ಸನ್ಮಾರ್ಗ ವಾರ್ತೆ
✍️ ಶಾಝಿಲ್ ಉಸ್ಮಾನ್
ಈ ಸಲ ಟ್ರಂಪ್ ಅವರನ್ನು ಮುಸ್ಲಿಮರು ಗೆಲ್ಲಿಸಿದ್ದು ಎಂಬ ಬಹುವಾದ ಪ್ರಚಾರಗಳ ನಡುವೆ ಅವರು ಅಮೆರಿಕದ ಚುನಾವಣೆಯಲ್ಲಿ ಗೆದ್ದು ಅಮೆರಿಕಕ್ಕೆ 54ನೇ ಅಧ್ಯಕ್ಷರಾಗಿದ್ದಾರೆ. ಫಲಿತಾಂಶ ಪ್ರಕಟವಾಗಲು ಕಮಲಾ ಹ್ಯಾರಿಸ್ ಸೋಲು ಒಪ್ಪಬೇಕೆಂಬ ನಿಯಮ ಅಮೆರಿಕದಲ್ಲಿ ಇದೆ. ಯಾಕೆಂದರೆ ಚುನಾವಣಾ ಆಯೋಗ ಅಥವಾ ಅಧಿಕಾರಿಗಳು ಚುನಾವಣಾ ಫಲಿತಾಂಶವನ್ನು ಅಲ್ಲಿ ಪ್ರಕಟಿಸುವುದಿಲ್ಲ. 2020ರಲ್ಲಿ ನಡೆದ ಚುನಾವಣೆಯಲ್ಲಿ ಟ್ರಂಪ್ ಸೋಲು ಒಪ್ಪಲು ಸಿದ್ಧರಾಗದ ನಂತರ ಕ್ಯಾಪಿಟಲ್ ಹಿಲ್ನಲ್ಲಿ ಘರ್ಷಣೆ ನಡೆದಿತ್ತು. ಅದರಲ್ಲಿ ಆರು ಮಂದಿ ಕೊಲ್ಲಲ್ಪಟ್ಟಿದ್ದರು. ಕಮಲಾ ಹ್ಯಾರಿಸ್ ಹಾಗೆ ಮಾಡುತ್ತಾರಾ? ಇಲ್ಲ ಸೋಲೋಪ್ಪಿಕೊಳ್ಳುತ್ತಾರಾ? ಸೋತವರು ಸೋಲೊಪ್ಪುವುದು ಲೋಕ ನಿಯಮ.
ಈ ಸಲ ಮಿಚಿಗನ್ ರಾಜ್ಯದಲ್ಲಿ ಟ್ರಂಪ್ ಡೆಮಕ್ರಾಟರ ಸಾಂಪ್ರದಾಯಿಕ ಮತಗಳಿಗೆ ಕನ್ನ ಹಾಕಿದರು. ಇಲ್ಲಿ ಶೇ. 55ರಷ್ಟು ಮುಸ್ಲಿಮರು ಇದ್ದಾರೆ. ಇವರಲ್ಲಿ ಉತ್ತರಾಫ್ರಿಕದಿಂದ ಅಲ್ಲಿಗೆ ಬಂದವರು, ಮಧ್ಯಪ್ರಾಚ್ಯದವರು ಮತ್ತು ಏಷ್ಯದವರು. ಇವರೆಲ್ಲ ಬೈಡನ್ರ ಗಾಝದ ನೀತಿಯನ್ನು ವಿರೋಧಿಸಿ ಡೊನಾಲ್ಡ್ ಟ್ರಂಪ್ಗೆ ಮತ ಹಾಕಿದ್ದರಿಂದ ಮಿಚಿಗನ್ ರಾಜ್ಯದಲ್ಲಿ ಟ್ರಂಪ್ಗೆ ಗೆಲುವು ಸಿಕ್ಕಿತು. ಇದುವೇ ಅಮೆರಿಕದ ಅಧ್ಯಕ್ಷರ ಚುನಾವಣೆಯಲ್ಲಿ ನಿರ್ಣಾಯಕ ಕೂಡ ಆಯಿತು.
ಟ್ರಂಪ್ ರಿಪಬ್ಲಿಕ್ ಪಾರ್ಟಿ ಅಭ್ಯರ್ಥಿಯಾಗಲು ಕಷ್ಟಪಟ್ಟಿರಲಿಲ್ಲ. ಟ್ರಂಪ್ ಮೀರಿಸಿದ ಶ್ರೀಮಂತರು ರಿಪಬ್ಲಿಕನ್ನಲ್ಲಿರಲಿಲ್ಲ ಎಂದೂ ಹೇಳಬಹುದು. ಅಷ್ಟು ಶ್ರೀಮಂತ ಈ ಟ್ರಂಪ್. ಶ್ರೀಮಂತರಿಗೆ ಮಣೆ ಹಾಕುವಂತೆ ವಿಶ್ವ ವ್ಯವಸ್ಥೆ ಬದಲಾಗಿದೆ ಎನ್ನುವುದು ಭಾವನಾತ್ಮಕ ಮಾತಾದರೂ ಸತ್ಯವಾದದ್ದು. ಸತ್ಯ ಎಂದಿದ್ದರೂ ಸತ್ಯವೇ ಆಗಿರುತ್ತದೆ. ರಿಪಬ್ಲಿಕನ್ನ ಟ್ರಂಪ್ರ ಎದುರಿದ್ದುದು ಡೆಮಕ್ರಾಟಿಕ್ ಪಾರ್ಟಿಯಿಂದ ಬೈಡನ್. ಬೈಡನ್ ಅಧ್ಯಕ್ಷನಾಗಿದ್ದೂ ವರ್ಚಸ್ಸನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅವರನ್ನು ಯಾರೂ ಸುಲಭದಲ್ಲಿ ಯಾಮಾರಿಸು ವಷ್ಟು ದುರ್ಬಲರಾಗಿದ್ದರು. ಕೊನೆಗೆ ಅವರಿಗೆ ತನ್ನ ದೌರ್ಬಲ್ಯ ಅರಿತದ್ದೋ ಏನೋ ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿದರು. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ರನ್ನು ಡೆಮಕ್ರಾಟಿಕ್ ಪಾರ್ಟಿ ಅಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿ ಮಾಡಿತು. ಒಂದು ಗೊತ್ತಿರಲಿ.
ಅಧ್ಯಕ್ಷರಾಗಿ ಮಹಿಳೆಯರನ್ನು ಅಮೆರಿಕರು ಇಷ್ಟಪಡುವುದಿಲ್ಲ. ಬಹಳ ಹಿಂದಿನಿಂದಲೂ ಈ ರಿವಾಜು ಅಲ್ಲಿದೆ. ಏನಿದ್ದರೂ ಕಮಲಾ ಸೋಲುಂಡಿದ್ದಾರೆ ಅಥವಾ ಚುನಾವಣಾ ಪ್ರಚಾರಕ್ಕೆ ಅವರಿಗೆ ಹೆಚ್ಚು ಸಮಯವೂ ಸಿಗಲಿಲ್ಲ ಎಂದರೂ ತಪ್ಪಿಲ್ಲ. ಒಟ್ಟಿನಲ್ಲಿ ಚುನಾವಣಾ ಪ್ರಚಾರದಲ್ಲಿ ಕಮಲಾರಿಗೆ ಸಾಕಷ್ಟು ಸಮಯ ಸಿಗಲಿಲ್ಲ. ಇರಲಿ ಬೈಡನ್ ಗಾಝದ ಕುರಿತು ತಳೆದ ನೀತಿ ಅವರಿಗೆ ಮುಳುವಾಯಿತು.
