ತುಕ್ದೆ ತುಕ್ದೆ ಗ್ಯಾಂಗ್ ಲೀಡರ್ ಎಂದು ಅವರು ನನ್ನನ್ನು ಕರೆಯಲಿ; ಅದು ನನಗೆ ಗೌರವ- ಕನ್ಹಯ್ಯಾ ಕುಮಾರ್

0
976

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ. 9: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಹಾಸ್ಟೆಲ್ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿರುದ್ಧ ನಡೆದ ಗೂಂಡಾ ದಾಳಿಯ ಕುರಿತು ಜೆಎನ್‍ಯು ಯೂನಿಯನ್ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಪ್ರತಿಕ್ರಿಯಿಸಿದ್ದು, ಜೆಎನ್‍ಯುವನ್ನು ಶತ್ರುವಾಗಿ ಆಯ್ಕೆಮಾಡಿದ್ದು ಕೇಂದ್ರ ಸರಕಾರದ ತಪ್ಪು ನಡೆಯಾಗಿದೆ ಎಂದು ಹೇಳಿದ್ದಾರೆ. ವರದಿ ಆಗದಿರುವ ವಿಷಯಗಳನ್ನು ಜೆಎನ್‍ಯು ಯಾವಾಗಲೂ ಚರ್ಚೆಗೆ ಎತ್ತಿಕೊಳ್ಳುತ್ತದೆ. ಸರಕಾರ ಒಂದು ತಪ್ಪು ಮಾಡಿದೆ. ಅರಿವು, ಶಿಕ್ಷಣವಿರುವ ಶತ್ರುವನ್ನು ಆಯ್ಕೆಮಾಡಿದ್ದು ಅದು ಮಾಡಿದ ತಪ್ಪಾಗಿದೆ. ಜೆಎನ್‍ಯುನೊಂದಿಗೆ ದ್ವೇಷ ಎಂದರೆ ಒಂದು ವಿಶ್ವವಿದ್ಯಾನಿಲಯದೊಂದಿಗೋ ಸಿದ್ಧಾಂತದೊಂದಿಗೋ ದ್ವೇಷವಲ್ಲ ಬದಲಾಗಿ ಒಂದು ದೇಶ ಹೇಗಿರ ಬೇಕೆಂಬ ಚಿಂತನೆಯ ದ್ವೇಷವಾಗಿದೆ ಎಂದು ಕನ್ಹಯ್ಯ ಕುಮಾರ್ ಹೇಳಿದರು.

ಜೆಎನ್‍ಯುನಲ್ಲಿ ಓರ್ವ ಹುಡುಗಿಗೆ ಲೈಬ್ರರಿಯಿಂದ ಹೊರಬಂದು ಒಬ್ಬಳೇ ನಡೆದಾಡಲು ಸಾಧ್ಯವಿದೆ. ಈ ಕ್ಯಾಂಪಸ್‍ನಲ್ಲಿ ಶೇ. ನಲ್ವತ್ತರಷ್ಟು ಜನರು ಆದಿವಾಸಿಗಳು ಅಥವಾ ಬಡ ಕುಟುಂಬದವರು. ತನ್ನನ್ನು ತುಕ್ಡ, ತುಕ್ಡ ಗ್ಯಾಂಗ್ ನಾಯಕ ಎಂದು ಕರೆಯುವುದನ್ನು ಗೌರವವೆಂದು ಭಾವಿಸಿಕೊಂಡಿರುವೆನೆಂದು ಕನ್ಹಯ್ಯ ಹೇಳಿದರು. ತುಕ್ಡ ತುಕ್ಡ ಗ್ಯಾಂಗ್ ಎಂದು ಬಲಪಂಥೀಯ ಪಾರ್ಟಿಗಳು ಎಡಪಕ್ಷವನ್ನು ಬೆಂಬಲಿಸುವವರ ಮೇಲೆ ದಾಳಿ ಮಾಡಲು ಉಪಯೋಗಿಸುವ ಪದಬಳಕೆಯಾಗಿದೆ. ನೀವು ಜೆಎನ್‍ಯು ಜೊತೆಯಿದ್ದರೆ ನಿಮ್ಮನ್ನು ಎಡಪಕ್ಷದವರೆಂದು ಕರೆಯುತ್ತಾರೆ ಎಂದು ಕನ್ಹಯ್ಯಾ ಹೇಳಿದರು.