ಈ ದೀಪಾವಳಿ – ಮನೆಗಳಷ್ಟೇ ಅಲ್ಲ, ಮನಸ್ಸುಗಳನ್ನೂ ಬೆಳಗಲಿ

0
470

✍️ ಎಂ.ಆರ್. ಮಾನ್ವಿ

ದೀಪಾವಳಿ ಎಂಬುದು ಬೆಳಕಿನ ಹಬ್ಬ. ಆದರೆ ಈ ಬೆಳಕು ಕೇವಲ ಮನೆಗಳಲ್ಲಿ, ಬೀದಿಗಳಲ್ಲಿ ಅಥವಾ ದೇವಾಲಯಗಳಲ್ಲಿ ಹೊಳೆಯುವುದಕ್ಕಲ್ಲ. ಇದು ನಮ್ಮ ಹೃದಯಗಳ ಕತ್ತಲೆಯನ್ನು ದೂರ ಮಾಡುವ ಬೆಳಕು. ಕೇವಲ ಹಣತೆಗಳ ಸಾಲು, ಸಿಹಿಗಳ ವಿತರಣೆ ಅಥವಾ ಪಟಾಕಿಗಳ ಸದ್ದು ಮಾತ್ರವಲ್ಲ, ದೀಪಾವಳಿಯ ನಿಜವಾದ ಅರ್ಥ “ಅಜ್ಞಾನ, ಅಸೂಯೆ ಮತ್ತು ದ್ವೇಷದ ಕತ್ತಲೆಯ ಮೇಲೆ ಜ್ಞಾನ, ದಯೆ ಮತ್ತು ಪ್ರೀತಿಯ ಬೆಳಕಿನ ವಿಜಯ.”

ಈ ಹಬ್ಬ ನಮ್ಮ ಬದುಕಿಗೆ ನೀಡುವ ಸಂದೇಶ ಅತ್ಯಂತ ಆಳವಾದದ್ದು. ರಾಮಾಯಣದ ಕಥೆಯಲ್ಲಿ ರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿದಾಗ ಜನರು ದೀಪಗಳನ್ನು ಹಚ್ಚಿ ಸಂಭ್ರಮಿಸಿದರು ಎಂದು ಹೇಳಲಾಗುತ್ತದೆ. ಅದು ಕೇವಲ ರಾಮನ ವಿಜಯೋತ್ಸವವಲ್ಲ, ಧರ್ಮದ, ಸತ್ಯದ ಮತ್ತು ನ್ಯಾಯದ ವಿಜಯದ ಸಂಕೇತವಾಗಿತ್ತು. ಇಂದಿನ ಕಾಲದಲ್ಲೂ ಅದೇ ಸಂದೇಶ ಅನ್ವಯಿಸುತ್ತದೆ – ಅಸತ್ಯದ, ದ್ವೇಷದ, ವಿಭಜನೆಯ ಕತ್ತಲೆಯ ಮೇಲೆ ಪ್ರೀತಿಯ ಮತ್ತು ಸಹಬಾಳ್ವೆಯ ಬೆಳಕು ಗೆಲ್ಲಬೇಕು.

ಆದರೆ ಇಂದು ನಾವು ನೋಡುತ್ತಿರುವ ಕೆಲವು ದೃಶ್ಯಗಳು ಈ ಹಬ್ಬದ ಅಂತರಾರ್ಥವನ್ನು ಕಳಂಕಿತಗೊಳಿಸುತ್ತಿವೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಒಂದು ವಿಡಿಯೋ- ಮನಕಲಕುವಂತಿತ್ತು. ಓರ್ವ ವಯೋವೃದ್ಧ ಮುಸ್ಲಿಂ ವ್ಯಾಪಾರಿ ಬೀದಿಯಲ್ಲಿ ಹಣತೆಗಳನ್ನಿಟ್ಟು ಮಾರಾಟ ಮಾಡುತ್ತಿದ್ದಾನೆ. ಅವನು ಬಡವ, ಕೈಕಸಬಿನಿಂದ ಬದುಕು ಕಟ್ಟಿಕೊಂಡವನು. ಆದರೆ ಕೆಲವು ನಿರ್ದಯಿ ಯುವಕರು ಆತನನ್ನು ಹೀಯಾಳಿಸುತ್ತಿದ್ದಾರೆ – “ಹಬ್ಬ ನಮ್ಮದು, ವ್ಯಾಪಾರ ನಿಮ್ಮದಾ? ನಮ್ಮ ಹಬ್ಬದಿಂದ ನೀವು ಹಣ ಗಳಿಸುತ್ತೀರಾ?” ಎಂದು. ಆ ಕ್ಷಣದಲ್ಲಿ ಅಪಮಾನದಿಂದಾಗಿ ಮೌನವಾಗಿದ್ದ ಆ ಮನುಷ್ಯನ ಕಣ್ಣುಗಳಲ್ಲಿ ಕಾಣಿಸಿಕೊಂಡಿದ್ದು ಅಸಹಾಯಕತೆ ಮಾತ್ರ. ಅದು ನಮ್ಮ ಸಮಾಜದ ಕತ್ತಲೆಯ ನಿಜ ಚಿತ್ರ.

ಆತನ ಕುಲಕಸುಬೇ ಕುಂಬಾರಿಕೆ. ವರ್ಷ ಪೂರ್ತಿ ಮಣ್ಣಿನ ಕೆಲಸ ಮಾಡಿ, ದೀಪಾವಳಿಯ ಮೊದಲು ಹಣತೆಗಳನ್ನು ಸಿದ್ಧಗೊಳಿಸಿ ಮಾರಾಟ ಮಾಡುವುದು ಆತನ ಬದುಕಿನ ಆಶಾದೀಪ. ಇಂತಹ ಶ್ರಮಜೀವಿಗಳ ಕೈಯಲ್ಲಿ ನಮ್ಮ ಹಬ್ಬದ ಅರ್ಥವೇ ಅಡಗಿದೆ – ಕಷ್ಟಪಟ್ಟು ಮಾಡಿದ್ದ ಹಣತೆಗಳಲ್ಲಿ ಅವರ ಬೆವರು, ಪ್ರಾರ್ಥನೆ, ಮತ್ತು ಬದುಕಿನ ಹಂಬಲಗಳಿವೆ. ನಾವು ಆ ಬೆಳಕನ್ನು ಹಚ್ಚಿ ಸಂತೋಷ ಪಡುವಾಗ ಅವರಿಗೂ ಬದುಕಿನ ಬೆಳಕು ಕೊಡಬೇಕಾದರೆ, ನಾವು ಅವರನ್ನೇ ತಳ್ಳಿಹಾಕುತ್ತಿರುವೆವು.

ಹೀಗೆ ಕೆಲವು ಸಂಘಟಿತ ಶಕ್ತಿಗಳು, ಕೆಲ ಧಾರ್ಮಿಕ ಮುಖಂಡರು ಸಾಮಾಜಿಕ ಮಾಧ್ಯಮಗಳ ಮೂಲಕ ‘ಹಿಂದೂ ಹಬ್ಬಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು’, ‘ಹಿಂದೂಗಳು ಅವರಿಂದ ಖರೀದಿ ಮಾಡಬಾರದು’ ಎಂಬ ಕರುಣಾರಹಿತ ಕರೆಗೆ ತೊಡಗಿದ್ದಾರೆ. ಈ ರೀತಿಯ ಕೃತ್ಯಗಳು ಧರ್ಮದ ಹೆಸರಿನಲ್ಲಿ ಮನುಷ್ಯತ್ವವನ್ನು ಕೊಲ್ಲುತ್ತಿವೆ. ಧರ್ಮ ಎಂದರೆ ಮನುಷ್ಯರ ಹಿತ, ಪ್ರೀತಿ ಮತ್ತು ಸಹಬಾಳ್ವೆ. ದ್ವೇಷದ ಬಿತ್ತನೆ ಮಾಡಿದರೆ ಅದು ಧರ್ಮವಲ್ಲ – ಅದು ಮಾನವೀಯತೆಯ ವಿರುದ್ಧದ ಪಾಪ.

ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಒಂದು ಆತಂಕಕಾರಿ ಪ್ರವೃತ್ತಿ ಕಾಣಿಸುತ್ತಿದೆ. ಧರ್ಮದ ಹೆಸರಿನಲ್ಲಿ ವಿಭಜನೆ, ಮತದ ಹೆಸರಿನಲ್ಲಿ ದ್ವೇಷ, ಹಾಗೂ ರಾಜಕೀಯದ ಹೆಸರಿನಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ. ಕೆಲ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ಪ್ರತಿಯೊಂದು ವಿಚಾರದಲ್ಲೂ ಹಿಂದೂ–ಮುಸ್ಲಿಂ ಅಂಶ ಹುಡುಕುತ್ತಿರುವುದು ವಿಷಾದನೀಯ. ಜಾತ್ರೆಗಳಲ್ಲಿ, ಹಿಂದೂ ಧರ್ಮದ ಹಬ್ಬಗಳಲ್ಲಿ ಅನ್ಯಕೋಮಿನ ವ್ಯಾಪಾರಿಗಳಿಗೆ ನಿರ್ಬಂಧ, ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಹರಡುವ ವಿಡಿಯೋಗಳು. ಇವೆಲ್ಲವೂ ಈ ನಾಡಿನ ಶಾಂತಿ, ಪ್ರೀತಿ ಮತ್ತು ಸಹಜ ಸಹಬಾಳ್ವೆಯ ಮೇಲೆ ಕಪ್ಪು ಮಸುಕನ್ನು ಬೀರುತ್ತಿವೆ.

ಭಾರತದ ಸೌಂದರ್ಯವೇ ಅದರ ವೈವಿಧ್ಯತೆಯಲ್ಲಿದೆ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಎಲ್ಲರೂ ಶತಮಾನಗಳಿಂದ ಸಹೋದರರಂತೆ ಬದುಕಿದ್ದಾರೆ. ಪರಸ್ಪರದ ಹಬ್ಬಗಳಲ್ಲಿ ಪಾಲ್ಗೊಂಡಿದ್ದಾರೆ, ದುಃಖದಲ್ಲಿ ಜೊತೆಗಿದ್ದಾರೆ. ಆದರೆ ಇಂದಿನ ಕೆಲ ಅಸಹ್ಯ ಶಕ್ತಿಗಳು ಈ ಏಕತೆಯ ಬಲೆಯನ್ನು ಕತ್ತರಿಸಲು ಪ್ರಯತ್ನಿಸುತ್ತಿವೆ. ಇದು ಕೇವಲ ಧರ್ಮದ ವಿಷಯವಲ್ಲ ಇದು ಮನುಷ್ಯತ್ವದ ಪ್ರಶ್ನೆ.

ದೀಪಾವಳಿಯ ಬೆಳಕು ನಮಗೆ ಈ ಸತ್ಯವನ್ನು ನೆನಪಿಸಲಿ “ಮನುಷ್ಯತ್ವಕ್ಕಿಂತ ಮೇಲಾದ ಧರ್ಮವಿಲ್ಲ.” ದೀಪ ಹಚ್ಚುವುದಾದರೆ ಕೇವಲ ಹೊರಗೆ ಅಲ್ಲ, ಒಳಗೆ ಹಚ್ಚೋಣ. ನಮ್ಮ ಮನಸ್ಸಿನಲ್ಲಿ ಹುಟ್ಟಿರುವ ಅನುಮಾನ, ಅಸೂಯೆ, ದ್ವೇಷ ಮತ್ತು ಸ್ವಾರ್ಥದ ಕತ್ತಲೆಯನ್ನು ಕರಗಿಸೋಣ. ಒಬ್ಬ ಹಿಂದೂ ತನ್ನ ಮುಸ್ಲಿಂ ನೆರೆಹೊರೆಯವರ ಮನೆಗೆ ಹಾರೈಸಲು ಹೋಗಲಿ, ಒಬ್ಬ ಮುಸ್ಲಿಂ ಸಹ ಹಿಂದೂ ಸ್ನೇಹಿತನ ಮನೆಗೆ ಸಿಹಿ ಕಳುಹಿಸಲಿ – ಇದೇ ನಿಜವಾದ ದೀಪಾವಳಿಯ ಬೆಳಕು.

