ಸನ್ಮಾರ್ಗ ವಾರ್ತೆ
ಶೀಘ್ರದಲ್ಲೇ ಉತ್ತರಪ್ರದೇಶದ ಮುಝಫರ್ ನಗರದ ಹೆಸರು ಲಕ್ಷ್ಮೀ ನಗರ ಎಂದು ಬದಲಾಗಲಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಪ್ರಸ್ತಾಪವನ್ನು ಅಂಗೀಕರಿಸಿದ್ದು ಸರಕಾರದ ಅಂಗೀಕಾರಕ್ಕಾಗಿ ಕಳುಹಿಸಿಕೊಟ್ಟಿದೆ. ಹೀಗೆಯೇ ಫಿರೋಝಾ ಬಾದ್ ಜಿಲ್ಲಾ ಪರಿಷತ್ ಕೂಡ ರಾಜ್ಯ ಸರಕಾರಕ್ಕೆ ಪ್ರಸ್ತಾಪವನ್ನು ಕಳುಹಿಸಿಕೊಟ್ಟಿದ್ದು ಫಿರೋಝಾಬಾದ್ ಹೆಸರನ್ನು ಚಂದ್ರನಗರ್ ಎಂದು ಬದಲಾಯಿಸುವಂತೆ ಕೋರಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಜಫರ್ ನಗರ ಮತ್ತು ಹತ್ತಿರದ ಕೈರಾನಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಜಯಗಳಿಸಿತ್ತು. ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ ಸ್ಥಾನವನ್ನು ಪಡೆದಿತ್ತು . ಇದೀಗ ತೀವ್ರ ಬಲಪಂಥೀಯರನ್ನು ಒಲಿಸುವ ಉದ್ದೇಶದಿಂದ ಮುಜಫರ್ ನಗರ ಹೆಸರನ್ನು ಬದಲಿಸಿ ಧಾರ್ಮಿಕ ಉನ್ಮಾದವನ್ನು ಹುಟ್ಟು ಹಾಕಲು ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಮೊದಲು ಉತ್ತರ ಪ್ರದೇಶ ಸರಕಾರವು ಫೈಜಾಬಾದ್ ಜಿಲ್ಲೆಯ ಹೆಸರನ್ನ ಅಯೋಧ್ಯ ಜಿಲ್ಲೆ ಎಂದು ಬದಲಿಸಿತ್ತು. ಅಲಹಾಬಾದ್ ಜಿಲ್ಲೆಯನ್ನು ಪ್ರಯಾಗ್ರಾಜ್ ಎಂದು ಬದಲಿಸಿತ್ತು. ಮೊಘಲ್ ಸರಾಯಿಯನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರ್ ಎಂದು ಬದಲಿಸಿತ್ತು. ಪೈಜಾಬಾದ್ ಜಂಕ್ಷನ್ ರೈಲ್ವೇ ಸ್ಟೇಷನನ್ನು ಅಯೋಧ್ಯ ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ ಎಂದು ಬದಲಿಸಿತ್ತು. ಅಲಹಾಬಾದ್ ರೈಲ್ವೇ ಜಂಕ್ಷನ್ ನನ್ನು ಪ್ರಯಾಗ್ ರಾಜ್ ರೈಲ್ವೇ ಜಂಕ್ಷನ್ ಮತ್ತು ಮೊಘಲ್ ಸರಾಯಿ ರೈಲ್ವೇ ಸ್ಟೇಷನ್ ಅನ್ನು ದೀನ್ ದಯಾಲ್ ಉಪಾಧ್ಯಾಯ್ ರೈಲ್ವೆ ಸ್ಟೇಷನ್ ಎಂದು ಬದಲಿಸಿತ್ತು.












