ಕೈರೊ,ಜೂ. 18: ಈಜಿಪ್ಟ್ ನ ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿಯ ಸಾವು ವ್ಯವಸ್ಥಿತ ಕೊಲೆಪಾತಕವಾಗಿದೆ ಎಂದು ಮುಸ್ಲಿಂ ಬ್ರದರ್ ಹುಡ್ ಹೇಳಿದೆ. ಸಾವಿನ ಕುರಿತು ಅಂತಾರಾಷ್ಟ್ರೀಯ ಮಟ್ಟದ ತನಿಖೆ ನಡೆಯಬೇಕು. ಮುರ್ಸಿಯ ಮೃತದೇಹ ಸಂಸ್ಕಾರದಲ್ಲಿ ಒಗ್ಗೂಡಬೇಕೆಂದು ಈಜಿಪ್ಟ್ ಜನರೊಂದಿಗೆ ಬ್ರದರ್ ಹುಡ್ ಕರೆ ನೀಡಿದೆ. ಜಗತ್ತಿನಾದ್ಯಂತ ಈಜಿಪ್ಟ್ ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಆಗ್ರಹಿಸಿದೆ.
ಇದೇವೇಳೆ ಮೃತದೇಹ ಸಂಸ್ಕರಿಸಲು ಮೃತದೇಹವನ್ನು ಈಜಿಪ್ಟ್ ಸರಕಾರ ಬಿಟ್ಟುಕೊಡಲು ಇನ್ನೂ ಸಿದ್ಧವಾಗಿಲ್ಲ ಎಂದು ಮುರ್ಸಿಯವರ ಪುತ್ರ ತಿಳಿಸಿದ್ದಾರೆ. ಮೂರು ವರ್ಷಗಳಿಂದ ದಕ್ಷಿಣ ಕೊರಿಯದ ಕುಪ್ರಸಿದ್ಧ ತೊರ ಜೈಲಿನಲ್ಲಿ ಏಕಾಂತ ಬಂಧನವನ್ನು ಮುರ್ಸಿ ಅನುಭವಿಸುತ್ತಿದ್ದರು. ಪ್ರಕರಣದ ವಿಚಾರಣೆಗೆ ಜೈಲಿನಲ್ಲಿ ಹಾಜರಾದ ಮುರ್ಸಿ ಕುಸಿದು ಬಿದ್ದು ಮೃತಪಟ್ಟರೆಂದು ರಾಷ್ಟ್ರೀಯ ಟಿವಿ ಚ್ಯಾನೆಲ್ ತಿಳಿಸಿತ್ತು. ಹಮಾಸ್ನೊಂದಿಗೆ ಸೇರಿ ಈಜಿಪ್ಟ್ ನ ಪ್ರತಿಭಟನಾಕಾರರ ವಿರುದ್ಧ ಸಂಚು ಹೆಣೆದ ಪ್ರಕರಣದಲ್ಲಿ ಸೋಮವಾರ ಮುರ್ಸಿಯವರನ್ನು ಕೋರ್ಟಿಗೆ ಹಾಜರುಪಡಿಸಲಾಗಿತ್ತು.
ಮಧುಮೇಹ ಮತ್ತು ಕರುಳಿಗೆ ಸಂಬಂಧಿಸಿದ ರೋಗದಿಂದ ಬಳಲುತ್ತಿದ್ದ ಅವರಿಗೆ ಅಂತಾರಾಷ್ಟ್ರೀಯ ಶಿಷ್ಟಾಚಾರದ ರೀತಿಯಲ್ಲಿ ಜೈಲಿನಲ್ಲಿ ನಡೆಸಿಕೊಳ್ಳಲಾಗಿರಲಿಲ್ಲ. ಇದುವೇ ಅವರ ಪ್ರಾಣಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದು ಈ ಹಿಂದೆಯೇ ಅವರ ಕುಟುಂಬ ದೂರು ನೀಡಿತ್ತು. 2011ರಲ್ಲಿ ನಡೆದಿದ್ದ ಅರಬ್ ಕ್ರಾಂತಿಯ ನಂತರ ಈಜಿಪ್ಟ್ ನಲ್ಲಿ ನಡೆದ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾಗಿದ್ದ ಮೊದಲ ಅಧ್ಯಕ್ಷರು ಅವರು. ಹುಸ್ನಿ ಮುಬಾರಕ್ರ 30 ವರ್ಷದ ಸರ್ವಾಧಿಕಾರಕ್ಕೆ ಅಂದು ಕೊನೆಯಾಗಿತ್ತು. 2013 ಜುಲೈಯಲ್ಲಿ ಅವರನ್ನು ಬುಡಮೇಲುಗೊಳಿಸಿ ಅಂದಿನ ಸೇನಾ ಮುಖ್ಯಸ್ಥ ಅಬ್ದುಲ್ ಫತ್ತಾಹ್ ಅಲ್ ಸಿಸಿ ಅಧಿಕಾರಕ್ಕೇರಿದ್ದರು. ನಂತರ ಸಿಸಿ ಮುರ್ಸಿಯವರ ವಿರುದ್ಧ ಪ್ರತೀಕಾರ ಕ್ರಮ ಕೈಗೊಂಡು ಜೈಲಿಗಟ್ಟಿದ್ದರು.












