ಉತ್ತರ ಪ್ರದೇಶ | ಎಂಎಲ್‌ಸಿ ಚುನಾವಣೆ: ವಾರಾಣಸಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲು

0
511

ಸನ್ಮಾರ್ಗ ವಾರ್ತೆ

ಲಕ್ನೋ: ಯುಪಿ ಎಂಎಲ್‌ಸಿ ಚುನಾವಣೆಯಲ್ಲಿ ಪ್ರಭಾವಿ ಕ್ಷೇತ್ರವಾದ ವಾರಾಣಸಿಯಲ್ಲಿ ಬಿಜೆಪಿ ಅಭ್ಯರ್ಥಿ ಪರಾಜಯಗೊಂಡಿದ್ದಾರೆ. ವಾರಾಣಸಿ ಶಿಕ್ಷಕರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಲಾಲ್ ಬಿಹಾರಿ ಯಾದವ್ ಗೆಲುವು ಸಾಧಿಸಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿ ಪ್ರಮೋದ್ ಮಿಶ್ರಾ ವಿರುದ್ಧ 4,898 ಮತಗಳ ಅಂತರದಿಂದ ಜಯಗಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವೂ ಆಗಿರುವ ವಾರಾಣಸಿಯಲ್ಲಿ ಎದುರಾದ ಈ ಸೋಲು ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾಗಿದೆ.

ಬಿಜೆಪಿಯು ಬರೇಲಿ-ಮೊರಾದಾಬಾದ್ ಮತ್ತು ಮೀರತ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬರೇಲಿ-ಮೊರಾದಾಬಾದ್‌ನಲ್ಲಿ ಬಿಜೆಪಿಯ ಹರಿ ಸಿಂಗ್ ಧಿಲ್ಲೋನ್ ಅವರು ಎಸ್‌ಪಿ ಅಭ್ಯರ್ಥಿಯನ್ನು 17,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಮೀರತ್ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ದಿನೇಶ್ ಗೋಯಲ್ 12,000 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.

ಐದು ಪದವೀಧರ ಕ್ಷೇತ್ರಗಳು ಮತ್ತು ಆರು ಶಿಕ್ಷಕರ ಕ್ಷೇತ್ರಗಳು ಸೇರಿದಂತೆ ಒಟ್ಟು 11 ಎಂಎಲ್‌ಸಿ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಉಳಿದ ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ.