ಸನ್ಮಾರ್ಗ ವಾರ್ತೆ
ಮಲಪ್ಪುರಂ,ಸೆ.18: ಉಮ್ರಾ ವೀಸಾ ಸ್ಟಾಂಪಿಂಗ್ ಶುಲ್ಕ ಹೆಚ್ಚಳ ಮಾಡಿದ್ದರಿಂದ ಉಮ್ರಾ ಮಾಡುವವರ ಸಂಖ್ಯೆ ಇಳಿಮುಖಗೊಂಡಿದೆ ಎಂದು ವರದಿಯಾಗಿದೆ.
ಉಮ್ರಾ ಸೀಝನ್ ಆರಂಭಗೊಂಡು ಕೆಲವೇ ದಿನಗಳಲ್ಲಿ ಸ್ಟಾಂಪಿಂಗ್ ಶುಲ್ಕದಲ್ಲಿ ಭಾರೀ ಹೆಚ್ಚಳವನ್ನು ಸೌದಿ ಅರೇಬಿಯ ಸರಕಾರ ಮಾಡಿದೆ. ವೀಸಾ ನಿಬಂಧನೆಗಳನ್ನು ಕೂಡ ಕಟ್ಟುನಿಟ್ಟಾಗಿಸಿದೆ. ಹೊಸ ಸೀಝನ್ ಆರಂಭದ ನುಗ್ಗಾಟ ಈ ಬಾರಿ ಇಲ್ಲ ಎಂದು ಟ್ರಾವೆಲ್ ಏಜನ್ಸಿಗಳು ಹೇಳುತ್ತಿವೆ. ಸರಾಸರಿ 55,000ರೂಪಾಯಿ ಉಮ್ರಾಕ್ಕೆ ಟ್ರಾವೆಲ್ಸ್ಗಳು ಈ ಹಿಂದೆ ಪಡೆಯುತ್ತಿದ್ದರು. ಶುಲ್ಕ ಹೆಚ್ಚಳದಿಂದಾಗಿ ಹತ್ತು ಸಾವಿರ ರೂಪಾಯಿಯಷ್ಟು ಈ ಬಾರಿ ಉಮ್ರಾಯಾತ್ರೆಗೆ ಹೆಚ್ಚು ತೆರಬೇಕಾದ ಪರಿಸ್ಥಿತಿ ಇದೆ.
ವೀಸಾ ಸ್ಟಾಂಪಿಂಗ್ ಐವತ್ತು ರಿಯಾಲ್ನಿಂದ 300ರಿಯಾಲ್ಗೆ ಏರಿಕೆಗೊಂಡಿತು. ಕಳೆದ ಸೀಝನ್ನ ಕೊನೆಯಲ್ಲಿ ಉಮ್ರಾ ದರ ಹೆಚ್ಚಿಸಿದ ಹೊಸ ಕ್ರಮ ಜರಗಿಸಲಾಗಿದೆ. ವೀಸ ರೇಟಿನಲ್ಲಿ ಆರು ಸಾವಿರ ರೂಪಾಯಿ ಹೆಚ್ಚಳವಾಗಿದೆ. ಇತರ ದರಗಳನ್ನೆಲ್ಲ ಸೇರಿಸುವಾಗ ಇದಕ್ಕಿಂತ ಹೆಚ್ಚಾಗುತ್ತದೆ. ವೀಸಾ ಸಿಗಬೇಕಿದ್ದರೆ ಯಾತ್ರಿಕರು ಉಳಿದುಕೊಳ್ಳುವ ಹೊಟೇಲು, ಮಕ್ಕ ಮದೀನದಲ್ಲಿ ಸಂಚರಿಸುವ ವಾಹನದ ಬಾಡಿಗೆ ಮುಂಚಿತವಾಗಿ ಭರಿಸಬೇಕು. ಸೌದಿ ಸರಕಾರ ಪೋರ್ಟಲ್ನಲ್ಲಿ ನೋಂದಾಯಿಸಿದ ಹೊಏಲ್ಗಳಲ್ಲಿ ಮಾತ್ರ ಉಳಿದುಕೊಳ್ಳಬಹುದು.












