ಹೊಸದಿಲ್ಲಿ, ಜೂ. 18: ಮಂಡ್ಯದಲ್ಲಿ ವೋಟು ಹಾಕಿದವರಲ್ಲಿ ಮುಸ್ಲಿಮರು ಕೂಡ ಇದ್ದಾರೆ. ಅವರ ವೋಟುಗಳು ತನ್ನ ವಿಜಯದಲ್ಲಿ ನಿರ್ಣಾಯವಾಗಿತ್ತು ಎಂದು ದಕ್ಷಿಣ ಭಾರತ ನಟಿ ಹಾಗೂ ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಹೇಳಿದರು. ಮಂಡ್ಯದ ಮುಸ್ಲಿಂ ಮತದಾರರ ಭಾವನೆಗಳನ್ನು ಗೌರವಿಸಿ ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ ಎಂದರು. ಕಾಂಗ್ರೆಸ್ ಸಂಸತ್ತಿಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದರೂ ಬಂಡಾಯವಾಗಿ ಸ್ಪರ್ಧಿಸಿ ಬಿಜೆಪಿಯ ಬೆಂಬಲದಿಂದ ಸುಮಲತಾ ಗೆದ್ದಿದ್ದರು. 17ನೇ ಲೋಕಸಭೆಯ ಪ್ರಥಮ ಅಧಿವೇಶನದಲ್ಲಿ ಭಾಗವಹಿಸಿದಾಗ ಸುಮಲತಾ ತನ್ನ ನಿಲುವನ್ನು ವ್ಯಕ್ತಪಡಿಸಿದರು.
ಮುಸ್ಲಿಮರ ಮತಗಳಿಂದ ಕೂಡ ನಾನು ಗೆದ್ದಿದ್ದೇನೆ. ಆದ್ದರಿಂದ ಗಡಿಬಿಡಿಯ ನಿರ್ಧಾರವನ್ನು ಮಾಡುವುದಿಲ್ಲ. ಇದೇ ವೇಳೆ ಲೋಕಸಭೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಪಕ್ಷೇತರಳಾಗಿ ಗೆದ್ದಿರುವೆ, ಪಕ್ಷೇತರಳಾಗಿಯೇ ಲೋಕಸಭೆಯಲ್ಲಿ ಇರುತ್ತೇನೆ ಎಂದು ಅವರು ಹೇಳಿದರು.












