ಸನ್ಮಾರ್ಗ ವಾರ್ತೆ
ಪೂರ್ವ ಸಿಂಗ್ಭೂಮ್: ಜಾರ್ಖಂಡ್ನ ಪೂರ್ವ ಸಿಂಗ್ಭೂಮ್ ಜಿಲ್ಲೆಯಲ್ಲಿ ಮೇಕೆ ಕದ್ದ ಆರೋಪದ ಮೇಲೆ ಇಬ್ಬರು ಯುವಕರನ್ನು ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದೆ.
ಶನಿವಾರ ಬೆಳಗ್ಗೆ ಜಮ್ಶೆಡ್ಪುರದ ಚಕುಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸೋನಾಹಟು ಪಂಚಾಯತ್ ವ್ಯಾಪ್ತಿಯ ಜೋತಿಶಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದವರನ್ನು ಕಿನ್ಶುಕ್ ಬೆಹ್ರಾ (35) ಮತ್ತು ಬೋಲಾನಾಥ್ ಮಹತೋ (26) ಎಂದು ಪೊಲೀಸರು ಗುರುತಿಸಿದ್ದು, ಪೊಲೀಸರ ಪ್ರಕಾರ, ಕಿನ್ಶುಕ್ ಬೆಹ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಬೋಲಾನಾಥ್ ಮಹತೋ ಜಮ್ಶೆಡ್ಪುರದ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿ ಸಾವನ್ನಪ್ಪಿದ್ದಾರೆ.
ಮೇಕೆಗಳ ಮಾಲೀಕ ಹರಗೋವಿಂದ ನಾಯ್ಕ ಅವರು, ಮೇಕೆಯ ಕೊರಳಿಗೆ ಗಂಟೆ ಕಟ್ಟಿದ ಸದ್ದು ಕೇಳಿ ಎಚ್ಚರಗೊಂಡು ನೋಡಿದಾಗ, ಇಬ್ಬರು ಯುವಕರು ಬೈಕ್ನಲ್ಲಿ ಮೇಕೆಗಳನ್ನು ಕದಿಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ನಂತರ, ಗ್ರಾಮಸ್ಥರು ಆರೋಪಿಗಳನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ.
ಪೂರ್ವ ಸಿಂಗ್ಭೂಮ್ ಜಿಲ್ಲಾ ಪೊಲೀಸ್ ಅಧಿಕಾರಿ ರಿಷಬ್ ಗಾರ್ಗ್ ಅವರು, “ಇಬ್ಬರು ವ್ಯಕ್ತಿಗಳು ಮೇಕೆಗಳನ್ನು ಕದಿಯಲು ಗ್ರಾಮಕ್ಕೆ ಪ್ರವೇಶಿಸಿದರು. ಮಾಲೀಕರು ಅವರನ್ನು ಹಿಡಿದಿದ್ದು, ನಂತರ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಅವರಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ,” ಎಂದು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದ್ದು, ಉಳಿದವರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ಗುರುತಿಸಲಾದವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾರೂ ಯಾವುದೇ ದೂರು ದಾಖಲಿಸಿಲ್ಲ. ಆದರೆ, ದಾಳಿಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












