“ನಾವು ಮತ್ತೆ ಮತಪತ್ರಗಳಿಗೆ ಮರಳಬೇಕು”: ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಆಗ್ರಹ

0
179

ಸನ್ಮಾರ್ಗ ವಾರ್ತೆ

ಹೊಸ ದೆಹಲಿ: ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳ (ಇವಿಎಂ) ಬದಲಿಗೆ ಮತ್ತೆ ಮತಪತ್ರಗಳಿಗೆ (ಬಾಲೆಟ್ ಪೇಪರ್) ಮರಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದೂ ಒತ್ತಾಯಿಸಿದರು.

ಚುನಾವಣಾ ಆಯೋಗದ ಚಟುವಟಿಕೆಗಳು ಮತ್ತು ಎಸ್‌‌ಐಆರ್ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ವಿರೋಧ ಪಕ್ಷವು ಮತ್ತೊಮ್ಮೆ ತೀವ್ರ ಪ್ರತಿಭಟನೆಗೆ ಮುಂದಾಗಿದೆ.

“ಮುಖ್ಯ ಚುನಾವಣಾ ಆಯುಕ್ತರ ಮುಖವಾಡ ಸಂಪೂರ್ಣವಾಗಿ ಕಳಚಿದೆ. ಕಳೆದ 10 ತಿಂಗಳುಗಳಲ್ಲಿ ಆಯೋಗದ ಇತರ ಇಬ್ಬರು ಸದಸ್ಯರು ಅವರ ನಿರ್ಧಾರಗಳ ವಿರುದ್ಧ 14 ಬಾರಿ ಬರೆದಿದ್ದಾರೆ. ಇದು ಆಯುಕ್ತರ ಪಾರದರ್ಶಕತೆ ಮತ್ತು ಉದ್ದೇಶವನ್ನು ಪ್ರಶ್ನಿಸುತ್ತದೆ. ಅವರಲ್ಲಿ ಯಾವುದೇ ಸಾಂವಿಧಾನಿಕ ಅಥವಾ ನೈತಿಕ ಸೌಜನ್ಯ ಉಳಿದಿದ್ದರೆ, ಅವರು ಕೆಳಗಿಳಿಯಬೇಕು” ಎಂದು ಖರ್ಗೆ ಹೇಳಿದರು.

ಪ್ರಜಾಸತ್ತಾತ್ಮಕ ವ್ಯವಸ್ಥೆಯ ಪಾರದರ್ಶಕತೆಯ ಬದಲಿಗೆ ಗೌಪ್ಯತೆಯು ಸ್ಥಾನ ಪಡೆಯಲು ಅನುಮತಿಸುವುದಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದರು. ‘ಒಂದು ಮತ, ಒಂದು ಮೌಲ್ಯ’ ಎಂಬ ಮೂಲಭೂತ ಸಾಂವಿಧಾನಿಕ ತತ್ವವನ್ನು ದುರ್ಬಲಗೊಳಿಸಲು ಅವಕಾಶ ನೀಡುವುದಿಲ್ಲ ಎಂದೂ ಅವರು ಸೇರಿಸಿದರು. ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷ, ಆರ್‌ಜೆಡಿ, ಸಿಪಿಐ, ಸಿಪಿಐ (ಎಂ), ಎನ್‌ಸಿಪಿ (ಶರದ್ ಪವಾರ್) ಮತ್ತು ಶಿವಸೇನಾ (ಯುಬಿಟಿ) ಮುಂತಾದ ಪಕ್ಷಗಳ ಪ್ರಮುಖ ನಾಯಕರು ಉಪಸ್ಥಿತರಿದ್ದರು.