ಭ್ರಷ್ಟಾಚಾರಿ, ಕೋಮುವಾದಿ, ಸಂವಿಧಾನದ ವಿರೋಧಿಗಳ ವಿರುದ್ಧ ಮತ ಚಲಾಯಿಸಿ; ಅಡ್ವೋಕೇಟ್ ತಾಹೇರ್ ಹುಸೇನ್, ರಾಜ್ಯಾಧ್ಯಕ್ಷರು ವೆಲ್ಫೇರ್ ಪಾರ್ಟಿ

0
695

ಸನ್ಮಾರ್ಗ ವಾರ್ತೆ

ದೇಶವು ಮಹತ್ತರವಾದ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿದೆ. ಮತ್ತೊಮ್ಮೆ ಸರ್ಕಾರ ಬದಲಾಯಿಸುವ ಅವಕಾಶ ನಮ್ಮ ಕೈಯಲ್ಲಿದೆ ಆಡಳಿತ ಪಕ್ಷವು ಕಳೆದ ಹತ್ತು ವರ್ಷಗಳ ಇತಿಹಾಸದಲ್ಲಿ ಈ ದೇಶವನ್ನು ಯಾವ ಕಡೆಗೆ ಕೊಂಡೊಯ್ಯುತ್ತಿದೆ ಎಂಬುದಕ್ಕೆ ನಾವು ಸಾಕ್ಷಿಯಾದೆವು.

ಭ್ರಷ್ಟಾಚಾರ ಎಂಬುದು ಇಲ್ಲಿ ಸಾಮಾನ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರ ಹಣ ಮೆರೆದಾಡುತ್ತಿದೆ. ಜನ ಸಾಮಾನ್ಯರ ಬದುಕು ನರಕವಾಗಿದೆ, ಸರಕಾರ ಜನರ ಸೇವೆ ಮಾಡುವ ಬದಲು ತನ್ನ ಬಂಡವಾಳಶಾಹಿ ಸ್ನೇಹಿತರ ಸೇವೆಯಲ್ಲಿ ತೊಡಗಿದೆ. ಇಂದು ಭ್ರಷ್ಟಾಚಾರಿಗಳು ಬಿಜೆಪಿ ಸೇರಿದ ಕೂಡಲೇ ಸ್ವಚ್ಚಗೊಳ್ಳುತ್ತಾರೆ. ಅವರ ಮೇಲಿನ ಆರೋಪದ ತನಿಖೆಗಳು ಸ್ಥಗಿತಗೊಳ್ಳುತ್ತಿದೆ. ಸರಕಾರದ ವಿರುದ್ಧ ದನಿಯೆತ್ತಿದವರನ್ನು ಜೈಲಿಗೆ ಹಾಕಲಾಗುತ್ತಿದೆ. ಇಂತಹವರು ಮರಳಿ ಅಧಿಕಾರಕ್ಕೇರಿದರೆ ದೇಶದ ಭವಿಷ್ಯ ಹೇಗಿರಬಹುದು.? ಹಾಗಾದರೆ ಇಲ್ಲಿ ಬಡ ಭಾರತೀಯರಿಗೆ ನ್ಯಾಯ ಸಿಗಬಹುದೇ? ಮುಂತಾದ ಎಲ್ಲಾ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಸಿ ಭ್ರಷ್ಟಾಚಾರಿಗಳ, ಕೋಮುವಾದಿಗಳ, ರೈತ ವಿರೋಧಿಗಳ ವಿರುದ್ಧ ಮತ ಚಲಾಯಿಸಬೇಕು.

ಈ ಬಾರಿಯ ಚುನಾವಣೆ ದೇಶದ ಮಟ್ಟಿಗೆ ಬಹಳ ಮಹತ್ತರವಾದದ್ದು. ದೇಶದ ಮತದಾರ ಬಂಧುಗಳು ಈ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಯಾಕೆಂದರೆ ಈ ಚುನಾವಣೆಯಲ್ಲಿ ಸಂವಿದಾನದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಭಾರತದ ಸಂವಿಧಾನದ ಶಿಲ್ಪಿಗಳ ಪರಿಶ್ರಮದಿಂದ ದೇಶವು ವಿಶ್ವದ ರಾಷ್ಟ್ರಗಳ ಪಟ್ಟಿಯಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಂಗೊಳಿಸುತ್ತಿದೆ. ಹೀಗಿರುವಾಗ ಜಾತ್ಯಾತೀತ ತತ್ವಗಳನ್ನು ಗಾಳಿಗೆ ತೂರಿ ದೇಶದ ಜನರ ಹಿತವನ್ನು ಗಣನೆಗೆ ತೆಗೆಯದೆ ಸ್ವಾರ್ಥಹಿತಾಸಕ್ತಿಗಳಿಗಾಗಿ ಆಡಳಿತಗಾರರು ರಾಜಕೀಯ ಕಸರತ್ತು ನಡೆಸುತ್ತಿದ್ದಾರೆ.

