ ಶತಮಾನದ ಅರೇಬಿಯಾದ ರಾಜಕೀಯ ಇತಿಹಾಸದಂತೆ ಓದಿದರೆ, ಅದರ ಆಧ್ಯಾತ್ಮಿಕ ಅರ್ಥದ ಬಹುಭಾಗ ಕಳೆದು ಹೋಗಬಹುದು. ಹಾಗಂತ ರಾಜಕೀಯ ಇತಿಹಾಸದಿಂದ ಸಂಪೂರ್ಣ ಬೇರ್ಪಡಿಸಿ ಓದಿದರೂ ಅದು ಅಪೂರ್ಣ ಅನಿಸಿಕೊಳ್ಳಬಹುದು.

ಪ್ರವಾದಿಯ(ಸ) ಬಗೆಗಿನ ಪೂರ್ವಗ್ರಹದ ಆರಂಭವನ್ನು ಮಧ್ಯಯುಗದ ಧಾರ್ಮಿಕ ಸಂಘರ್ಷಗಳಲ್ಲಿ ಕಾಣಬಹುದು. ಸುಮಾರು 11ನೇ ಶತಮಾನದಲ್ಲಿ ಮುಸ್ಲಿಮ್ ದೊರೆಗಳು ಮತ್ತು ಯೂರೋಪಿಯನ್ ಕ್ರೈಸ್ತರ ನಡುವೆ ಸಂಘರ್ಷಗಳು ಗಂಭೀರ ಸ್ಥಿತಿಗೆ ತಲುಪಿದುವು. ಇದನ್ನು ಶಿಲುಬೆ ಯುದ್ಧ ಎಂದೂ ಹೇಳಲಾಗುತ್ತದೆ. ಧರ್ಮವನ್ನು ನೇರವಾಗಿ ಮುಂದಿಟ್ಟು ನಡೆಸಲಾದ ಈ ಯುದ್ಧಗಳಲ್ಲಿ ಪ್ರವಾದಿ ಮುಹಮ್ಮದ್‌ರ ಬಗ್ಗೆ ಹತ್ತು-ಹಲವು ಪೂರ್ವ ನಿರ್ಧರಿತ ಅಪಪ್ರಚಾರಗಳನ್ನು ಮಾಡಲಾಯಿತು. ಇದು ಧರ್ಮ ಯುದ್ಧ ಎಂಬ ಹೆಸರಲ್ಲಿ ನಡೆದ ಯುದ್ಧಗಳಾದುದರಿಂದ ಮತ್ತು 1096ರಿಂದ 1295ರ ವರೆಗಿನ ದೀರ್ಘಕಾಲ ನಡೆದುದರಿಂದ, ಧರ್ಮವನ್ನು ಕಟಕಟೆಯಲ್ಲಿ ನಿಲ್ಲಿಸುವ ಮತ್ತು ಒಂದು ಧರ್ಮದ ಪ್ರವಾದಿಯನ್ನು ಇನ್ನೊಂದು ಧರ್ಮದವರು ತಪ್ಪಿತಸ್ಥರಂತೆ ಬಿಂಬಿಸುವ ಪ್ರಯತ್ನಗಳು ಯಥೇಚ್ಛ ನಡೆದುವು. ಇಂಥ ಸಮಯದಲ್ಲಿ ಯುರೋಪಿಯನ್ ಬರಹಗಾರರು ಪ್ರವಾದಿಯ ವಿರುದ್ಧ ಸಾಕಷ್ಟು ಬರಹಗಳನ್ನು ಬರೆದರು. ಅದರಲ್ಲಿ ಬಹುಪತ್ನಿತ್ವವನ್ನು ಟೀಕಿಸಲಾಯಿತು. ಕ್ರೈಸ್ತ ವಿರೋಧಿ, ಯುದ್ಧಪ್ರಿಯ ಎಂದೆಲ್ಲ ಪ್ರವಾದಿಗೆ(ಸ) ಹೇಳಲಾಯಿತು. ಇಸ್ಲಾಮ್ ಖಡ್ಗದಿಂದ ಬಂದ ಧರ್ಮ ಎಂದೂ ಹೇಳಲಾಯಿತು. ಪ್ರವಾದಿಯನ್ನು ನಕಲಿ ಎಂದೂ ಪ್ರಚಾರ ಮಾಡಲಾಯಿತು. ದುರಂತ ಏನೆಂದರೆ, ಯುದ್ಧವನ್ನು ಗೆಲ್ಲುವುದಕ್ಕಾಗಿ ಯುರೋಪಿಯನ್ ಬರಹಗಾರರು ಹರಡಿದ ಈ ಪ್ರಚಾರವು ಯುದ್ಧ ಮುಗಿದ ಬಳಿಕವೂ ಉಳಿದುಕೊಂಡಿತು. ಮಧ್ಯಯುಗದ ಬಳಿಕದ ಸಾಮ್ರಾಜ್ಯಶಾಹಿತ್ವದ ಕಾಲಕ್ಕೂ ಈ ಬರಹಗಳ ಅಂಶಗಳು ವರ್ಗಾವಣೆಗೊಂಡಿತಲ್ಲದೇ ಅದನ್ನೇ ಗಡಿಮೀರಿ ಹಂಚಿಕೊಳ್ಳಲಾಯಿತು. ನಿಜವಾಗಿ,

ನಾವು ಓದುತ್ತಿರುವ ಪ್ರವಾದಿಯ ಇತಿಹಾಸವನ್ನು ಬರೆದವರು ಯಾರು, ಅವರ ಕಾಲ ಯಾವುದು, ಅವರು ಯಾವ ಸಾಮಾಜಿಕ, ರಾಜಕೀಯ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದೂ ಮುಖ್ಯವಾಗುತ್ತದೆ. ಇಸ್ಲಾಮ್ ಖಡ್ಗದಿಂದ ಹರಡಿತು ಎಂಬ ಪ್ರಚಾರದ ಹಿಂದೆ, ಪ್ರವಾದಿಯವರು(ಸ) ಯುದ್ಧಪ್ರಿಯ ನಾಯಕ ಎಂಬ ಭಾವ ಇದೆ. ಹಾಗಂತ, ಯುದ್ಧ ಮಾಡಿಲ್ಲವೇ ಎಂದು ಪ್ರಶ್ನಿಸಿದರೆ, ಮಾಡಿದ್ದಾರೆ ಅನ್ನುವುದೇ ಉತ್ತರವಾಗಿದೆ. ಆದರೆ, ಅವರ ಸಂಪೂರ್ಣ ಬದುಕೇ ಯುದ್ಧವಾಗಿತ್ತು ಎಂಬುದು ಪೂರ್ಣ ಸುಳ್ಳು. ತನ್ನನ್ನು ಅತಿ ತೀವ್ರವಾಗಿ ಹಿಂಸಿಸಿ, ಬಹಿಷ್ಕಾರ ಹೇರಿ, ಕೊನೆಗೆ ಹುಟ್ಟಿದೂರು ಮಕ್ಕಾದಿಂದಲೇ ಮದೀನಾಕ್ಕೆ ವಲಸೆ ಹೋಗುವಂತೆ ನಿರ್ಬಂಧಿಸಿದ ಅದೇ ಜನರ ಮೇಲೆ ಪ್ರವಾದಿ(ಸ) ಪ್ರಾಬಲ್ಯ ಸ್ಥಾಪಿಸಿದಾಗ ಆ ಇಡೀ ಜನಸಮೂಹವನ್ನೇ ಕ್ಷಮಿಸಿದರು ಎಂಬುದನ್ನು ಖಡ್ಗದಿಂದ ಇಸ್ಲಾಮ್ ಹರಡಿತು ಎಂದು ಪ್ರಚಾರ ಮಾಡುವವರು ಹೇಳುವುದೇ ಇಲ್ಲ. ಮಹಿಳೆಯರಿಗೆ ಆಸ್ತಿಯ ಹಕ್ಕನ್ನು ಮೊಟ್ಟಮೊದಲು ಪ್ರತಿಪಾದಿಸಿದವರು ಪ್ರವಾದಿ ಮುಹಮ್ಮದ್(ಸ). ಮದ್ಯ ನಿಷೇಧ, ಬಡ್ಡಿ ನಿಷೇಧ, ನಿಷ್ಪಕ್ಷ ನ್ಯಾಯ, ಮಾನವ ಸಮಾನತೆ, ಕಾರ್ಮಿಕರ ಪರ ಪ್ರಬಲ ವಾದ, ಅನಾಥರ ಮೇಲೆ ಕಾಳಜಿ.. ಸಹಿತ ಅವರ ಕ್ರಾಂತಿಕಾರಿ ಸಾಮಾಜಿಕ ನಿಲುವಿನ ಬಗ್ಗೆ ಇವರಾರೂ ಗಮನ ಹರಿಸುವುದೂ ಇಲ್ಲ. ಅವರ ಅತೀ ಸರಳ ಬದುಕು, ಶ್ರೀಮಂತರಿಂದ ಕಡ್ಡಾಯವಾಗಿ ಝಕಾತ್ ಅಥವಾ ಕಡ್ಡಾಯ ದಾನ ಪಡೆದುಕೊಂಡು ಅದನ್ನು ಬಡವರ ಅಭಿವೃದ್ಧಿಗಾಗಿ ಬಳಸುವ ಅತಿ ವಿಶಿಷ್ಟ ಯೋಜನೆಯನ್ನೂ ಉಲ್ಲೇಖಿಸುತ್ತಿಲ್ಲ. ಇಹದ ಬದುಕಿಗಿಂತ ಪಾರಮಾರ್ಥಿಕ ಬದುಕಿಗೆ ಹೆಚ್ಚು ಆದ್ಯತೆ ಕೊಟ್ಟು, ಆಧ್ಯಾತ್ಮ ಚೈತನ್ಯದ ಹೊಸ ಜೀವನ ವಿಧಾನವನ್ನು ಅತ್ಯಂತ ಯಶಸ್ವಿಯಾಗಿ ಪ್ರಯೋಗಕ್ಕೆ ಒಡ್ಡಿರುವ ಕುರಿತೂ ಚರ್ಚೆಗಳಿಲ್ಲ. ಅದರ ಬದಲು,

ಪ್ರವಾದಿಯನ್ನು(ಸ) ಓರ್ವ ರಾಜಕೀಯ ದಂಡನಾಯಕನAತೆ ಮಾತ್ರ ಚಿತ್ರಿಸಲಾಗುತ್ತಿದೆ. ಹೀಗೆ ಚಿತ್ರಿಸುವುದರಿಂದ ಅವರನ್ನು ಅನ್ಯಧರ್ಮ ದ್ವೇಷಿಯಂತೆ, ಸರ್ವಾಧಿಕಾರಿಯಂತೆ, ಸಾಮ್ರಾಜ್ಯ ವಿಸ್ತಾರಕ ದೊರೆಯಂತೆ, ಖಡ್ಗ ಎತ್ತಿ ಹಿಡಿದ ಸಾಮ್ರಾಟನಂತೆ ಬಿಂಬಿಸುವುದು ಸುಲಭವಾಗುತ್ತಿದೆ. ಇಂದಿನ ಕಾಲದಲ್ಲಿ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೆ ಹಲವು ದಾರಿಗಳಿವೆ. ಯೂಟ್ಯೂಬ್ ವೀಡಿಯೋ, ಇನ್‌ಸ್ಟಾಗ್ರಾಮ್ ರೀಲ್ಸ್, ಫೇಸ್‌ಬುಕ್ ಪೋಸ್ಟ್‌ಗಳು, ವಾಟ್ಸಾಪ್ ಮತ್ತು ಟಿವಿ ಡಿಬೇಟ್‌ಗಳಿಂದ ಅನೇಕರು ಇತಿಹಾಸವನ್ನು ತಿಳಿದುಕೊಳ್ಳುತ್ತಾರೆ. ಆದರೆ, ಇವು ಪ್ರವಾದಿಯ ಪೂರ್ಣ ಚಿತ್ರಣ ಕೊಡಲಾರದು. 