ಉಡುಪಿಯಲ್ಲಿ ತಾಯಿ-ಮಕ್ಕಳ ಹತ್ಯೆ: ಕಲಿಯಬೇಕಾದ ಪಾಠ ಏನು?

0
3745

ಸನ್ಮಾರ್ಗ ಸಂಪಾದಕೀಯ


ಕರಾವಳಿ ಮತ್ತೆ ಸುದ್ದಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಕ್ಷಯ್ ಕಲ್ಲೇಗ ಎಂಬ ಯುವಕನ ಹತ್ಯೆ ನಡೆದು ವಾರವಾಗುವ  ಮೊದಲೇ ಉಡುಪಿಯ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ನಡೆದಿದೆ. ಈ ಎರಡೂ ಹತ್ಯೆಗಳಲ್ಲಿರುವ ಸಮಾನ ಅಂಶವೇನೆಂದರೆ, ಹತ್ಯೆಗೆ ಬಳಸಿರುವ ಆಯುಧ. ತಲವಾರಿಗೆ ಹಿಂದೂ-ಮುಸ್ಲಿಮ್ ಎಂಬ ಬೇಧ ಇಲ್ಲ. ಹೆಣ್ಣು-ಗಂಡು, ಮಕ್ಕಳು, ಶಿಶುಗಳು  ಎಂಬ ಬೇಧವೂ ಇಲ್ಲ. ಅದು ಯಾರ ಕೈಯಲ್ಲಿದೆಯೋ ಅವರ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತದೆ. ಇನ್ನು, ಈ ತಲವಾರಿಗೆ  ಬಲಿಯಾಗುವವರ ಧರ್ಮ ಯಾವುದೇ ಆದರೂ ಚೆಲ್ಲುವ ರಕ್ತದ ಬಣ್ಣ ಒಂದೇ. ಬಲಿಯಾದವರ ಕುಟುಂಬದವರು ಹಾಕುವ ಕಣ್ಣೀರಿನ  ಬಣ್ಣವೂ ಒಂದೇ. ಹಾಗಂತ,

ಕರಾವಳಿಯನ್ನು ಬೆಚ್ಚಿಬೀಳಿಸಿದ ಮೊದಲ ಹತ್ಯೆಯೇನೂ ಇದಲ್ಲ. 11 ವರ್ಷಗಳ ಹಿಂದೆ ದ.ಕ. ಜಿಲ್ಲೆಯ ಪಂಜಿಮೊಗರಿನಲ್ಲಿ ರಝಿಯಾ  ಎಂಬ ತಾಯಿ ಹಾಗೂ ಫಾತಿಮಾ ಎಂಬ ಮಗಳನ್ನು ಮನೆಗೆ ನುಗ್ಗಿ ಹತ್ಯೆ ಮಾಡಲಾಗಿತ್ತು. ಅಪರಾಧಿ ಇನ್ನೂ ಪತ್ತೆಯಾಗಿಲ್ಲ. ಇದೀಗ,  46 ವರ್ಷದ ಹಸೀನಾ ಎಂಬ ತಾಯಿ ಹಾಗೂ ಮಕ್ಕಳಾದ ಅಫ್ನಾಜ್, ಅಯ್ನಾಝï, ಆಸಿಮ್‌ರನ್ನು ಮನೆಗೆ ನುಗ್ಗಿ ಹತ್ಯೆ ಮಾಡಲಾಗಿದೆ.  ಈ ಎರಡು ಭಯಾನಕ ಕ್ರೌರ್ಯಗಳ ನಡುವೆಯೂ  ಕರಾವಳಿಯಲ್ಲಿ ಸಾಕಷ್ಟು ರಕ್ತ ಹರಿದಿದೆ. ಇವೆಲ್ಲಕ್ಕೂ ಧರ್ಮದ್ವೇಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ವಿಧಾನಸಭಾ ಚುನಾವಣೆ ನಡೆಯುವುದಕ್ಕಿಂತ ಸಮಯಗಳ ಮೊದಲು ದ.ಕ. ಜಿಲ್ಲೆಯನ್ನು ಮೂರು ಹತ್ಯೆಗಳು  ನಡುಗಿಸಿಬಿಟ್ಟವು. ಬಲಿಯಾದವರನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲಾಯಿತು. ಹೀಗೆ ವಿಭಜಿಸಿ ಈ ಹತ್ಯೆಗಳ ಪರ-ವಿರುದ್ಧ  ಮಾತಾಡಿದವರು ಮಕ್ಕಳು, ಕುಟುಂಬ ಎಂದು ಆರಾಮವಾಗಿ ಬದುಕುತ್ತಿದ್ದಾರೆ. ರಾಜಕಾರಣಿಗಳಂತೂ ಆ ಘಟನೆಯನ್ನೇ ಮರೆತಿದ್ದಾರೆ.  ಪತ್ರಿಕೆಗಳೂ ಮರೆತಿವೆ. ಸೋಶಿಯಲ್ ಮೀಡಿಯಾವಂತೂ ಕ್ರಿಕೆಟ್, ಬಿಗ್‌ಬಾಸು, ಅಫೇರು ಎಂದೆಲ್ಲಾ ತನ್ನದೇ ಲೋಕದಲ್ಲಿ ಮುಳುಗಿ  ಹೋಗಿದೆ. ಸದ್ಯ ಈ ಹತ್ಯೆಗಳನ್ನು ಇವತ್ತು ಯಾರಾದರೂ ನೆನಪಿಸುತ್ತಿದ್ದರೆ ಅದು ಸಂತ್ರಸ್ತ ಕುಟುಂಬದವರು ಮಾತ್ರ. ಮಗನನ್ನು  ಕಳಕೊಂಡ ಹೆತ್ತವರು, ಪತಿಯನ್ನು ಕಳಕೊಂಡ ಪತ್ನಿ ಮತ್ತು ಮಕ್ಕಳ ಹೊರತು ಇನ್ನಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಷ್ಟಿದ್ದೂ,

ರಕ್ತದಾಹದ ಭಾಷೆಯಲ್ಲಿ ಮಾಡಲಾಗುವ ಭಾಷಣಗಳಿಗೆ ಕಡಿವಾಣ ಬಿದ್ದಿಲ್ಲ. ಚಪ್ಪಾಳೆ, ಶಿಳ್ಳೆಗಳೂ ಕಡಿಮೆಯಾಗಿಲ್ಲ. ಒಂದು ಮನೆಯ  ಬೆಳಕನ್ನು ನಂದಿಸುವುದು ಎಷ್ಟು ಆಘಾತಕಾರಿ ಎಂದು ಬುದ್ಧಿ ಹೇಳುವವರಿಗೆ ಮಾನ್ಯತೆಯೂ ಸಿಗುತ್ತಿಲ್ಲ. ಒಂದುಕಡೆ ತನ್ನ ಎಲ್ಲವನ್ನೂ  ಕಳಕೊಂಡು ಕುಟುಂಬವೊಂದು ಕಣ್ಣೀರು ಹಾಕುತ್ತಿರುವಾಗ ಇನ್ನೊಂದು ಕಡೆ ಆ ಕಣ್ಣೀರಿಗೆ ನಾವೇ ಕಾರಣ ಎಂಬಂತೆ  ಸಂಭ್ರಮಪಡುವ  ಕೇಡುಗಾಲ ಇದು. ಇಂಥ ಸ್ಥಿತಿಯಲ್ಲಿ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ನಡೆದಿದೆ. ಈ ಹತ್ಯೆಗೆ ಕಾರಣ ಏನೇ ಇರಬಹುದು,  ಆದರೆ ಇಂಥವು ಯಾಕೆ ನಡೆಯುತ್ತಿದೆ ಎಂಬ ಬಗ್ಗೆ ಒಟ್ಟು ಸಮಾಜ ಚಿಂತಿಸಬೇಕಾಗಿದೆ. ಯುವ ಸಮೂಹಕ್ಕೆ ನೆತ್ತರ ರುಚಿ ಹತ್ತಿಸಿದ್ದು  ಯಾರು? ಯಾವುದು? ಸಾಮಾನ್ಯವಾಗಿ, ಇಂಥ ಕೃತ್ಯಗಳಲ್ಲಿ ಹೆಚ್ಚಾಗಿ ಯುವ ಸಮೂಹವೇ ಭಾಗಿಯಾಗುತ್ತಿದೆ. ಕತ್ತಿ-ತಲವಾರನ್ನು ಮ ನಬಂದAತೆ ಬಳಸುತ್ತಿದೆ. ಯಾವುದೋ ಮನೆಯ ದೀಪವನ್ನು ನಂದಿಸಿ, ಜೈಲಿಗೂ ಹೋಗಿ ಊರಿಗೂ ಮನೆಯವರಿಗೂ ಭಾರ ಎ ನ್ನಿಸಿಕೊಳ್ಳುತ್ತಿದೆ. ಜೈಲಿನಿಂದ ಹೊರಬಂದ ಬಳಿಕ ಮತ್ತದೇ ಕೃತ್ಯಗಳಲ್ಲಿ ಭಾಗಿಯಾಗಬೇಕಾದ ಒತ್ತಡವೋ ಅನಿವಾರ್ಯತೆಯೋ  ಎದುರಾಗುತ್ತಿದೆ. ಇವನ್ನು ಈ ಆವೇಶದ ಹುಡುಗರಿಗೆ ಬಿಡಿಸಿ ಹೇಳುವವರು ಯಾರು? ಅಂದಹಾಗೆ,

