ಸನ್ಮಾರ್ಗ ವಾರ್ತೆ-
ಬೆಂಗಳೂರು; ಅ.23- ಎರಡು ತಿಂಗಳ ಹಿಂದಷ್ಟೇ ಪ್ರವಾಹದಿಂದ ಸಂಕಷ್ಟಕ್ಕೆ ಗುರಿಯಾಗಿದ್ದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಬದುಕನ್ನು ಇನ್ನೂ ಕಟ್ಟಿಕೊಳ್ಳುವ ಹಂತದಲ್ಲಿರುವಾಗಲೇ ಪುನಃ ಮಳೆ ಅವರ ಬೆನ್ನು ಬಿದ್ದಿದೆ. ಬೆಳಗಾವಿ, ಬಾಗಲಕೋಟೆ, ಚಿಕ್ಮಗಳೂರು, ಕೊಡಗು, ಹಾವೇರಿ, ಚಿತ್ರದುರ್ಗ, ಗದಗ, ಧಾರಾವಾಡ ಜಿಲ್ಲೆ .. ಹೀಗೆ ಮಳೆಪೀಡಿತ ವಿವಿಧ ಪ್ರದೇಶಗಳಲ್ಲಿ ಈವರೆಗೆ ಒಟ್ಟು 12 ಮಂದಿ ಸಾವಿಗೀಡಾಗಿದ್ದಾರೆಂದು ಸರಕಾರ ಹೇಳುತ್ತಿದ್ದರೆ, ಸಾವಿನ ಸಂಖ್ಯೆ ಅಧಿಕವೆಂದು ಸ್ಥಳೀಯರು ಹೇಳುತ್ತಿದ್ದಾರೆ. ಹೊಸದುರ್ಗದ ನೀರಗುಂದ ಗ್ರಾಮದ ಐತಿಹಾಸಿಕ ಕೆರೆಯ ಏರಿ ಕುಸಿದಿದ್ದು, ಪ್ರವಾಹದ ಮಾದರಿಯಲ್ಲಿ ನೀರು ಹರಿದು ಹೋಗುತ್ತಿರುವುದಾಗಿ ವರದಿಯಾಗಿದೆ. ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರಕ್ಕೆ ಒಂದೇ ರಾತ್ರಿಯಲ್ಲಿ 12, 964 ಕ್ಯುಸೆಕ್ ನೀರು ಹರಿದು ಬಂದಿದ್ದು, ಇದರಿಂದ ಮಳೆಯ ಪ್ರಮಾಣವನ್ನು ಅಂದಾಜಿಸಬಹುದಾಗಿದೆ.
ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಮಳೆಯಿಂದಾಗಿ ಈರುಳ್ಳಿ ಬೆಲೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ನೊಂದುಕೊಂಡು ಹಾವೇರಿ ಜಿಲ್ಲೆಯ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಕಂಪ್ಲಿ ಗಂಗಾವತಿ ಸೇತುವೆ ಮುಳುಗಿದ್ದು, ಬೀದರ್, ಕಲಬುರ್ಗಿ, ರಾಯಚೂರು, ಆಂಧ್ರ ಮತ್ತು ತೆಲಂಗಾಣದ ಹಲವು ನಗರಗಳಿಗೆ ಸಂಪರ್ಕ ಕಡಿತಗೊಂಡಿದೆ. ಬಾದಾಮಿ ಹಾಗೂ ಹುನಗುಂದ ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಚಿಕ್ಕೋಡಿ ತಾಲೂಕಿನಲ್ಲಿ ಆರು ಸೇತುವೆಗಳು ಜಲಾವೃತವಾಗಿವೆ.
ತುಮಕೂರು ಜಿಲ್ಲೆಯ ಹೆಚ್ಚಿನೆಲ್ಲ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಬರದಿಂದ ತತ್ತರಿಸಿದ್ದ ರೈತರನ್ನು ಪುಳಕಿತಗೊಳಿಸಿದೆ. ಈ ಖುಷಿಯ ನಡುವೆಯೂ ಮಳೆಯಿಂದಾಗಿ ಹಲವು ಕಡೆ ಹಾನಿಯುಂಟಾಗಿರುವ ಬಗ್ಗೆ ವರದಿಗಳಿವೆ.
ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳನ್ನು ಸಂಪರ್ಕಿಸಲು ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಬೃಹತ್ ಸೇತುವೆ ಈಗ ಜಿಲ್ಲೆಯ ಜನರ ಚರ್ಚಾ ವಿಷಯವಾಗಿದೆ. ಎರಡು ವರ್ಷಗಳ ಹಿಂದೆ ೩೧ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆಯು ಅವೈಜ್ಞಾನಿಕ ರೀತಿಯಲ್ಲಿದೆ ಎಂಬ ದೂರು ಬಲವಾಗಿ ಕೇಳಿಬರುತ್ತಿದೆ. ರಾಮದುರ್ಗಾ ಕಡೆಯಿಂದ ಹರಿದುಬರುವ ನೀರು ಸರಾಗವಾಗಿ ಹರಿದುಹೋಗದೆ ಬಲಕ್ಕೆ ತಿರುವು ಪಡೆದು ಸುತ್ತಲಿನ ಸಾವಿರಾರು ಎಕರೆ ಹೊಲ, ಗದ್ದೆ, ತೋಟಗಳಿಗೆ ನೀರು ನುಗ್ಗುವಂತಾಗಿದೆ. ಮಲಪ್ರಭಾದಿಂದ ಕೊಣ್ಣೂರು ಸುತ್ತಮುತ್ತಲಿನ ಹಲವು ಗ್ರಾಮಗಳು ಜಲಾವೃತ್ತವಾಗಿವೆ ಎಂದು ವರದಿಯಾಗಿದೆ.
ಮೈಸೂರಿನಲ್ಲೂ ಬಿರುಸಿನ ಮಳೆಯಾಗಿದ್ದು, ಹಲವು ಅನಾಹುತಗಳಿಗೆ ಕಾರಣವಾಗಿದೆ. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದೆ ಎಂದು ಹೇಳಲಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟ ಮತ್ತು ಚಾಮರಾಜ ನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಭೂಮಿ ಕುಸಿದಿರುವ ವರದಿ ಬಂದಿದೆ.












