ಸನ್ಮಾರ್ಗ ವಾರ್ತೆ
ಸೌದಿ ಅರೇಬಿಯಾಕ್ಕೆ 100 ಬಿಲಿಯನ್ ಡಾಲರ್ ಗಿಂತಲೂ ಅಧಿಕ ಮೊತ್ತದ ಆಯುಧ ಮಾರಾಟಕ್ಕೆ ಅಮೆರಿಕ ಸಿದ್ಧವಾಗಿದೆ ಬೈಡನ್ ಅಧ್ಯಕ್ಷತೆಯ ಅವಧಿಯಲ್ಲಿ ಸೌದಿಗೆ ಯಾವುದೇ ಆಯುಧ ಮಾರಾಟ ನಡೆದಿರಲಿಲ್ಲ. ಇದೀಗ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಿಗೆ ಸೌದಿಗೆ ಭಾರಿ ಪ್ರಮಾಣದಲ್ಲಿ ಆಯುಧ ಮಾರಾಟಕ್ಕೆ ಮುಂದಾಗಿದ್ದಾರೆ. ಮುಂದಿನ ತಿಂಗಳು ಸೌದಿಗೆ ಭೇಟಿ ನೀಡಲಿರುವ ಟ್ರಂಪ್ ಜೊತೆ ಆಯುಧ ಕಂಪನಿಗಳ ಮುಖ್ಯಸ್ಥರು ಕೂಡ ಇರುತ್ತಾರೆ. ಇದಕ್ಕೆ ಬದಲಾಗಿ ಸೌದಿ ಅರೇಬಿಯಾ ಅಮೆರಿಕಕ್ಕೆ ಏನನ್ನು ನೀಡಲಿದೆ ಎಂಬುದು ಬಹಿರಂಗವಾಗಿಲ್ಲ.
ಇಸ್ರೇಲ್ ನ ಜೊತೆ ಸಂಬಂಧ ಸ್ಥಾಪಿಸುವುದಾದರೆ ತಾನು ಆಯುಧ ಮಾರಾಟ ಮಾಡಲು ಸಿದ್ದ ಎಂದು ಬೈಡನ್ ಸರ್ಕಾರ ಸೌದಿಗೆ ಆಮಿಷವನ್ನು ಒಡ್ಡಿತ್ತು . ಇದರ ನಡುವೆಯೇ ಗಾಝಾದ ಮೇಲೆ ಇಸ್ರೇಲ್ ನ ಆಕ್ರಮಣ ನಡೆದಿದೆ. ಚೀನಾದ ಜೊತೆಗಿನ ಆಯುಧ ಒಪ್ಪಂದವನ್ನು ಕೈಬಿಡಬೇಕು ಅನ್ನುವುದು ಕೂಡ ಬೈಡನ್ ಅವರ ಆಗ್ರಹವಾಗಿತ್ತು. ಈ ಹಿಂದೆ ಅಮೆರಿಕಾದ ಪಾರ್ಲಿಮೆಂಟ್ ಈ ಆಯುಧ ವ್ಯಾಪಾರಕ್ಕೆ ಒಪ್ಪಿಗೆ ನೀಡದೇ ಇರುವುದರಿಂದ ಅದು ಸಗಿತಗೊಂಡಿತ್ತು. ಇದೀಗ ಟ್ರಂಪ್ ಆಯುಧ ಮಾರಾಟಕ್ಕೆ ಸಿದ್ಧವಾಗಿದ್ದಾರೆ.
ಸಿ 130 ಸೇನಾ ವಿಮಾನಗಳು, ಮಿಸೈಲ್ ಗಳು ರಾಡಾರ್ ಗಳು ಡ್ರೋನ್ ಇತ್ಯಾದಿಗಳನ್ನು ಅಮೆರಿಕ ಒದಗಿಸಲಿದೆ. ಎಫ್ 35 ಯುದ್ಧ ವಿಮಾನ ಬೇಕು ಎಂಬುದು ಸೌದಿಯ ಆ ಗ್ರಹವಾಗಿದೆ. ಆದರೆ ಈ ವಿಷಯದಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ. ಅಮೆರಿಕಾದ ಪ್ರಮುಖ ಕಂಪನಿ ಮುಖ್ಯಸ್ಥರು ಟ್ರಂಪ್ ಜೊತೆ ಮೇ 13ರಂದು ಸೌದಿಗೆ ಬರಲಿದ್ದಾರೆ.
ಸದ್ಯ ಇಸ್ರೇಲ್ ನ ಜೊತೆ ಸಂಬಂಧ ಸ್ಥಾಪಿಸುವ ಸ್ಥಿತಿಯಲ್ಲಿ ಸೌದಿ ಅರೇಬಿಯಾ ಇಲ್ಲ. ಇಸ್ರೇಲ್ ನ ಜೊತೆ ಸಂಬಂಧ ಸ್ಥಾಪಿಸಬೇಕಾದರೆ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣ ಆಗಬೇಕು ಅನ್ನುವುದು ಸೌದಿಯ ನಿಲುವು. ಇದೀಗ ಅಮೆರಿಕಾದ ಆಯುಧ ಖರೀದಿ ಒಪ್ಪಂದಕ್ಕೆ ಪ್ರತಿಯಾಗಿ ಸೌದಿ ಅರೇಬಿಯಾ ಅಮೆರಿಕಕ್ಕೆ ಏನನ್ನು ನೀಡಲಿದೆ ಎಂಬ ಕುತೂಹಲ ಉಳಿದಿದೆ.












