ಅಫ್ಘಾನ್ ಕ್ರಿಕೆಟಿಗ ‘ಗುರ್ಬಾಝ್’ ರಸ್ತೆ ಬದಿ ಮಲಗಿದ್ದವರಿಗೆ ಸದ್ದಿಲ್ಲದೆ ಹಣ ಇಟ್ಟು ತೆರಳುವ ವಿಡಿಯೋ ವೈರಲ್

0
1491

ಸನ್ಮಾರ್ಗ ವಾರ್ತೆ

ಒಂದೆಡೆ ಅಫ್ಘಾನಿಸ್ತಾನ ತಂಡ ಮೈದಾನದಲ್ಲಿನ ಆಟದ ಮೂಲಕ ಜನರ ಹೃದಯಗಳನ್ನು ಗೆದ್ದಿದ್ದರೆ, ಮತ್ತೊಂದೆಡೆ ಅಫ್ಘಾನಿಸ್ತಾನದ ಬ್ಯಾಟರ್ ರಹ್ಮಾನುಲ್ಲಾ ಗುರ್ಬಾಝ್ ಮೈದಾನದ ಹೊರಗೆ ಕೂಡ ಒಂದು ಉತ್ತಮ ಕಾರ್ಯಕ್ಕಾಗಿ ಸುದ್ದಿಯಾಗಿದ್ದಾರೆ.

ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮುಗಿದ ಮಧ್ಯರಾತ್ರಿ 3ರ ಸುಮಾರಿಗೆ ಬಳಿಕ ರಸ್ತೆ ಬದಿ ಮಲಗಿದ್ದವರಿಗೆ ಸದ್ದಿಲ್ಲದೆ ಹಣ ಇಟ್ಟು ತೆರಳಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ.

ಬೀದಿಗಳಲ್ಲಿ ಮಲಗಿದ್ದ ಜನರಿಗೆ ದೀಪಾವಳಿಯನ್ನು ಆಚರಿಸಲು ಗುರ್ಬಾಝ್ 500ರ ಭಾರತೀಯ ನೋಟನ್ನು ಮಲಗಿದ್ದ ಜನರ ಬಳಿ ಮೌನವಾಗಿ ಹಣವನ್ನು ಇಟ್ಟುಕೊಂಡು ನಂತರ ಕಾರಿನಲ್ಲಿ ಹೊರಟು ಹೋಗುತ್ತಿರುವುದು ಕಂಡುಬಂದಿದೆ.

ಈ ದೃಶ್ಯವನ್ನು ದೂರದಲ್ಲಿ ನಿಂತು ನೋಡುತ್ತಿದ್ದ ಆರ್ ಜೆ ಲವ್ ಶಾ ಎಂಬ ವೃತ್ತಿಪರ ನಿರೂಪಕರೊಬ್ಬರು ಸೆರೆ ಹಿಡಿದಿದ್ದು, ಅದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಕ್ರಿಕೆಟ್ ಅಪ್‌ಡೇಟ್ ನೀಡುವ @mufaddal_vohra ಎಂಬ ಎಕ್ಸ್ ಖಾತೆಯ ಬಳಕೆದಾರ ಶೇರ್ ಮಾಡಿಕೊಂಡಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

ವಿಡಿಯೋ ಮಾಡಿದ್ದ ಆರ್ ಜೆ ಲವ್ ಶಾ, ‘ಈಗ ಗಂಟೆ ಮಧ್ಯರಾತ್ರಿ 3 AM. ನಾನು ಅಹ್ಮದಾಬಾದ್‌ನ ರಸ್ತೆಯಲ್ಲಿ ನೋಡುತ್ತಿರುವುದು ಅಫ್ಘಾನಿಸ್ತಾನದ ಬ್ಯಾಟರ್ ರೆಹ್ಮಾನುಲ್ಲಾ ಗುರ್ಬಾಝ್ ಅವರನ್ನು. ನನ್ನ ಮನೆಯ ಸಮೀಪ ಕಂಡ ದೃಶ್ಯ ಇದು. ನಾನು ಒಂದು ವೇಳೆ ಅವರನ್ನು ಭೇಟಿಯಾಗಿದ್ದಿದ್ದರೆ ಅವರು ಏನು ಉತ್ತರ ನೀಡುತ್ತಿದ್ದರೋ ಗೊತ್ತಿಲ್ಲ. ಈ ವಿಡಿಯೋ ಹಂಚಿಕೊಳ್ಳುವ ಮುನ್ನ ನಾನು ಕೂಡ ಹಲವಾರು ಬಾರಿ ಯೋಚಿಸಿದೆ. ಶೇರ್ ಮಾಡಲೋ? ಬೇಡವೋ ಎಂದು. ಆದರೆ, ಒಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ರಿಕೆಟರ್ ಒಬ್ಬ ಈ ರೀತಿ ಮಾಡುತ್ತಾನೆಂದಾದರೆ, ಅದು ಇನ್ನೊಬ್ಬರಿಗೆ ಸ್ಫೂರ್ತಿಯಾಗಲೂ ಬಹುದು ಎಂದುಕೊಳ್ಳುತ್ತೇನೆ. ಮರುದಿನ ಬೆಳಗ್ಗೆ ಎದ್ದಾಗ ರಸ್ತೆ ಬದಿ ಮಲಗಿದ್ದವರ ಪ್ರತಿಕ್ರಿಯೆ ಹೇಗಿರಬಹುದು ಎಂದು ತಿಳಿದುಕೊಳ್ಳುತ್ತಾರೋ? ನಿಮಗೆ ಲಕ್ಷಾಂತರ ಜನರ ಪ್ರಾರ್ಥನೆ ಸಿಗಬಹುದು ಗುರ್ಬಾಝ್ ಅವರೇ. ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಹೇಳಿಕೊಂಡು ವಿಡಿಯೋ ಹಂಚಿಕೊಂಡಿದ್ದಾರೆ.

ರಸ್ತೆ ಬದಿ ಮಲಗಿದ್ದವರ ಬಗ್ಗೆ ರಹ್ಮಾನುಲ್ಲಾ ಗುರ್ಬಾಝ್ ಅವರ ಈ ಕಾಳಜಿಗೆ ನೆಟ್ಟಿಗರು ಫಿದಾ ಆಗಿದ್ದು, ತಮ್ಮ ತಮ್ಮ ವಾಲ್‌ಗಳಲ್ಲಿ ಹಂಚಿಕೊಂಡು, ‘ಪ್ರೀತಿ ಹರಿಸಿದ್ದಕ್ಕೆ ಧನ್ಯವಾದಗಳು’ ಎಂದು ಬರೆದುಕೊಳ್ಳುತ್ತಿದ್ದಾರೆ. ಈಗಾಗಲೇ ಈ ವಿಡಿಯೋವನ್ನು  @mufaddal_vohra  ಅವರ ಖಾತೆಯಿಂದಲೇ 4.7M ವೀಕ್ಷಣೆ ಪಡೆದಿದೆ.