30 ನಿಮಿಷ ಅಥವಾ 30 ಸೆಕೆಂಡ್‌ಗಳ ವೀಡಿಯೋ 7ನೇ ಶತಮಾನದಲ್ಲಿ 63 ವರ್ಷಗಳ ಕಾಲ ಬದುಕಿ ಬಾಳಿದ ವ್ಯಕ್ತಿಯನ್ನು ಅರಿತುಕೊಳ್ಳಲು ಸಾಕಾಗದು. ಪ್ರವಾದಿಯ ಜೀವನದ ಒಂದು ಘಟನೆಯನ್ನು ತೆಗೆದುಕೊಂಡು ಅವರನ್ನು ಹೀಗೆಯೇ ಎಂದು ಹೇಳುವುದು ಅವರ ಒಟ್ಟು ವ್ಯಕ್ತಿತ್ವಕ್ಕೆ ಮಾಡುವ ದ್ರೋಹವಾಗಬಹುದು. ಆ ಘಟನೆಗೆ ಹಿನ್ನೆಲೆ ಇರುತ್ತದೆ. ಆ ಹಿನ್ನೆಲೆಯನ್ನು ಮರೆಮಾಚಿ ಘಟನೆಯನ್ನು ಮಾತ್ರ ಚರ್ಚಿಸಿದಾಗ ಸತ್ಯ ಮರೆಗೆ ಸರಿಯುತ್ತದೆ. ‘ಕಾಫಿರರನ್ನು ಕೊಲ್ಲಿರಿ’ ಎಂಬ ಪವಿತ್ರ ಕುರ್‌ಆನಿನ ವಚನವಾಗಲಿ, ‘ಜಿಹಾದ್’ ಎಂಬ ಪದವಾಗಲಿ ಅಪಾರ್ಥಕ್ಕೆ ಒಳಗಾಗಿರುವುದರ ಹಿಂದೆ ಇಂಥ ಸಮಸ್ಯೆಗಳಿವೆ. ಇಂಥವುಗಳನ್ನು ಒಂದು ಭಾಷಣ, ಒಂದು ಬರಹ ಅಥವಾ ಒಂದು ಟಿವಿ ಡಿಬೇಟ್‌ನಿಂದ ಸರಿಪಡಿಸಲು ಸಾಧ್ಯವಿಲ್ಲ. ಇದಕ್ಕೆ ಹಿಂದೂ ಮತ್ತು ಮುಸ್ಲಿಮರ ನಡುವೆ ಅಂತರ ಕಡಿಮೆಯಾಗಬೇಕು. ಮುಸ್ಲಿಮರು ಪ್ರವಾದಿಯ(ಸ) ಬದುಕನ್ನು ನಿಜ ಜೀವನದಲ್ಲಿ ಅಳವಡಿಸಿ ಮಾದರಿಯಾಗುವುದು ಇಲ್ಲಿ ಬಹುಮುಖ್ಯ ಬೇಡಿಕೆ. ಇದರ ಜೊತೆಗೇ ಅಪಪ್ರಚಾರಗಳ ವಿರುದ್ಧ ಸಂವಿಧಾನಬದ್ಧವಾಗಿ ಸತ್ಯ ಪ್ರಚಾರವನ್ನು ನಿರಂತರ ಮಾಡುತ್ತಿರಬೇಕು. ರಾಜಕೀಯ ಕಾರಣದಿಂದ ರೂಪುಗೊಂಡಿರುವ ಭಯ, ಅನುಮಾನ ಮತ್ತು ಪೂರ್ವಗ್ರಹಗಳನ್ನು ಸೋಲಿಸುವುದಕ್ಕೆ ಸಹನೆ, ಬುದ್ಧಿವಂತಿಕೆ ಮತ್ತು ಮಾದರಿ ಬದುಕೇ ಋಜುವಾದ ಮಾರ್ಗ.