ಪ್ರಜೆಗಳ ಭಾವನೆಗಳನ್ನು ಧಾರ್ಮಿಕವಾಗಿ ಕೆರಳಿಸಿ ಲಾಭ ಪಡೆಯಲು ಮುಂದಾಗುತ್ತಿರುವುದು ಇಲ್ಲಿ ಇಂದು ಸಾಮಾನ್ಯವಾಗಿದೆ. ಪರಸ್ಪರ ಜಾತಿಯ ಧರ್ಮಗಳ ನಡುವಿನ ಕಲಹಗಳು ಮತ ಬ್ಯಾಂಕ್ ಆಗಿ ಬದಲಾಗುತ್ತದೆ. ಆದ್ದರಿಂದ ಶಾಂತಿ ಸುವ್ಯವಸ್ಥೆಯನ್ನು ಅವರು ಬಯಸುವುದಿಲ್ಲ. ಇಂತಹವರ ವಿರುದ್ಧ ಮತದಾರ ಎಚ್ಚರಿಕೆಯಿಂದ ಮತ ಚಲಾಯಿಸಬೇಕು.

ನೋಡಿ ಕಳೆದ ಚುನಾವಣೆಯಲ್ಲಿ ನಮ್ಮ ರಾಜ್ಯದಿಂದ ಇಪ್ಪತ್ತೆಂಟು ಸಂಸದರನ್ನು ಬಿಜೆಪಿಗೆ ಆರಿಸಿ ಕಳುಹಿಸಲಾಯಿತು. ಇವರಿಂದ ರಾಜ್ಯಕ್ಕೆ ಏನಾದರೂ ಪ್ರಯೋಜನವಾಯಿತೇ? ರಾಜ್ಯ ಸರಕಾರ ಬಡವರಿಗೆ ವಿತರಿಸಲು ಅಕ್ಕಿಯನ್ನು ಕೇಳಿದಾಗ ಅದನ್ನು ನೀಡಲು ಹಿಂಜರಿದರು. ಹೆಣ ಬಿದ್ದ ಕೂಡಲೇ ರಾಜಕೀಯ ಮಾಡಲು ಮಾತ್ರ ಓಡೋಡಿ ಬರುತ್ತಿದ್ದರು. ಹೆಣದ ಮೇಲೆ ರಾಜಕೀಯ ಮಾಡಲು ಇವರು ನಿಸ್ಸೀಮರು ಎಂಬುದು ಬಹಿರಂಗ ವಿಚಾರ.

ಕೇಂದ್ರದ ಬ್ರಹ್ಮಾಂಡ ಭ್ರಷ್ಟಾಚಾರಗಳು ಹೊರ ಬರುತ್ತಲೇ ಇದೆ. ವಿರೋಧ ಪಕ್ಷದವರನ್ನು ಇಡಿ ಐಟಿ ದಾಳಿ ನಡೆಸಿ ಬಾಯ್ಮುಚ್ಚಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗೆ ಅಧಿಕಾರವನ್ನು ದುರುಪಯೋಗ ಪಡಿಸಲಾಗುತ್ತದೆ. ಅನ್ನದಾತ ರೈತರ ಹೋರಾಟವನ್ನು ಸದೆಬಡಿಯುವ ಶ್ರಮಗಳು ನಡೆದವು.

ಒಟ್ಟಿನಲ್ಲಿ ಹೇಳುವುದಾದರೆ ದೇಶದ ಜನತೆಯ ಬಗ್ಗೆ ಕಳಕಳಿಯಿರುವ ಜಾತ್ಯಾತೀತ ಅಭ್ಯರ್ಥಿಗಳನ್ನು ಚುನಾಯಿಸಿ ದೇಶವನ್ನು ಪಾರು ಮಾಡಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯವಾದ ಮತದಾನದ ಹಕ್ಕನ್ನು ದೇಶದ ಪ್ರಸಕ್ತ ವಿದ್ಯಮಾನಗಳನ್ನು ಊಹಿಸಿ ಮತದಾನ ಮಾಡಬೇಕಾಗಿದೆ.