ಸನ್ಮಾರ್ಗ ವಾರ್ತೆ
ನವದೆಹಲಿ; ಕೋವಿಡ್ ನಂತರ ಆಗುತ್ತಿರುವ ಹಠಾತ್ ಸಾವುಗಳಿಗೆ ಲಸಿಕೆಯು ಕಾರಣವೆಂಬುದಕ್ಕೆ ಯಾವುದೇ ದೃಢವಾದ ಪುರಾವೆ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಎಐಮ್ಸ್ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ. ಈ ಕುರಿತು ಕೇಂದ್ರ ಸರ್ಕಾರ ವರದಿಯನ್ನು ಮುಂದಿಟ್ಟು ಮಾಹಿತಿ ನೀಡಿದೆ.
18ರಿಂದ 45 ವರ್ಷದೊಳಗಿನ ಯುವಜನರಲ್ಲಿ ಅಕಾಲಿಕ ಮರಣ ಹಾಗೂ ಹೃದಯಾಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಅಧ್ಯಯನ ನಡೆಸಲಾಗಿದೆ. ದೇಶದ 47 ಆಸ್ಪತ್ರೆಗಳಲ್ಲಿ ಈ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಲಸಿಕೆಗಳಿಂದ ಈ ಸಾವುಗಳು ಸಂಭವಿಸುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರವು NCRD (ರೋಗ ನಿಯಂತ್ರಣ ಕೇಂದ್ರ) ಮೂಲಕ ಇಂತಹ ಅಕಾಲಿಕ ಮರಣಗಳ ಹಿಂದಿನ ಕಾರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದೆ.
ಈ ಮಧ್ಯೆ, ಹಾಸನದಲ್ಲಿ ಇತ್ತೀಚೆಗೆ ಸಂಭವಿಸಿದ ಹೃದಯಾಘಾತ ಸಾವುಗಳ ಬಗ್ಗೆಯೂ ರಾಜ್ಯ ಸರ್ಕಾರ ಗಂಭೀರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ತನಿಖೆ ನಡೆಸಲು ಆದೇಶ ನೀಡಿದ್ದು, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ 10 ದಿನಗಳೊಳಗೆ ತನಿಖಾ ವರದಿ ಸಲ್ಲಿಸಬೇಕಿದೆ.
ಈ ಕುರಿತು ಟ್ವೀಟ್‌ಮೂಲಕ ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಲಸಿಕೆಯ ತ್ವರಿತ ಅನುಮೋದನೆ ಮತ್ತು ವಿತರಣೆಯು ಕೆಲವು ಸಂದರ್ಭಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದ್ದರೂ, ನಿಖರ ಕಾರಣ ತಿಳಿದುಬರುವಂತೆ ಸಮಗ್ರ ಅಧ್ಯಯನ ನಡೆಯಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೂಡ ಪ್ರತಿಕ್ರಿಯೆ ನೀಡಿ, “ಹೃದಯಾಘಾತ ಪ್ರಕರಣಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಆದೇಶ ನೀಡಲಾಗಿದೆ” ಎಂದು ಹೇಳಿದ್ದಾರೆ.












