ಆಸ್ಪತ್ರೆಗಳ‌ ಬಿಲ್ ಪರಿಶೀಲನೆಗೆ ನೋಡಲ್ ಅಧಿಕಾರಿಗಳ‌‌ ನೇಮಕ ಮಾಡಿದ ಜಿಲ್ಲಾಧಿಕಾರಿಗಳ ತೀರ್ಮಾನ ಸ್ವಾಗತಾರ್ಹ : ಎಸ್ . ಬಿ. ಮುಹಮ್ಮದ್ ದಾರಿಮಿ

0
249

ಸನ್ಮಾರ್ಗ ವಾರ್ತೆ

ಉಪ್ಪಿನಂಗಡಿ: ಕೋವಿಡ್ ರೋಗಿಗಳ ಆಸ್ಪತ್ರೆಯ ಬಿಲ್ಲುಗಳನ್ನು ಪರಿಶೀಲಿಸಲು ವೀಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದ ಜಿಲ್ಲಾಧಿಕಾರಿಯವರ ಕ್ರಮ ಸ್ವಾಗತಾರ್ಹವಾಗಿದೆ ಎಂದು ಖ್ಯಾತ ಇಸ್ಲಾಮಿಕ್ ಧಾರ್ಮಿಕ ಪಂಡಿತ ಉಸ್ತಾದ್ ಎಸ್ .‌ ಬಿ.‌ ದಾರಿಮಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಂಡು ಕೇಳರಿಯದ ಕೊರೋನ ರೋಗದಿಂದಾಗಿ ಇಡೀ ಜಗತ್ತೇ ಕಂಗಾಲಾಗಿ ಬಡವರು, ಮಧ್ಯಮ ವರ್ಗದವರು ತಲೆ ಮೇಲೆ ಕೈಹೊತ್ತು ಕುಳಿತಿರುವಾಗ ಕೋವಿಡ್ ಬಾಧಿಸಿದ ಜನರಿಗೆ ಸಾಂತ್ವನ ನೀಡಿ ಆಸರೆಯಾಗಬೇಕಿದ್ದ ಆಸ್ಪತ್ರೆಗಳು ಸಿಕ್ಕಿದ್ದೇ ಸಂದರ್ಭ ಎಂಬ ಮನೋಭಾವದೊಂದಿಗೆ ಲೂಟಿಗೈಯ್ಯಲು ಹೊರಟಿದ್ದು ದೌರ್ಭಾಗ್ಯಕರ ವಿಚಾರವಾಗಿದೆ. ಇಲ್ಲಿ ಸರಕಾರಗಳ ಬೇಜವಾಬ್ದಾರಿ ವರ್ತನೆಯಿಂದಾಗಿ ತಮ್ಮದಲ್ಲದ ತಪ್ಪಿಗೆ ಜನರು ರೋಗ ಅಂಟಿಸಿ ಕೊಂಡಿರುವುದಂತೂ ಸತ್ಯ.
ಕೋವಿಡ್ ಬಾಧಿತರು ಮತ್ತು ವಾಸಿಯಾದವರು ಸರಕಾರ ನೀಡುವ ಸಂಖ್ಯೆಗಿಂತ ನೂರಾರು ಪಟ್ಟು ಜಾಸ್ತಿ ಇದ್ದಾರೆಂಬುದೂ ಸತ್ಯ.
ಸಣ್ಣ ಪುಟ್ಟ ಶೀತ ,ಕೆಮ್ಮು ಬಂದು ಕೊರೋನ ಮುಕ್ತರಾದ ಕೋಟ್ಯಾಂತರ ಜನರ ಲೆಕ್ಕ ಸರಕಾರದ ಬಳಿ ಇಲ್ಲ ಎಂದವರು ತಿಳಿಸಿದ್ದಾರೆ.

ಯಾವುದೇ ಲಕ್ಷಣಗಳು ತೋರಿಸದೇ ಕೊರೋಣದಿಂದ ಪಾರಾದವರೂ ಇದ್ದಾರೆ. ಅದೇ ವೇಳೆ ಸೀರಿಯಸ್ ಪೇಸಂಟ್ ಆಸ್ಪತ್ರೆಗೆ ದಾಖಲಾಗಿ ಅವರಲ್ಲಿ ಹಲವರು ಜೀವನ್ಮರಣ ಹೋರಾಟ ನಡೆಸಿ ಪ್ರಾಣಪಾಯದಿಂದ ಪಾರಾದವರಿದ್ದಾರೆ.
ಅದೇ ವೇಳೆ ಹಲವು ದಿನ ಹೋರಾಡಿ ಮೃತ್ಯುವಿಗೆ ಶರಣಾದವರೂ ಇದ್ದಾರೆ. ನಿಜವಾಗಿಯೂ ಕೊರೋಣ ಈಗ ಒಂದು ಸಮಸ್ಯೆಯಾಗಿ ಉಳಿದಿಲ್ಲ. ಸಮಸ್ಯೆ ಇರೋದೇ ಈ ಮೆಡಿಕಲ್ ಮಾಫಿಯಾದವರ ದರ್ಬಾರಿನಿಂದಾಗಿದೆ.
ಹದಿನೈದು , ಇಪ್ಪತ್ತು ಲಕ್ಷ ಬಿಲ್ಲು ಪಾವತಿಸಿ ಡೆಡ್ ಬಾಡಿ ಕೊಂಡೊಯ್ಯವಾಗ ಜನರ ಮನಸ್ಥಿತಿ ಹೇಗಿರಬಹುದೆಂಬುದನ್ನು ಸರಕಾರಿ ಅಧಿಕಾರಿಗಳು ಅರ್ಥೈಸಬೇಕು. ಕೋವಿಡ್ ಕಾರಣ ಸಣ್ಣ ಮಟ್ಟದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದರೂ ಮತ್ತೆ ಅವರ ಕಥೆಯನ್ನು ಆಸ್ಪತ್ರೆಗಳು ಮುಗಿಸುತ್ತಿದೆ.

ಒಂದೈದು ದಿನ ಉಳಿದುಕೊಂಡರೂ ದಿನಕ್ಕೆ ಕನಿಷ್ಟ ಇಪ್ಪತ್ತು ಸಾವಿರ ಬಿಲ್ಲು. ಆಸ್ಪತ್ರೆ ಮಾಫಿಯಾದವರ ಈ ಲೂಟಿಯನ್ನು ಕಂಡು ನೋಡಿ ರೋಸಿ ಹೋದ ಕೆಲ ಯುವಕರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದೂ ಕೂಡಾ ಸುದ್ದಿಯಾಗಿತ್ತು. ಈಗ ಅದರ ಫಲಶೃತಿ ಎಂಬಂತೆ ಜಿಲ್ಲಾಧಿಕಾರಿಗಳು ಪ್ರತೀ ಆಸ್ಪತ್ರೆಗೆ ವೀಕ್ಷಕರನ್ನು ನೇಮಿಸಿ ಕೋವಿಡ್ ಬಿಲ್ಲನ್ನು ಪರಿಶೀಲಿಸಲು ಆದೇಶ ಹೊರಡಿಸಿದ್ದು ಬಹಳ ಸ್ವಾಗತಾರ್ಹ ಮತ್ತು ದಿಟ್ಟ ನಿಲುವಾಗಿದೆ‌ ಎಂದು ಎಸ್ . ಬಿ.‌ ದಾರಿಮಿ ಹೇಳಿದ್ದಾರೆ.

ಈ ಹಿಂದೆ ಪಾವತಿಸಲಾದ ಬಿಲ್ಲುಗಳನ್ನು ಕೂಡಾ ಪರಿಶೀಲಿಸಿ ಹೆಚ್ಚುವರಿ ಈಡುಮಾಡಲಾದ ಹಣವನ್ನು ವಾಪಾಸು ಕೊಡಿಸಲು ಜಿಲ್ಲಾಧಿಕಾರಿಗಳು ಕ್ರಮ ತೆಗೆದು ಕೊಳ್ಳಬೇಕು. ಅದೇ ರೀತಿ ಕೋವಿಡ್ ರೋಗಕ್ಕೆ ಪಾವತಿ ಮಾಡಲಾದ ಬಿಲ್ಲುಗಳನ್ನು ಸರಕಾರವೇ ಪಾವತಿಸಲು ಮುಂದೆ ಬರಬೇಕು.
ಕಣ್ಣಿಗೆ ಮಣ್ಣೆರೆಚುವ ಜುಜುಬಿ ಕೋವಿಡ್ ಪ್ಯಾಕೇಜ್ ಗೆ ಬದಲಾಗಿ ಕೋವಿಡ್ ಬಾಧಿತರ ಆಸ್ಪತ್ರೆಯ ಸಂಪೂರ್ಣ ಖರ್ಚು ವೆಚ್ಚ ಸರಕಾರ ಭರಿಸಿದರೆ ಅದಕ್ಕೊಂದು ಅರ್ಥವಿದೆ. ಈ ಬಗ್ಗೆ ಪಕ್ಷಾತೀತವಾಗಿ ಜನರ ಶಬ್ದ ಮೊಳಗಬೇಕಾದ ಅವಶ್ಯಕತೆ ಇದೆ ಎಂದವರು ತಮ್ಮ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here