ತಿರುವನಂತಪುರಂ: ಎಸ್‌ಎಫ್ಐ ದಾಂಧಲೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯಿಂದ ಕಾಲೇಜು ಬದಲಾವಣೆಗಾಗಿ ಮನವಿ

0
634

ತಿರುವನಂತಪುರಂ,ಮೇ 14: ಇಲ್ಲಿನ ಯುನಿವರ್ಸಿಟಿ ಕಾಲೇಝಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರಥಮ ವರ್ಷ ಪದವಿ ವಿದ್ಯಾರ್ಥಿನಿ ತನ್ನ ಬಂಧುಗಳ ಜೊತೆಗೆ ಬಂದು ಕಾಲೇಜು ಬದಲಾವಣೆಗೆ ಮನವಿ ಸಲ್ಲಿಸಿದ್ದಾಳೆ. ಪ್ರಿನ್ಸಿಪಾಲ್ ಮತ್ತು ಕೇರಳ ವಿಶ್ವವಿದ್ಯಾನಿಲಯ ಉಪಕುಲಪತಿಗಳಿಗೆ ಟಿಸಿ ಕೊಡಲು ಅರ್ಜಿ ಸಲ್ಲಿಸಿದ್ದು ಹೆದರಿಕೆಯಿಂದ ಕಾಲೇಜು ಬದಲಾಯಿಸುತ್ತಿರುವುದಾಗಿ ವಿದ್ಯಾರ್ಥಿನಿಯ ಜೊತೆ ಬಂದ ಬಂಧುಗಳು ಮಾಧ್ಯಮಳಿಗೆ ತಿಳಿಸಿದ್ದಾರೆ. ವಿದ್ಯಾರ್ಥಿನಿಗೆ ಎಲ್ಲ ಸಂರಕ್ಷಣೆ ಕೊಡುತ್ತೇವೆ ಎಂದು ಪ್ರಿನ್ಸಿಪಾಲ್ ಮತ್ತು ಅಧ್ಯಾಪಕರು ಭರವಸೆ ಕೊಟ್ಟರು. ಆದರೆ ವಿದ್ಯಾರ್ಥಿನಿಯ ಭವಿಷ್ಯವನ್ನು ಮುಂದಿಟ್ಟುಕೊಂಡು ದೂರನ್ನು ಮುಂದುವರಿಸಿಲ್ಲ ಎಂದು ಅವರು ಹೇಳಿದರು.

ಎಸ್‍ಎಫ್‍ಐ ದಾಂಧಲೆಯಿಂದ ಕಲಿಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಯುನಿವರ್ಸಿಟಿ ಕಾಲೇಜಿನ ಪ್ರಥಮ ವರ್ಷ ಕೆಮಿಸ್ಟ್ರಿ ಪದವಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಹೆತ್ತವರು ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ ತನಿಖೆ ನಡೆದು ಕ್ಯಾಂಪಸ್‍ನ ಲೇಡಿಸ್ ರೂಮ್‍ನಲ್ಲಿ ರಕ್ತದ ಮಡುವಿನಲ್ಲಿ ವಿದ್ಯಾರ್ಥಿನಿ ಪತ್ತೆಯಾಗಿದ್ದಳು. ಎಸ್‍ಎಫ್‍ಐ ನಾಯಕರು ಪರೀಕ್ಷಾ ಸಮಯದಲ್ಲಿ, ಕ್ಲಾಸಿನ ಸಮಯದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಲವಂತ ಪಡಿಸುತ್ತಾರೆ. ತರಗತಿಗೆ ಹಾಜರಿಯಿಲ್ಲದ್ದರಿಂದ ಇಂಟರ್ನಲ್ ಮಾರ್ಕ್ಸ್ ಕಡಿಮೆ ಬಂದಿದೆ. ಇದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಎರಡು ಪುಟಗಳ ಪತ್ರ ಬರೆದು ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಳು.