ದಲಿತ ಕವಿ, ಖ್ಯಾತ ಸಾಹಿತಿ ಡಾ. ಸಿದ್ದಲಿಂಗಯ್ಯ ಕೋವಿಡ್ ನಿಂದ ನಿಧನ

0
300

ಸನ್ಮಾರ್ಗ ವಾರ್ತೆ

ಬೆಂಗಳೂರು: ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ದಲಿತ ಕವಿ, ಸಾಹಿತಿ ಡಾ.ಸಿದ್ಧಲಿಂಗಯ್ಯ ಅವರು ಇಂದು ಚಿಕಿತ್ಸೆ ಫಲಿಸದೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಕಳೆದ ತಿಂಗಳು ಕೊರೋನ ಸೋಂಕಿಗೆ ತುತ್ತಾಗಿದ್ದ ಡಾ.ಸಿದ್ದಲಿಂಗಯ್ಯ ಅವರು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಮೃತಪಟ್ಟರೆಂದು ತಿಳಿದು ಬಂದಿದೆ.

‘ದಲಿತ ಕವಿ’ ಎಂದೇ ಗುರುತಿಸಿಕೊಂಡಿದ್ದ ಸಿದ್ಧಲಿಂಗಯ್ಯನವರು, ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿ ಬಂಡಾಯ ಕವಿಯಾಗಿಯೂ ಹೆಸರು ಗಳಿಸಿದ್ದರು.

ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದ ಇವರು, ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿ ಕೂಡ ತಮ್ಮ ಸೇವೆ ಸಲ್ಲಿಸಿದ್ದಾರೆ.

ಪಂಪ, ನಾಡೋಜ ಪ್ರಶಸ್ತಿಗಳಿಗೂ ಭಾಜನರಾಗಿದ್ದ ಇವರು, ದಲಿತ, ಬಂಡಾಯವೆಂದರೆ ಹೊಡಿ- ಬಡಿ ಎಂಬುದಲ್ಲ ಎಂದು ವ್ಯಾಖ್ಯಾನಿಸಿದ್ದರು.

ದಲಿತರು ಬರುವರು ದಾರಿಬಿಡಿ, ದಲಿತರ ಕೈಗೆ ರಾಜ್ಯಕೊಡಿ ಎಂಬ ಅವರ ಕ್ರಾಂತಿಗೀತೆ ಈಗಲೂ ದಲಿತ ಚಳವಳಿಗಳಲ್ಲಿ ಕೇಳಿಬರುತ್ತಿದೆ. ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಮೆರವಣಿಗೆ, ಕಪ್ಪು ಕಾಡಿನ ಹಾಡು, ನನ್ನ ಜನಗಳು ಮತ್ತು ಇತರೆ ಕವಿತೆಗಳು ಅವರ ಪ್ರಮುಖ ಕವಿತಾ ಸಂಕಲನಗಳು.

ಡಾ. ಸಿದ್ಧಲಿಂಗಯ್ಯ ರವರ ನಿಧನಕ್ಕೆ ಸಾಹಿತ್ಯ ಲೋಕವು ಕಂಬನಿ‌ ಮಿಡಿದಿದೆ.

LEAVE A REPLY

Please enter your comment!
Please enter your name here