ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಂಸ್ಕೃತಿ ಸಚಿವರಿಗೆ ಭಾರತಕ್ಕೆ ಆಹ್ವಾನ

0
144

ಸನ್ಮಾರ್ಗ ವಾರ್ತೆ

ನವದೆಹಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ನಡೆಸಲಾದ ಸೈನ್ಯದ ಕಾರ್ಯಾಚರಣೆ ‘ಆಪರೇಷನ್ ಸಿಂದೂರ್’ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಚಿವರೊಬ್ಬರನ್ನು ಭಾರತಕ್ಕೆ ಆಹ್ವಾನಿಸಲಾಗಿದೆ. ನವೆಂಬರ್ 20 ಮತ್ತು 21 ರಂದು ನವದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ‘ಸಾಂಸ್ಕೃತಿಕ ಸಂವಾದ ವೇದಿಕೆ’ಯಲ್ಲಿ (ಸಿವಿಲೈಜೇಷನಲ್ ಡೈಲಾಗ್ ಫೋರಂ) ಪಾಲ್ಗೊಳ್ಳಲು ಪಾಕಿಸ್ತಾನದ ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚಿಗೆ ಭಾರತ ಆಹ್ವಾನ ನೀಡಿದೆ.

2023 ರಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಝರ್ದಾರಿ ಅವರು ಭಾರತಕ್ಕೆ ಭೇಟಿ ನೀಡಿದ ಕೊನೆಯ ಪಾಕಿಸ್ತಾನಿ ಸಚಿವರಾಗಿದ್ದರು. ಆ ದಿನ ಗೋವಾದಲ್ಲಿ ನಡೆದ ಎಸ್‌ಸಿಒ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಭುಟ್ಟೋ ಆಗಮಿಸಿದ್ದರು.

ನವೆಂಬರ್‌ನಲ್ಲಿ ನಡೆಯಲಿರುವ ಈ ಸಮ್ಮೇಳನಕ್ಕೆ ಶಾಂಘೈ ಸಹಕಾರ ಸಂಸ್ಥೆಯ ಎಲ್ಲಾ ಹತ್ತು ಸದಸ್ಯ ರಾಷ್ಟ್ರಗಳ ಸಂಸ್ಕೃತಿ ಸಚಿವರಿಗೆ ಆಹ್ವಾನ ನೀಡಲಾಗಿದೆ. ಇದರಲ್ಲಿ ರಷ್ಯಾ, ಚೀನಾ, ಇರಾನ್ ಮತ್ತು ಬೆಲಾರಸ್‌ನಂತಹ ದೇಶಗಳು ಸೇರಿವೆ. ಪಾಕಿಸ್ತಾನವು ಈ ಆಹ್ವಾನವನ್ನು ಸ್ವೀಕರಿಸಿದೆಯೇ ಅಥವಾ ದೇಶವನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದರ ಕುರಿತು ಯಾವುದೇ ಅಧಿಕೃತ ದೃಢೀಕರಣವಾಗಿಲ್ಲ.

ಎಸ್‌ಸಿಒ ಸದಸ್ಯ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಬಾಂಧವ್ಯ ಮತ್ತು ಸಂವಹನವನ್ನು ಬಲಪಡಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಈ ಕಾರ್ಯಕ್ರಮವು ಪ್ರಾಚೀನ ನಾಗರಿಕತೆಗಳ ಪರಂಪರೆ, ಕಲೆ, ಸಾಹಿತ್ಯ ಮತ್ತು ಪರಂಪರೆಗಳ ಚರ್ಚೆ ಮತ್ತು ಪರಿಚಯಕ್ಕೆ ಸೂಕ್ತ ವೇದಿಕೆಯನ್ನು ಒದಗಿಸಲಿದೆ.