ಮಿಚಿಗನ್ನಿನಲ್ಲಿ ಮುಸ್ಲಿಮರು ಭಾರೀ ದೊಡ್ಡ ಪ್ರತಿಭಟನೆಯನ್ನೇ ನಡೆಸಿದರು. ಗಾಝದಲ್ಲಿ ಯುದ್ಧ ವಿರಾಮ ತರಬೇಕೆಂದು ಅಧ್ಯಕ್ಷ ಬೈಡನ್ ರಿಗೆ ವಿನಂತಿಸಿದರು. ಇಲ್ಲದಿದ್ದರೆ ಡೆಮಕ್ರಾಟಿಕ್ ಪಾರ್ಟಿಗೆ ವೋಟು ಕೊಡುವುದಿಲ್ಲ ಎಂದೂ ಹೇಳಿದ್ದರು. ಈಗ ಅದನ್ನೇ ಮಾಡಿದರು ಎಂಬುದು ಇನ್ನೊಂದು ಮಾತು ಇರಲಿ.
ಆದರೆ ಇಸ್ರೇಲಿನ ಪರ ನಿಂತು ಯಹೂದಿಯರನ್ನು ಓಲೈಸಿದರೆ ಡೆಮಕ್ರಾಟರು ಸುಲಭದಲ್ಲಿ ಗೆಲ್ಲಬಹುದು ಎಂಬ ಲೆಕ್ಕದ ಮೊರೆ ಹೋಗಿದ್ದರು ಬೈಡನ್. ಡೆಮಕ್ರಾಟರು ತಪ್ಪಿದ್ದೇ ಇಲ್ಲಿ. ಅಷ್ಟರಲ್ಲಿ ಬಹುತೇಕ ಅಮೆರಿಕನ್ನರು ಗಾಝದ ಕುರಿತ ಅಮೆರಿಕನ್ ನೀತಿ, ಇಸ್ರೇಲಿನ ವಿಪರೀತ ಓಲೈಕೆ, ಶಸ್ತ್ರಾಸ್ತ್ರಗಳನ್ನು ಧಾರಾಳವಾಗಿ ಕೊಟ್ಟದ್ದರಿಂದ ಕೋಪಗೊಂಡರು. ಮಾತ್ರವಲ್ಲ ನಿರಂತರ ಪ್ರತಿಭಟಿಸಿ ಒತ್ತಡ ಹೇರತೊಡಗಿದರು. ಟ್ರಂ ಪ್ ದೂರದಿಂದಲೇ ಇದನ್ನೆಲ್ಲ ನೋಡಿ ತಾನು ಪ್ರಚಾರಕ್ಕೆ ಹೋದಲೆಲ್ಲ ಗಾಝದಲ್ಲಿ ಯುದ್ಧ ನಿಲ್ಲಿಸುವೆ ಎಂದು ಘೊಷಿಸಿದರು. ರಷ್ಯ ಯುಕ್ರೇನ್ ಯುದ್ಧವನ್ನು ನಿಲ್ಲಿಸುವೆ ಎಂದರು. ಯುದ್ಧ ಬೇಡ ಎನ್ನುತ್ತಿದ್ದ ಅಮೆರಿಕನ್ನರು ಟ್ರಂಪ್ರಲ್ಲಿ ಭರವಸೆ ಇಟ್ಟರು. ಫಲಿತಾಂಶ ಬಂದಿದೆ. ಬೈಡನ್ ಹೋಗಿದ್ದಾರೆ. ಕಮಲಾ ಹ್ಯಾರಿಸ್ ಸೊರಗಿ ಹೋದರು. ನೆತನ್ಯಾಹುಗೆ ಟ್ರಂಪ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಯುದ್ಧ ನಿಲ್ಲುತ್ತೋ ಬಿಡುತ್ತೊ ಅಂತೂ ಟ್ರಂಪ್ ಅಧ್ಯಕ್ಷರು ಅಮೆರಿಕಕ್ಕೆ.
