ಅಮೃತ್ ಗಾರ್ಡನ್ಸ್ ಆದದ್ದೇಕೆ ಮೊಗಲ್ ಗಾರ್ಡನ್ಸ್?

0
205

ಸನ್ಮಾರ್ಗ ಸಂಪಾದಕೀಯ

ದೆಹಲಿಯ ಮೊಗಲ್ ಗಾರ್ಡನ್ಸ್‌ನ ಹೆಸರನ್ನು ಕೇಂದ್ರ ಸರಕಾರ ಅಮೃತ್ ಗಾರ್ಡನ್ಸ್ ಎಂದು ಬದಲಾಯಿಸಿದೆ. ಇದನ್ನು ರೈಲಿನಿಂದ ಇತ್ತೀಚೆಗಷ್ಟೇ ಟಿಪ್ಪು ಹೆಸರನ್ನು ಕಿತ್ತು ಹಾಕಿದ್ದರ ಮುಂದುವರಿದ ಭಾಗವಾಗಿ ಪರಿಗಣಿಸಬಹುದು. ಅಂದಹಾಗೆ, ಹೀಗೆ ಮೊಗಲ್ ಗಾರ್ಡನ್ಸನ್ನು ಅಮೃತ್ ಗಾರ್ಡನ್ಸ್ ಎಂದು ಬದಲಾಯಿಸಿದ ದಿನವೇ ಕೇಂದ್ರ ಸರಕಾರ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನೂ ಘೋಷಿಸಿದೆ. ತಮಾಷೆ ಏನೆಂದರೆ, ಬಹುಮನೀ ಮತ್ತು ಬರೀದಶಾಹಿ ದೊರೆಗಳ ಕಾಲದಲ್ಲಿ ಕರ್ನಾಟಕದಲ್ಲಿ ಹುಟ್ಟಿಕೊಂಡ ಬಿದರಿ ಕಲೆಯಲ್ಲಿ ಪರಿಣತಿ ಪಡೆದ ವ್ಯಕ್ತಿಯೊಬ್ಬರಿಗೆ ಪದ್ಮಶ್ರೀಯನ್ನು ನೀಡಲಾಗಿದೆ. ಒಂದುಕಡೆ ಮೊಗಲ್ ಹೆಸರನ್ನು ಕಿತ್ತು ಹಾಕುತ್ತಲೇ ಇನ್ನೊಂದು ಕಡೆ ಬಹುಮನಿ ಸುಲ್ತಾನರ ಕೊಡುಗೆಯಾಗಿ ಪರಿಗಣಿಸಿರುವ ಬಿದರಿ ಕಲೆಯನ್ನು ಗೌರವಿಸುವ ದ್ವಂದ್ವವನ್ನೂ ಈ ಸರ್ಕಾರ ತೋರ್ಪಡಿಸಿದೆ.

