✍️ ಮಿಷಲ್
ರಿಪೋರ್ಟರ್ಸ್ ಕಲೆಕ್ಟಿವ್ ನಡೆಸಿದ ತನಿಖಾ ವರದಿಯನ್ನು ನೋಡಿದರೆ ಚುನಾವಣಾ ಆಯೋಗ ಮತ್ತು ಬಿಜೆಪಿ ನಡುವಿನ ಕಳ್ಳಾಟ ಎಷ್ಟು ಆಘಾತಕಾರಿಯಾಗಿದೆ ಮತ್ತು ಎಷ್ಟು ಆಳವಾಗಿದೆ ಅನ್ನೋದು, ಗೊತ್ತಾಗುತ್ತದೆ. ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಬಿಜೆಪಿಯ ಜೊತೆ ಸೇರಿ ಚುನಾವಣಾ ಆಯೋಗ ಭಾರಿ ಷಡ್ಯಂತ್ರ ನಡೆಸಿದೆ ಎಂಬ ಸಂದೇಹ ಇದೀಗ ದಿ ರಿಪೋರ್ಟರ್ಸ್ ಕಲೆಕ್ಟಿವ್ ತನಿಖಾ ವರದಿಯಿಂದ ಬಹಿರಂಗವಾಗಿದೆ.
ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಸಾರ್ವಜನಿಕರು ಫಾರ್ಮ್ ಆರರ ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ಪೈಕಿ ವೆಬ್ಸೈಟ್ನಲ್ಲಿ ಪ್ರದರ್ಶಿಸಲಾದ ಒಟ್ಟು ಅರ್ಜಿಗಳ ಸಂಖ್ಯೆ 71 ಲಕ್ಷದ 38,000. ಆದರೆ ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಗೆ ಸೇರಿಸಿದ ಒಟ್ಟು ಮತದಾರರ ಸಂಖ್ಯೆ 84 ಲಕ್ಷದ 30,000. ಅಂದರೆ ಅರ್ಜಿ ಸಲ್ಲಿಸಿದವರಿಗಿಂತ 16 ಲಕ್ಷದ ಹದಿನೆಂಟು ಸಾವಿರಕ್ಕೂ ಹೆಚ್ಚು ಮತದಾರರನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದೆ.
ಜನಪ್ರತಿನಿಧಿ ಕಾಯ್ದೆ ಮತ್ತು ಚುನಾವಣಾ ನಿಯಮಗಳ ಪ್ರಕಾರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಬರುವ ಫಾರ್ಮ್ ಆರರ ವಿವರಗಳು ಮತ್ತು ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅವರ ವೆಬ್ಸೈಟ್ನಲ್ಲಿ ಪಾರದರ್ಶಕವಾಗಿ ಪ್ರಕಟಿಸಬೇಕು. ಆದರೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವ ಈ 16,18,000 ಮತದಾರರ ಅರ್ಜಿಗಳ ಯಾವುದೇ ವಿವರಗಳು ಅಥವಾ ಪಟ್ಟಿ ಉತ್ತರ ಪ್ರದೇಶದ ಚುನಾವಣಾ ಅಧಿಕಾರಿಯ ವೆಬ್ಸೈಟ್ನಲ್ಲಿ ಲಭ್ಯವಿಲ್ಲ. ಅಂದರೆ ಅರ್ಜಿ ಸಲ್ಲಿಸದೆ ಇಷ್ಟು ಲಕ್ಷ ಮಂದಿ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ಅನುಮಾನಿಸಬೇಕಾಗುತ್ತದೆ. ಇದು ಕಾಯ್ದೆಗೆ ವಿರುದ್ಧ.. ಚುನಾವಣಾ ಆಯೋಗದ ನಿಯಮಾವಳಿಗಳಿಗೂ ವಿರುದ್ಧ.
