ಸನ್ಮಾರ್ಗ ವಾರ್ತೆ
ನವದೆಹಲಿ: ವಿಷನ್-2026 ಹ್ಯೂಮನ್ ವೆಲ್ಫೇರ್ ಟ್ರಸ್ಟ್ನ ನೇತೃತ್ವದಲ್ಲಿ ಅಲ್ಶಿಫಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಧೀನದಲ್ಲಿ ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು ಇಂದು ದೆಹಲಿಯ ಜಾಮಿಯಾ ನಗರದ ಸ್ಕಾಲರ್ ಶಾಲೆಯಲ್ಲಿ ಇಂದು ಸಂಜೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು ಯುಎಇ ಮೂಲದ ಆಸ್ಟರ್ ಡಿಎಂ ಹೆಲ್ತ್ಕೇರ್ನ ಸಿಎಸ್ಆರ್ ಅಂಗವಾದ ಆಸ್ಟರ್ ಸ್ವಯಂಸೇವಕರೊಂದಿಗೆ ಸಂಯೋಜಿಸಲಾಗಿದೆ. ಹ್ಯೂಮನ್ ವೆಲ್ಫೇರ್ ಟ್ರಸ್ಟ್ ನಡೆಸುತ್ತಿರುವ ದೆಹಲಿಯ ಜಾಮಿಯಾ ನಗರದಲ್ಲಿರುವ ಸ್ಕಾಲರ್ ಶಾಲೆಯಲ್ಲಿ ಕಾರ್ಯನಿರ್ವಹಿಸಲಿದೆ.
50 ಹಾಸಿಗೆಗಳ ಸಾಮರ್ಥ್ಯವಿರುವ ಪೂರ್ಣ ಪ್ರಮಾಣದ ಫೀಲ್ಡ್ ಆಸ್ಪತ್ರೆ ಇದಾಗಿದ್ದು, ಮೊದಲ 25 ಲಕ್ಷಣರಹಿತ ಕೋವಿಡ್ ಪಾಸಿಟಿವ್ ರೋಗಿಗಳ ಶುಶ್ರೂಷೆ ಮಾಡಲಿದೆ ಮತ್ತು ನಂತರ 50 ಹಾಸಿಗೆಗಳಿಗೆ ಸೇವೆಯನ್ನು ವಿಸ್ತರಿಸಲು ತೀರ್ಮಾನಿಸಿದೆ.
ಫೀಲ್ಡ್ ಆಸ್ಪತ್ರೆಯಲ್ಲಿ 100 ಆಮ್ಲಜನಕ ಸಿಲಿಂಡರ್ಗಳು, 10 ಆಮ್ಲಜನಕ ಸಾಂದ್ರಕಗಳು, ನೆಬ್ಯುಲೇಷನ್, ಪುರುಷ ಮತ್ತು ಸ್ತ್ರೀ ರೋಗಿಗಳಿಗೆ ಪ್ರತ್ಯೇಕ ವಾರ್ಡ್ಗಳು, ಪುರುಷ ಮತ್ತು ಸ್ತ್ರೀ ಅರೆವೈದ್ಯಕೀಯ ಮತ್ತು ಸಹಾಯಕ ಸಿಬ್ಬಂದಿ, ಮೂರು ಹೊತ್ತು ಆರೋಗ್ಯಕರ ಆಹಾರ, ಆಮ್ಲಜನಕದ ಬೆಂಬಲದೊಂದಿಗೆ 24 ಗಂಟೆಗಳ ಆಂಬ್ಯುಲೆನ್ಸ್ ಸೇವೆಯನ್ನು ಹೊಂದಿದೆ. 30 ಸದಸ್ಯರ ಅನುಭವಿ ವೈದ್ಯರ ವೈದ್ಯಕೀಯ ತಂಡವನ್ನು ಹೊಂದಿದ್ದು ಚಿಕಿತ್ಸೆ ಮತ್ತು ಆಹಾರವು ಸಂಪೂರ್ಣವಾಗಿ ಉಚಿತವಾಗಿ ನೀಡಲಿದೆ.
ಪ್ರಸ್ತುತ ಅಲ್ಶಿಫಾ ಆಸ್ಪತ್ರೆಯು ಕೋವಿಡ್ ಚಿಕಿತ್ಸೆಗಾಗಿ 40 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ್ದು, ಐಸಿಯು ಮತ್ತು ವೆಂಟಿಲೇಟರ್ ಸೌಲಭ್ಯಗಳು ಆಸ್ಪತ್ರೆಯಲ್ಲಿ ಲಭ್ಯವಿದೆ.













