ಸನ್ಮಾರ್ಗ ವಾರ್ತೆ
ಉತ್ತರ ಪ್ರದೇಶ: ಲಲಿತ್‌ಪುರ ಜಿಲ್ಲೆಯಲ್ಲಿ ಶನಿವಾರದಂದು ಒಟ್ಟಿಗೆ ಕುಳಿತು ಮದ್ಯಪಾನ ಮಾಡುವಾಗ ತನ್ನ ಮೂವರು ಸಹೋದ್ಯೋಗಿಗಳ ಕಾಲುಗಳನ್ನು ಮಸಾಜ್ ಮಾಡಲು ನಿರಾಕರಿಸಿದ 33 ವರ್ಷದ ದಲಿತ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸಮ್ಯಕ್ ರಾಜನಾಯಕ್ (38) ಎಂಬಾತನ ಸಿವಿಲ್ ಲೈನ್ಸ್ ನಿವಾಸದಲ್ಲಿ ನಡೆದ ಪಾರ್ಟಿಯಲ್ಲಿ ಛನ್ನು ಅಲಿಯಾಸ್ ರಾಜ್‌ಕುಮಾರ್ ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿ ಇತರ ಇಬ್ಬರು ಸಹೋದ್ಯೋಗಿಗಳಾದ ಗಜೇಂದ್ರ ನರ್ವಾರಿಯಾ (37) ಮತ್ತು ಗೌರವ್ ರೈಕ್ವಾರ್ (25) ಕೂಡ ಹಾಜರಿದ್ದರು.
ಮದ್ಯದ ಅಮಲಿನಲ್ಲಿದ್ದ ಈ ಮೂವರು ವ್ಯಕ್ತಿಗಳು ರಾಜ್‌ಕುಮಾರ್‌ಗೆ ತಮ್ಮ ಕಾಲುಗಳನ್ನು ಮಸಾಜ್ ಮಾಡುವಂತೆ ಕೇಳಿದ್ದರು ಎಂದು ಪಿಟಿಐ ವರದಿ ಮಾಡಿದೆ.
“ನಿರಾಕರಿಸಿದಾಗ, ಮೂವರು ವ್ಯಕ್ತಿಗಳು ಬೆಲ್ಟ್ ಮತ್ತು ಕಬ್ಬಿಣದ ರಾಡ್‌ನಿಂದ ಅವನ ಮೇಲೆ ಹಲ್ಲೆ ನಡೆಸಿದರು, ಇದರ ಪರಿಣಾಮವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದನು” ಎಂದು ಲಲಿತ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾಲು ಸಿಂಗ್ ತಿಳಿಸಿರುವುದಾಗಿ ವರದಿಯಾಗಿದೆ.
ಈ ಸಾವು ಸಂಚಾರ ಅಪಘಾತದಿಂದ ಸಂಭವಿಸಿದೆ ಎಂದು ಬಿಂಬಿಸಲು ಆರೋಪಿಗಳು ನಂತರ ರಾಜ್‌ಕುಮಾರ್ ಶವವನ್ನು ರಸ್ತೆಯೊಂದರ ಮೇಲೆ ಎಸೆದಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಗುರುನಾನಕ್ ಧರ್ಮಶಾಲಾ ಬಳಿಯ ವರ್ಣಿ ಜೈನ್ ಕಾಲೇಜಿನ ಹಿಂಭಾಗದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಕೋತ್ವಾಲಿ ಪೊಲೀಸರಿಗೆ ಭಾನುವಾರ ಬೆಳಿಗ್ಗೆ ಮಾಹಿತಿ ಲಭಿಸಿತ್ತು ಎಂದು ಪಿಟಿಐ ವರದಿ ಮಾಡಿದೆ. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ರಾಜ್‌ಕುಮಾರ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ರಾಜ್‌ಕುಮಾರ್ ಅವರ ತಾಯಿಯ ದೂರಿನ ಆಧಾರದ ಮೇಲೆ, ಪೊಲೀಸರು ಕೊಲೆ ಪ್ರಕರಣ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.