ನೋಡಿ, ಟ್ರಂಪ್ ಯುದ್ಧವನ್ನೆಲ್ಲ ನಿಲ್ಲಿಸುತ್ತ ಬಂದವರು. ಆರ್ಥಿಕ ಹೊರೆ ಎಂದು ಹೇಳುತ್ತಾ ಅಫ್ಘಾನಿಸ್ತಾನದಿಂದ ಸೈನಿಕರನ್ನು ವಾಪಸು ಕರೆಯಿಸಿಕೊಂಡರು. ಹೀಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸರಕಾರ ರಚಿಸುವಂತಾದ್ದು. ಇದೇ ನೀತಿಯನ್ನು ಟ್ರಂಪ್ ಮುಂದುವರಿಸಿದರೆ ಯುಕ್ರೇನ್ಗೆ ಇಸ್ರೇಲಿಗೆ ಆಯುಧ ಕೊಡಲಾರರು. ತಮ್ಮ ಸೈನಿಕರನ್ನು ಅಲ್ಲಿ ಸತ್ತು ಬೀಳುವುದಕ್ಕೆ ಕಳುಹಿಸಲಾರರು. ಅಷ್ಟಕ್ಕೇ ಅರ್ಧ ಯುದ್ಧ ನಿಂತತೇ. ಅಮೆರಿಕವನ್ನೇ ಆಶ್ರಯಿಸಿರುವ ಇಸ್ರೇಲ್ ಅಮೆರಿಕವೇ ಹಿಂದೆ ಸರಿದರೆ ಯುದ್ಧ ವಿರಾಮದ ಹೊರತು ಇನ್ನೇನು ಮಾಡೀತು? ಆದರೆ ಗಾಝದಿಂದ ಹೊರ ಹೋಗದಿದ್ದರೆ ಇರಾನ್ ಲೆಬನಾನ್ ಯಮನ್ ಸಹಿತ ಅರಬ್ ದೇಶಗಳು ಇಸ್ರೇಲನ್ನು ಖಂಡಿತ ಸುಮ್ಮನೆ ಬಿಡಲಾರವು ಎಂಬ ಇನ್ನೊಂದು ವಿಚಾರವೂ ಸದ್ಯ ನೆನಪಿಟ್ಟುಕೊಳ್ಳಿ.
ಈ ಸಲ ಗೆಲುವು ಟ್ರಂಪ್ಗೆ ಸುಲಭವಾಗಿರಲಿಲ್ಲ. ಬೈಡನ್ ತಾನು ಝಿಯೊನಿಸ್ಟ್ ಎಂದು ಯಹೂದಿಗಳ ಸಭೆಯಲ್ಲಿ ಘೋಷಿಸಿದಾಗಲೇ ಅಮೆರಿಕನ್ನರಲ್ಲಿ ಬಹುತೇಕರು ವಿರೋಧ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದರು. ಅವರಿಗೆ ಝಿಯೊನಿಸ್ಟಲ್ಲ ಅಮೆರಿಕನ್ ಬೇಕಾಗಿತ್ತು ಎಂಬುದು ಅವರ ಅಭಿಮತವಾಗಿತ್ತು.
ಕಮಲಾ ಹ್ಯಾರಿಸ್ರನ್ನು ಡೆಮಾಕ್ರಾಟರು ಮುಂದೆ ತಂದಾಗ ಅವರಿಗೆ ಅವರು ಮಹಿಳೆಯಾಗಿರುವುದು, ಕಪ್ಪು ಬಣ್ಣದವರಾಗಿರುವುದು, ಇಂಡಿಯನ್ ಮೂಲದವರಾಗಿರುವುದು ಲಾಭ ಮಾಡಬಹುದು ಎಂದಿತ್ತು.
ವೃದ್ಧರಾದ ಬೈಡನ್ ವಿರುದ್ಧ ಇರುವ ಆಕ್ರೋಶಗಳೆಲ್ಲ ತೊಳೆದು ಹೋಗಬಹುದು ಎಂದು ಭಾವಿಸಿರಬಹುದು. ಟ್ರಂಪ್ ಅನ್ನು ಗೆಲ್ಲಿಸಿದವರಿಗೂ ಸೋಲಿಸಲು ನೆರವು ನೀಡಿದವರಿಗೂ ಇಸ್ರೇಲಿನ ಕುರಿತು ಅಮೆರಿಕದ ನೀತಿ ಬದಲಾಗುವುದಿಲ್ಲ ಎಂದು ಚೆನ್ನಾಗಿಯೇ ಗೊತ್ತಿತ್ತು. ಆದರೆ ಅದೊಂದು ವಿಷಯವನ್ನು ಹೊರತುಪಡಿಸಿ ಅಮೆರಿಕನ್ನರು ಯೋಚಿಸಿರಬಹುದು. ಟ್ರಂಪ್ಗೂ 78 ವರ್ಷ ವಯಸ್ಸಾಗಿದೆ. ಒಮ್ಮೆ ಸೋತು ಮತ್ತೊಮ್ಮೆ ಗೆದ್ದ ದಾಖಲೆಯನ್ನು 127 ವರ್ಷಗಳ ನಂತರ ಮೊತ್ತ ಮೊದಲ ಬಾರಿ ಟ್ರಂಪ್ ತಮ್ಮ ಹೆಸರಿಗೆ ಬರೆಯಿಸಿಕೊಂಡರು.