ಆಯೋಗದ ನಿಯಮದ ಪ್ರಕಾರ ಫಾರ್ಮ್ ಆರರ ಮೂಲಕ ಅಧಿಕೃತವಾಗಿ ಅರ್ಜಿ ಸಲ್ಲಿಸದೆ ಯಾರ ಹೆಸರನ್ನೂ ಮತದಾರರ ಪಟ್ಟಿಗೆ ಸೇರಿಸುವ ಹಾಗಿಲ್ಲ. ಅರ್ಜಿ ಸಲ್ಲಿಸಿದ ಸಂಖ್ಯೆಗಿಂತ ಸೇರ್ಪಡೆಯಾದ ಮತದಾರರ ಸಂಖ್ಯೆ ಹೆಚ್ಚಿರಲು ಕಾನೂನಿನಲ್ಲಿ ಅವಕಾಶ ಇಲ್ಲ.
ಇದೇ ವೇಳೆ ಈ ವ್ಯತ್ಯಾಸದ ಬಗ್ಗೆ ದಿ ರಿಪೋರ್ಟರ್ಸ್ ಕಲೆಕ್ಟಿವ್ ಪತ್ರಕರ್ತರು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ಅವರನ್ನು ಪ್ರಶ್ನಿಸಿದ್ದಾರೆ. ಆದರೆ ಅವರು ಸೂಕ್ತ ವಿವರಣೆ ನೀಡಿಲ್ಲ ಎಂದು ಹೇಳಲಾಗಿದೆ. ನಿಮ್ಮ ಸಂಶಯಗಳನ್ನು ನಿವಾರಿಸಲು ನಾವು ಕನ್ಸಲ್ಟೆನ್ಸಿ ಸೇವೆ ನೀಡುತ್ತಿಲ್ಲ ಎಂದು ಹೇಳಿ ಕರೆ ಕಡಿತಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ಆಯೋಗವು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ನಮ್ಮ ಅಂಕಿ ಅಂಶಗಳಲ್ಲಿ ಯಾವುದೇ ಲೋಪ ಇಲ್ಲ. ನಿಮ್ಮ ವಿಶ್ಲೇಷಣೆಯಲ್ಲಿ ವ್ಯತ್ಯಾಸ ಇದೆ ಎಂದು ಹೇಳಿದೆ.
ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಅಲ್ಲಿಯ ಮತದಾರರ ಪಟ್ಟಿಯನ್ನು ಕಣ್ಣಿಗೆ ಎಣ್ಣೆ ಬಿಟ್ಟು ನೋಡಲಾಗುತ್ತಿದೆ. ಯೋಗಿ ಆದಿತ್ಯನಾಥ್ ಸರಕಾರ ಮತ್ತೊಮ್ಮೆ ಆರಿಸಿ ಬರುವುದಕ್ಕೆ ಬಿಜೆಪಿ ಪಣತೊಟ್ಟಿದೆ. ಒಂದು ವೇಳೆ ಯೋಗಿ ಸರಕಾರ ಪತನವಾದರೆ 2029ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರಕಾರ ಪತನಗೊಳ್ಳುವುದು ನಿಶ್ಚಿತ ಎಂಬ ಅಭಿಪ್ರಾಯ ಇದೆ. ಈ ಹಿನ್ನೆಲೆಯಲ್ಲಿ ಸಾಲು ಸಾಲು ಪ್ರಶ್ನೆಗಳು ಎದ್ದಿದ್ದು ಸೂಕ್ತ ಉತ್ತರ ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ.
ಮುಂದಿನ ಚುನಾವಣೆಯನ್ನು ಗೆಲ್ಲೋದಕ್ಕಾಗಿ 16 ಲಕ್ಷಕ್ಕಿಂತ ಅಧಿಕ ನಕಲಿ ಮತದಾರರನ್ನು ಸೇರಿಸಿ ಆ ಹೆಸರಿನ ಮೂಲಕ ಪಕ್ಷಕ್ಕೆ ಪೂರಕವಾಗಿ ಮತ ಚಲಾಯಿಸುವ ಷಡ್ಯಂತ್ರ ಒಂದು ನಡೆದಿದೆಯಾ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.












