ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ಸರ್ಕಾರದಿಂದ 1300 ಮುಸ್ಲಿಂ ಜೋಡಿಗಳ ಸಾಮೂಹಿಕ ವಿವಾಹ

0
240

ಸನ್ಮಾರ್ಗ ವಾರ್ತೆ

ಲಕ್ನೊ: ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಮುಸ್ಲಿಂ ಸಮುದಾಯದ 1,300 ಜೋಡಿಗಳ ವಿವಾಹ ನೆರವೇರಿಸಿದೆ. ಮುಸ್ಲಿಂ ವಿರೋಧಿ ಹಣೆಪಟ್ಟಿ ಕಳಚಿಕೊಳ್ಳಲು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಪ್ರಯತ್ನಿಸುತ್ತಿದ್ದು, ಈ ಮೂಲಕ ಮುಸ್ಲಿಂ ಸಮುದಾಯದ ಮನ ಗೆಲ್ಲಲು ಯತ್ನಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಐದು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಜಾರಿ ಮಾಡಿದ್ದ ಸಾಮೂಹಿಕ ವಿವಾಹ ಯೋಜನೆ ಅಡಿಯಲ್ಲಿ ಬಡಜನರ ವಿವಾಹ ಮಾಡಿಸಲು ಯೋಜನೆ ರೂಪಿಸಿದ್ದು, ಈ ವರ್ಷ 600 ಕೋಟಿ ರೂಪಾಯಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಿದೆ‌. ಅಲ್ಪಸಂಖ್ಯಾತ, ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತಿದೆ.

ಈ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಇಲಾಖೆಯು ಸುಮಾರು 16,033 ಜೋಡಿಗಳ ಸಾಮೂಹಿಕ ವಿವಾಹಗಳನ್ನು ನೆರವೇರಿಸಿದೆ. ಇದರಲ್ಲಿ ಮುಸ್ಲಿಂ ಸಮುದಾಯದ 1387 ಜೋಡಿಗಳು, ದಲಿತ ಸಮುದಾಯದಿಂದ 9,374 ಜೋಡಿಗಳು, ಒಬಿಸಿ ವರ್ಗದಿಂದ 4,649 ಜೋಡಿಗಳು ಮತ್ತು ಸಾಮಾನ್ಯ ವರ್ಗದಿಂದ 623 ಜೋಡಿಗಳು ವಿವಾಹವಾಗಿದ್ದಾರೆ. ಯೋಜನೆಯಡಿ ವೈವಾಹಿಕ ಬಂಧನಕ್ಕೆ ಒಳಗಾದ ವಧುವಿಗೆ ಸರಕಾರ 51 ಸಾವಿರ ರೂಪಾಯಿ ಧನ ಸಹಾಯವನ್ನು ನೀಡಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಸಮುದಾಯದ ಜನರು ಈ ಯೋಜನೆಗೆ ಅರ್ಹರಾಗಿದ್ದಾರೆ.