ಪಾಕ್ ಏಜೆಂಟ್ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ವಿಕ್ರಾಂತ್‌ ಕಶ್ಯಪ್ ಎಸ್‌ಟಿಎಫ್ ವಶಕ್ಕೆ

0
132

ಸನ್ಮಾರ್ಗ ವಾರ್ತೆ

ಪಾಕಿಸ್ತಾನ ಮೂಲದ ಭಯೋತ್ಪಾದಕನ ಆಜ್ಞೆಯಂತೆ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರಾಖಂಡ ಪೊಲೀಸ್‌ನ ವಿಶೇಷ ಕಾರ್ಯಪಡೆಯು (ಎಸ್‌ಟಿಎಫ್) ವ್ಯಕ್ತಿಯೊಬ್ಬನನ್ನು ಬಂಧಿಸಿದೆ ಎಂದು ವರದಿಯಾಗಿದೆ. ಬಂಧಿತ ಆರೋಪಿಯನ್ನು 29 ವರ್ಷದ ವಿಕ್ರಾಂತ್ ಕಶ್ಯಪ್ ಎಂದು ಗುರುತಿಸಲಾಗಿದ್ದು, ಈತ ಡೆಹ್ರಾಡೂನ್‌ನಲ್ಲಿರುವ ರಕ್ಷಣಾ ಸಂಸ್ಥೆಗಳು ಹಾಗೂ ಸರ್ಕಾರಿ ಕಚೇರಿಗಳ ಛಾಯಾಚಿತ್ರಗಳು ಮತ್ತು ಸ್ಥಳದ ವಿವರಗಳನ್ನು ಪಾಕಿಸ್ತಾನದಲ್ಲಿರುವ ತನ್ನ ನಿರ್ವಾಹಕರಿಗೆ ರವಾನಿಸುತ್ತಿದ್ದ ಎಂದು ಎಸ್‌ಟಿಎಫ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಜಯ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈತ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಏಜೆಂಟ್ ಶೆಹಜಾದ್ ಭಟ್ಟಿಯ ಸೂಚನೆಗಳನ್ನು ಪಾಲಿಸುತ್ತಿದ್ದ ಎಂದು ಎಸ್‌ಎಸ್‌ಪಿ ವಿವರಿಸಿದ್ದಾರೆ. ಖಚಿತ ಮಾಹಿತಿಯ ಆಧಾರದ ಮೇಲೆ ಎಸ್‌ಟಿಎಫ್ ಮತ್ತು ರಾಜ್ಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಗುರುವಾರ ಸಂಜೆ ಪ್ರೇಮ್ ನಗರ್ ಪ್ರದೇಶದಲ್ಲಿ ಕಶ್ಯಪ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ .32 ಬೋರ್ ಪಿಸ್ತೂಲ್, ಏಳು ಜೀವಂತ ಕಾರ್ಟ್ರಿಡ್ಜ್‌ಗಳು ಹಾಗೂ ಸ್ಪೇ ಪೇಂಟ್ ಕ್ಯಾನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಿಚಾರಣೆಯ ವೇಳೆ ಆರೋಪಿಯು ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮೂಲಕ ಭಟ್ಟಿ ಸೇರಿದಂತೆ ಪಾಕಿಸ್ತಾನದ ಇತರ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ತಾನು ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಅಭಿಮಾನಿಯಾಗಿದ್ದು, ಅವರ ಕೊಲೆಗೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಭಟ್ಟಿಯ ಸಂಪರ್ಕ ಸಾಧಿಸಿದ್ದಾಗಿ ತನಿಖಾಧಿಕಾರಿಗಳ ಮುಂದೆ ಆತ ಹೇಳಿಕೆ ನೀಡಿದ್ದಾನೆ ಎಂದು ವರದಿಯಾಗಿದೆ. ಸಿಧು ಮೂಸೆವಾಲಾ ಅವರನ್ನು 2022ರ ಮೇ ತಿಂಗಳಲ್ಲಿ ಪಂಜಾಬ್‌ನ ಮಾನಾ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.

ಡೆಹ್ರಾಡೂನ್‌ನ ಪೊಲೀಸ್‌ ಪ್ರಧಾನ ಕಚೇರಿ ಮತ್ತು ಅಂತರ ರಾಜ್ಯ ಬಸ್ ಟರ್ಮಿನಸ್ (ಐಎಸ್‌ಬಿಟಿ) ಸೇರಿದಂತೆ ಪ್ರಮುಖ ಸ್ಥಳಗಳ ವಿಡಿಯೊ ಮತ್ತು ಚಿತ್ರಗಳನ್ನು ಪಾಕ್ ಹ್ಯಾಂಡ್ಲರ್‌ಗಳಿಗೆ ಕಳುಹಿಸಿದ್ದ ಈತನಿಗೆ, ಅದೇ ಸ್ಥಳಗಳಲ್ಲಿ ಬಾಂಬ್ ಇಡುವಂತೆ ಸೂಚನೆ ನೀಡಲಾಗಿತ್ತು ಎಂದು ಎಸ್‌ಎಸ್‌ಪಿ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, ನಗರದ ಪ್ರಮುಖ ಕಟ್ಟಡಗಳ ಗೋಡೆಗಳ ಮೇಲೆ ‘ತೆಹೀಕ್-ಎ-ತಾಲಿಬಾನ್ ಹಿಂದೂಸ್ತಾನ್’ (ಟಿಟಿಎಚ್) ಎಂದು ಸ್ಪ್ರೇ ಪೇಂಟ್ ಮೂಲಕ ಬರೆದು, ಆ ಕೃತ್ಯದ ವಿಡಿಯೊ ಸೆರೆಹಿಡಿಯುವಂತೆ ಆತನಿಗೆ ಹ್ಯಾಂಡ್ಲರ್‌ಗಳು ಆದೇಶಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.