ಸನ್ಮಾರ್ಗ ವಾರ್ತೆ
ಉಡುಪಿ: ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಹಾಕಿದ್ದಾರೆ ಎಂಬ ಕಾರಣಕ್ಕಾಗಿ ತರಗತಿಯಿಂದ ಹೊರಹಾಕಲ್ಪಟ್ಟ ಘಟನೆ ಇನ್ನೂ ಅಂತ್ಯ ಕಂಡಿಲ್ಲ. ಹಿಜಾಬ್ ಧರಿಸುವುದು ನಮ್ಮ ಹಕ್ಕು, ಅದಕ್ಕಾಗಿ ನಾವು ಕೊನೆಯ ತನಕ ಹೋರಾಡುತ್ತೇವೆ ಎಂದು ಉಡುಪಿ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಮಾಧ್ಯಮಗಳೊಂದಿಗೆ ಹೇಳಿಕೆ ನೀಡಿದ್ದಾರೆ.
ಇಂದು ಬೆಳಗ್ಗೆ ಕಾಲೇಜಿನ ಗೇಟ್ ನ ಮುಂಭಾಗ ಭಿತ್ತಿ ಪತ್ರ ಪ್ರದರ್ಶಿಸಿ ಮಾತನಾಡುತ್ತಿದ್ದ ಅವರು, ಅಧಿಕಾರಿಗಳು ಗಮನ ಹರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ, ನಮಗೆ ತರಗತಿಗಳು ಸಿಗುತ್ತಿಲ್ಲ, ನಮ್ಮ ಸಂವಿಧಾನಾತ್ಮಕ ಹಕ್ಕನ್ನು ಕಸಿದಿಟ್ಟು ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆಯೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಕಾಲೇಜಿಗೆ ಬಂದ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಕಳೆದ ಮೂರು ವಾರಗಳಿಂದ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಈ ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ತಲಾ ಮೂವರು ಹಾಗೂ ಪ್ರಥಮ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ತಲಾ ಒಬ್ಬರು ಸೇರಿದಂತೆ ಎಂಟು ಮಂದಿ ವಿದ್ಯಾರ್ಥಿನಿಯರು ತರಗತಿ ಪ್ರವೇಶ ಇಲ್ಲದೆ ಕಾಲೇಜಿನ ಹೊರಗಡೆ, ಸ್ಟಾಪ್ ರೂಮ್ ಲೈಬ್ರರಿಯಲ್ಲಿ ಕುಳಿತು ಮನೆಗೆ ಹೋಗುತ್ತಿದ್ದಾರೆ.
ಇವರಲ್ಲಿ ಮೂವರು ಅನಾರೋಗ್ಯದ ಕಾರಣ ಕಾಲೇಜಿಗೆ ಬಂದಿಲ್ಲ. ಉಳಿದ ಐವರು ವಿದ್ಯಾರ್ಥಿನಿಯರು ಬಿತ್ತಿಪತ್ರ ಪ್ರದರ್ಶಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ನಮ್ಮ ಮನೆಯವರು ತುಂಬಾ ಮನವಿ ಮಾಡಿದ್ದಾರೆ. ನಮಗೆ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ನಾವು ಪ್ರಥಮ ಪಿಯುಸಿಯಲ್ಲಿ ಸ್ಕಾರ್ಫ್ ಹಾಕಿ ತರಗತಿಗೆ ಬಂದಿದ್ದೇವೆ. ಆಗ ಬಲಾತ್ಕಾರವಾಗಿ ಸ್ಕಾರ್ಫ್ ತೆಗೆಸಿದರು. ಈಗ ನಾವು ಹೋರಾಟಕ್ಕೆ ಇಳಿದ ಕಾರಣಕ್ಕೆ ಪ್ರಾಂಶುಪಾಲರು ನಮಗೆ ಹಿಂಸೆ ನೀಡುತ್ತಿದ್ದಾರೆ. ನಮಗೆ ಶಿಕ್ಷಣ ಬೇಕು. ಅದರೊಂದಿಗೆ ನಮ್ಮ ಧಾರ್ಮಿಕ ಹಕ್ಕಿನಂತೆ ಸ್ಕಾರ್ಫ್ ಹಾಕುವ ಅವಕಾಶವೂ ಬೇಕು ಎಂದು ವಿದ್ಯಾರ್ಥಿನಿ ಆಲಿಯಾ ಅಸಾದಿ ಒತ್ತಾಯಿಸಿದ್ದಾರೆ.
ಯುನಿಫಾರ್ಮ್ ನಲ್ಲಿರುವ ಶಾಲನ್ನೇ ತಲೆಗೆ ಹಾಕಿಕೊಂಡು ಬರುತ್ತೇವೆ ಎಂದು ನಾವು ಹೇಳುತ್ತಿದ್ದೇವೆ. ಆದರೆ ಅದಕ್ಕೆ ಅವಕಾಶ ನೀಡುತ್ತಿಲ್ಲ. ನಮ್ಮ ಮನೆಯವರು ನಮಗೆ ಬೆಂಬಲ ನೀಡಿದ್ದಾರೆ. ನಮಗೆ ಅವಕಾಶ ಕೊಡಿ ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ.












