ಸನ್ಮಾರ್ಗ ವಾರ್ತೆ
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಕಣ್ಣು ಮುಚ್ಚಿ ಬೆಂಬಲಿಸುತ್ತಿರುವ ಜಗತ್ತಿನ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ಗೆ ಜಗತ್ತು ಬಿಸಿ ಮುಟ್ಟಿಸ ತೊಡಗಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಅವರ ಟೆಸ್ಲಾ ಕಾರಿನ ಮಾರಾಟ 13% ಕುಸಿದಿದೆ. ಟೆಸ್ಲಾದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಮಾರಾಟ ಕುಸಿತ ಎಂದು ಹೇಳಲಾಗಿದೆ.
ಎಲಾನ್ ಮಸ್ಕ್ ವಿರುದ್ಧ ಜಾಗತಿಕವಾಗಿ ಕಾಣಿಸ್ತಾ ಇರುವ ಆಕ್ರೋಶ ಮತ್ತು ಅಮೆರಿಕಾದ ವ್ಯಾಪಾರ ಯುದ್ಧದಿಂದಾಗಿ ಎದುರಾಗಿರುವ ಸವಾಲುಗಳು ಈ ಮಾರಾಟ ಕಡಿತಕ್ಕೆ ಕಾರಣ ಎಂದು ಹೇಳಲಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗ ಎಂಬ ನೆಲೆಯಲ್ಲಿ ಜಾಗತಿಕವಾಗಿ ಟೆಸ್ಲಾ ಶೋರೂಮ್ ಎದುರು ಪ್ರತಿಭಟನೆಗಳು ನಡೆದಿದ್ದವು. ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡುವ ನಿಲ್ದಾಣಗಳನ್ನು ಪ್ರತಿಭಟನಾಕಾರರು ಪುಡಿಗೈದಿದ್ದರು. ಇವೆಲ್ಲವೂ ಟೆಸ್ಲಾ ಕಾರು ಖರೀದಿಸುವವರನ್ನು ಹಿಂದೇಟು ಹಾಕುವಂತೆ ಮಾಡಿದೆ ಎಂದು ಹೇಳಲಾಗಿದೆ.
ಇದಕ್ಕಿಂತ ಮೊದಲು ಟೆಸ್ಲಾ ಕಾರು ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿತ್ತು. ಕೊರೋನಾ ಕಾಲದಲ್ಲಿ ಮಾತ್ರ ಮಾರಾಟ ಕುಸಿದಿತ್ತು. ಆ ಬಳಿಕದ ಈವರೆಗಿನ ಲೆಕ್ಕಾಚಾರದ ಪ್ರಕಾರ ಪ್ರತಿ ಮೂರು ತಿಂಗಳ ಮಾರಾಟದಲ್ಲಿ ಹೆಚ್ಚಳವಷ್ಟೇ ಆಗುತ್ತಿತ್ತು. ಇದೀಗ ಮೊದಲ ಬಾರಿ ಟೆಸ್ಲಾದ ಮಾರಾಟದಲ್ಲಿ ಕುಸಿತ ಉಂಟಾಗಿದೆ.












