ನ್ಯಾಯಸಮ್ಮತ, ಪರಿಶುದ್ಧ ಚುನಾವಣೆ ಮಾಡುವ ವಾತಾವರಣ ಇಲ್ಲ: ಮಂಗಳೂರಿನಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

0
351

ಸನ್ಮಾರ್ಗ ವಾರ್ತೆ

ಮಂಗಳೂರು: ಚುನಾವಣೆಗಳು ಎಲ್ಲಾ ನಿಟ್ಟಿನಲ್ಲಿ ಇಂದು ಗಂಭೀರವಾದ ಸ್ಥಿತಿಗೆ ತಲುಪಿದೆ. ನ್ಯಾಯಸಮ್ಮತ, ಪರಿಶುದ್ಧ ಚುನಾವಣೆ ಮಾಡುವ ವಾತಾವರಣವೇ ಇಲ್ಲದಂತಾಗಿದೆ ಎಂದು ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಎಸ್‌ಡಿಎಂ ಕಾಲೇಜು, ಜಿಲ್ಲಾ ವಾಣಿಜ್ಯೋದ್ಯಮ ಸಂಘ ಹಾಗೂ ವಿವಿಗಳ ಸಂಯುಕ್ತಾಶ್ರಯದಲ್ಲಿ ‘ಚುನಾವಣಾ ಸುಧಾರಣೆ ಕ್ರಮ’ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹಣಬಲ, ಜಾತಿಬಲ, ತೋಳ್ಬಲ, ಪಕ್ಷಾಂತರ ಬಲದಿಂದಲೇ ಮುಳುಗಿದೆ. ನ್ಯಾಯಸಮ್ಮತ, ಪರಿಶುದ್ಧ ಚುನಾವಣೆ ಮಾಡುವ ವಾತಾವರಣವೇ ಇಲ್ಲದಂತಾಗಿದೆ. ಚುನಾವಣಾ ವ್ಯವಸ್ಥೆಯಲ್ಲಿ ಕಾಲಕ್ಕೆ ಅನುಗುಣವಾಗಿ ಆಧುನಿಕೀಕರಣಗೊಳ್ಳುತ್ತಾ ಸಾಗಿದೆ. ಮತಪತ್ರ, ಇವಿಎಂ, ಫೋಟೋ ಹೊಂದಿರುವ ಮತದಾರರ ಪಟ್ಟಿ ಎಲ್ಲವೂ ಮೇಲ್ದರ್ಜೆಗೇರಿದೆ. ಹಾಗಿದ್ದರೂ ಇನ್ನೂ 18 ವರ್ಷ ಆದಾಕ್ಷಣ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳುವ ಅಥವಾ ಮರಣ ಹೊಂದಿದ ಸಂದರ್ಭ ಪಟ್ಟಿಯಿಂದ ಕೈ ಬಿಡುವ ವ್ಯವಸ್ಥೆ ಇನ್ನೂ ಸಾಧ್ಯವಾಗಿಲ್ಲ ಎಂದು ಕಾಗೇರಿ ಅಭಿಪ್ರಾಯಿಸಿದ್ದಾರೆ.

ಪಾರದರ್ಶಕ ಚುನಾವಣೆಗಾಗಿ ಅದೆಷ್ಟೇ ಹೊಸ ಕಾನೂನು, ಸುಧಾರಣೆಯ ಹೊರತಾಗಿಯೂ ಮತದಾರ ಜಾಗೃತನಾಗದೆ ಏನೂ ಸಾಧ್ಯವಾಗದು. ಪ್ರತಿಯೊಬ್ಬ ಮತದಾರ ತನ್ನ ಮತ ಮಾರಾಟಕ್ಕಿಲ್ಲ ಎಂಬ ಜನಾಂದೋಲನದೊಂದಿಗೆ ಮತದಾನದ ತನ್ನ ಹಕ್ಕನ್ನು ಚಲಾಯಿಸುವಂತಾಗಬೇಕು. ಪರಿವರ್ತನೆಯ ಹರಿಕಾರರಾಗಿರುವ ಯುವಕರು ಮತದಾನದಲ್ಲಿ ಭಾಗವಹಿಸಬೇಕು ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಶರೀರದಲ್ಲಿ ಆತ್ಮವಿರುವಂತೆ, ಪೀಠಿಕೆಯೇ ಸಂವಿಧಾನದ ಆತ್ಮವಾಗಿದೆ. ಆ ಪೀಠಿಕೆಯ ಫೋಟೋವನ್ನು ತಮ್ಮ ಮನೆ, ಮನೆಯ ಕೊಠಡಿಗಳಲ್ಲಿ ತಮ್ಮ ಆಸಕ್ತಿಯ ಫೋಟೋಗಳ ಜತೆ ಹಾಕಬೇಕು. ಇದರಿಂದ ದೇಶದ ಮೇಲಿನ ನಮ್ಮ ಜವಾಬ್ದಾರಿ ಹೆಚ್ಚಿ, ದೇಶವನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಲು ಸಾಧ್ಯವಾಗುತ್ತದೆ ಎಂದು ಕಾಗೇರಿ ಕರೆ ಇದೇ ವೇಳೆ ಕರೆ ನೀಡಿದ್ದಾರೆ.