ಈ ದೇಶವು ಯಾವುದಾದರೊಂದು ಧರ್ಮ, ಜಾತಿ, ಬುಡಕಟ್ಟುಗಳಿಂದ ರಚನೆಯಾದುದಲ್ಲ. ಈ 2023ರಲ್ಲಿ ಭಾರತ ಹೇಗಿದೆಯೋಹಾಗೆಯೇ ಸಾವಿರ ವರ್ಷಗಳ ಹಿಂದೆ ಇರಲಿಲ್ಲ. ಬೇರೆ ಬೇರೆ ಸಂಸ್ಕೃತಿ, ಕಲೆ, ಕೌಶಲ್ಯಗಳು ಒಗ್ಗೂಡಿ ನಿರ್ಮಾಣವಾದ ದೇಶ ಇದು. ಈ ದೇಶವನ್ನು ಈ ಹಿಂದೆ ಮುಸ್ಲಿಮ್ ದೊರೆಗಳೂ ಆಳಿದ್ದಾರೆ, ಹಿಂದೂ-ಕ್ರೈಸ್ತ ದೊರೆಗಳೂ ಆಳಿದ್ದಾರೆ. ಇದರಲ್ಲಿ ಮುಸ್ಲಿಮ್ ಮತ್ತು ಕ್ರೈಸ್ತರು(ಬ್ರಿಟಿಷರು) ಬರೇ ಕೆಡುಕನ್ನು ಮಾತ್ರ ಮಾಡಿದ್ದಾರೆ ಮತ್ತು ಹಿಂದೂ ದೊರೆಗಳು ಒಳಿತನ್ನಲ್ಲದೇ ಇನ್ನೇನನ್ನೂ ಮಾಡಿಲ್ಲ ಎಂದು ಈಗ ಅಮೃತ್ ಗಾರ್ಡನ್ಸ್ ಎಂದು ಹೆಸರು ಬದಲಾಯಿಸಿದವರೂ ಒಪ್ಪಿಕೊಳ್ಳಲಾರರು. ಸ್ವಾತಂತ್ರ‍್ಯ ಪೂರ್ವಕ್ಕಿಂತ ಬಿಡಿ ಸ್ವಾತಂತ್ರ‍್ಯಾ ನಂತರ ಈ ದೇಶದಲ್ಲಿ ಆಗಿ ಹೋದ ಮಂತ್ರಿಗಳು, ಮುಖ್ಯಮಂತ್ರಿಗಳು, ಪ್ರಧಾನಿಗಳು ಮತ್ತು ಜಿಲ್ಲಾಧಿಕಾರಿಗಳೆಲ್ಲ ಬರೇ ಒಳಿತನ್ನಷ್ಟೇ ಮಾಡಿದ್ದಾರೆಯೇ? ಪೊಲೀಸಧಿಕಾರಿಗಳು, ರಾಜಕಾರಣಿಗಳು, ರಾಜ್ಯಪಾಲರುಗಳೆಲ್ಲ ಯಾವ ಕೆಡುಕನ್ನೂ ಮಾಡಿಲ್ಲವೇ? ಯಾವುದೇ ದೊರೆಗಳು ಬರೇ ಒಳಿತನ್ನಷ್ಟೇ ಮಾಡಿಲ್ಲ. ಒಳಿತು ಮತ್ತು ಕೆಡುಕು ಮಿಳಿತವಾಗದ ಯಾವೊಂದು ಚರಿತ್ರೆಯೂ ಕಳೆದು ಹೋಗಿಲ್ಲ.  ಇತಿಹಾಸದಲ್ಲಾಗಲಿ, ವರ್ತಮಾನದಲ್ಲಾಗಲಿ ಎಲ್ಲ ಸಮುದಾಯಗಳ ಕೊಡುಗೆ ಒಂದು ದೇಶದ ಪಾಲಿಗೆ ಇದ್ದೇ ಇರುತ್ತದೆ. ಅಮೀರ್ ಖುಸ್ರು ಇಲ್ಲದ ಹಿಂದೂಸ್ತಾನಿ ಸಂಗೀತವನ್ನು ಊಹಿಸಲು ಸಾಧ್ಯವಿದೆಯೇ? ದಾಗರ್ ಮನೆತನ ಇವತ್ತಿಗೂ ದೃಪದ್ ಪರಂಪರೆಯನ್ನು ಕಾಪಾಡಿಕೊಂಡು ಬಂದಿದೆ. ಸಂಗೀತ ಜಗತ್ತು ಹಿಂದೂ ಮುಸ್ಲಿಮರಿಂದ ಎಷ್ಟು ಮಿಳಿತಗೊಂಡಿದೆಯೆಂದರೆ, ಇದು ಹಿಂದೂ- ಇದು ಮುಸ್ಲಿಮ್ ಎಂದು ವಿಭಜಿಸಲೂ ಸಾಧ್ಯವಾಗದಷ್ಟು. ಈಗ ಅಮೃತ್ ಗಾರ್ಡನ್ಸ್ ಎಂದು ಬದಲಾಯಿಸಲಾದ ರಾಷ್ಟ್ರಪತಿ ಭವನದ ವಿನ್ಯಾಸವನ್ನೇ ಎತ್ತಿಕೊಳ್ಳಿ. ಅದರ ಉದ್ದಕ್ಕೂ ಮೊಗಲ್ ಶೈಲಿಯ ವಿನ್ಯಾಸವೇ ಇದೆ. ಹೆಸರು ಬದಲಿಸಿದ ತಕ್ಷಣ ವಿನ್ಯಾಸವೇನೂ ಬದಲಾಗುವುದಿಲ್ಲವಲ್ಲ. ಅದರಲ್ಲೂ ಈ ಮೊಗಲ್ ಗಾರ್ಡನ್ಸ್‌ಗೆ ಪ್ರೇರಣೆ ಪರ್ಶಿಯನ್ ಗಾರ್ಡನ್ಸ್ ಎಂದು ಹೇಳಲಾಗುತ್ತದೆ. ಈ ಮೊಗಲ್ ಗಾರ್ಡನ್ಸ್‌ನಲ್ಲಿರುವ ಕೊಳ, ಚಿಲುಮೆ, ವಿನ್ಯಾಸ ಎಲ್ಲವೂ ಪರ್ಷಿಯನ್ ಗಾರ್ಡನ್ಸ್‌ನ ಪಡಿಯಚ್ಚು ಎಂಬ ಮಾತಿದೆ. ಮೊಗಲರಲ್ಲಿ ಇಂಥ ಗಾರ್ಡನ್ಸ್‌ಗಳ ಪರಿಕಲ್ಪನೆಯೇ ಇರಲಿಲ್ಲ ಎಂದೂ ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಹೆಸರು ಬದಲಾವಣೆಗೆ ಜನಸಾಮಾನ್ಯರು ಪ್ರತಿಕ್ರಿಯಿಸುವುದು ಕಡಿಮೆ. ಅಲ್ಲದೇ ಮುಸ್ಲಿಮ್ ಗುರುತಿನ ಹೆಸರುಗಳನ್ನು ಬದಲಾಯಿಸುವುದನ್ನು ಇತ್ತೀಚಿನ ವರ್ಷಗಳಲ್ಲಿ ಒಂದು ಟ್ರೆಂಡ್ ಆಗಿ ಸರಕಾರಗಳು ಸ್ವೀಕರಿಸಿರುವಾಗ, ಈ ಅಮೃತ್ ಗಾರ್ಡನ್ಸ್‌ಗೆ ಆಘಾತಕಾರಿ ಪ್ರತಿಕ್ರಿಯೆಯೇನೂ ಸಾರ್ವಜನಿಕವಾಗಿ ವ್ಯಕ್ತಗೊಂಡಿಲ್ಲ. ಈ ದೇಶವನ್ನು ಸುಮಾರು 800 ವರ್ಷಗಳ ಕಾಲ ಮುಸ್ಲಿಮ್ ದೊರೆಗಳು ಆಳಿದ್ದಾರೆ. ಎಲ್ಲ ದೊರೆಗಳಂತೆ ಅವರ ಆಳ್ವಿಕೆಯಲ್ಲೂ ಒಳಿತು-ಕೆಡುಕುಗಳು ಸಹಜವಾಗಿಯೇ ಇದ್ದುವು. ತಾಜ್‌ಮಹಲ್ ಮತ್ತು ಗೋಲಗುಂಬಜ್‌ಗಳೂ ಅವರ ಕೊಡುಗೆಯೇ. ಮೊಗಲ್ ಗಾರ್ಡನ್ಸ್ ಕೂಡಾ ಅವರ ಕೊಡುಗೆಯೇ. 