ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರ ವಾಹನವನ್ನು ವಶಕ್ಕೆ ಪಡೆದ ಬಣಕಲ್ ಪೊಲೀಸರು: ಪ್ರಯಾಣಿಕರನ್ನು ಸಾಗಿಸಿದ ಆರೋಪ

0
853

ಸನ್ಮಾರ್ಗ ವಾರ್ತೆ

ಮಂಗಳೂರು ಏಪ್ರಿಲ್ 18- ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರ ಅಧಿಕೃತ ವಾಹನವನ್ನು ಪೊಲೀಸರು ವಶಕ್ಕೆ ಪಡೆದ ವಿಶೇಷ ಘಟನೆ ಶುಕ್ರವಾರ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದು ತಾಲೂಕು ಪಂಚಾಯತ್ ಅಧ್ಯಕ್ಷರ kA 19 G 0989 ಬೊಲೆರೋ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿ ತಾಲೂಕು ಪಂಚಾಯತ್ ಅಧ್ಯಕ್ಷರ ವಾಹನದಲ್ಲಿ ಮಂಗಳೂರಿನಿಂದ ಪ್ರಯಾಣಿಕರನ್ನು ಚಿಕ್ಕಮಗಳೂರಿಗೆ ತಲುಪಿಸಲಾಗಿದೆ ಅನ್ನುವ ಆರೋಪ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡ ಬಳಿಕ ಈ ಘಟನೆ ನಡೆದಿದೆ.

ಬಣಕಲ್ ಗೆ ಕೆಲವು ಪ್ರಯಾಣಿಕರನ್ನು ತಲುಪಿಸುವುದಕ್ಕಾಗಿ ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಈ ವಾಹನವನ್ನು ಓಡಿಸಲಾಗಿದೆ ಎಂದು ವರದಿಯಾಗಿದೆ. ಈ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೆಲ್ವಮಣಿ ಅವರು ತಾಲೂಕು ಪಂಚಾಯತ್ ಅಧ್ಯಕ್ಷರಿಗೆ ನೋಟಿಸು ಜಾರಿ ಮಾಡಿದ್ದಾರೆ.

ಪ್ರಯಾಣಿಕರನ್ನು ಸಾಗಿಸುವುದಕ್ಕೆ ಪಂಚಾಯತ್ ಅಧ್ಯಕ್ಷರ ಅಧಿಕೃತ ವಾಹನವನ್ನು ಬಳಸಲಾಗಿದೆ ಅನ್ನುವ ಮಾಹಿತಿ ನನಗೆ ಸಿಕ್ಕಿದೆ. ಮೂರು ದಿನಗಳ ಒಳಗಾಗಿ ಉತ್ತರಿಸಬೇಕೆಂದು ತಾಲೂಕು ಪಂಚಾಯತ್ ಅಧ್ಯಕ್ಷರಿಗೆ ಸೂಚಿಸಿದ್ದೇನೆ ಎಂದವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಗುರುವಾರದಂದು ಮೂಡಿಗೆರೆ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ್, ಬಣಕಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ, ಬಣಕಲ್ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಸತೀಶ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಅವರ ಬಣಕಲ್ ಗೆ ಭೇಟಿ ನೀಡಿ ಪ್ರಯಾಣಿಕರನ್ನು ಮಾತಾಡಿಸಿ ಮಾಹಿತಿಯನ್ನು ಸಂಗ್ರಹಿಸಿದ್ದರು. ಆ ಬಳಿಕ ಶುಕ್ರವಾರ ಬಣಕಲ್ ಪೊಲೀಸರು ಮಂಗಳೂರಿಗೆ ಭೇಟಿಕೊಟ್ಟು ವಾಹನವನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.