ಉಡುಪಿಯಲ್ಲಿ ಮೂವರು ಮಹಿಳೆಯರು ಮತ್ತು ಓರ್ವ ಮಗುವನ್ನು ಹತ್ಯೆ ಮಾಡಿದ ಅಪರಾಧಿಯನ್ನು ಈ ವ್ಯವಸ್ಥೆ ಬಂಧಿಸಬಹುದು.  ಆತನಿಗೆ ನ್ಯಾಯಾಲಯದಲ್ಲಿ ಶಿಕ್ಷೆಯೂ ಆಗಬಹುದು. ಆದರೆ ಎರಡು ಪ್ರಶ್ನೆಗಳು ಈ ನಾಗರಿಕ ಸಮಾಜವನ್ನು ಸದಾ ಉತ್ತರಕ್ಕಾಗಿ  ಪೀಡಿಸುವುದನ್ನು ತಪ್ಪಿಸಲಾಗದು. 1. ತನ್ನ ಇಡೀ ಕುಟುಂಬವನ್ನೇ ಕಳಕೊಂಡ ನೂರ್ ಮುಹಮ್ಮದ್ ಎಂಬ ಮೂರು ಮಕ್ಕಳ ಪಾಲಿನ  ಅಪ್ಪ ಮತ್ತು ಹಸೀನಾ ಎಂಬವರ ಪತಿಯ ಒಡಲಾಳದ ಸಂಕಟಕ್ಕೆ ಈ ಪ್ರಭುತ್ವದಿಂದ ಔಷಧಿ ಕೊಡಲು ಸಾಧ್ಯವೇ? 2. ಮಚ್ಚು- ಲಾಂಗು-ಕತ್ತಿ-ಬಂದೂಕು-ಕಡಿ-ಕೊಲ್ಲು, ಸೇಡು-ದ್ವೇಷ… ಇತ್ಯಾದಿಗಳನ್ನೇ ಮನರಂಜನೆಯ ಹೆಸರಲ್ಲಿ ಪ್ರತಿ ಮನೆ ಮನೆಗೂ  ತಲುಪಿಸುತ್ತಿರುವ ಚಿತ್ರರಂಗವನ್ನು ನಾವು ಕಟಕಟೆಯಲ್ಲಿ ನಿಲ್ಲಿಸುವುದು ಯಾವಾಗ?

ಸಿನಿಮಾ ಎಂಬುದು ಒಂದು ಉದ್ಯಮ. ಹಾಕಿದ ದುಡ್ಡನ್ನು ಬಡ್ಡಿಸಮೇತ ವಾಪಸ್ ಪಡಕೊಳ್ಳುವ ಜರೂರತ್ತು ಈ ಕ್ಷೇತ್ರಕ್ಕಿದೆ. ಆ ಕಾರಣ ದಿಂದಲೇ ಮನರಂಜನೆ ಎಂಬ ಗುರಿಯ ಆಚೆಗೆ ವ್ಯಾಪಾರಿ ದೃಷ್ಟಿಕೋನದಿಂದ ಯೋಚಿಸಬೇಕಾದ ಅನಿವಾರ್ಯತೆ ನಿರ್ಮಾಪಕನ ಮೇಲೆ  ಇದ್ದೇ  ಇರುತ್ತದೆ. ಅಂದಹಾಗೆ, ಮನರಂಜನೆ ಮತ್ತು ವ್ಯಾಪಾರ ಇವೆರಡೂ ಸರಳ ರೇಖೆಯಲ್ಲಿ ಚಲಿಸಬಹುದೇ ಹೊರತು  ಜೊತೆಗೂಡುವುದು ಬಹಳ ಕಷ್ಟ. ಇವತ್ತಿನ ಹೆಚ್ಚಿನ ಸಿನಿಮಾಗಳು ಬಂದೂಕು, ಲಾಂಗು-ಮಚ್ಚು ಮತ್ತು ಕ್ರೌರ್ಯಗಳಿಂದ ಹೊರತಾಗಿಲ್ಲ.  ಆರಾಮ ಕೋಣೆಯಲ್ಲಿ ಕುಳಿತು ಸಿನಿಮಾಕ್ಕಾಗಿ ಅದ್ಭುತ ಕತೆ ರಚಿಸುವ ಕತೆಗಾರನ ಮುಂದೆ ಆ ಕತೆ ದೃಶ್ಯರೂಪ ಪಡೆದಾಗ ಅದು  ಸಮಾಜದಲ್ಲಿ ಎಂಥ ಪರಿಣಾಮ ಬೀರಬಹುದು ಎಂಬ ಅರಿವು ಇರುತ್ತದೋ ಗೊತ್ತಿಲ್ಲ. ಹೀರೋ, ಹೀರೋಯಿನ್ ಮತ್ತು ವಿಲನ್  ಪಾತ್ರವನ್ನು ಸೃಷ್ಟಿಸಿ, ಆ ಹೀರೋಯಿನನ್ನು ತನ್ನವಳನ್ನಾಗಿಸುವುದಕ್ಕೆ ಹೀರೋ ಹತ್ತು ಹಲವು ತಂತ್ರಗಳನ್ನು ಹೆಣೆಯುವುದು, ಆ ದಿಶೆಯಲ್ಲಿ  ಹತ್ಯೆ, ಜಗಳ, ಘರ್ಷಣೆ ಇತ್ಯಾದಿಗಳನ್ನು ನಡೆಸುವುದು ಮತ್ತು ಇವೆಲ್ಲವನ್ನೂ ನೋಡಗರ ಮನಸ್ಸಿಗೆ ಸರಿ ಎಂದು ಬಿಂಬಿಸುವುದು ಸಿ ನಿಮಾಗಳಲ್ಲಿ ಸಾಮಾನ್ಯವಾಗಿರುತ್ತದೆ. ಮನರಂಜನೆಯ ಹೆಸರಲ್ಲಿ ಸಿನಿಮಾ ಕ್ಷೇತ್ರ ಇದನ್ನು ಸಮರ್ಥಿಸಿಕೊಳ್ಳಬಹುದು. ಆದರೆ,

 ವೀಕ್ಷಕರೆಲ್ಲ  ಒಂದೇ ಮನಸ್ಥಿತಿಯವರು ಇರಬೇಕಿಲ್ಲವಲ್ಲ. ಒಂದು ಸಿನಿಮಾದಿಂದ ಒಬ್ಬೊಬ್ಬರು ಒಂದೊಂದು ರೀತಿಯ ಪಾಠವನ್ನು ಕಲಿತುಕೊಳ್ಳಬಹುದು. ಇನ್ನೊಬ್ಬರನ್ನು ಮುಗಿಸುವುದಕ್ಕೆ ಅದರಿಂದ ಪ್ರೇರಣೆ ಪಡೆಯುವವರಿರಬಹುದು. ಹತ್ಯೆ ನಡೆಸಿದ ಬಳಿಕ  ತಪ್ಪಿಸಿಕೊಳ್ಳುವ ವಿಧಾನವನ್ನೂ ಸಿನಿಮಾದಿಂದ ಕಲಿತುಕೊಳ್ಳುವವರಿರಬಹುದು. ಸಿನಿಮಾಗಳಿಂದ ಪ್ರೇರಣೆ ಪಡೆದು ನಡೆದ ಅನೇಕ ಅ ಪರಾಧ ಕೃತ್ಯಗಳು ಈಗಾಗಲೇ ಸುದ್ದಿಗೀಡಾಗಿವೆ. ಮಲಯಾಳಂನ ದೃಶ್ಯಂ ಸಿನಿಮಾದ ಪ್ರೇರಣೆ ಯಿಂದ ಅಪರಾಧ ಕೃತ್ಯವೆಸಗಿದವರು  ಕೆಲವು ಸಮಯದ ಹಿಂದೆ ಸುದ್ದಿಗೀಡಾಗಿದ್ದರು. ಇವಲ್ಲದೇ ಮನರಂಜನೆಯ ಹೆಸರಲ್ಲಿ ನಡೆಯುವ ಕೆಲವು ಹಿಂಸಾಸ್ವರೂಪಿ ಆಟಗಳೂ  ಪ್ರತಿ ಮನೆಯ ಟಿವಿ ಯಲ್ಲೂ ವಿಜೃಂಭಿಸುತ್ತಿವೆ. ಮೊಬೈಲ್‌ನ ಈ ಕಾಲದಲ್ಲಿ ಟಿವಿಯ ಹಂಗಿಲ್ಲದೇ ಪ್ರತಿಯೊಬ್ಬರಿಗೂ ಇವೆಲ್ಲ ದಕ್ಕುತ್ತಲೂ  ಇವೆ. ಮನುಷ್ಯ ಕ್ರೂರಿಯಾಗುವುದಕ್ಕೆ ಏನೇನೆಲ್ಲ ಬೇಕೋ ಅವೆಲ್ಲವನ್ನೂ ಒದಗಿಸುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯೂ ನಾವಿರುವ ಇದೇ  ಸಮಾಜದಲ್ಲಿದೆ. ಸದ್ಯ ನಾವು ಇವೆಲ್ಲವನ್ನೂ ಹರಡಿಟ್ಟುಕೊಂಡೇ ಈ ತಾಯಿ ಮಕ್ಕಳ ಹತ್ಯೆಯ ಸಹಿತ ಎಲ್ಲವನ್ನೂ ವಿಶ್ಲೇಷಣೆಗೆ ಒಳಪಡಿಸ ಬೇಕಾಗಿದೆ. ಮುಖ್ಯವಾಗಿ, ಯುವ ಸಮೂಹಕ್ಕೆ ಸಹನೆಯ ಮತ್ತು ಮೌಲ್ಯದ ಪಾಠ ವನ್ನು ತಿಳಿ ಹೇಳುವ ಪ್ರಯತ್ನ ಪ್ರತಿ ಮನೆಯಲ್ಲೂ  ನಡೆಯಬೇಕಾಗಿದೆ. ಹುಚ್ಚು ಆವೇಶಕ್ಕೆ ಬಿದ್ದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ತಡೆಯುವುದಕ್ಕೆ ಪ್ರತಿ ಮನೆಯೂ ಎಚ್ಚರಿಕೆಯ  ಹೆಜ್ಜೆ ಇಡಬೇಕಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗೀಡಾದ ಅಕ್ಷಯ್‌ನ ತಂದೆ ಎದೆ ಬಿರಿದು ಕಣ್ಣೀರು ಹಾಕುವ ವೀಡಿಯೋವನ್ನು ಸೋಶಿಯಲ್  ಮೀಡಿಯಾದಲ್ಲಿ ಅಸಂಖ್ಯ ಮಂದಿ ವೀಕ್ಷಿಸಿದ್ದಾರೆ. ನೋಡಿದ ಎಲ್ಲರ ಕಣ್ಣೂ ಒದ್ದೆಯಾಗಿದೆ. ಇದೀಗ ಉಡುಪಿಯ ನೂರ್ ಮುಹಮ್ಮದ್  ಅವರ ಸರದಿ. ತನ್ನ ಕುಟುಂಬದ ಎಲ್ಲರನ್ನೂ ಕಳಕೊಂಡು ಒಂಟಿಯಾದ ಅವರ ಸಂಕಟವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರು  ವಿದೇಶಕ್ಕೆ ಹೋಗಿರುವುದೇ ಪತ್ನಿ-ಮಕ್ಕಳನ್ನು ಸುಖವಾಗಿಡುವುದಕ್ಕೆ. ರಾತ್ರಿ-ಬೆಳಗಾಗುವುದರೊಳಗೆ ತನ್ನ ಇಡೀ ಪರಿವಾರವೇ ಹೊರಟು  ಹೋದರೆ ಆ ವ್ಯಕ್ತಿಗಾಗುವ ಆಘಾತ ಹೇಗಿರಬಹುದು? ದ್ವೇಷದ ಹೆಸರಲ್ಲೋ  ಸೇಡಿನ ಹೆಸರಲ್ಲೋ  ತಲವಾರು-ಬಂದೂಕು ಎತ್ತಿಕೊಳ್ಳುವ  ಪ್ರತಿಯೊಬ್ಬರೂ ಈ ಕುರಿತಂತೆ ಅವಲೋಕಿಸಬೇಕು. ಹತ್ಯೆ ಯಾವುದಕ್ಕೂ ಪರಿಹಾರ ಅಲ್ಲ, ಅದು ಕುಟುಂಬವೊಂದರ ದೀರ್ಘ ಕಣ್ಣೀರ  ಬದುಕಿಗೆ ಆರಂಭ ಅಷ್ಟೇ.

LEAVE A REPLY

Please enter your comment!
Please enter your name here