ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ‘ಲವ್ ಜಿಹಾದ್’ ವಿರುದ್ಧ ಜನ್ ಆಕ್ರೋಶ್ ಸಂಘಟನೆ ನಡೆಸುತ್ತಿರುವ ಮೆರವಣಿಗೆಗೆ ಅನುಮತಿ ನೀಡಬೇಕಾದರೆ ದ್ವೇಷಪೂರಿತ ಪ್ರಚೋದನಕಾರಿ ಭಾಷಣ ಮಾಡುವುದಿಲ್ಲ ಎಂಬ ಭರವಸೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಅಲ್ಲದೇ, ಮೆರವಣಿಗೆಯ ಪೂರ್ಣ ವಿಡಿಯೋ ಚಿತ್ರೀಕರಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಆದೇಶ ನೀಡಿದೆ. ಫೆಬ್ರವರಿ 5ರಂದು ‘ಲವ್ ಜಿಹಾದ್’ ವಿರುದ್ಧ ಮುಂಬೈಯಲ್ಲಿ ಜನ್ ಆಕ್ರೋಶ್ ಸಂಘಟನೆ ಮೆರವಣಿಗೆಯನ್ನು ಆಯೋಜಿಸಿದೆ.
ಕಳೆದ ಜ.28ಕ್ಕೆ ಮುಂಬೈಯಲ್ಲಿ ನಡೆದ ಮೆರವಣಿಗೆಯಲ್ಲಿ ಮುಸ್ಲಿಮರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಿಷ್ಕರಿಸಬೇಕೆಂದು ಬಿಜೆಪಿ ಶಾಸಕ ರಾಜಸಿಂಗ್ ಕರೆ ನೀಡಿದ್ದರು. ಈ ಆಧಾರದಲ್ಲಿ ಜಾಥಾ ತಡೆಯಬೇಕೆಂದು ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಜೋಸೆಫ್ ಅನಿರುದ್ಧ ಬೋಸ್ ಹಾಗೂ ರಿಷಿಕೇಶ್ ರಾಯ್ರನ್ನೊಳಗೊಂಡ ಪೀಠವು ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದೆ.
ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ಶಾಸಕರ ವಿರುದ್ಧ ಯಾವ ಕಾನೂನು ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಬೇಕೆಂದು ಪೀಠವು ಪ್ರಶ್ನಿಸಿದೆ. ಪ್ರಚೋದನಕಾರಿ ಭಾಷಣ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಗುಪ್ತ ಸುಪ್ರೀಂ ಕೋರ್ಟಿಗೆ ಭರವಸೆ ನೀಡಿದರು.












