✍️ ಇಷಲ್
ಉಡುಪಿ ಜಿಲ್ಲೆಯ ಬಹು ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯದ ಸುತ್ತ ವಿವಾದ ಒಂದು ಹುಟ್ಟಿಕೊಂಡಿದೆ. ಪರ ವಿರುದ್ಧ ಚರ್ಚೆಗಳಾಗುತ್ತಿದೆ. ಕರಾವಳಿಯ ಬಹುಪ್ರಸಿದ್ಧ ಮಠವೊಂದು ಓರ್ವ ಮುಸ್ಲಿಂ ಯುವತಿಗೆ ರಾತ್ರಿ ವೇಳೆ ವಸತಿಗೃಹ ನೀಡದ ಆರೋಪವನ್ನು ಎದುರಿಸುತ್ತಿದೆ. ಇದೇ ವೇಳೆ ಮಠದ ವತಿಯಿಂದ ಸ್ಪಷ್ಟೀಕರಣವೂ ಬಂದಿದೆ.
ಬಳ್ಳಾರಿ ಜಿಲ್ಲೆಯ ಮುಸ್ಲಿಂ ಯುತಿಯೊಬ್ಬರು ತಮ್ಮ ಹಿಂದೂ ಸ್ನೇಹಿತ ಶಕುಂತಲಾ ಮತ್ತು ಅವರ ಕುಟುಂಬದೊಂದಿಗೆ ಉಡುಪಿಗೆ ಪ್ರವಾಸಕ್ಕೆ ಬಂದಿದ್ದರು. ಆ ಕುಟುಂಬ ಶ್ರೀ ಕೃಷ್ಣ ಮಠದಲ್ಲಿ ಪ್ರಾರ್ಥನೆ ಮಾಡಿದೆ. ಹೀಗೆ ಉಡುಪಿಯನ್ನು ಸುತ್ತಿಕೊಂಡು ರಾತ್ರಿ 8 ಗಂಟೆಯ ಸಮಯಕ್ಕೆ ಶ್ರೀ ಕೃಷ್ಣ ಮಠದ ಹತ್ತಿರದ ಲಾಡ್ಜ್ ನಲ್ಲಿ ರಾತ್ರಿ ಉಳಿಯಲು ನಿರ್ಧರಿಸಿದೆ.
ಇವರ ಆಧಾರ್ ಕಾರ್ಡನ್ನು ಲಾಡ್ಜ್ ನ ಸಿಬ್ಬಂದಿಗಳು ಪರಿಶೀಲಿಸಿದ್ದಾರೆ. ಇವರಲ್ಲಿ ಓರ್ವ ಯುವತಿ ಮುಸ್ಲಿಂ ಎಂದು ಗೊತ್ತಾದ ಬಳಿಕ ಆಕೆಗೆ ವಸತಿಯನ್ನು ನಿರಾಕರಿಸಿದೆ.
ಇದು ಆರೋಪ ಈ ಯುವತಿ ನಮ್ಮ ಮೊಮ್ಮಗಳಂತೆ. ರಾತ್ರಿ ಹೊತ್ತಲ್ಲಿ ಅಪರಿಚಿತ ನಗರದಲ್ಲಿ ಒಬ್ಬಳೇ ಎಲ್ಲಿಗೆ ಹೋಗೋದು, ಆಕೆಗೂ ವಸತಿಯ ವ್ಯವಸ್ಥೆ ಮಾಡಿ ಎಂದು ಈ ಕುಟುಂಬ ಸಿಬ್ಬಂದಿಗಳಲ್ಲಿ ವಿನಂತಿಸಿದೆ ಎಂದು ಹೇಳಲಾಗಿದೆ. ಆದರೂ ಸಿಬ್ಬಂದಿಗಳ ಮನಸ್ಸು ಕರಗಲಿಲ್ಲ. ಅವರು ಈ ಯುವತಿಗೆ ವಸತಿ ನೀಡಲು ನಿರಾಕರಿಸಿದರು ಎಂದು ಹೇಳಲಾಗಿದೆ.
ಇದೇ ವೇಳೆ ಶ್ರೀ ಕೃಷ್ಣ ಮಠದಿಂದ ಸ್ಪಷ್ಟೀಕರಣವೂ ಬಂದಿದೆ. ಮಠದ ದಿವಾನ ಉದಯಕುಮಾರ್ ಸರಳತ್ತಾಯ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ :
ಬಿರ್ಲಾ ಚೌಲ್ಟ್ರಿ ಎಂಬ ಈ ಲಾಡ್ಜ್ ಮಠದ ನಿಯಂತ್ರಣದಲ್ಲಿ ಇಲ್ಲ. ಅದನ್ನು ಸ್ವತಂತ್ರ ಟ್ರಸ್ಟ್ ನಿರ್ವಹಿಸುತ್ತಿದೆ.. ಮಠದ ಹತ್ತಿರ ಇದೆ ಎಂಬ ಕಾರಣಕ್ಕೆ ಮಠವನ್ನು ಹೊಣೆಗಾರರನ್ನಾಗಿ ಮಾಡೋದು ಸರಿಯಲ್ಲ ಮತ್ತು ಮಠದ ಸೆಕ್ಯುಲರ್ ಚಿತ್ರಣವನ್ನು ಕೆಡಿಸುವ ಪ್ರಯತ್ನ ಸರಿಯಲ್ಲ ಎಂದವರು ಹೇಳಿದ್ದಾರೆ.
