ಮಾವನನ್ನು ಆಸ್ಪತ್ರೆಗೆ ಬೆನ್ನ ಹಿಂದೆ ಹೊತ್ತು ತಂದ ಸೊಸೆಯ ಪೋಟೋ ವೈರಲ್: ಯಾರೂ ಸಹಾಯಕ್ಕೆ ಧಾವಿಸಲಿಲ್ಲ ಎಂದ ಅಸ್ಸಾಂನ ನಿಹಾರಿಕಾ

0
767

ಸನ್ಮಾರ್ಗ ವಾರ್ತೆ

ಅಸ್ಸಾಂ: ಹಲವಾರು ದಾರುಣ, ಹೃದಯ ವಿದ್ರಾವಕ, ಮನಕಲಕುವ ಘಟನೆಗಳಿಗೆ ಸಾಕ್ಷಿಯಾಗಿರುವ ಕೋವಿಡ್ ರೋಗವು ಮತ್ತೊಂದು ಅಚ್ಚರಿ ಹಾಗೂ ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ. ಈ ಬಾರಿ ಈ ಘಟನೆ ವರದಿಯಾದದ್ದು ಅಸ್ಸಾಂ ರಾಜ್ಯದ ರಿಹಾ ಪ್ರದೇಶದಿಂದ.

ಸಮಯಕ್ಕೆ ಸರಿಯಾದ ನೆರವು ಸಿಗದೆ ರಸ್ತೆಗಳಲ್ಲಿ, ಬೀದಿಗಳಲ್ಲಿ, ಆಸ್ಪತ್ರೆಗೆ ಸಾಗಿಸುವಾಗ ಅಂಬ್ಯುಲೆನ್ಸ್​ನಲ್ಲಿ ಪ್ರಾಣ ಕಳೆದುಕೊಂಡವರನ್ನು ನೆನೆಯುವಾಗ ಮಾನವೀಯ ಮೌಲ್ಯಗಳಿರುವ ಹೃದಯಕ್ಕೆ ಮಾತ್ರ ಅಂಥವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ‌ ಕರುಳು ಉಕ್ಕಿ ಬರುತ್ತದೆ. ಆದರೆ, ಇಲ್ಲಿ ನಾವು ಹೇಳಲು ಹೊರಟಿರುವುದು ಧೈರ್ಯವಂಥ ಮತ್ತು ಕರುಣಾಮಯಿ ಮಹಿಳೆಯೋರ್ವರ ಕಥೆ‌. ಆಕೆ ಆಸ್ಸಾಮಿನ ಓರ್ವ ಸೊಸೆ. ಆಕೆಯ ಹೆಸರು ನಿಹಾರಿಕಾ ದಾಸ್.

ನಿಹಾರಿಕಾ ಮಾಡಿದ ಕೆಲಸದ ಫೊಟೋ ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆಯಲ್ಲದೇ ಭಾರೀ ಪ್ರಶಂಸೆಗೂ ಒಳಗಾಗಿದೆ. ಆಕೆಯ ಸಾಹಸವನ್ನು ನೆಟ್ಟಿಗರು ಮನಸಾರೆ ಕೊಂಡಾಡುತ್ತಿದ್ದಾರೆ. ಆಕೆಯ ಕಥೆ ವೈರಲ್ ಆಗಲು ಕಾರಣ ಅಸ್ಸಾಮಿನ ನಟಿ ಐಮೀ ಬರೂವಾ. ಐಮಿ ತಮ್ನ ಟ್ವಿಟ್ಟರ್​ ಖಾತೆಯಲ್ಲಿ ಟ್ವೀಟ್ ಮಾಡಿ ವಿಚಾರ ಹಂಚಿದ ನಂತರ ಮಾಧ್ಯಮಗಳು ವರದಿ ಮಾಡಿದೆ.

ಕೋವಿಡ್-19 ಸೋಂಕಿತ ತನ್ನ ಮಾವ (ಪತಿಯ ತಂದೆ) ತುಲೇಶ್ವರ್ ದಾಸ್ ಎಂಬವರನ್ನು ಆಸ್ಪತ್ರೆಗೆ ಸೇರಿಸಲು ನಿಹಾರಿಕಾ ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಸದ್ಯ ವೈರಲ್ ಆಗಿದ್ದಲ್ಲದೇ, ಮಾವ-ಸೊಸೆ ಸಂಬಂಧ ಭಾರತೀಯ ಸಂಸ್ಕೃತಿಯಲ್ಲಿ ಹೇಗೆ ಇದೆ ಎಂಬುದಕ್ಕೂ ಉದಾಹರಣೆಯಂತಿದೆ.

