ತೊಕ್ಕೊಟ್ಟು ಸ್ಮಾರ್ಟ್ ಸಿಟಿ: ಗೋ ಬ್ಯಾಕ್ ಎನ್ ಆರ್ ಸಿ ಘೋಷಣೆ ಮೂಲಕ ಬಿಜೆಪಿ ತಂಡವನ್ನು ವಾಪಸು ಕಳಿಸಿದ ನಾಗರಿಕರು: ವೀಡಿಯೊ ವೈರಲ್

0
3036

ಸನ್ಮಾರ್ಗ ವಾರ್ತೆ

ತೊಕ್ಕೊಟ್ಟು: ಜ. 8- CAA ಯ ಕುರಿತಂತೆ ಮನೆಮನೆ ಜಾಗೃತಿ ಅಭಿಯಾನದ ಅಂಗವಾಗಿ ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿ ಕಾಂಪ್ಲೆಕ್ಸ್ ಗೆ ಆಗಮಿಸಿದ ಬಿಜೆಪಿ ತಂಡವನ್ನು ಗೋ ಬ್ಯಾಕ್, ಗೋ ಬ್ಯಾಕ್ ಎಂಬ ಘೋಷಣೆಯ ಮೂಲಕ ಹಿಂದಕ್ಕೆ ಕಳುಹಿಸಲಾದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ಇವತ್ತು ಸಂಜೆ 5 ಗಂಟೆಯ ಸುಮಾರಿಗೆ ತೊಕ್ಕೊಟ್ಟಿನ ಹೃದಯಭಾಗದಲ್ಲಿರುವ ಜನನಿಬಿಡ ಸ್ಮಾರ್ಟ್ ಸಿಟಿ ಕಾಂಪ್ಲೆಕ್ಸ್ ಗೆ ಬಿಜೆಪಿ ನಾಯಕರಾದ ಚಂದ್ರಹಾಸ ಉಳ್ಳಾಲ, ಚಂದ್ರಶೇಖರ ಉಚ್ಚಿಲ್, ಸಂತೋಷ್ ಕುಮಾರ್ ಬೋಳಿಯಾರ್, ಪವಿತ್ರ ಕುಮಾರ್ ಗಟ್ಟಿ ಮುಂತಾದವರು ಸೇರಿದ 20 ಮಂದಿಯ ತಂಡ ಆಗಮಿಸಿತು. ಸಿಎಎ, ಎನ್ ಆರ್ ಸಿಯ ಬಗ್ಗೆ ಅಲ್ಲಿನ ಅಂಗಡಿ ಮಾಲಕರಲ್ಲಿ ಮಾತಾಡಲು ಆರಂಭಿಸಿದಂತೆಯೇ ಕಾಂಪ್ಲೆಕ್ಸ್ ನ ಮಂದಿ ಮತ್ತು ಸಾರ್ವಜನಿಕರು ಆಕ್ಷೇಪಿಸಿದರು. ಸಿಎಎ, ಎನ್ ಆರ್ ಸಿ ಯ ಬಗ್ಗೆ ನಮಗೆ ನಿಮ್ಮ ವಿವರಣೆಯ ಅಗತ್ಯವಿಲ್ಲ, ಹಿಂತುರುಗಿ ಎಂದು ಒತ್ತಾಯಿಸಿದರು. ತಂಡ ಕದಲದೇ ಇದ್ದಾಗ ಮತ್ತು ಕಾಯ್ದೆ ಬಗ್ಗೆ ವಿವರಿಸಲು ಮುಂದಾದಾಗ ವಾಗ್ವಾದ ನಡೆಯಿತು.ಅಲ್ಲದೇ,

ತಂಡದ ಮಂದಿ ವೀಡಿಯೊ ಮಾಡಲು ಪ್ರಾರಂಭಿಸಿದಾಗ ಆಕ್ಷೇಪ ವ್ಯಕ್ತವಾಯಿತು. ವಾಗ್ವಾದ ಜೋರಾಗಿ ಮತ್ತಷ್ಟು ಸಾರ್ವಜನಿಕರು ಸೇರಿಕೊಂಡು ಉದ್ವಿಗ್ನ ಸ್ಥಿತಿ ಏರ್ಪಡುವ ಹಂತ ಎದುರಾದಾಗ ಪೊಲೀಸರು ಆಗಮಿಸಿ ಉಭಯ ಗುಂಪುಗಳನ್ನು ಸಮಾಧಾನಪಡಿಸಿದರು. ಈ ನಡುವೆ ಗೋ ಬ್ಯಾಕ್ ಎನ್ ಆರ್ ಸಿ, ಗೋ ಬ್ಯಾಕ್ ಎನ್ ಆರ್ ಸಿ ಎಂಬ ಘೋಷಣೆ ಮೊಳಗಿತು. ಬಳಿಕ ಬಿಜೆಪಿ ತಂಡ ಕಾಂಪ್ಲೆಕ್ಸ್ ಪ್ರವೇಶಿಸದೇ ಹೊರಗಿನಿಂದಲೇ ಹಿಂತಿರುಗಿತು.

ಇದೇ ರೀತಿಯ ಘಟನೆ ಇಲ್ಲಿನ ಸಿಟಿ ಮಾರ್ಕೆಟಿನಲ್ಲೂ ನಡೆದಿದ್ದು,ಜನರು ಬಿಜೆಪಿ ತಂಡವನ್ನು ಮರಳಿ ಕಳುಹಿಸಿದರು. ಅಲ್ಲಿಗೂ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು.