ನಿಮ್ಮ ವೃದ್ಧಾಪ್ಯ ಸುಂದರವಾಗಬೇಕೆ?

0
544

ಖದೀಜ ನುಸ್ರತ್

ಮಾನವನ ಇಹಲೋಕ ಜೀವನದಲ್ಲಿ ವೃದ್ದಾಪ್ಯವು ಅಂತಿಮ ಘಟ್ಟವಾಗಿರುತ್ತದೆ. ಸಾಮಾನ್ಯವಾಗಿ ನಾವು ಡಿಗ್ರಿ ಕಲಿಯುತ್ತಿರುವಾಗ ಕೊನೆಯ ವರ್ಷ ತಲುಪವಾಗ ಸಂತೋಷವಿರುತ್ತದೆ. ಮುಂದಿನ ವರ್ಷ ಉದ್ಯೋಗ ಪಡೆದು ಪ್ರತಿಫಲ ಸಿಗಲಿದೆಯೆಂಬ ಶುಭ ನಿರೀಕ್ಷೆಯಿರುತ್ತದೆ. ತಿಂಗಳಿನ ಕೊನೆಯಲ್ಲಿ ಸಂಬಳ ಪಡೆಯುವ ದಿನ ಹತ್ತಿರವಾಗುತ್ತಿದೆಯೆಂಬ ಸಂತೋಷವಿರುತ್ತದೆ. ಮನೆ ನಿರ್ಮಾಣ ಕೊನೆಯ ಹಂತದಲ್ಲಿರುವಾಗ ಮುಂದೆ ಅದರಲ್ಲಿ ವಾಸಿಸುವ ಸಂತೋಷವಿರುತ್ತದೆ. ಅದೇ ರೀತಿ ವಾರ್ಧಕ್ಯ ಎಂಬುದು ಜೀವನದ ಕೊನೆಯ ಹಂತವಾಗಿರುತ್ತದೆ. ವೃದ್ಧಾಪ್ಯದಲ್ಲಿ ನಾವು ಇಹಲೋಕದಲ್ಲಿ ಮಾಡಿದ ಕರ್ಮಗಳಿಗೆ ಪ್ರತಿಫಲ ಸಿಗಲಿರುವ ದಿನಗಳು ಹತ್ತಿರದಲ್ಲಿದೆಯೆಂಬ ಶುಭ ನಿರೀಕ್ಷೆಯಿಂದ ಜೀವಿಸಬೇಕು. ಪರಲೋಕ ಜೀವನ ಮತ್ತು ಅದರ ಪ್ರತಿಫಲದ ಬಗ್ಗೆ ನಮ್ಮಲ್ಲಿ ದೃಢ ವಿಶ್ವಾಸವಿರಬೇಕು. ಈ ಶುಭ ನಿರೀಕ್ಷೆ ನಮ್ಮಲ್ಲಿ ಇಲ್ಲದಿದ್ದರೆ ನಾವು ನಿರಾಶರಾಗುತ್ತೇವೆ.

ಹಜ್ಜ್, ಉಮ್ರಾ ಅಥವಾ ವಿವಾಹಗಳಂತಹ ಶುಭ ಕಾರ್ಯಗಳಿದ್ದರೆ ನಾವು ಬಹಳ ಸಂತೋಷದಿಂದ ನಿರೀಕ್ಷಿಸುತ್ತೇವೆ. ಅದಕ್ಕಿಂತಲೂ ಎಷ್ಟೋ ಪಟ್ಟು ಅಧಿಕ ಸಂತೋಷಕರವಾದ ಸ್ಥಳಕ್ಕೆ ಅಲ್ಲಾಹನನ್ನು ಭೇಟಿಯಾಗಲು ನಾವು ಹೋಗಲಿದ್ದೇವೆಯೆಂಬ ನಿರೀಕ್ಷೆಯಿರಬೇಕು.
ಪ್ರವಾದಿ ಮುಹಮ್ಮದ್(ಸ) ಹೇಳಿರುವರು: “ನಿಮ್ಮ ಪೈಕಿ ಯಾರೂ ಅಲ್ಲಾಹನಲ್ಲಿ ಶುಭ ನಿರೀಕ್ಷೆಯನ್ನಿಟ್ಟು ಕೊಂಡಲ್ಲದೆ ಮರಣ ಹೊಂದಬಾರದು.”