ಘಟನೆಯ ಹಿನ್ನೆಲೆ ಹೀಗಿದೆ:
ಕಳೆದ ಜೂನ್ ಎರಡರಂದು, ಅಸ್ಸಾಂ ನ ನಗಾಂವ್​ ಪ್ರದೇಶದ ರಾಹಾ ಎಂಬಲ್ಲಿ ಅಡಿಕೆ ವ್ಯಾಪಾರ ಮಾಡುವ ನಿಹಾರಿಕಾ ಅವರ ಮಾವ ತುಲೇಶ್ವರ್ ಅವರಲ್ಲಿ ಕೋವಿಡ್​ ಸೋಂಕಿನ ಲಕ್ಷಣಗಳು ಕಾಣಿಸಲಾರಂಭಿಸಿದ್ದವು. ನಿಹಾರಿಕಾ ಏನೆಲ್ಲ ಪ್ರಯತ್ನ ಮಾಡಿ ಒಂದು ಆಟೋರಿಕ್ಷಾದ ಏರ್ಪಾಟು ಮಾಡಿದರಾದರೂ ಅವರ ಮನೆಗೆ ಹೋಗುವ ದಾರಿ ಅತ್ಯಂತ ಕಿರಿದಾಗಿದ್ದರಿಂದ ವಾಹನ ಅಲ್ಲಿಯವರೆಗೆ ಹೋಗಲು ಸಾಧ್ಯವಿರಲಿಲ್ಲ. ಧೃತಿಗೆಡದ ನಿಹಾರಿಕಾ ಆಟೋವನ್ನು ಮುಖ್ಯರಸ್ತೆಯಲ್ಲೇ ನಿಲ್ಲುವಂತೆ ಹೇಳಿ, ಮಾವನನ್ನು ಬೆನ್ನ ಮೇಲೆ ಹೊತ್ತುಕೊಂಡು ಕಡಿದಾದ ರಸ್ತೆಗಳ ಮೂಲಕ ಆಟೋವನ್ನು ತಲುಪಿ ಆಸ್ಪತ್ರೆಗೆ ಹೋದರು.

‘ನನ್ನ ಮಾವ ಎದ್ದು ನಿಲ್ಲಲೂ ತ್ರಾಣವಿಲ್ಲದಷ್ಟು ನಿಶ್ಶಕ್ತರಾಗಿದ್ದರು. ನನ್ನ ಪತಿ ಕೆಲಸಕ್ಕೆ ಸಿಲಿಗುರಿಗೆ ಹೋಗಿದ್ದರು. ಹಾಗಾಗಿ ಅವರನ್ನು ಬೆನ್ನ ಮೇಲೆ ಹೊತ್ತೊಯ್ಯದೆ ಬೇರೆ ಮಾರ್ಗವಿರಲಿಲ್ಲ. ನಾವಿರುವ ಮನೆಯ ಓಣಿ ತುಂಬಾ ಕಿರಿದಾಗಿದೆ, ಮನೆವರೆಗೆ ಆಟೋ ಬರೋದು ಸಾಧ್ಯವಿರಲಿಲ್ಲ. ಪರಿಸ್ಥಿತಿ ಹಾಗಿದ್ದ ಕಾರಣ ನಾನು ಅವರನ್ನು ಹೊತ್ತುಕೊಂಡು ಹೋದೆ,’ ಎಂದು ಪತ್ರಿಕೆಯೊಂದರ ಜೊತೆ ಮಾತಾಡುವಾಗ ನಿಹಾರಿಕಾ ಹೇಳಿದ್ದಾರೆ.

ಮಾವ ತುಲೇಶ್ವರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ 21 ಕಿಲೋಮೀಟರ್ ದೂರ ಇರುವ ಕೋವಿಡ್​ ಆಸ್ಪತ್ರೆಯೊಂದಕ್ಕೆ ಸೇರಿಸಬೇಕೆಂದು ವೈದ್ಯರು ಸೂಚಿಸಿದಾಗ ಅಷ್ಟು ದೂರ ಆಟೋ ಹೋಗುವುದು ಸಾಧ್ಯವಿರದ ಕಾರಣ ನಿಹಾರಿಕಾ ಒಂದು ಕಾರನ್ನು ಗೊತ್ತು ಮಾಡಿಕೊಂಡರು. ನಂತರ ಆಸ್ಪತ್ರೆಯಲ್ಲಿದ್ದ ಮಾವನನ್ನು ಕಾರಿನವರೆಗೆ ಪುನಃ ಬೆನ್ನಿನ ಮೇಲೆ ಹೊತ್ತುಕೊಂಡು ಬಂದರು. ಅಷ್ಟರಲ್ಲಾಗಲೇ ದೈಹಿಕ ಮತ್ತು ಮಾನಸಿಕವಾಗಿ ದಣಿದಿದ್ದ‌ ನಿಹಾರಿಕಾಳ ಮಾವ ತುಲೇಶ್ವರ್ ಪ್ರಜ್ಞೆ ಕಳೆದುಕೊಂಡಿದ್ದರು. ಆಸ್ಪತ್ರೆಗೆ ಸೇರಿಸಲಾಯಿತಾದರೂ ಆಸ್ಪತ್ರೆಯಲ್ಲಿ ಸರಿಯಾದ ಸ್ಟ್ರೆಚರ್ ಕೂಡ ಲಭ್ಯವಿರಲಿಲ್ಲ ಎಂದು ನಿಹಾರಿಕಾ ಮಾಹಿತಿ ನೀಡಿದ್ದಾರೆ.

ಇಷ್ಟೆಲ್ಲಾ ಕಷ್ಟಪಡುತ್ತಿರುವಾಗ ಕೆಲವರು ನೋಡಿಯೂ ನೋಡದೆ ಹೋದರು. ‌ತನ್ನ ಸಹಾಯಕ್ಕೆ ಯಾರೂ ಬರಲಿಲ್ಲ‌. ನಮಗಾದ ಬವಣೆ ಯಾರಿಗೂ ಬಾರದಿರಲಿ ಎಂದು ಹೇಳುವಾಗ ನಿಹಾರಿಕಾಳ ಕಣ್ಣಂಚು ಒದ್ದೆಯಾಗಿತ್ತು.‌

LEAVE A REPLY

Please enter your comment!
Please enter your name here