800 ವರ್ಷಗಳ ದೀರ್ಘ ಕಾಲ ಆಳಿದ ದೊರೆಗಳ ಯಾವ ಕುರುಹುಗಳೂ ಈ ದೇಶದಲ್ಲಿ ಇರಬಾರದೆಂಬಂತೆ ನಡಕೊಳ್ಳುವುದು ಮುಠ್ಠಾಳತನ ಮತ್ತು ಬೇಜವಾಬ್ದಾರಿ ವರ್ತನೆ. ಇಂಥ ನಿಲುವು ಇತಿಹಾಸದ ಒಳಿತುಗಳ ಮೇಲೆ ಸಾಧಿಸುವ ದ್ವೇಷವಾಗಬಹುದೇ ಹೊರತು ಇನ್ನೇನಲ್ಲ. ಆದರೂ, ಇಂಥ ಹೆಸರು ಬದಲಾವಣೆಯಿಂದ ಈ ದೇಶದ ಮೇಲೆ ದೂರಗಾಮಿ ಪರಿಣಾಮ ಉಂಟಾಗಲಾರದು ಎಂದು ಹೇಳುವಂತಿಲ್ಲ. ಈ ದೇಶದ ಸ್ಮೃತಿಯಿಂದ ಚರಿತ್ರೆಯನ್ನು ಒಗೆದು ಹಾಕುವಲ್ಲಿ ಇಂಥ ಬದಲಾವಣೆಗಳು ಪರಿಣಾಮ ಬೀರಬಹುದು. ಮೊಗಲ್ ಗಾರ್ಡನ್ಸ್ ಅಂದ ತPಕ್ಷಣ ಮೊಗಲರ ಆಡಳಿತ, ಅವರ ಕೊಡುಗೆಗಳು, ಪ್ರಮಾದಗಳು, ಕಲೆ-ಸಾಹಿತ್ಯ, ಸಂಗೀತಕ್ಕೆ ಅವರು ನೀಡಿರುವ ಕಾಣಿಕೆಗಳು ಚರ್ಚೆಗೋ ಸ್ಮರಣೆಗೋ ಬರುವುದಕ್ಕೆ ಅವಕಾಶವಿದೆ. ಅಮೃತ್ ಗಾರ್ಡನ್ಸ‌ನಿಂದಾಗಿ ಇಂಥ ಸ್ಮರಣೆಗಳ ಪ್ರಕ್ರಿಯೆ ನಡೆಯಲಾರದು. ಹೆಸರು ಬದಲಾವಣೆಗೆ ಹೊರಟವರು ಇಂಥದ್ದೊಂದು ಗುರಿಯನ್ನು ಖಂಡಿತ ಇಟ್ಟುಕೊಂಡಿರಬಹುದು. ಆದರೆ, ಜನಸಾಮಾನ್ಯರಿಗೆ ಫಕ್ಕನೆ ಇದು ಹೊಳೆಯುವುದಿಲ್ಲ. ದುಡಿದುಣ್ಣುವ ವರ್ಗ ಹೀಗೆ ತಲೆ ಕೆಡಿಸಿಕೊಂಡು ಬದುಕುವುದೂ ಇಲ್ಲ. ಅವರ ನಿತ್ಯದ ಅಕ್ಕಿ-ಬೇಳೆ, ಹಾಲು, ಉಪ್ಪು-ಸಕ್ಕರೆಯ ಬೆಲೆಯ ಮೇಲೆ ಇಂಥ ಹೆಸರು ಬದಲಾವಣೆ ಪರಿಣಾಮ ಬೀರುವುದೂ ಇಲ್ಲ. ಆದ್ದರಿಂದ, ಪ್ರಭುತ್ವಕ್ಕೆ ಹೆಸರು ಬದಲಾಯಿಸಿ ದಕ್ಕಿಸಿಕೊಳ್ಳುವುದು ಸುಲಭ.