ಸಮಾಜದಲ್ಲಿ ಶಾಂತಿಯ ಬೆಳಕನ್ನು ಹರಡಲು ಇದು ಸೂಕ್ತ ಸಮಯ. ನಾವು ಒಂದೇ ನಾಡಿನ ಮಕ್ಕಳು, ಒಂದೇ ಮಣ್ಣಿನ ಜೀವಿಗಳು. ಧರ್ಮ ಬೇರೆ, ದೇವರ ಹೆಸರು ಬೇರೆ ಇರಬಹುದು, ಆದರೆ ಹೃದಯದ ಬಣ್ಣ ಒಂದೇ – ಅದು ಮನುಷ್ಯತ್ವದ ಬಣ್ಣ. ಈ ಸತ್ಯವನ್ನು ಮರೆಯದಿದ್ದರೆ, ಈ ದೇಶ ಯಾವತ್ತೂ ಕತ್ತಲೆಯೊಳಗೆ ಹೋಗುವುದಿಲ್ಲ.

ದೀಪಾವಳಿಯ ಅರ್ಥ ಕೇವಲ ವಿದ್ಯುತ್ ದೀಪಗಳ ಅಲಂಕಾರವಲ್ಲ; ಅದು ಮನುಷ್ಯರ ಹೃದಯಗಳಲ್ಲಿ ಹೊಳೆಯುವ ಮಾನವೀಯತೆಯ ಜ್ಯೋತಿ. ಹಬ್ಬದ ಈ ಸಂದರ್ಭವನ್ನು ದ್ವೇಷದ, ಅಸಹನೆಯ ಮತ್ತು ವಿಭಜನೆಯ ವಿರುದ್ಧವಾದ ಶಾಂತಿಯ ದೀಪವಾಗಿ ರೂಪಿಸೋಣ.

ನಮ್ಮ ಮನೆಗಳು ಬೆಳಗಲಿ, ಆದರೆ ಅದಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸು ಬೆಳಗಲಿ. ನಮ್ಮ ಕೈಯಲ್ಲಿ ದೀಪ ಇರಲಿ, ಆದರೆ ಹೃದಯದಲ್ಲಿ ದಯೆ ಇರಲಿ. ನಮ್ಮ ಮಾತುಗಳಲ್ಲಿ ಸಿಹಿ ಇರಲಿ, ಆದರೆ ಕೃತ್ಯಗಳಲ್ಲಿ ಸತ್ಯ ಇರಲಿ.

ಈ ದೀಪಾವಳಿ ಕೇವಲ ಒಂದು ಹಬ್ಬವಲ್ಲ, ಅದು ಒಂದು ಆತ್ಮಶುದ್ಧಿಯ ಯಜ್ಞ. ಈ ಹಬ್ಬದ ಬೆಳಕು ನಮ್ಮ ಹೃದಯಗಳಲ್ಲಿರುವ ಕತ್ತಲೆಯನ್ನು ಕರಗಿಸಿ, ಹಿಂದೂ–ಮುಸ್ಲಿಂ ಎಂಬ ಹೆಸರಿನ ಗಡಿಗಳನ್ನು ಅಳಿಸಿ, ಮನುಷ್ಯತ್ವದ ಬೆಳಕು ಮತ್ತೆ ಹೊಳೆಯಲಿ.

ಈ ದೀಪಾವಳಿ ನಾವೆಲ್ಲರೂ ಒಟ್ಟಾಗಿ ಹೇಳೋಣ “ನಾವೆಲ್ಲರೂ ಒಂದೇ ದೇಶದ ಮಕ್ಕಳು, ಒಂದೇ ಬೆಳಕಿನ ಜೀವಿಗಳು.” ದೀಪಾವಳಿಯ ಬೆಳಕು ನಮ್ಮ ಮನಸ್ಸಿನ ಕತ್ತಲೆಯನ್ನು ದೂರ ಮಾಡಿ, ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯ ಬೆಳಕಿನಿಂದ ನಮ್ಮ ದೇಶವನ್ನು ತುಂಬಿಸಲಿ – ಇದೇ ಹಬ್ಬದ ನಿಜವಾದ ಆಶಯ.