ಮಠದ ಹತ್ತಿರದ ಲಾಡ್ಜ್ ಎಂಬ ನೆಲೆಯಲ್ಲಿ ಅಲ್ಲಿಗೆ ವಸತಿಯನ್ನು ಕೇಳಿಕೊಂಡು ಹೋಗುವವರು ಬಹುತೇಕ ಮಠಕ್ಕೆ ಬಂದವರೇ ಆಗಿರುತ್ತಾರೆ . ದೂರದೂರಿನಿಂದ ಈ ಮಠಕ್ಕೆ ಭಕ್ತರು ಬರುತ್ತಾರೆ. ರಾತ್ರಿ ವೇಳೆ ಉಳಿದುಕೊಳ್ಳಲು ಹೋಗುತ್ತಾರೆ.. ಹೀಗೆ ದೂರದಿಂದ ಓರ್ವ ಮುಸ್ಲಿಂ ಯುವತಿ ಬಂದರೆ ಮತ್ತು ಮಠವನ್ನು ಸಂದರ್ಶಿಸಿ ರಾತ್ರಿ ಉಳ್ಕೊಬೇಕು ಎಂದು ಈ ಲಾಡ್ಜ್ ಹತ್ತಿರ ಹೋದರೆ ಅದಕ್ಕೆ ವಿರೋಧ ವ್ಯಕ್ತಪಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಕರಾವಳಿಯಲ್ಲಿ ಹುಟ್ಟಿಕೊಂಡಿದೆ. ಇತರ ಧರ್ಮದವರನ್ನು ದೂರ ತಳ್ಳುವ ಈ ರೀತಿಯ ನಿಯಮಗಳು ಮಠದ ವರ್ಚಸ್ಸಿಗೆ ಹಾನಿ ಮಾಡಲಾರದೆ ಎಂಬ ಪ್ರಶ್ನೆಯು ಹುಟ್ಟಿಕೊಂಡಿದೆ.
ಉಡುಪಿ ಮಠಕ್ಕೆ ಬಹಳ ದೊಡ್ಡ ಇತಿಹಾಸ ಇದೆ. ನೂರು ವರ್ಷಗಳ ಹಿಂದೆ ಇದೇ ಉಡುಪಿ ಕೃಷ್ಣ ಮಠಕ್ಕೆ ಹಾಜಿ ಅಬ್ದುಲ್ಲಾ ಎಂಬ ಮಹಾನ್ ಮನುಷ್ಯ ನೀಡಿರುವ ಕೊಡುಗೆಯನ್ನು ಈಗಲೂ ಉಡುಪಿಯಲ್ಲಿ ಸ್ಮರಿಸುವವರು ಇದ್ದಾರೆ. ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯಕ್ಕೆ ಅವರಿಗೆ ಪ್ರತ್ಯೇಕ ಆಮಂತ್ರಣವನ್ನೇ ನೀಡಲಾಗುತ್ತಿತ್ತು. ಈ ಹಿಂದೆ ನಿಧನರಾದ ಪೇಜಾವರ ಶ್ರೀ ಅವರು ಮಠದ ಒಳಗೆ ಇಫ್ತಾರ್ ಕಾರ್ಯಕ್ರಮವನ್ನು ನಡೆಸಿದ್ದರು. ಆ ಮೂಲಕ ಸೌಹಾರ್ದದ ಸಂಕೇತವನ್ನು ಸಾರಿದ್ದರು. ಮುಸ್ಲಿಮರನ್ನು ಮಠದೊಳಗೆ ಆಮಂತ್ರಿಸಿ, ಕಾರ್ಯಕ್ರಮ ನಡೆಸುವಷ್ಟು ವಿಶಾಲ ಹೃದಯಾಗಿ ಕಾಣಿಸಿಕೊಂಡಿದ್ದರು.
ಇದೀಗ ಮಠದ ಲಾಡ್ಜ್ ಅದಕ್ಕೆ ವಿರುದ್ಧವಾಗಿ ವರ್ತಿಸಿರುವುದು ವಿಷಾದಕರವಾಗಿದೆ ಎಂದು ಜನರು ಹೇಳುತ್ತಿದ್ದಾರೆ.