ಪ್ರಭುತ್ವವೊಂದು ಸಮುದಾಯ ದ್ವೇಷವನ್ನೇ ಉಸಿರಾಗಿಸಿಕೊಂಡಾಗ ಮಾತ್ರ ಇಂಥ ಬೆಳವಣಿಗೆ ನಡೆಯಬಹುದು. ಮುಸ್ಲಿಮರ ಚಾರಿತ್ರಿಕ ಗುರುತುಗಳನ್ನೇ ಹುಡುಕಿ ಹುಡುಕಿ ಈಗಿನ ಪ್ರಭುತ್ವ ಬದಲಿಸುತ್ತಿರುವುದನ್ನು ನೋಡಿದರೆ, ಇದು ಮನದಟ್ಟಾಗುತ್ತದೆ. ತೀರದ ಮುಸ್ಲಿಮ್ ದ್ವೇಷವೇ ಈಗಿನ ಪ್ರಭುತ್ವದ ರಾಜಕೀಯ ಯಶಸ್ಸಿನ ತಾಯಿಬೇರು. ಇತಿಹಾಸದ ಮುಸ್ಲಿಮ್ ದೊರೆಗಳನ್ನು ಹಿಂದೂ ದ್ವೇಷಿಗಳನ್ನಾಗಿ ಬಿಂಬಿಸುವುದು ಇದರ ಒಂದು ತುದಿಯಾದರೆ, ಅದರ ಆಧಾರದಲ್ಲಿ ಈ ವರ್ತಮಾನದಲ್ಲಿ ಬದುಕುತ್ತಿರುವ ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರಚೋದಿಸುವುದು ಇದರ ಇನ್ನೊಂದು ತುದಿ. ಅತ್ಯಾಚಾರಗೈದದ್ದಲ್ಲದೇ ಮೂರು ವರ್ಷದ ಮಗು ಸಹಿತ ಒಂದು ಡಝನ್ ಮುಸ್ಲಿಮರನ್ನು ಬಡಿದು ಕೊಂದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿದ್ದು ಇದರ ಮತ್ತೊಂದು ತುದಿ. ಮುಸ್ಲಿಮರು ಈ ದೇಶಕ್ಕೆ ಏನನ್ನೂ ಕೊಟ್ಟಿಲ್ಲ, ಅವರ ಉಪಸ್ಥಿತಿಯೇ ಅಪಾಯಕಾರಿ, ಅವರ ವಿರುದ್ಧ ಯಾವ ಕ್ರೌರ್ಯವೆಸಗಿದರೂ ಸಹ್ಯ… ಎಂಬಂಥ ಭಾವವನ್ನು ಸೃಷ್ಟಿಸುವ ಯೋಜನಾಬದ್ಧ ಪ್ರಯತ್ನಗಳ ಭಾಗವಾಗಿಯೇ ಇವೆಲ್ಲ ನಡೆಯುತ್ತಿರುವಂತೆ ಕಾಣಿಸುತ್ತಿದೆ. ಅಂದಹಾಗೆ,

ಬದಲಿಸುವುದಿದ್ದರೆ ಈ ದೇಶದಲ್ಲಿ ಮುಸ್ಲಿಮ್ ಹೆಸರಿನ ಸಾವಿರಾರು ಗುರುತುಗಳಿವೆ. ಕಲೆ-ಸಾಹಿತ್ಯ, ಸಂಗೀತ, ಆಡಳಿತ, ಭಾಷೆ, ವಿನ್ಯಾಸಗಳಿಗೆ ಮುಸ್ಲಿಮ್ ದೊರೆಗಳು ಕೊಟ್ಟ ಕೊಡುಗೆ ಗಳೇನೂ ಸಣ್ಣದಲ್ಲ. ಇಂಡೋ-ಅರೇಬಿಕ್, ಇಂಡೋ-ಪರ್ಶಿಯನ್ ಎಂಬ ಹೆಸರುಗಳೇ ಸೃಷ್ಟಿ ಯಾಗುವಷ್ಟು ಈ ದೇಶದ ಕಲಾ ಪ್ರಕಾರ ಮುಸ್ಲಿಮ್ ದೊರೆಗಳಿಂದ ಸಂಪದ್ಭರಿತವಾಗಿದೆ. ಅಷ್ಟಕ್ಕೂ, ಇತಿಹಾಸದ ಗುರುತುಗಳನ್ನು ಮತ್ತು ದೊರೆಗಳನ್ನು ಹೀನಾಯವಾಗಿ ಕಾಣುವುದರಿಂದ ಮತ್ತು ಅವರನ್ನು ತಿರಸ್ಕರಿಸಿ ಬದುಕುವುದರಿಂದ ಈ ವರ್ತಮಾನಕ್ಕಾಗುವ ಲಾಭ ಏನು? ಆ ದೊರೆಗಳಾರೂ ಈ ವರ್ತಮಾನದಲ್ಲಿ ಬದುಕುತ್ತಿಲ್ಲ. ಅವರು ಏನೆಲ್ಲಾ ಒಳಿತು ಮತ್ತು ಕೆಡುಕುಗಳನ್ನು ಮಾಡಿದ್ದಾರೋ ಅವು ಐತಿಹಾಸಿಕವಾಗಿ ದಾಖಲೂ ಆಗಿವೆ. ಹೆಸರು ಬದಲಾವಣೆಯಿಂದ ಈ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸುಳ್ಳು ಇತಿಹಾಸವನ್ನು ಮರುಕಟ್ಟುವ ಮೂಲಕ ಒಂದು ಹಂತದವರೆಗೆ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಮತ್ತು ಭವಿಷ್ಯದ ಪೀಳಿಗೆಯನ್ನು ದ್ವೇಷಿಗಳನ್ನಾಗಿ ಪರಿವರ್ತಿಸಲು ಅವಕಾಶವಿದೆ. ಆದ್ದರಿಂದಲೇ, ಈ ಹೆಸರು ಬದಲಾವಣೆಯ ಪರ್ವಕ್ಕೆ ಆತಂಕಪಡಬೇಕಾಗಿದೆ. ನಿಜವಾಗಿ, ಇಲ್ಲಿ ನಡೆಯುತ್ತಿರುವುದು ಬರೇ ಹೆಸರು ಬದಲಾವಣೆಯಲ್ಲ. ಇತಿಹಾಸದ ಬದಲಾವಣೆ. ಒಂದುಕಡೆ ಹೆಸರನ್ನು ಬದಲಾಯಿಸುತ್ತಲೇ ಇನ್ನೊಂದು ಕಡೆ ಮುಸ್ಲಿಮ್ ದೊರೆಗಳ ಕುರಿತಂತೆ ಸುಳ್ಳಿನ ಮತ್ತು ಕಪೋಲಕಲ್ಪಿತ ಸಂಗತಿಗಳನ್ನು ಸಾರ್ವಜನಿಕ ವೇದಿಕೆ ಮತ್ತು ಪುಸ್ತಕಗಳ ಮೂಲಕ ಬಿತ್ತುತ್ತಾ ಹೋಗುವುದು. ನಿಧಾನಕ್ಕೆ ಈ ಹೊಸ ಇತಿಹಾಸವೇ ಜನಜನಿತವಾಗುವಂತೆ ನೋಡಿಕೊಳ್ಳುವುದು. ಪಠ್ಯಗಳನ್ನು ಬದಲಾಯಿಸುತ್ತಾ ಹೊಸ ಇತಿಹಾಸದ ಪಾಠಗಳನ್ನು ತುರುಕುವುದು.

ಅಮೃತ್ ಗಾರ್ಡನ್ಸ್ ಆಗಿ ಬದಲಾದ ಮೊಗಲ್ ಗಾರ್ಡನ್ಸ್‌ಗೆ ಆತಂಕ ಪಡಬೇಕಾದದ್ದು ಈ ಎಲ್ಲ ಕಾರಣಗಳಿಗಾಗಿ.