ನಮ್ಮ ಪರೀಕ್ಷೆ ಅವಧಿ ಮುಗಿದು ಇನ್ನು ಪ್ರತಿಫಲ ಪಡೆಯಲಿರುವ ದಿನಗಳು ಹತ್ತಿರವಾಗುತ್ತಿದೆ ಎಂಬ ಶುಭ ನಿರೀಕ್ಷೆಯಿರಬೇಕು. ನಮ್ಮ ಬಾಳಸಂಗಾತಿ ಒಂದೋ ಜೀವಿಸಿರಬಹುದು ಅಥವಾ ಅಗಲಿರಬಹುದು. ನಮ್ಮ ಮಕ್ಕಳು ಹತ್ತಿರ ಇರಬಹುದು ಅಥವಾ ದೂರ ಇರಬಹುದು. ಉತ್ತಮ ಆಹಾರ, ಉತ್ತಮ ಮನೆ, ವಸ್ತ್ರ, ಉತ್ತಮ ಸಂತಾನ ಮತ್ತು ನಮಗೆ ಆರೋಗ್ಯವನ್ನು ನೀಡಿದ ಅಲ್ಲಾಹನಿಗೆ ಸದಾ ಕೃತಜ್ಞರಾಗುತ್ತಾ ಸರ್ವಸ್ತುತಿ ಅರ್ಪಿಸುತ್ತಿರಬೇಕು. ಇನ್ನು ನಮಗೆ ಕೈ ಕಾಲು ನೋವುಗಳಿದ್ದರೆ ಅದನ್ನು ರೋಗವೆಂದು ಪರಿಗಣಿಸಬಾರದು. ಅವು ಇಹಲೋಕದಲ್ಲಿ ನಮ್ಮ ಪಾಪಗಳನ್ನು ಮನ್ನಿಸಲು ಅಲ್ಲಾಹನು ನೀಡುವಂತ ಚಿಕ್ಕ ಚಿಕ್ಕ ನೋವುಗಳಾಗಿರುತ್ತದೆ.

ನಮ್ಮ ಮನೆಯ ಮುಂದೆ ಒಂದು ಗಿಡವಿದ್ದರೆ ಅದರ ಎಲೆ, ಹೂವು, ಕಾಯಿ, ಹಣ್ಣಾಗಿ ಬಾಡಿ ಹೋಗುವುದನ್ನು ಕಾಣುತ್ತೇವೆ. ಅದೇ ರೀತಿ ಜೀವನ. ನಮ್ಮ ನಂತರ ನಮ್ಮ ಮಕ್ಕಳ ಜಗತ್ತಾಗಿರುತ್ತದೆ. ಅವರು ಭೂಮಿಯ ವಾರೀಸುದಾರರಾಗಿರುತ್ತಾರೆ. ಈ ಲೋಕದಲ್ಲಿ ಜನಿಸಿದ ಪ್ರತಿಯೊಂದು ಜೀವಿಯು ಮರಣದ ಸವಿಯನ್ನು ಅನುಭವಿಸಲೇಬೇಕಾಗುತ್ತದೆ ಇಷ್ಟು ವರ್ಷ ಅಲ್ಲಾಹನ ಅಪಾರವಾದ ಅನುಗ್ರಹದಿಂದ ನಾನು ಜೀವಿಸಿದೆ. ಅದಕ್ಕಾಗಿ ನಾವು ಯಾವಾಗಲು ಸರ್ವಸ್ತುತಿಯನ್ನು ಸಲ್ಲಿಸುತ್ತಿರಬೇಕು. ನಮಗೆ ಪ್ರತಿಯೊಂದು ದಿನವೂ ಸಿಗುವ ಸಮಯ, ಸಂಪತ್ತು ಮತ್ತು ಆರೋಗ್ಯ ಸತ್ಕರ್ಮಗಳನ್ನೆಸಗಳು ಸಿಗುತ್ತಿರುವ ಅನುಗ್ರಹವಾಗಿದೆ. ಸಾಧ್ಯವಾದಷ್ಟು ನಮಾಜ್ ನಿರ್ವಹಿಸುವುದು, ಕುರ್ ಆನ್ ಪಾರಾಯಣ ಮಾಡುವುದು, ನಮ್ಮ ಖರ್ಚು ಕಳೆದು ಏನಾದರೂ ಉಳಿದರೆ ಸಾಧ್ಯವಾದರೆ ಅಲ್ಪ ದಾನ ಮಾಡುವುದು. ನಮ್ಮ ಪಾಪಗಳಿಗೆ ಕ್ಷಮಾಯಾಚನೆ ಮಾಡುವುದು.

“ಹೇಳಿರಿ; ತಮ್ಮ ಮೇಲೆಯೇ ಅತಿರೇಕವೆಸಗಿಕೊಂಡಿರುವ ನನ್ನ ದಾಸರೇ, ಅಲ್ಲಾಹನ ಕರುಣೆಯ ಬಗ್ಗೆ ನಿರಾಶರಾಗಬೇಡಿರಿ. ನಿಶ್ಚಯವಾಗಿಯೂ ಅಲ್ಲಾಹ್ ಸಕಲ ಪಾಪಗಳನ್ನು ಕ್ಷಮಿಸಿ ಬಿಡುತ್ತಾನೆ. ಅವನಂತು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.” (ಅಝ್ಝುಮರ್ :53)

ಇನ್ನಿರುವ ಅಲ್ಪ ಕಾಲ ಪಾಪ ಮುಕ್ತ ಜೀವನವನ್ನಾಗಿ ಮಾಡಲು ಪ್ರಯತ್ನಿಸುವುದು. ನಮ್ಮ ಎಲ್ಲಾ ಪಾಪಗಳನ್ನು ಅಲ್ಲಾಹನು ಕ್ಷಮಿಸುವನೆಂಬ ದೃಢ ವಿಶ್ವಾಸಯಿರಬೇಕು. ತಮ್ಮ ಹಿಂದಿನ ದಿನಗಳನ್ನು, ಕರ್ಮಗಳನ್ನು ನೆನಪಿಸಿ ನಿರಾಶರಾಗಬೇಡಿರಿ.
“ಅಂದು ಸೊತ್ತಾಗಲಿ ಸಂತತಿಗಳಾಗಲಿ ಸ್ವಲ್ಪವೂ ಫಲಕಾರಿಯಾಗಲಾರವು. ನಿಷ್ಕಳಂಕ ಹೃದಯದೊಂದಿಗೆ ಅಲ್ಲಾಹನ ಸನ್ನಿಧಿಯಲ್ಲಿ ಹಾಜರಾಗುವವನ ಹೊರತು.” (ಅಶ್ಶುಅರಾ:88-89)

