ಪ್ರಧಾನಿಯನ್ನು ಅಪಮಾನಿಸುವ ವೀಡಿಯೊ: ಸುಂದರ ಪಿಚೈ ವಿರುದ್ಧ ಕೇಸು ದಾಖಲಿಸಿ, ಬಳಿಕ ವಜಾ ಮಾಡಿದ ಉ. ಪ್ರ. ಪೊಲೀಸರು

0
426

ಸನ್ಮಾರ್ಗ ವಾರ್ತೆ

ವಾರಣಾಸಿ:ವಿಡಿಯೋವೊಂದರಲ್ಲಿ ಪ್ರಧಾನಿಯನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು 17 ಮಂದಿ ವಿರುದ್ಧ ಕೇಸು ದಾಖಲಿಸಿದ ಉತ್ತರಪ್ರದೇಶದ ವಾರಣಾಸಿಯ ಪೊಲೀಸರು, ಬಳಿಕ ವಜಾಗೊಳಿಸಿದ ಬಗ್ಗೆ ವರದಿಯಾಗಿದೆ.

ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಪಮಾನಿಸಿದ ವೀಡಿಯೊ ಪ್ರಚಾರ ಮಾಡಿದ್ದಾರೆ ಎಂದು ಪ್ರಕರಣ ಹಾಕಲಾಗಿತ್ತು. ವೀಡಿಯೊ ಪ್ರಚಾರದಲ್ಲಿ ಗೂಗಲ್ ಮುಖ್ಯಸ್ಥರಾದ ಸುಂದರ್ ಪಿಚೈ ಮತ್ತು ಇತರ ಮೂವರ ಪಾತ್ರ ಇಲ್ಲ ಎಂದು ಎಫ್‍ಐಆರ್ ನಿಂದ ಹೆಸರನ್ನು ತೆರವುಗೊಳಿಸಲಾಗಿದೆ ಎಂದು ಪಿಟಿಐಗೆ ಹಿರಿಯ ಪೊಲೀಸಧಿಕಾರಿ ತಿಳಿಸಿದ್ದಾರೆ.

ವಾಟ್ಸಪ್ ಗ್ರೂಪ್‍ಗಳಲ್ಲಿ ಹಾಗೂ ಬಳಿಕ ಯೂಟ್ಯೂಬ್‍ನಲ್ಲಿ ವೀಡಿಯೊವನ್ನು ವಿರೋಧಿಸಿದ್ದಕ್ಕೆ ತನ್ನ ಮೊಬೈಲ್ ಗೆ 8,500 ಬೆದರಿಕೆ ಕರೆಗಳು ಬಂದಿವೆ ಎಂದು ಸ್ಥಳೀಯರೊಬ್ಬರು ನೀಡಿದ ದೂರಿನಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಯೂಟ್ಯೂಬ್‍ನಲ್ಲಿ ಐದು ಲಕ್ಷ ಮಂದಿ ಇದನ್ನು ನೋಡಿದ್ದಾರೆ.

ಸುಂದರ್ ಪಿಚೈ, ಸಜ್ಞಾನ್ ಕುಮಾರ್ ಗುಪ್ತ ಸಹಿತ ಮೂವರು ಗೂಗಲ್ ಇಂಡಿಯಾದ ಮುಖ್ಯಸ್ಥರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಗೂಗಲ್ ಮುಖ್ಯಸ್ಥರಲ್ಲದೆ ಗಾಝಿಪುರದ ಜಿಲ್ಲೆಯ ಸಂಗೀತಗಾರರು, ರೆಕಾರ್ಡಿಂಗ್ ಸ್ಟುಡಿಯೊ, ಮ್ಯೂಸಿಕ್ ಲೆಬಲ್ ಕಂಪೆನಿ ಕಾರ್ಯಕರ್ತರ ಹೆಸರು ಎಫ್‍ಐಆರ್ ನಲ್ಲಿ ಹಾಕಲಾಗಿದೆ. ಫೆಬ್ರುವರಿ 6ರಂದು ಉತ್ತರಪ್ರದೇಶದ ಬೆಲುಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಇವರ ವಿರುದ್ಧ ಕ್ರಿಮಿನಲ್ ಅಪರಾಧಗಳನ್ನು ಹೊರಿಸಲಾಗಿದೆ.