ಏನಿದ್ದರೂ ಮಿಚಿಗನ್ನ ಮುಸ್ಲಿಮರು ಇರಿಸಿದ ಭರವಸೆಯನ್ನು ಟ್ರಂಪ್ ನಿಜ ಮಾಡುತ್ತಾರಾ? ಟ್ರಂಪ್ರನ್ನು ಮುಸ್ಲಿಮರೇ ಗೆಲ್ಲಿಸಿದ್ದೆಂದು ಹೇಳುವಾಗಲೂ ಅಮೆರಿಕದಲ್ಲಿ ಮುಸ್ಲಿಮರಲ್ಲ ಕ್ರೈಸ್ತರೇ ಹೆಚ್ಚಿರುವುದು ಎಂಬುದನ್ನು ಮರೆಯಲಾಗದು. ಆದರೆ ಮುಸ್ಲಿಮರು ಈ ಸಲ ಡೆಮಾಕ್ರಾಟಿಕ್ ಪಾರ್ಟಿಗೆ ಕೈಕೊಟ್ಟದ್ದು ಖಂಡಿತ ಟ್ರಂಪ್ ಗೆಲುವಿನಲ್ಲಿ ದೊಡ್ಡ ಪಾತ್ರವನ್ನು ನಿಭಾಯಿಸಿದೆ. ಅವರು ಮಧ್ಯಪ್ರಾಚ್ಯದ ನೀತಿಯಲ್ಲಿ ಬದಲಾವಣೆ ತಂದರೆ ಯುದ್ಧ ನಿಲ್ಲಿಸುವೆ ಎಂದು ಈಗ ಹೇಳುವ ಟ್ರಂಪ್ ಅಮೆರಿಕ ಫೆಲಸ್ತೀನಿಗೆ ಕೊಡುವ ನೆರವನ್ನೇ ತಡೆಹಿಡಿದವರೆಂಬುದನ್ನು ಮರೆಯಬಾರದು. ಜೆರುಸಲೇಂ ಅನ್ನು ಇಸ್ರೇಲಿನ ರಾಜಧಾನಿ ಮಾಡಿ ಇಸ್ರೇಲಿನ ಬುಟ್ಟಿಗೆ ಹಾಕಿದವರು. ಇವೆಲ್ಲವನ್ನೂ ಒಮ್ಮೆ ಯುದ್ಧ ನಿಲ್ಲಲಿ ಫೆಲೆಸ್ತೀನಿಯರ ಜೀವ ಉಳಿಯಲಿ ಎಂಬುದಕ್ಕಾಗಿ ಹೊಟ್ಟೆಯೊಳಗೆ ಹಾಕಿಕೊಂಡು ಅರಗಿಸಬಹುದು. ಅಂದರೆ ಜಗತ್ತು ಕ್ಷಮಿಸಬಹುದೆಂದರ್ಥ. ಅಮಾಯಕ ಫೆಲೆಸ್ತೀನಿಯರ ಜೀವ ಉಳಿಯಬೇಕು, ಅದುವೇ ಈಗ ಮೊದಲ ಗುರಿ ಜಗತ್ತಿನದ್ದು. ಯುದ್ಧ ನಿಲ್ಲಲಿ. ಮಾನವ ಜೀವ ಬದುಕಲಿ.