ಮಕ್ಕಳು, ಸಂಬಂಧಿಕರು ಹಾಗೂ ಸ್ನೇಹಿತರು ಹೀಗೆ ಎಲ್ಲರೊಂದಿಗೆ ಉತ್ತಮ ಬಂಧವಿರಿಸಬೇಕು. ಸಣ್ಣ ಸಣ್ಣ ದ್ವೇಷಗಳನ್ನು ಕೊನೆಗೊಳಿಸಬೇಕು. ಎಲ್ಲರೂ ಬೇರೆ ಬೇರೆ ರೀತಿಯ ಸ್ವಭಾವದವರು. ಎಲ್ಲರನ್ನೂ ಪ್ರೀತಿಸುತ್ತಾ ಗೌರವಿಸಿರಿ. ಸದಾ ನಗು ಮುಖದಿಂದಿರಿ. ಇನ್ನೊಬ್ಬರನ್ನು ಸಂತೋಷಗೊಳಿಸುವಂತಹ ಮಾತುಗಳನ್ನಾಡಿರಿ. ಯಾರಿಂದಲೂ ಒಳಿತನ್ನು ನಿರೀಕ್ಷಿಸಬೇಡಿರಿ. ನಿಮ್ಮ ನಿರೀಕ್ಷೆ, ಭರವಸೆಗಳು ಅಲ್ಲಾಹನ ಮೇಲೆ ಇರಲಿ. ಸಾಮಾನ್ಯವಾಗಿ ಯೌವನವನ್ನು ಎಲ್ಲರೂ ಇಷ್ಟಪಡುತ್ತಾರೆ. ವೃದ್ದಾಪ್ಯದಲ್ಲಿ ಹೆಚ್ಚಿನವರು ದುಃಖ, ಭಯ ಹಾಗೂ ನಿರಾಶರಾಗಿ ಜೀವಿಸುತ್ತಾರೆ. ಹೀಗೆ ನಿರಾಶರಾಗಲು ಕಾರಣ ನಮ್ಮ ಜೀವನ ಕೇವಲ ಒಂದು ಪರೀಕ್ಷೆಯಾಗಿರುತ್ತದೆ ಎಂದು ಅವರು ಅರ್ಥಮಾಡಿಕೊಳ್ಳುವುದಿಲ್ಲ.

“ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವನೆಂದು ನೋಡಲಿಕ್ಕಾಗಿ ಅವನು ಜೀವನವನ್ನೂ ಮರಣವನ್ನೂ ಆವಿಷ್ಕರಿಸಿದನು.” (ಅಲ್ ಮುಲ್ಕ್ :2)

ನಿರುದ್ಯೋಗ ಅಥವಾ ನಿವೃತ್ತ ಜೀವನ ಎಂಬುದು ಮಾನವನನ್ನು ಸಾಮಾನ್ಯವಾಗಿ ಖಿನ್ನರನಾಗಿ ಮಾಡುತ್ತದೆ. ವಾರ್ಧಕ್ಯ ಘಟ್ಟವನ್ನು ಪ್ರವೇಶಿಸುವಾಗ ಮಾನಸಿಕವಾಗಿ, ಆರ್ಥಿಕವಾಗಿ ತಯಾರಾಗಿರಬೇಕು. ಯೌವನದಲ್ಲೇ ನಿಮ್ಮ ಕೈಯಲ್ಲಿ ಹಣ ಇರುವಾಗ ದುಬಾರಿ ಬೆಲೆಯ ವಸ್ತ್ರ, ಆಹಾರ, ಕಾರು, ಮನೆಯ ಅಲಂಕಾರ, ಭರ್ಜರಿ ಔತಣ ಕೂಟ, ದುಬಾರಿ ವಿನೋಧ ಯಾತ್ರೆ, ಮಕ್ಕಳ ಅದ್ದೂರಿ ವಿವಾಹ, ಚಿನ್ನ ವಜ್ರದ ಉಡುಗೊರೆ ಎಂದು ಖರ್ಚು ಮಾಡುವಾಗ ಒಮ್ಮೆ ನಿಮ್ಮ ನಿರುದ್ಯೋಗ ಮತ್ತು ನಿವೃತ್ತ ಕಾಲದ ಬಗ್ಗೆ ಆಲೋಚಿಸಿರಿ. ನೀವು ದುಡಿಯುವವರಾಗಿದ್ದಾರೆ ನಮ್ಮ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನಾದರು ಉಳಿತಾಯ ಮಾಡುವಂತಹ ಹವ್ಯಾಸ ಬೆಳೆಸಿಕೊಲ್ಲಬೇಕು. ವೃದ್ಧಾಪ್ಯದಲ್ಲಿ ಇನ್ನೂ ಸಂಪಾದಿಸಬೇಕೆಂಬ ಅತ್ಯಾಸೆ ಮತ್ತು ಅಧಿಕಾರ ಮೋಹ ನಮ್ಮನ್ನು ಸತ್ಕರ್ಮದಿಂದ ದೂರ ಸರಿಸುತ್ತದೆ. ನಮ್ಮ ವರ್ಷ ಹೆಚ್ಚಾದಂತೆ ಮರಣ ಹತ್ತಿರವಾಗುತ್ತದೆಯೆಂಬುದನ್ನೂ ಮರೆಯಬಾರದು.ಇಹಲೋಕ ಜೀವನ, ಸಂಪತ್ತು ಹಾಗು ಸೌಕರ್ಯಗಳನ್ನು ಅನುಭವಿಸಬೇಕೆಂಬ ಅತ್ಯಾಸೆ ಇದ್ದರೆ ನಮಗೆ ನೆಮ್ಮದಿಯಿಂದ ಜೀವಿಸಲು ಸಾಧ್ಯವಿಲ್ಲ. ನಿವೃತ್ತರಾದ ಬಳಿಕ ಸಮಾಜ ಸೇವೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಬೇಕು.

