ಕರಾವಳಿಯಲ್ಲಿ ಹೊನಲು ಬೆಳಕಿನ ‘ಗಲ್ಲಿ’ ಕ್ರಿಕೆಟ್ ಹವಾ: ಎರಡನೇ ವರ್ಷಕ್ಕೆ ಕಾಲಿಟ್ಟ ‘ಕಂದಕ್ ಗಲ್ಲಿ ಪ್ರೀಮಿಯರ್ ಲೀಗ್’

0
193

ಸನ್ಮಾರ್ಗ ವಾರ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಲ್ಲಿ ಕ್ರಿಕೆಟ್‌ನ ಹವಾ ಬೀಸಿದ್ದ ಹೊನಲು ಬೆಳಕಿನ ‘ಕಂದಕ್ ಗಲ್ಲಿ ಪ್ರೀಮಿಯರ್ ಲೀಗ್’ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಸಂಜೆ  ಸೀಸನ್‌‌- 2 ಶುಭಾರಂಭ ಕಂಡಿದೆ.

ದಿವಂಗತ ಸರೋಜಿನಿ ಪುಂಡಲೀಕ ಬೆಂಗ್ರೆ ಅವರ ಸ್ಮರಣಾರ್ಥ ಈ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು,
ಕಂದುಕದ ಸಾಮಾಜಿಕ ಮುಖಂಡ ಸತೀಶ್ ಕಂದಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್‌, ಉದ್ಯಮಿ ಮೊಯ್ದಿನ್ ಆದಿಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಳೆದ ವರ್ಷ ಕಾಂಕ್ರೀಟ್ ರಸ್ತೆಯನ್ನೇ ಕ್ರಿಕೆಟ್ ಪಿಚ್, ಅಡ್ಡರಸ್ತೆಯೇ ಕ್ರಿಕೆಟ್ ಗ್ರೌಂಡ್ ಹಾಗೂ ಸುತ್ತಲೂ ಇರೋ ಕಟ್ಟಡಗಳೇ ಆಡಿಯೆನ್ಸ್ ಗ್ಯಾಲರಿಯನ್ನಾಗಿ ಮಾಡಿಕೊಂಡು ದಕ್ಷಿಣ ಕನ್ನಡದಲ್ಲಿ ಸದ್ದು ಮಾಡಿದ್ದ ಈ ಗಲ್ಲಿ ಕ್ರಿಕೆಟ್ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ.

ಈ ಗಲ್ಲಿ ಕ್ರಿಕೆಟ್‌ನ ಉದ್ದೇಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಂಸಿಸಿ ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್‌ರವರು, “ಈ ಪ್ರದೇಶದಲ್ಲಿ ಆಟವಾಡಲು ಒಂದು ಸರಿಯಾದ ಗ್ರೌಂಡ್ ಇಲ್ಲ. ನಾನು ಸಮೇತ ಈ ರಸ್ತೆಯಲ್ಲಿಯೇ ಕ್ರಿಕೆಟ್ ಆಡಿ ಬೆಳೆದವರು. ರಸ್ತೆಗಳಲ್ಲಿ ಆಡಿ ಬೆಳೆದ ಈ ಪ್ರೀತಿ-ಸೌಹಾರ್ದ ಸದಾ ಮುಂದುವರಿಯಬೇಕು ಎಂಬ ಉದ್ದೇಶದಿಂದಲೇ ನಾವು ಗಲ್ಲಿ ಪ್ರೀಮಿಯರ್ ಲೀಗ್‌ಗೆ ರೂಪು ನೀಡಿದ್ದೇವೆ.”

“ಈ ಪ್ರೀಮಿಯರ್ ಲೀಗ್‌ನಲ್ಲಿ ವಾರ್ಡ್‌ನಲ್ಲಿರುವ ಎಲ್ಲಾ ಸಮುದಾಯದ ಜನರು ಒಟ್ಟು ಸೇರಿ ಆಡುವುದರಿಂದ ಈ ಪಂದ್ಯಾವಳಿಯು ಕೋಮು ಸೌಹಾರ್ದತೆ ಮತ್ತು ಸಹೋದರತ್ವಕ್ಕೆ ನಾಂದಿ ಹಾಡುತ್ತದೆ” ಎಂದರು.

ಫೆ.3 ರಿಂದ 12 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಸುಮಾರು 7 ಜೂನಿಯರ್ ಮತ್ತು 4 ಸೀನಿಯರ್ ತಂಡಗಳು ಸೇರಿದಂತೆ ಒಟ್ಟು 11 ತಂಡಗಳು ಭಾಗವಹಿಸಲಿವೆ.