ಸನ್ಮಾರ್ಗ ವಾರ್ತೆ
ಕೌಶಾಂಬಿ: ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಪ್ರಸಿದ್ಧ ಸೈಯದ್ ಸಾಲಾರ್ ಖಾದಿ ದರ್ಗಾವನ್ನು ಧ್ವಂಸಗೊಳಿಸಲಾಗಿದೆ. ಈ ಘಟನೆಯು ಗುರುವಾರ ಕೊಖರಾಜ್ ಪೊಲೀಸ್ ಠಾಣೆಯ ವ್ಯಾಪ್ತಿಯ ಶಹಜಾದ್ಪುರ ಉಪ್ಪರ್ ಗ್ರಾಮದಲ್ಲಿ ನಡೆದಿದೆ. ಬಜರಂಗದಳದ ಕಾರ್ಯಕರ್ತರು ಈ ದಾಳಿಯ ಹಿಂದೆ ಇದ್ದಾರೆ ಎಂದು ದರ್ಗಾದ ಅಧಿಕಾರಿಗಳು ಆರೋಪಿಸಿದ್ದಾರೆ. ದರ್ಗಾದಲ್ಲಿ ಧಾರ್ಮಿಕ ಮತಾಂತರಗಳು ನಡೆಯುತ್ತಿವೆ ಎಂದು ಬಜರಂಗದಳದ ನಾಯಕರು ಆರೋಪಿಸಿದೆ.
ಸುಮಾರು 25 ಜನರ ಗುಂಪು ದರ್ಗಾದೊಳಗೆ ನುಗ್ಗಿ, ದರ್ಗಾದ ಕೆಲವು ಭಾಗಗಳನ್ನು ಮತ್ತು ಅದರ ಪ್ರವೇಶ ದ್ವಾರವನ್ನು ಹಾನಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಕೋರರನ್ನು ತಡೆಯಲು ಪ್ರಯತ್ನಿಸಿದ ದರ್ಗಾದ ಪಾಲಕ ಅಸೀಮ್ ಬಾಬಾ ಅವರನ್ನು ಬರ್ಬರವಾಗಿ ಥಳಿಸಿದ್ದಾರೆ ಎಂಬ ದೂರುಗಳೂ ಇವೆ. ಬೈಕುಗಳಲ್ಲಿ ಬಂದ ಯುವಕರ ಗುಂಪು ದರ್ಗಾದಲ್ಲಿ ಬಹಿರಂಗವಾಗಿ ಹಿಂಸಾಚಾರ ನಡೆಸಿತು. ಅಲ್ಲಿ ಉಪಸ್ಥಿತರಿದ್ದವರು ಇದನ್ನು ಪ್ರಶ್ನಿಸಿದಾಗ, ಅವರನ್ನು ಅಟ್ಟಾಡಿಸಿ ಥಳಿಸಲಾಯಿತು. ದರ್ಗಾಕ್ಕೆ ಭೇಟಿ ನೀಡಲು ಬಂದಿದ್ದ ಮುಸ್ಲಿಮರ ವಿರುದ್ಧ ಮಾತ್ರವಲ್ಲದೆ, ಹಿಂದೂ ಭಕ್ತರ ಮೇಲೂ ಹಿಂಸಾಚಾರ ನಡೆಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳಾದ ಅರ್ಬಾಝ್, ಸಾಬೀರ್ ಅಲಿ ಮತ್ತು ಫತೇಹ್ ಖಾನ್ ಹೇಳಿದ್ದಾರೆ. ಸೈಯದ್ ಸಾಲಾರ್ ಖಾದಿ ದರ್ಗಾವು ವಿವಿಧ ಧರ್ಮಗಳ ಜನರು ಬರುವ ಸ್ಥಳವಾಗಿದೆ.
ಏತನ್ಮಧ್ಯೆ, ತಾವು ಯಾವುದೇ ಹಿಂಸಾಚಾರ ಮಾಡಿಲ್ಲ ಎಂದು ಬಜರಂಗದಳ ಸಮರ್ಥಿಸಿಕೊಂಡಿದೆ. ಬಜರಂಗದಳದ ಕೌಶಾಂಬಿ ಜಿಲ್ಲಾ ಸಂಚಾಲಕ ಧೀರೇಂದ್ರ ಸಿಂಗ್ ಅವರು ವೀಡಿಯೊ ಸಂದೇಶವೊಂದರಲ್ಲಿ, ದರ್ಗಾದಲ್ಲಿ ಧಾರ್ಮಿಕ ಮತಾಂತರ ಮತ್ತು ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲು ತಾವು ಹೋಗಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲಿ ಮಹಿಳೆಯರು ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಮತ್ತು ತಮ್ಮ ಮೇಲಿನ ಆರೋಪಗಳು ಸಾರ್ವಜನಿಕ ಆಕ್ರೋಶವನ್ನು ಮುಚ್ಚಿಹಾಕಲು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂಸಾಚಾರದಲ್ಲಿ ಹಾನಿಗೊಳಗಾದ ದರ್ಗಾದ ಭಾಗಗಳನ್ನು ಪುನರ್ನಿರ್ಮಿಸಲಾಗುವುದು ಎಂದು ಪೊಲೀಸರು ಘೋಷಿಸಿದ್ದಾರೆ. ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ. ಎಲ್ಲಾ ಕಡೆಯಿಂದ ಬಂದ ದೂರುಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.