ನಮ್ಮ ಎಲ್ಲ ವ್ಯವಹಾರಗಳಿಗೆ ಅತಿ ಸಣ್ಣ ಪ್ರಾಯದಲ್ಲೇ ಉತ್ತಮ ಅಂತ್ಯವನ್ನು ನೀಡಲು ಪ್ರಯತ್ನಿಸಬೇಕು. ಏಕೆಂದರೆ ಮರಣವು ಯಾವುದೇ ಸಮಯದಲ್ಲಿ ಸಂಭವಿಸಬಹುದು. ಅದಕ್ಕೆ ಪ್ರಾಯದ ಮಿತಿಯಿಲ್ಲ. ಸಣ್ಣ ಪ್ರಾಯದಲ್ಲೇ ಕನ್ನಡಕ, ಕೂದಲು ಬಿಳಿಯಾಗುವುದು, ಕೈ ಕಾಲು ನೋವಿನಂತಹ ವೃದ್ಧಾಪ್ಯದ ಲಕ್ಷಣಗಳನ್ನು ಅನುಭವಿಸುವವರಿದ್ದಾರೆ.

“ನಿಮ್ಮ ಸಂಪತ್ತು ಮತ್ತು ಸಂತತಿಗಳು ಒಂದು ಪರೀಕ್ಷೆಯಾಗಿದೆ. ಅತ್ಯುನ್ನತ ಪ್ರತಿಫಲವಂತು ಅಲ್ಲಾಹನ ಬಳಿಯಲ್ಲೇ ಇದೆ*.” (ಅತ್ತಗಾಬುನ್: 15)

ನಮ್ಮ ಸಂತಾನ ದೇವನು ನೀಡಿದ ಅಮಾನತ್ (ನಿಧಿ) ಆಗಿರುತ್ತದೆ. ಅದನ್ನು ನಾವು ಸಾಧ್ಯವಾದಷ್ಟು ಸುರಕ್ಷಿತವಾಗಿರಿಸಿದೆವು. ಅವರನ್ನು ಪೋಷಿಸಿ ಉತ್ತಮ ವಿದ್ಯಾಭ್ಯಾಸ ಕೊಟ್ಟು ಬೆಳೆಸಿದೆವು. ಈಗ ಅವರು ಕುಟುಂಬ ಜೀವನ ನಡೆಸುತ್ತಿದ್ದಾರೆಂಬ ಆನಂದವಿರಲಿ. ನಮ್ಮ ಜವಾಬ್ದಾರಿ, ಹಕ್ಕುಬಾಧ್ಯತೆಗಳನ್ನು ಪೂರೈಸಿದ್ದೇವೆಂಬ ಸಮಾಧಾನವಿರಲಿ. ಮಕ್ಕಳಿಗೆ ಬಾಲ್ಯದಲ್ಲೇ ಅತ್ಯುತ್ತಮ ಧಾರ್ಮಿಕ ವಿದ್ಯಾಭ್ಯಾಸ, ಜೀವನದಾದ್ಯಂತ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಜೀವಿಸಲು ಬಾಲ್ಯದಲ್ಲೇ ತರಭೇತಿ ನೀಡಬೇಕು. ಪ್ರಬುದ್ಧರಾದ ಬಳಿಕ ಮಕ್ಕಳನ್ನು ಸ್ವತಂತ್ರವಾಗಿ ಜೀವಿಸಲು ಬಿಡಬೇಕು. ನಿಮ್ಮ ಅವಲಂಬಿತರಾಗಿ ಮಾಡಬೇಡಿರಿ. ಅಗತ್ಯವಿದ್ದಾಗ ಮಾತ್ರ ಮಾರ್ಗದರ್ಶನ ಮತ್ತು ಉಪದೇಶ ನೀಡಿರಿ. ಅವರ ಎಲ್ಲ ವೈಯಕ್ತಿಕ ವ್ಯವಹಾರಗಳಲ್ಲಿ ಅನಾವಶ್ಯಕವಾಗಿ ತಲೆಹಾಕಬೇಡಿರಿ. ನಿಮ್ಮ ಮರಣಾ ನಂತರ ಮಕ್ಕಳು ಮೊಮ್ಮಕ್ಕಳು ಹೇಗೆ ಜೀವಿಸುವರೆಂದು ಚಿಂತಿಸಬೇಡಿರಿ. ಅವರ ಇಹಪರ ವಿಜಯಕ್ಕಾಗಿ ಪ್ರಾರ್ಥಿಸುತ್ತಿರಬೇಕು.

ನಮ್ಮ ಸಂಪತ್ತು ಯಾವ ರೀತಿ ಸಂಪಾದಿಸಿದೆವು ಮತ್ತು ಯಾವ ರೀತಿ ಖರ್ಚು ಮಾಡಿದೆವು ಎಂದು ಒಂದು ಅವಲೋಕನ ನಡೆಸುವುದು . ಯಾರಿಗಾದರೂ ಸಾಲ ಮರುಪಾವತಿಸಲು ಬಾಕಿಯಿದ್ದರೆ ಸಾಧ್ಯವಾದಷ್ಟು ಬೇಗ ಪಾವತಿಸಲು ಶ್ರಮಿಸಬೇಕು . ತಮಗೆ ನೀಡಲಿಕ್ಕೆ ಮತ್ತು ಪಡೆಯಲಿಕ್ಕಿರುವುದನ್ನು ಸ್ಪಷ್ಟವಾಗಿ ಬರೆದಿಡಬೇಕು. ನಮ್ಮ ಸಾಲಗಾರನು ಬಡವನಾಗಿದ್ದರೆ ಸಾಧ್ಯವಾದರೆ ಕ್ಷಮಿಸುವುದು ಉತ್ತಮವಾಗಿದೆ. ತಮ್ಮ ಎಲ್ಲ ವ್ಯವಹಾರದ ಬಗ್ಗೆ ವಾರೀಸುದಾರರಿಗೆ ಸರಿಯಾದ ಮಾಹಿತಿ ನೀಡಬೇಕು. ಆನ್ ಲೈನ್ ಹಾಗೂ ಎಟಿಎಂ ಪಾಸ್ವರ್ಡ್ ತನ್ನ ಬಾಳ ಸಂಗಾತಿಗೆ ತಿಳಿದಿರಬೇಕು ಮತ್ತು ಅದನ್ನು ತನ್ನ ಡೈರಿಯಲ್ಲಿ ಬರೆದಿಡಬೇಕು. ಏಕೆಂದರೆ ಮನಷ್ಯನಿಗೆ ಮರೆವು ಸಂಭವಿಸುವ ಸಾಧ್ಯತೆ ಇದೆ. ನಿಮ್ಮ ಖಾತೆಯಲ್ಲಿ ಹಣವಿದ್ದರೆ ಸಂಬಂಧಪಟ್ಟವರಿಗೆ ಅದರ ಮಾಹಿತಿಯನ್ನು ನೀಡಬೇಕು. ಏಕೆಂದರೆ ಭಾರತದ ಬ್ಯಾಂಕ್ ಗಳಲ್ಲಿ ವರ್ಷಂಪ್ರತಿ ಎಷ್ಟೋ ಹಣ ವಾರಿಸುದಾರರಿಲ್ಲದೆ ಪೋಲಾಗುತ್ತಿದೆ,

ನಿಮ್ಮ ಎಲ್ಲ ಸಂಪತ್ತನ್ನು ಜೀವಂತವಿರುವಾಗಲೇ ಪಾಲು ಮಾಡಬೇಡಿರಿ. ಸಂಪತ್ತು ಇರುವವವರಿಗೆ ಗೌರವ ಇರುತ್ತದೆ. ಪವಿತ್ರ ಕುರ್ ಆನ್ ನಲ್ಲಿ ಒಬ್ಬ ವ್ಯಕ್ತಿಯ ಮರಣದ ನಂತರ ಸಂಪತ್ತು ಪಾಲು ಮಾಡುವುದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಹೆಚ್ಚಿನ ಹೆತ್ತವರು ತಮ್ಮ ಮಕ್ಕಳ ಮಧ್ಯೆ ನ್ಯಾಯ ಪಾಲಿಸಲು ವಿಫಲತಾಗುತ್ತಾರೆ. ಹೆಣ್ಣುಮಕ್ಕಳ ವಿವಾಹ, ಚಿನ್ನ ಎಂದು ಹೆಣ್ಣು ಮಕ್ಕಳಿಗೆ ಒಂದು ದೊಡ್ಡ ಮೊತ್ತವನ್ನು ಖರ್ಚು ಮಾಡಲು ನಿರ್ಬಂಧಿತರಾಗಿರುತ್ತಾರೆ. ತಮ್ಮ ಗಂಡು ಮಕ್ಕಳ ಸಂಪತ್ತನ್ನು ಹೆಣ್ಣು ಮಕ್ಕಳಿಗೆ ನೀಡಬೇಕಾದ ಪರಿಸ್ಥಿತಿಯೂ ಬರುತ್ತದೆ. ವಿವಾಹ, ಮನೆ ನಿರ್ಮಾಣ ಅಥವಾ ಇನ್ನಾವುದೇ ಸಂದರ್ಭದಲ್ಲಿ ಪತಿ, ಪತ್ನಿ, ತಂದೆ, ಮಕ್ಕಳ ಅಥವಾ ಸಹೋದರರ ಸಂಪತ್ತು ಬೆರಕೆಯಾಗಿದ್ದರೆ ಅದರ ಲೆಕ್ಕ ಪತ್ರವನ್ನು ಸರಿಯಾಗಿ ಬರೆದಿಡಬೇಕು ಮತ್ತು ಅದಕ್ಕೆ ಸಾಕ್ಷಿ ಇರಬೇಕು. ಸ್ತ್ರೀಯರಿಗೂ ಸಂಪತ್ತಿನ ಒಡೆತನದ ಹಕ್ಕು ಇದೆ. ಹೀಗೆ ಸಣ್ಣ ಪುಟ್ಟ ವ್ಯವಹಾರಗಳನ್ನು ಮತ್ತು ಸಮಸ್ಯೆಗಳನ್ನು ತಮ್ಮ ಜೀವಮಾನದಲ್ಲೇ ಪರಿಹರಿಸಬೇಕು. ನಿಮ್ಮ ಮಕ್ಕಳ ನಡುವೆ ಉತ್ತಮ ಸಂಬಂಧವನ್ನುಂಟು ಮಾಡಲು ಪ್ರಯತ್ನಿಸಿರಿ. ವಾರೀಸುದಾರರು ತಮ್ಮ ಮರಣಾ ನಂತರ ಪವಿತ್ರ ಕುರ್ ಆನ್ ನಲ್ಲಿ ವಿವರಿಸಿದಂತೆ ಸಂಪತ್ತನ್ನು ಪಾಲು ಮಾಡಲು ಸಿದ್ಧರಿರಬೇಕು. ಕೋರ್ಟ್ ಕೇಸ್ ಎಂದು ಅಲೆಯುವಂತಹ ಪರಿಸ್ಥಿತಿಯುಂಟು ಮಾಡಬಾರದು.

ಪವಿತ್ರ ಕುರ್ ಆನ್ ನಲ್ಲಿ ಸ್ವರ್ಗದ ಸುವಾರ್ತೆ, ಸ್ವರ್ಗದ ಅನುಗ್ರಹಗಳನ್ನು ವಿವರಿಸುವ ಸೂಕ್ತಗಳನ್ನು ಓದುತ್ತಾ ಅರ್ಥ ಮಾಡಿಕೊಳ್ಳಿರಿ. ಇಹಲೋಕದ ಚಿಂತೆಗಳೆಲ್ಲವೂ ದೂರವಾಗುವುದು. ಎದೆ ನೋವು, ನಿತ್ರಾಣ, ಉಸಿರಾಟದ ತೊಂದರೆ ಅಥವಾ ಇನ್ನಾವುದೇ ಅನಾರೋಗ್ಯದ ಲಕ್ಷಣ ಕಂಡು ಬಂದಾಗ ಲಾ ಇಲಾಹ ಇಲ್ಲಲ್ಲಾಹ್ ಹೇಳಲು ಮರೆಯಬೇಡಿರಿ. ಮರಣವು ಯಾರಿಗೂ ಮುನ್ಸೂಚನೆ ನೀಡಿ ಬರುವುದಿಲ್ಲ.

“ಇಂದು ಸ್ವರ್ಗವಾಸಿಗಳು ಸುಖಿಸುವುದರಲ್ಲೇ ತಲ್ಲೀನರಾಗಿದ್ದಾರೆ. ಅವರೂ ಅವರ ಪತ್ನಿಯರೂ ದಟ್ಟ ನೆರಳುಗಳಲ್ಲಿ ಪೀಠಗಳ ಮೇಲೆ ಒರಗಿ ಕೊಂಡಿರುವರು. ಉಣ್ಣಲು, ಕುಡಿಯಲು ಎಲ್ಲ ತರದ ಸ್ವಾದಿಷ್ಟ ವಸ್ತುಗಳು ಅವರಿಗಲ್ಲಿ ಲಭ್ಯವಾಗಿವೆ. ಅವರು ಕೇಳಿದ್ದೆಲ್ಲವೂ ಅವರಿಗಾಗಿ ಸಿದ್ಧವಿದೆ. ಸಲಾಮ್ (ಶಾಂತಿ)- ಎಂದು ಕರುಣಾನಿಧಿಯಾದ ಪ್ರಭುವಿನ ಕಡೆಯಿಂದ ಅವರಿಗೆ ಹೇಳಲಾಗಿದೆ”. (ಸೂರಃ ಯಾಸೀನ್: 55 -58)